Faf du Plessis: ನನ್ನ, ಧೋನಿ ನಾಯಕತ್ವದಲ್ಲಿ ಹೆಚ್ಚು ಸಾಮತ್ಯಯಿದೆ..!

By Suvarna NewsFirst Published Mar 14, 2022, 10:52 AM IST
Highlights

* ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕರಾಗಿ ಆಯ್ಕೆಯಾದ ಫಾಫ್ ಡು ಪ್ಲೆಸಿಸ್

* 2012ರಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದ ಫಾಫ್

* ಇದೀಗ ಧೋನಿ ನಾಯಕತ್ವ ಹಾಗೂ ತಮ್ಮ ನಾಯಕತ್ವದ ಬಗ್ಗೆ ವಿಶ್ಲೇಷಿಸಿದ ದಕ್ಷಿಣ ಆಫ್ರಿಕಾದ ಮಾಜಿ ನಾಯಕ

ಬೆಂಗಳೂರು(ಮಾ.14): ಎಂ.ಎಸ್‌.ಧೋನಿ (MS Dhoni) ಹಾಗೂ ತಮ್ಮ ನಾಯಕತ್ವದ ಶೈಲಿಯಲ್ಲಿ ಸಾಮ್ಯತೆಯಿದೆ ಎಂದು ರಾಯಲ್‌ ಚಾಲೆಂಜ​ರ್ಸ್‌ ಬೆಂಗಳೂರು (Royal Challengers Bangalore) ತಂಡದ ನೂತನ ನಾಯಕ ಫಾಫ್‌ ಡು ಪ್ಲೆಸಿಸ್ (Faf du Plessis) ಹೇಳಿದ್ದಾರೆ. ‘ನನ್ನ ಕ್ರಿಕೆಟ್‌ ಬದುಕಿನುದ್ದಕ್ಕೂ ಹಲವು ಶ್ರೇಷ್ಠ ನಾಯಕರು ಜೊತೆಗಿದ್ದದ್ದು ನನ್ನ ಅದೃಷ್ಟ. ಗ್ರೇಮ್‌ ಸ್ಮಿತ್‌ (Graeme Smith), ಧೋನಿ, ಸ್ಟೀಫನ್‌ ಫ್ಲೆಮಿಂಗ್‌ರಂತಹ ಅದ್ಭುತ ನಾಯಕರ ಜೊತೆ ಬೆಳೆದಿದ್ದೇನೆ. ದಕ್ಷಿಣ ಆಫ್ರಿಕಾ ವಾತಾವರಣದಲ್ಲಿದ್ದಾಗ ಧೋನಿ ಬಗ್ಗೆ ಏನೋ ಭಾವಿಸಿದ್ದೆ. ಆದರೆ ಹತ್ತಿರದಲ್ಲಿದ್ದಾಗ ಅವರು ನಾನು ಭಾವಿಸಿದ್ದಕ್ಕಿಂತ ಸಂಪೂರ್ಣ ಭಿನ್ನವಾಗಿರುವುದು ಗೊತ್ತಾಯಿತು’ ಎಂದಿದ್ದಾರೆ. 

37 ವರ್ಷದ ಫಾಫ್ ಡು ಪ್ಲೆಸಿಸ್‌ 2012ರಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಪ್ರತಿನಿಧಿಸುತ್ತಾ ಬಂದಿದ್ದಾರೆ. ಇದಷ್ಟೇ ಅಲ್ಲದೇ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವು ಎರಡು ವರ್ಷ ನಿಷೇಧಕ್ಕೆ ಗುರಿಯಾಗಿದ್ದಾಗ ಧೋನಿ ಜತೆಯಲ್ಲಿಯೇ ಫಾಫ್ ಡು ಪ್ಲೆಸಿಸ್‌ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್‌ ತಂಡವನ್ನು ಪ್ರತಿನಿಧಿಸಿದ್ದರು. ಆದರೆ ಇದೀಗ ಫಾಫ್‌ ಡು ಪ್ಲೆಸಿಸ್, ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಪಾಲಾಗಿದ್ದು, ಆರ್‌ಸಿಬಿ ತಂಡದ ನಾಯಕರಾಗಿ ಆಯ್ಕೆಯಾಗಿದ್ದಾರೆ.

Latest Videos

‘ಎಲ್ಲರ ನಾಯಕತ್ವದ ಶೈಲಿಯೂ ಬೇರೆ ಬೇರೆಯಾಗಿದೆ. ನಾನು ನನ್ನದೇ ಶೈಲಿ ಅನುಸರಿಸಲಿದ್ದೇನೆ. ವಿರಾಟ್‌ ಕೊಹ್ಲಿ, ಧೋನಿಯಂತಾಗಲು ನಾನು ಪ್ರಯತ್ನಿಸುವುದಿಲ್ಲ. ಆದರೆ ಅವರಿಂದ ಬಹಳಷ್ಟು ಕಲಿತಿದ್ದೇನೆ’ ಎಂದು ತಿಳಿಸಿದ್ದಾರೆ. ಈ ಮೊದಲು ಸಾಕಷ್ಟು ಅದ್ಭುತ ನಾಯಕರ ಅಡಿಯಲ್ಲಿ ಆಡಿದ್ದಕ್ಕೆ ನಾನು ತುಂಬಾ ಅದೃಷ್ಟವಂತನೆಂದು ಭಾವಿಸುತ್ತೇನೆ. ನನ್ನ ಆರಂಭಿಕ ದಿನಗಳಲ್ಲಿ ಗ್ರೇಮ್ ಸ್ಮಿತ್ ಗರಡಿಯಲ್ಲಿ ಪಳಗಿದ್ದೇನೆ. ಗ್ರೇಮ್ ಸ್ಮಿತ್ ದಕ್ಷಿಣ ಆಫ್ರಿಕಾ ಕ್ರಿಕೆಟ್ ಕಂಡ ಅದ್ಭುತ ನಾಯಕ ಎಂದು ಆರ್‌ಸಿಬಿ ವೆಬ್‌ಸೈಟ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಇದಾದ ಬಳಿಕ ನಾನು 10 ವರ್ಷಗಳ ಕಾಲ ಮಹೇಂದ್ರ ಸಿಂಗ್ ಧೋನಿ ಹಾಗೂ ಸ್ಟಿಫನ್ ಪ್ಲೆಮಿಂಗ್ ಇಬ್ಬರು ಅದ್ಭುತ ನಾಯಕರ ಕೆಳಗೆ ಕೆಲಸ ಮಾಡಿದ್ದೇನೆ. ನನಗನಿಸುತ್ತೆ,ನನ್ನ ಹಾಗೂ ಧೋನಿ ನಾಯಕತ್ವದಲ್ಲಿ ಸಾಕಷ್ಟು ಸಾಮ್ಯತೆಯಿದೆ. ಯಾಕೆಂದರೆ ನಾಯಕರಾಗಿ ನಾವಿಬ್ಬರು ಯಾವಾಗಲೂ ಕೂಲ್ ಆಗಿರುತ್ತೇವೆ ಎಂದು ಫಾಫ್ ಡು ಪ್ಲೆಸಿಸ್ ಹೇಳಿದ್ದಾರೆ.

Bold Diaries: Captain Faf Interview talks about the opportunity of captaining RCB, what he’s learnt from MS Dhoni and Graeme Smith, and the amazing fans of RCB, on Bold Diaries with Danish Sait. pic.twitter.com/2Zdw9sh1dO

— Royal Challengers Bangalore (@RCBTweets)

ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್‌ ತಂಡವು ನಾಲ್ಕನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಫಾಫ್ ಡು ಪ್ಲೆಸಿಸ್ ಮಹತ್ವದ ಪಾತ್ರ ವಹಿಸಿದ್ದರು. ಆದರೆ ಕಳೆದ ತಿಂಗಳು ನಡೆದ ಐಪಿಎಲ್ ಆಟಗಾರರ ಮೆಗಾ ಹರಾಜಿನಲ್ಲಿ ಸಿಎಸ್‌ಕೆ ಫ್ರಾಂಚೈಸಿಯು ಫಾಫ್ ಡು ಪ್ಲೆಸಿಸ್ ಅವರನ್ನು ಖರೀದಿಸಲು ವಿಫಲವಾಗಿತ್ತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಹರಾಜಿನಲ್ಲಿ 7 ಕೋಟಿ ರುಪಾಯಿ ನೀಡಿ ಫಾಫ್ ಅವರನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಇದೀಗ ಫಾಫ್‌ಗೆ ಆರ್‌ಸಿಬಿ ನಾಯಕತ್ವ ಪಟ್ಟ ಕಟ್ಟಿದೆ.

ಬೆಂಗಳೂರಿನಲ್ಲಿ ಕಳೆದ ತಿಂಗಳು ನಡೆದ ಐಪಿಎಲ್ ಆಟಗಾರರ ಮೆಗಾ ಹರಾಜಿನಲ್ಲಿ (IPL Mega Auction) ಫಾಫ್ ಡು ಪ್ಲೆಸಿಸ್ ಅವರನ್ನು ಖರೀದಿಸಲು ಚೆನ್ನೈ ಸೂಪರ್‌ ಕಿಂಗ್ಸ್‌ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಆರಂಭದಿಂದಲೇ ಪೈಪೋಟಿ ನಡೆಸಿದ್ದವು. ಆದರೆ ಬೆಂಗಳೂರು ಮೂಲದ ಆರ್‌ಸಿಬಿ ಫ್ರಾಂಚೈಸಿಯು ದಕ್ಷಿಣ ಆಫ್ರಿಕಾದ ಮಾಜಿ ನಾಯಕನಿಗೆ 7 ಕೋಟಿ ರುಪಾಯಿ ಬಿಡ್ ಮಾಡುವ ಮೂಲಕ ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

click me!