IPL 2022: ನಾನಿನ್ನು ನಾಯಕತ್ವವನ್ನು ಕಲಿಯುತ್ತಿದ್ದೇನೆಂದ ಜಡೇಜಾ..!

By Naveen Kodase  |  First Published Apr 13, 2022, 1:43 PM IST

* ಐಪಿಎಲ್‌ನಲ್ಲಿ ಮೊದಲ ಗೆಲುವು ದಾಖಲಿಸಿದ ಚೆನ್ನೈ ಸೂಪರ್‌ ಕಿಂಗ್ಸ್‌

* ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ದ ಸಿಎಸ್‌ಕೆಗೆ ಭರ್ಜರಿ ಜಯ

* ನಾಯಕನಾಗಿ ಮೊದಲ ಗೆಲುವು ದಾಖಲಿಸಿದ ರವೀಂದ್ರ ಜಡೇಜಾ


ನವಿ ಮುಂಬೈ(ಏ.13): 15ನೇ ಆವೃತ್ತಿಯ ಐಪಿಎಲ್‌ (IPL 2022) ಟೂರ್ನಿಯಲ್ಲಿ ರವೀಂದ್ರ ಜಡೇಜಾ (Ravindra Jadeja) ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್‌ (Chennai Super Kings) ತಂಡವು ಸತತ 4 ಸೋಲುಗಳ ಬಳಿಕ ಗೆಲುವಿನ ನಿಟ್ಟುಸಿರು ಬಿಟ್ಟಿದೆ. ರಾಯಲ್ ಚಾಲೆಂಜರ್ಸ್‌ ಬೆಂಗಳೂರು (Royal Challengers Bangalore) ತಂಡದ ಎದುರು 23 ರನ್‌ಗಳ ಅಂತರದ ಗೆಲುವು ಸಾಧಿಸಿದ ಬೆನ್ನಲ್ಲೇ, ಜಡೇಜಾ ತಾವು ಇನ್ನೂ ನಾಯಕನಾಗಿ ಇನ್ನೂ ಹಲವು ವಿಚಾರಗಳನ್ನು ಕಲಿಯುತ್ತಿದ್ದೇನೆ, ಎಲ್ಲವೂ ಸುಸೂತ್ರವಾಗಿ ಸಾಗಲು ಕೊಂಚ ಸಮಯ ಬೇಕಾಗಲಿದೆ ಎಂದು ಹೇಳಿದ್ದಾರೆ.

ಐಪಿಎಲ್ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಚೆನ್ನೈ ಸೂಪರ್ ಕಿಂಗ್ಸ್‌ ತಂಡವು ಆರಂಭಿಕ 4 ಪಂದ್ಯಗಳನ್ನು ಸೋತು ಮುಖಭಂಗ ಅನುಭವಿಸಿತ್ತು. ನಾಯಕನಾಗಿ ಇದು ನನ್ನ ಪಾಲಿನ ಮೊದಲ ಗೆಲುವಾಗಿದೆ. ಈ ಗೆಲುವನ್ನು ನಾನು ನನ್ನ ಪತ್ನಿಗೆ ಅರ್ಪಿಸಲು ಇಷ್ಟಪಡುತ್ತೇನೆ. ಯಾಕೆಂದರೆ, ಮೊದಲ ಗೆಲುವು ಯಾವಾಗಲೂ ವಿಶೇಷವಾದದ್ದು ಎಂದು ಆರ್‌ಸಿಬಿ ಎದುರಿನ ಪಂದ್ಯ ಮುಕ್ತಾಯದ ಬಳಿಕ ರವೀಂದ್ರ ಜಡೇಜಾ ಹೇಳಿದ್ದಾರೆ. ಮೊದಲು ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 216 ರನ್ ಕಲೆ ಹಾಕಿತ್ತು. ಈ ಗುರಿ ಬೆನ್ನತ್ತಿದ ಆರ್‌ಸಿಬಿ ತಂಡವು 9 ವಿಕೆಟ್ ಕಳೆದುಕೊಂಡು 193 ರನ್ ಗಳಿಸಲಷ್ಟೇ ಶಕ್ತವಾಯಿತು. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಶಿವಂ ದುಬೆ ಹಾಗೂ ರಾಬಿನ್ ಉತ್ತಪ್ಪ ಸ್ಪೋಟಕ ಅರ್ಧಶತಕ ಚಚ್ಚಿದರೆ, ಬೌಲಿಂಗ್‌ನಲ್ಲಿ ಮಹೀಶ್ ತೀಕ್ಷಣ 4 ವಿಕೆಟ್ ಕಬಳಿಸಿ ಗಮನ ಸೆಳೆದರು. 

Tap to resize

Latest Videos

ಕಳೆದ 4 ಪಂದ್ಯಗಳಲ್ಲಿ ನಾವು ಗೆಲುವಿನ ಗುರಿ ತಲುಪಲು ಸಾಧ್ಯವಾಗಿರಲಿಲ್ಲ. ಆದರೆ ಇಂದು ನಾವು ಒಂದು ತಂಡವಾಗಿ ಉತ್ತಮ ಪ್ರದರ್ಶನ ನೀಡಿದೆವು. ನಾಯಕನಾಗಿ, ಈಗಲೂ ನಾನು ಹಿರಿಯ ಆಟಗಾರರ ಸಲಹೆಯನ್ನು ಪಡೆಯುತ್ತಿದ್ದೇನೆ. ಮಹೇಂದ್ರ ಸಿಂಗ್ ಧೋನಿ (MS Dhoni) ಇರುವುದರಿಂದ ಅವರ ಬಳಿ ನಾನು ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತೇನೆ. ನಾಯಕನ ಪಾತ್ರ ನನ್ನ ಪಾಲಿಗೆ ಹೊಸತಾಗಿರುವುದರಿಂದ, ನಾನಿನ್ನು ಇದರಲ್ಲಿ ಪಳಗಬೇಕಾಗಿದೆ. ಇದಕ್ಕೆ ಸ್ವಲ್ಪ ಕಾಲಾವಕಾಶ ಬೇಕಾಗುತ್ತದೆ. ಪಂದ್ಯದಿಂದ ಪಂದ್ಯಕ್ಕೆ ಸುದಾರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ ಎಂದು ರವೀಂದ್ರ ಜಡೇಜಾ ಹೇಳಿದ್ದಾರೆ.

IPL 2022: ಆರ್‌ಸಿಬಿ Vs ಸಿಎಸ್‌ಕೆ ಪಂದ್ಯದ ವೇಳೆ ಹರಿದಾಡಿದ ಟಾಪ್ 10 ಮೀಮ್ಸ್‌ಗಳಿವು..!

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮ್ಯಾನೇಜ್‌ಮೆಂಟ್ ನನ್ನ ಮೇಲೆ ಯಾವುದೇ ಒತ್ತಡವನ್ನು ಹೇರಿಲ್ಲ. ಅವರು ರಿಲ್ಯಾಕ್ಸ್ ಆಗಿದ್ದಾರೆ. ಅವರು ನನ್ನ ಬಳಿ ಬಂದು ಪ್ರೇರೇಪಣೆ ನೀಡುತ್ತಿದ್ದಾರೆ. ನಮ್ಮ ತಂಡದಲ್ಲಿ ಸಾಕಷ್ಟು ಅನುಭವಿ ಆಟಗಾರರಿದ್ದಾರೆ. ಅನುಭವಿ ಆಟಗಾರರ ದಂಡೇ ಇರುವುದರಿಂದ ನಾವು ಹೆಚ್ಚು ಆತಂಕಕ್ಕೆ ಒಳಗಾಗಿಲ್ಲ. ನಾವು ತಾಳ್ಮೆಯಿಂದಲೇ ಕ್ರಿಕೆಟ್ ಆಡುತ್ತೇವೆ. ನಮ್ಮ ಸಾಮರ್ಥ್ಯದ ಮೇಲೆ ನಮಗೆ ವಿಶ್ವಾಸವಿದೆ. ಈ ಗೆಲುವಿನ ಲಯವನ್ನು ಮುಂದುವರೆಸಿಕೊಂಡು ಹೋಗಲಿದ್ದೇವೆ ಎಂದು ರವೀಂದ್ರ ಜಡೇಜಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇನ್ನು ಹರ್ಷಲ್‌ ಪಟೇಲ್ (Harshal Patel) ಅವರ ಅನುಪಸ್ಥಿತಿ ನಮ್ಮ ತಂಡದ ಪಾಲಿಗೆ ದೊಡ್ಡ ಹಿನ್ನೆಡೆಯಾಗಿ ಪರಿಣಮಿಸಿತು ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಹೇಳಿದ್ದಾರೆ. ಹರ್ಷಲ್ ಪಟೇಲ್ ಅವರಂತಹ ಆಟಗಾರರು ಯಾವುದೇ ತಂಡದಲ್ಲಿದ್ದರೂ ಸಹಾ ಅವರೊಬ್ಬ ಆಸ್ತಿಯಿದ್ದಂತೆ. ಅವರು ಪಂದ್ಯದ ದಿಕ್ಕನ್ನೇ ಬದಲಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ನಾವು ಹರ್ಷಲ್ ಅವರ ಉಪಸ್ಥಿತಿಯನ್ನು ಮಿಸ್ ಮಾಡಿಕೊಂಡೆವು. ನಾವು ಆದಷ್ಟು ಬೇಗ ಗೆಲುವಿನ ಹಳಿಗೆ ಮರಳಲಿದ್ದೇವೆ ಎಂದು ಫಾಫ್ ಡು ಪ್ಲೆಸಿಸ್‌ ಹೇಳಿದ್ದಾರೆ.

click me!