
ಪುಣೆ (ಮೇ.7): ಆವೇಶ್ ಖಾನ್ ಹಾಗೂ ಜೇಸನ್ ಹೋಲ್ಡರ್ ಮಾರಕ ದಾಳಿಗೆ ಮಂಡಿಯೂರಿದ ಕೋಲ್ಕತ ನೈಟ್ ರೈಡರ್ಸ್ (Kolkata Knight Riders) ತಂಡ 15ನೇ ಆವೃತ್ತಿಯ ಐಪಿಎಲ್ ನ (IPL 2022) ತನ್ನ 11ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ (Lucknow Super Giants) ತಂಡಕ್ಕೆ 75 ರನ್ ಗಳಿಂದ ಶರಣಾಗಿದೆ.
ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ಶನಿವಾರ ನಡೆದ ದಿನದ 2ನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್, ಕ್ವಿಂಟನ್ ಡಿ ಕಾಕ್ ಬಾರಿಸಿದ ಆಕರ್ಷಕ ಅರ್ಧಶತಕ ಹಾಗೂ ಇನ್ನಿಂಗ್ಸ್ ನ ಕೊನೆಯಲ್ಲಿ ಮಾರ್ಕಸ್ ಸ್ಟೋಯಿನಿಸ್ ಆಡಿದ ಸ್ಫೋಟಕ ಇನ್ನಿಂಗ್ಸ್ ನಿಂದ 7 ವಿಕೆಟ್ ಗೆ 176 ರನ್ ಕಲೆಹಾಕಿತು.
ಪ್ರತಿಯಾಗಿ ಆವೇಶ್ ಖಾನ್ (19ಕ್ಕೆ 3) ಹಾಗೂ ಜೇಸನ್ ಹೋಲ್ಡರ್ (31ಕ್ಕೆ 3) ಅವರ ಬೆಂಕಿ ಉಂಡೆಯಂಥ ಎಸೆತಗಳಿಗೆ ದಿಕ್ಕು ತಪ್ಪಿದ ಕೆಕೆಆರ್ ತಂಡ 14.3 ಓವರ್ ಗಳಲ್ಲಿ 110 ರನ್ ಗೆ ಆಲೌಟ್ ಆಗಿ ಸೋಲು ಕಂಡಿತು. ಕೆಕೆಆರ್ ಪರವಾಗಿ ಅಲ್ಪವಾದರೂ ಹೋರಾಟ ತೋರಿದ ಆಂಡ್ರೆ ರಸೆಲ್ 19 ಎಸೆತಗಳಲ್ಲಿ 5 ಅದ್ಭುತ ಸಿಕ್ಸರ್ ಹಾಗೂ 3 ಆಕರ್ಷಕ ಬೌಂಡರಿಗಳಿದ್ದ 45 ರನ್ ಬಾರಿಸಿ ಗಮನಸೆಳೆದರು.
ಪವರ್ ಪ್ಲೇಯಲ್ಲಿ 23 ವಿಕೆಟ್: ಕೆಕೆಆರ್ ತಂಡದ ಪಾಲಿಗೆ ಈ ಬಾರಿ ಐಪಿಎಲ್ ಎಷ್ಟು ಶೋಚನೀಯವಾಗಿದೆಯೆಂದರೆ, ಆಡಿದ 11 ಪಂದ್ಯಗಳ ಪೈಕಿ ಪವರ್ ಪ್ಲೇಯ ಓವರ್ ಗಳಲ್ಲಿ (1-6) 23 ವಿಕೆಟ್ ಗಳನ್ನು ಕಳೆದುಕೊಂಡಿದೆ. ಹಾಲಿ ಐಪಿಎಲ್ ನಲ್ಲಿ ಯಾವ ತಂಡ ಕೂಡ ಈ ಅವಧಿಯಲ್ಲಿ ಇಷ್ಟು ಪ್ರಮಾಣದ ವಿಕೆಟ್ ಕಳೆದುಕೊಂಡಿಲ್ಲ.
ಚೇಸಿಂಗ್ ಆರಂಭಿಸಿದ ಕೋಲ್ಕತ ನೈಟ್ ರೈಡರ್ಸ್ ತಂಡ 25 ರನ್ ಬಾರಿಸುವ ವೇಳೆಗಾಗಲೇ ಪ್ರಮುಖ ನಾಲ್ಕು ವಿಕೆಟ್ ಗಳನ್ನು ಕಳೆದುಕೊಂಡಿದ್ದರಿಂದ ಸೋಲು ಬಹುತೇಕ ಖಚಿತಗೊಂಡಿತ್ತು. ಆರಂಭಿಕ ಆಟಗಾರ ಬಾಬಾ ಇಂದ್ರಜಿತ್ 6 ಎಸೆತಗಳಲ್ಲಿ ಸೊನ್ನೆ ರನ್ ಗೆ ಮೊಹ್ಸಿನ್ ಖಾನ್ ಗೆ ವಿಕೆಟ್ ನೀಡಿದರೆ, 14 ಎಸೆತಗಳಲ್ಲಿ 14 ರನ್ ಬಾರಿಸಿ ಪರದಾಟ ನಡೆಸಿದ ಆರನ್ ಫಿಂಚ್, ಜೇಸನ್ ಹೋಲ್ಡರ್ ಗೆ ದಿನದ ಮೊದಲ ವಿಕೆಟ್ ಆಗಿ ಹೊರನಡೆದರು. ಇದರ ನಡುವೆ ನಾಯಕ ಶ್ರೇಯಸ್ ಅಯ್ಯರ್, 9 ಎಸೆತಗಳಲ್ಲಿ 6 ರನ್ ಬಾರಿಸಿ ದುಷ್ಮಂತಾ ಚಾಮೀರಗೆ ವಿಕೆಟ್ ನೀಡಿದರೆ, ಮಧ್ಯಮ ಕ್ರಮಾಂಕದಲ್ಲಿ ಕೆಕೆಆರ್ ತಂಡದ ಆಧಾರ ಸ್ತಂಭವಾಗಿರುವ ನಿತೀಶ್ ರಾಣಾ ಕೇವಲ 2 ರನ್ ಬಾರಿಸಿ ಆವೇಶ್ ಖಾನ್ ಗೆ ವಿಕೆಟ್ ನೀಡಿದ್ದರು.
ಶೋಚನೀಯ ಪವರ್ ಪ್ಲೇ ಬಳಿಕ, ರಿಂಕು ಸಿಂಗ್ ಹಾಗೂ ಆಂಡ್ರೆ ರಸೆಲ್ 5ನೇ ವಿಕೆಟ್ ಗೆ 44 ರನ್ ಜೊತೆಯಾಟವಾಡಿದರು. ಇದರಲ್ಲಿ ಬಹುಪಾಲು ರನ್ ಗಳನ್ನು ರಸೆಲ್ ಒಬ್ಬರೇ ಸಿಡಿಸಿ ಅಬ್ಬರಿಸಿದ್ದರು. ತಂಡದ ಮೊತ್ತವನ್ನು 69ಕ್ಕೆ ಏರಿಸಿ ಈ ಜೋಡಿ ಬೇರ್ಪಟ್ಟಿತು. ರವಿ ಬಿಷ್ಣೋಯಿ ಎಸೆತದಲ್ಲಿ ರಿಂಕು ಸಿಂಗ್ ವಿಕೆಟ್ ನೀಡಿದರೆ, ಆಂಡ್ರೆ ರಸೆಲ್ , ಆವೇಶ್ ಖಾನ್ ಗೆ ವಿಕೆಟ್ ನೀಡುವ ಮುನ್ನ ತಂಡದ ಮೊತ್ತವನ್ನು 85ರ ಗಡಿ ಮುಟ್ಟಿಸಿದ್ದರು. ಇದಕ್ಕೂ ಮುನ್ನ 5 ಆಕರ್ಷಕ ಸಿಕ್ಸರ್ ಮೂಲಕ ರಸೆಲ್ ಅಬ್ಬರಿಸಿದ್ದರಿಂದ ತಂಡಕ್ಕೆ ಏಕಾಂಗಿಯಾಗಿ ಗೆಲುವು ನೀಡುವ ಸಾಹಸ ಮಾಡಬಹುದು ಎಂದು ಅಂದಾಜು ಮಾಡಲಾಗಿತ್ತು. 6ನೇ ವಿಕೆಟ್ ರೂಪದಲ್ಲಿ ರಸೆಲ್ ಔಟಾದ ಬಳಿಕ ಕೆಕೆಆರ್ ಹೋರಾಟ ಹೆಚ್ಚು ಹೊತ್ತು ಉಳಿಯಲಿಲ್ಲ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.