
ಪುಣೆ (ಏ.9): ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಸೂರ್ಯಕುಮಾರ್ ಯಾದವ್ (Suryakumar Yadav) ಮತ್ತೊಮ್ಮೆ ಬ್ಯಾಟಿಂಗ್ ಗೆ ಬೆನ್ನೆಲುಬಾಗಿ ನಿಂತ ಕಾರಣ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ವಿರುದ್ಧ ನಡೆಯುತ್ತಿರುವ ಐಪಿಎಲ್ (IPL 2022) ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ (Mumbai Indians) ತಂಡದ ಸವಾಲಿನ ಮೊತ್ತಕ್ಕೆ ಕಾರಣರಾಗಿದ್ದಾರೆ. 79 ರನ್ ಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟದ ಸ್ಥಿತಿಯಲ್ಲಿದ್ದ ಮುಂಬೈಗೆ ಸೂರ್ಯಕುಮಾರ್ ಯಾದವ್ ಆಕರ್ಷಕ ಅರ್ಧಶತಕ ಬಾರಿಸುವ ಮೂಲಕ ಆಧರಿಸಿದರು.
ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ಒಂಗು ಹಂತದಲ್ಲಿ 79 ರನ್ ಗೆ 6 ವಿಕೆಟ್ ಕಳೆದುಕೊಂಡಿತ್ತು. ಈ ಹಂತದಲ್ಲಿ ಏಕಾಂಗಿಯಾಗಿ ತಂಡದ ಮೊತ್ತವನ್ನು ಏರಿಸಿದ ಸೂರ್ಯಕುಮಾರ್ ಯಾದವ್ (68*ರನ್, 37 ಎಸೆತ, 5 ಬೌಂಡರಿ, 6 ಸಿಕ್ಸರ್) ಸತತ 2ನೇ ಅರ್ಧಶತಕ ಸಿಡಿಸಿದರು. ಇದರಿಂದಾಗಿ ಮುಂಬೈ ಇಂಡಿಯನ್ಸ್ ತಂಡ 6 ವಿಕೆಟ್ ಗೆ 151 ರನ್ ಕಲೆಹಾಕಿದ್ದು ಆರ್ ಸಿಬಿಗೆ 152 ರನ್ ಸವಾಲು ನೀಡಿದೆ. ಸೂರ್ಯಕುಮಾರ್ ಯಾದವ್ ಹಾಗೂ ಜೈದೇವ್ ಉನಾದ್ಕತ್ (Jaydev Unadkat) 41 ಎಸೆತಗಳಲ್ಲಿ 72 ರನ್ ಜೊತೆಯಾಟವಾಡಿದರು.
ಸತತ ಮೂರು ಪಂದ್ಯಗಳಲ್ಲಿ ಸೋಲು ಕಂಡ ಬಳಿಕ ಗೆಲುವಿನ ಇರಾದೆಯಲ್ಲಿ ಬ್ಯಾಟಿಂಗ್ ಆರಂಭಿಸಿದ ಮುಂಬೈ ಇಂಡಿಯನ್ಸ್ ತಂಡಕ್ಕೆ ನಾಯಕ ರೋಹಿತ್ ಶರ್ಮ ಹಾಗೂ ಇಶಾನ್ ಕಿಶನ್ ಮೊದಲ ವಿಕೆಟ್ ಗೆ ಅರ್ಧಶತಕದ ಆಟವಾಡಿದರು. 15 ಎಸೆತಗಳನ್ನು ಎದುರಿಸಿದ ರೋಹಿತ್ ಶರ್ಮ ನಾಲ್ಕು ಬೌಂಡರಿ ಹಾಗೂ 1 ಸಿಕ್ಸರ್ ನೊಂದಿಗೆ 26 ರನ್ ಸಿಡಿಸಿದರೆ, ಇಶಾನ್ ಕಿಶನ್ ತಾಳ್ಮೆಯ ಆಟವಾಡಿದರು. 28 ಎಸೆತಗಳನ್ನು ಎದುರಿಸಿದ ಆರಂಭಿಕ ಬ್ಯಾಟ್ಸ್ ಮನ್ 3 ಬೌಂಡರಿಯೊಂದಿಗೆ 26 ರನ್ ಸಿಡಿಸಿದರು.
ಮೊದಲ ವಿಕೆಟ್ ಗೆ 38 ಎಸೆತಗಳಲ್ಲಿ 50 ರನ್ ಜೊತೆಯಾಟವಾಡಿದ ಬಳಿಕ, ರೋಹಿತ್ ಶರ್ಮ, ಹರ್ಷಲ್ ಪಟೇಲ್ (Harshal Patel) ಎಸೆತದಲ್ಲಿ ಅವರಿಗೆ ರಿಟರ್ನ್ ಕ್ಯಾಚ್ ನೀಡಿ ನಿರ್ಗಮಿಸಿದರು. ಆದರೆ, ಬ್ಯಾಟಿಂಗ್ ಆಳವನ್ನು ಹೊಂದಿದ್ದ ಮುಂಬೈ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ.
29 ರನ್ ಗೆ 6 ವಿಕೆಟ್ ಕಳೆದುಕೊಂಡ ಮುಂಬೈ: ಆದರೆ, ರೋಹಿತ್ ಶರ್ಮ ವಿಕೆಟ್ ಉರುಳಿದ್ದು ಮುಂಬೈ ಬ್ಯಾಟಿಂಗ್ ವಿಭಾಗಕ್ಕೆ ಘಾತಕವಾಗಲಿದೆ ಎಂದು ಯಾರೂ ನಿರೀಕ್ಷೆ ಮಾಡಿರಲಿಲ್ಲ. ವಿಕೆಟ್ ನಷ್ಟವಿಲ್ಲದೆ 50 ರನ್ ಬಾರಿಸಿದ್ದ ಮುಂಬೈ ಈ ಮೊತ್ತಕ್ಕೆ 29 ರನ್ ಸೇರಿಸುವ ವೇಳೆಗೆ 6 ಪ್ರಮುಖ ವಿಕೆಟ್ ಗಳನ್ನು ಕಳೆದುಕೊಂಡಿತು. ರೋಹಿತ್ ಶರ್ಮ ಬಳಿಕ, ಬೇಬಿ ಎಬಿ ಖ್ಯಾತಿಯ ಡೆವಾಲ್ಡ್ ಬ್ರೇವಿಸ್ (8) 11 ಎಸೆತಗಳನ್ನು ಎದುರಿಸಿ ಹಸರಂಗಗೆ ಎಲ್ ಬಿ ಆಗಿ ಹೊರನಡೆದರು. 10ನೇ ಓವರ್ ನಲ್ಲಿ ದಾಳಿಗಿಳಿದ ಆಕಾಶ್ ದೀಪ್ ಒಂದೇ ಓವರ್ ನಲ್ಲಿ ಇಶಾನ್ ಕಿಶನ್ ಹಾಗೂ ಭರ್ಜರಿ ಫಾರ್ಮ್ ನಲ್ಲಿದ್ದ ತಿಲಕ್ ವರ್ಮ (0) ವಿಕೆಟ್ ಉರುಳಿಸಿದರು. 11ನೇ ಓವರ್ ನಲ್ಲಿ ಮತ್ತೆ ದಾಳಿಗಿಳಿದ ಹಸರಂಗ ಮೊದಲ ಎಸೆತದಲ್ಲಿಯೇ ಅಪಾಯಕಾರಿ ಕೈರಾನ್ ಪೊಲ್ಲಾರ್ಡ್ ಅವರನ್ನು ಶೂನ್ಯಕ್ಕೆ ಡಗ್ ಔಟ್ ಗೆ ಅಟ್ಟುವ ಮೂಲಕ ಆರ್ ಸಿಬಿ ಮೇಲುಗೈ ಕಂಡಿತು.
IPL 2022 ಟಾಸ್ ಗೆದ್ದ ಆರ್ ಸಿಬಿ ಬೌಲಿಂಗ್ ಆಯ್ಕೆ, ತಂಡಕ್ಕೆ ಮರಳಿದ ಮ್ಯಾಕ್ಸ್ ವೆಲ್!
62 ರನ್ ಗೆ 5 ವಿಕೆಟ್ ಕಳೆದುಕೊಂಡಿದ್ದ ವೇಳೆ ಸೂರ್ಯಕುಮಾರ್ ಯಾದವ್ ಗೆ ಜೊತೆಯಾದ ರಮಣ್ ದೀಪ್ ಸಿಂಗ್ 17 ರನ್ ಗಳ ಜೊತೆಯಾಟವಾಡಿದರು. ಈ ಜೊತೆಯಾಟದಲ್ಲಿ ಕೇವಲ 6 ರನ್ ಕೂಡಿಸಿದ್ದ ರಮಣ್ ದೀಪ್ ಸಿಂಗ್ ಹರ್ಷಲ್ ಪಟೇಲ್ ಗೆ ವಿಕೆಟ್ ನೀಡಿದಾಗ ಮುಂಬೈ 79 ರನ್ ಬಾರಿಸಿತ್ತು.
IPL 2022: ಚೆನ್ನೈಗೆ ಸತತ ನಾಲ್ಕನೇ ಸೋಲು, ಗೆಲುವಿನ ಖಾತೆ ತೆರೆದ ಸನ್‌ರೈಸರ್ಸ್..!
ಮ್ಯಾಕ್ಸ್ ವೆಲ್ ಕ್ಲಾಸಿಕ್ ರನೌಟ್!: ಜಾಂಟಿ ರೋಡ್ಸ್ ಶೈಲಿಯಲ್ಲಿ ಗ್ಲೆನ್ ಮ್ಯಾಕ್ಸ್ ವೆಲ್ ಮಾಡಿದ ರನೌಟ್ ಪಂದ್ಯದಲ್ಲಿ ಗಮನಸೆಳೆಯಿತು. ಕವರ್ಸ್ ನತ್ತ ಫೀಲ್ಡಿಂಗ್ ಮಾಡುತ್ತಿದ್ದ ಮ್ಯಾಕ್ಸ್ ವೆಲ್ ನತ್ತ ಚೆಂಡು ಬಂದ ಬೆನ್ನಲ್ಲಿಯೇ ಡೈವ್ ಮಾಡುತ್ತಲೇ ವಿಕೆಟ್ ನತ್ತ ಮುನ್ನಡೆದು ಥ್ರೋ ಮಾಡಿದ ಮ್ಯಾಕ್ಸ್ ವೆಲ್, ತಿಲಕ್ ವರ್ಮ ಅವರನ್ನು ರನೌಟ್ ಮಾಡಿದರು. ಮ್ಯಾಕ್ಸ್ ವೆಲ್ ಫೀಲ್ಡಿಂಗ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.