* ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ತೋರುತ್ತಿದೆ ಗುಜರಾತ್ ಟೈಟಾನ್ಸ್
* ಪಾಂಡ್ಯ ಪುತ್ರ ಅಗಸ್ತ್ಯನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್
* ರಶೀದ್ ಖಾನ್‌ಗೆ ಪ್ಲೈಯಿಂಗ್ ಕಿಸ್ ನೀಡಿದ ಹಾರ್ದಿಕ್ ಪಾಂಡ್ಯ ಪುತ್ರ
ಮುಂಬೈ(ಮೇ.05): ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಜಗತ್ತಿನ ಅತಿದೊಡ್ಡ ಮನರಂಜನಾ ಟಿ20 ಟೂರ್ನಿ ಎನಿಸಿದೆ. ಮೈದಾನದಲ್ಲಿ ಐಪಿಎಲ್ ಆಟಗಾರರು ಕ್ರಿಕೆಟ್ ಅಭಿಮಾನಿಗಳಿಗೆ ಭರ್ಜರಿಯಾಗಿಯೇ ಮನರಂಜನೆ ನೀಡಿದೆ. ಹಲವು ಪಂದ್ಯಗಳು ಕ್ರಿಕೆಟ್ ಅಭಿಮಾನಿಗಳನ್ನು ಅಕ್ಷರಶಃ ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿವೆ. ಇದೇ ವೇಳೆ ಮೈದಾನದಾಚೆಗೂ ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಅಂತಹದ್ದೇ ಒಂದು ಕ್ಯೂಟ್ ಘಟನೆ ನಡೆದಿದ್ದು, ಗುಜರಾತ್ ಟೈಟಾನ್ಸ್ (Gujarat Titans) ತಂಡದ ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ಪುತ್ರ ಅಗಸ್ತ್ಯ (Agastya), ಟೈಟಾನ್ಸ್ ತಂಡದ ಉಪನಾಯಕ ರಶೀದ್ ಖಾನ್ ಜತೆ ಪ್ಲೈಯಿಂಗ್ ಕಿಸ್ ಶೇರ್ ಮಾಡಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ವಿಡಿಯೋವನ್ನು ಗುಜರಾತ್ ಟೈಟಾನ್ಸ್ ತಂಡವು ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ. ಗುಜರಾತ್ ಟೈಟಾನ್ಸ್ ಉಪನಾಯಕ ರಶೀದ್ ಖಾನ್ (Rashid Khan), ಹಾರ್ದಿಕ್ ಪಾಂಡ್ಯ ಪುತ್ರನಿಗೆ ಪ್ಲೈಯಿಂಗ್ ಕಿಸ್ ಮಾಡಿದ್ದಾರೆ. ಹಾರ್ದಿಕ್ ಪಾಂಡ್ಯ ತೋಳ ತೆಕ್ಕೆಯಲ್ಲಿದ್ದ ಅಗಸ್ತ್ಯ ಕೂಡಾ ಮುದ್ದಾಗಿ ಪ್ರತಿಕ್ರಿಯಿಸಿದ್ದು, ರಶೀದ್ ಖಾನ್‌ಗೆ ಅಗಸ್ತ್ಯಗೆ ಪ್ಲೈಯಿಂಗ್ ಕಿಸ್ ನೀಡಿದ್ದಾರೆ. ಈ ವಿಡಿಯೋವನ್ನು ಗುಜರಾತ್ ಟೈಟಾನ್ಸ್ ಶೇರ್ ಮಾಡಿದ್ದು, ಅತ್ಯಂತ ಮುದ್ದಾದ ವಿಡಿಯೋವಿದು ಎಂದು ತಲೆಬರಹ ನೀಡಿದೆ.
ಈ ವಿಡಿಯೋವನ್ನು 9 ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿದ್ದು, ಸಾವಿರಾರು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಕುರಿತಂತೆ ಹಲವಾರು ಕ್ರಿಕೆಟ್ ಅಭಿಮಾನಿಗಳು, ಅಗಸ್ತ್ಯ, ರಶೀದ್ ಖಾನ್ ಹಾಗೂ ಹಾರ್ದಿಕ್ ಪಾಂಡ್ಯ ಅವರನ್ನೊಳಗೊಂಡ ತ್ರಿವಳಿ ಜೋಡಿಯಿಂದ ಮತ್ತಷ್ಟು ವಿಡಿಯೋಗಳು ನಮಗೆ ನೋಡಲು ಸಿಗುವಂತಾಗಲಿ ಎಂದಿದ್ದಾರೆ. ಹಾರ್ದಿಕ್ ಪಾಂಡ್ಯ ಹಾಗೂ ನತಾಶಾ ಸ್ಟ್ಯಾಂಕೋವಿಚ್ ದಂಪತಿಯ ಕುಟುಂಬಕ್ಕೆ ಜುಲೈ 30, 2020ರಲ್ಲಿ ಅಗಸ್ತ್ಯ ಹೆಸರಿನ ಮುದ್ದಾದ ಮಗುವಿನ ಸೇರ್ಪಡೆಯಾಗಿದೆ. ತಾರಾ ಜೋಡಿ ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಮಗುವಿನೊಂದಿಗಿನ ಫೋಟೋವನ್ನು ಹಂಚಿಕೊಳ್ಳುತ್ತಿರುತ್ತಾರೆ.
ಪ್ಲೇ ಆಫ್ ಹೊಸ್ತಿಲಲ್ಲಿದೆ ಗುಜರಾತ್ ಟೈಟಾನ್ಸ್:
ಐಪಿಎಲ್‌ಗೆ ಹೊಸದಾಗಿ ಸೇರ್ಪಡೆಗೊಂಡಿರುವ ಗುಜರಾತ್ ಟೈಟಾನ್ಸ್ ಹಾಗೂ ಲಖನೌ ಸೂಪರ್ ಜೈಂಟ್ಸ್ (Lucknow Supergiants) ತಂಡಗಳು ಅದ್ಭುತ ಪ್ರದರ್ಶನದ ಮೂಲಕ ಗಮನ ಸೆಳೆದಿವೆ. ಅದರಲ್ಲೂ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ ತಂಡವು ಆಡಿರುವ 10 ಪಂದ್ಯಗಳ ಪೈಕಿ 8 ಪಂದ್ಯಗಳಲ್ಲಿ ಗೆಲುವು ಸಾಧಿಸುವ ಮೂಲಕ 16 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, ಇನ್ನೊಂದು ಗೆಲುವು ಗುಜರಾತ್ ಟೈಟಾನ್ಸ್ ತಂಡದ ಪ್ಲೇ ಆಫ್ ಸ್ಥಾನವನ್ನು ಖಚಿತಪಡಿಸಲಿದೆ.
Annual ICC T20I Rankings ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಟಿ20ಯಲ್ಲಿ ನಂ.1
ಹಾರ್ದಿಕ್ ಪಾಂಡ್ಯ ಇದೇ ಮೊದಲ ಬಾರಿಗೆ ಐಪಿಎಲ್‌ನಲ್ಲಿ ನಾಯಕನಾಗಿ ತಂಡವನ್ನು ಮುನ್ನಡೆಸುತ್ತಿದ್ದು, ಮೊದಲ ಯತ್ನದಲ್ಲೇ ನಿರೀಕ್ಷೆಗೂ ಮೀರಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಇದರ ಜತೆಗೆ ಬ್ಯಾಟಿಂಗ್‌ನಲ್ಲೂ ಕೂಡಾ ಹಾರ್ದಿಕ್ ಪಾಂಡ್ಯ ರನ್ ಮಳೆ ಹರಿಸುತ್ತಿದ್ದಾರೆ. ಸದ್ಯ ಹಾರ್ದಿಕ್ ಪಾಂಡ್ಯ 9 ಪಂದ್ಯಗಳನ್ನಾಡಿ 44.14ರ ಬ್ಯಾಟಿಂಗ್ ಸರಾಸರಿಯಲ್ಲಿ 3 ಅರ್ಧಶತಕ ಸಹಿತ 309 ರನ್ ಬಾರಿಸಿದ್ದಾರೆ.