IPL 2022 Final: ಗುಜರಾತ್ ಟೈಟಾನ್ಸ್ vs ರಾಜಸ್ಥಾನ ರಾಯಲ್ಸ್‌ ಫೈನಲ್‌ ಫೈಟ್

By Kannadaprabha NewsFirst Published May 29, 2022, 9:51 AM IST
Highlights

* 15ನೇ ಆವೃತ್ತಿಯ ಐಪಿಎಲ್‌ ಫೈನಲ್ ಪಂದ್ಯಕ್ಕೆ ಕ್ಷಣಗಣನೆ

* ಪ್ರಶಸ್ತಿಗಾಗಿ ರಾಜಸ್ಥಾನ ರಾಯಲ್ಸ್ ಹಾಗೂ ಗುಜರಾತ್ ಟೈಟಾನ್ಸ್ ನಡುವೆ ಬಿಗ್ ಫೈಟ್

* ಚೊಚ್ಚಲ ಆವೃತ್ತಿಯಲ್ಲೇ ಕಪ್ ಗೆಲ್ಲುವ ವಿಶ್ವಾಸದಲ್ಲಿರುವ ಗುಜರಾತ್‌ಗೆ ಶಾಕ್‌ ನೀಡುತ್ತಾ ರಾಯಲ್ಸ್?

ಅಹಮದಾಬಾದ್‌(ಮೇ.29): 15ನೇ ಆವೃತ್ತಿಯ ಐಪಿಎಲ್‌ನ ಫೈನಲ್‌ (IPL 2022 Final) ಸೆಣಸಾಟಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ಭಾನುವಾರ ಈ ಆವೃತ್ತಿಯ ಅಗ್ರ ಎರಡು ತಂಡಗಳಾದ ಗುಜರಾತ್‌ ಟೈಟಾನ್ಸ್‌ (Gujarat Titans) ಮತ್ತು ರಾಜಸ್ಥಾನ ರಾಯಲ್ಸ್‌ (Rajasthan Royals) ಪ್ರಶಸ್ತಿಗಾಗಿ ಸೆಣಸಲಿವೆ. ಗುಜರಾತ್‌ ಚೊಚ್ಚಲ ಪ್ರಯತ್ನದಲ್ಲೇ ಫೈನಲ್‌ ಪ್ರವೇಶಿಸಿ ಭಾರೀ ನಿರೀಕ್ಷೆ ಮೂಡಿಸಿದ್ದು, ಮೊದಲ ಬಾರಿಗೆ ಟ್ರೋಫಿಗೆ ಮುತ್ತಿಡಲು ಕಾಯುತ್ತಿದ್ದರೆ, ರಾಜಸ್ಥಾನ ರಾಯಲ್ಸ್ 2008ರ ಬಳಿಕ ಮೊದಲ ಸಲ ಫೈನಲ್‌ ಪ್ರವೇಶಿಸಿದ್ದು, 2ನೇ ಟ್ರೋಫಿ ಗೆಲುವಿನ ನಿರೀಕ್ಷೆಯಲ್ಲಿದೆ.

2 ತಿಂಗಳ ಹಿಂದೆ ಐಪಿಎಲ್‌ ಆರಂಭಗೊಂಡಾಗ ಗುಜರಾತ್ ಟೈಟಾನ್ಸ್‌ ನಾಯಕ ಹಾರ್ದಿಕ್‌ ಪಾಂಡ್ಯ (Hardik Pandya) ಮತ್ತು ಸಂಜು ಸ್ಯಾಮನ್ಸ್‌ (Sanju Samson) ಫೈನಲ್‌ನಲ್ಲಿ ಟಾಸ್‌ಗಾಗಿ ಆಗಮಿಸಬಹುದು ಎಂದು ಅನೇಕರು ಊಹಿಸಿರಲಿಲ್ಲ. ಆದರೆ ವೈಯಕ್ತಿಕ ಪ್ರದರ್ಶನದೊಂದಿಗೆ ತಮ್ಮ ತಮ್ಮ ತಂಡಗಳನ್ನೂ ಉತ್ತಮವಾಗಿ ನಿರ್ವಹಿಸುತ್ತಿರುವ ಈ ಇಬ್ಬರು ನಾಯಕರು ಎಲ್ಲರ ನಿರೀಕ್ಷೆ ಮೀರಿದ್ದಾರೆ.

Latest Videos

ಗುಜರಾತ್‌ ಬೌಲಿಂಗ್‌ vs ರಾಯಲ್ಸ್‌ ಬ್ಯಾಟಿಂಗ್‌

ಜೋಸ್‌ ಬಟ್ಲರ್‌ (Jos Buttler), ಯಶಸ್ವಿ ಜೈಸ್ವಾಲ್‌, ಸಂಜು ಸ್ಯಾಮ್ಸನ್‌, ದೇವದತ್‌ ಪಡಿಕ್ಕಲ್‌ (Devdutt Padikkal), ಶಿಮ್ರೊನ್‌ ಹೆಟ್ಮೇಯರ್‌. ತಂಡವೊಂದು ಇದಕ್ಕಿಂತ ಬಲಿಷ್ಠ ಟಿ20 ಬ್ಯಾಟರ್‌ಗಳ ಪಡೆಯನ್ನು ಹೊಂದುವುದು ಕಷ್ಟ. ರಾಜಸ್ಥಾನದ ಈ ಬಲಿಷ್ಠ ಬ್ಯಾಟಿಂಗ್‌ ಪಡೆಗೆ ಗುಜರಾತ್‌ನ ಮೊಹಮದ್‌ ಶಮಿ, ರಶೀದ್‌ ಖಾನ್‌ (Rashid Khan), ಅಲ್ಜಾರಿ ಜೋಸೆಫ್‌, ಯಶ್‌ ದಯಾಳ್‌, ಸಾಯಿಕಿಶೋರ್‌ರ ಸವಾಲು ಎದುರಾಗಲಿದೆ. ಇನ್ನು ಗುಜರಾತ್‌ ಬ್ಯಾಟರ್‌ಗಳಾದ ಶುಭ್‌ಮನ್‌ ಗಿಲ್‌, ವೃದ್ಧಿಮಾನ್‌ ಸಾಹ, ಮ್ಯಾಥ್ಯೂ ವೇಡ್‌, ಹಾರ್ದಿಕ್‌ ಪಾಂಡ್ಯ, ಡೇವಿಡ್‌ ಮಿಲ್ಲರ್‌ಗೆ ಪ್ರಸಿದ್ಧ್ ಕೃಷ್ಣ, ಟ್ರೆಂಟ್‌ ಬೌಲ್ಟ್‌, ಆರ್‌.ಅಶ್ವಿನ್‌, ಯಜುವೇಂದ್ರ ಚಹಲ್‌, ಒಬೆಡ್‌ ಮೆಕಾಯ್‌ರಿಂದ ಪ್ರಬಲ ಪೈಪೋಟಿ ಎದುರಾಗುವ ನಿರೀಕ್ಷೆ ಇದೆ.

ಎರಡೂ ಪಂದ್ಯದಲ್ಲಿ ಟೈಟಾನ್ಸ್‌ ಮೇಲುಗೈ

ಈ ಆವೃತ್ತಿಯಲ್ಲಿ ಗುಜರಾತ್‌ ಮತ್ತು ರಾಜಸ್ಥಾನ ಎರಡು ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಎರಡರಲ್ಲೂ ಗುಜರಾತ್‌ ಗೆಲುವು ಒಲಿಸಿಕೊಂಡಿತ್ತು. ಲೀಗ್‌ ಪಂದ್ಯದಲ್ಲಿ 37 ರನ್‌ಗಳಿಂದ ಗೆದ್ದಿದ್ದ ಟೈಟಾನ್ಸ್‌, ಕ್ವಾಲಿಫೈಯರ್‌-1ನಲ್ಲಿ 7 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿತ್ತು.

IPL 2022: ರಾಯಲ್ಸ್‌ ಎದುರು ಆರ್‌ಸಿಬಿ ಸೋತಿದ್ದೆಲ್ಲಿ? ಇಲ್ಲಿವೆ 3 ಕಾರಣಗಳು..!

ಗುಜರಾತ್‌ ಫೈನಲ್‌ ಹಾದಿ

ಲೀಗ್‌ ಹಂತದಲ್ಲಿ 10 ಪಂದ್ಯಗಳಲ್ಲಿ ಗೆಲುವು

ಅಂಕಪಟ್ಟಿಯಲ್ಲಿ ನಂ.1 ಸ್ಥಾನ, ನೇರ ಫೈನಲ್‌ಗೆ

ಕ್ವಾಲಿಫೈಯರ್‌-1ನಲ್ಲಿ ರಾಜಸ್ಥಾನ ವಿರುದ್ಧ ಗೆಲುವು

ರಾಜಸ್ಥಾನ ಫೈನಲ್‌ ಹಾದಿ

ಲೀಗ್‌ ಹಂತದಲ್ಲಿ 9ರಲ್ಲಿ ಜಯ, 2ನೇ ಸ್ಥಾನ

ಕ್ವಾಲಿಫೈಯರ್‌-1ನಲ್ಲಿ ಗುಜರಾತ್‌ ವಿರುದ್ಧ ಸೋಲು

ಕ್ವಾಲಿಫೈಯರ್‌-2ರಲ್ಲಿ ಆರ್‌ಸಿಬಿ ವಿರುದ್ಧ ಜಯ

ಚೆನ್ನೈ, ಮುಂಬೈ, ಆರ್‌ಸಿಬಿ ಇಲ್ಲದ 2ನೇ ಫೈನಲ್‌!

ಈ ಬಾರಿಯ ಫೈನಲ್‌ ಪಂದ್ಯ ಚೆನ್ನೈ, ಮುಂಬೈ ಹಾಗೂ ಆರ್‌ಸಿಬಿ ತಂಡಗಳು ಇಲ್ಲದ 2ನೇ ಫೈನಲ್‌ ಆಗಲಿದೆ. ಇದಕ್ಕೂ ಮೊದಲು 2014ರಲ್ಲಿ ಮಾತ್ರ ಈ ಮೂರು ತಂಡಗಳಿಲ್ಲದೇ ಫೈನಲ್‌ ಪಂದ್ಯ ನಡೆದಿತ್ತು. ಆ ಆವೃತ್ತಿಯಲ್ಲಿ ಕೆಕೆಆರ್‌-ಪಂಜಾಬ್‌ ತಂಡಗಳು ಪ್ರಶಸ್ತಿಗಾಗಿ ಸೆಣಸಿದ್ದವು. ಚೆನ್ನೈ ಒಟ್ಟು 9 ಬಾರಿ ಫೈನಲ್‌ನಲ್ಲಿ ಆಡಿದ್ದರೆ, ಮುಂಬೈ ಮತ್ತು ಆರ್‌ಸಿಬಿ ಕ್ರಮವಾಗಿ 6 ಮತ್ತು 3 ಬಾರಿ ಫೈನಲ್‌ನಲ್ಲಿ ಕಾಣಿಸಿಕೊಂಡಿವೆ.

ಸಂಭವನೀಯ ಆಟಗಾರ ಪಟ್ಟಿ

ಗುಜರಾತ್‌ ಟೈಟಾನ್ಸ್: ಶುಭ್‌ಮನ್‌ ಗಿಲ್‌, ವೃದ್ಧಿಮಾನ್‌ ಸಾಹ, ಮ್ಯಾಥ್ಯೂ ವೇಡ್‌, ಹಾರ್ದಿಕ್‌ ಪಾಂಡ್ಯ(ನಾಯಕ), ಡೇವಿಡ್‌ ಮಿಲ್ಲರ್‌, ರಾಹುಲ್‌ ತೆವಾಟಿಯಾ, ರಶೀದ್‌ ಖಾನ್‌, ಸಾಯಿ ಕಿಶೋರ್‌, ಜೋಸೆಫ್‌/ಫಗ್ರ್ಯೂಸನ್‌, ಮೊಹಮದ್‌ ಶಮಿ, ಯಶ್‌ ದಯಾಳ್‌.

ರಾಜಸ್ಥಾನ ರಾಯಲ್ಸ್: ಯಶಸ್ವಿ ಜೈಸ್ವಾಲ್‌, ಜೋಸ್‌ ಬಟ್ಲರ್‌, ಸಂಜು ಸ್ಯಾಮ್ಸನ್‌(ನಾಯಕ), ದೇವದತ್‌ ಪಡಿಕ್ಕಲ್‌, ಶಿಮ್ರೊನ್‌ ಹೆಟ್ಮೇಯರ್‌, ರಿಯಾನ್‌ ಪರಾಗ್‌, ಆರ್‌.ಅಶ್ವಿನ್‌, ಟ್ರೆಂಟ್‌ ಬೌಲ್ಟ್‌, ಒಬೆಡ್‌ ಮೆಕಾಯ್‌, ಯಜುವೇಂದ್ರ ಚಹಲ್‌, ಪ್ರಸಿದ್‌್ಧ ಕೃಷ್ಣ.

ಸ್ಥಳ: ಅಹಮದಾಬಾದ್‌, ಮೋದಿ ಕ್ರೀಡಾಂಗಣ
ಪಂದ್ಯ: ರಾತ್ರಿ 8ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

ಪಿಚ್‌ ರಿಪೋರ್ಚ್‌

ಮೋದಿ ಕ್ರೀಡಾಂಗಣದ ಪಿಚ್‌ ಬ್ಯಾಟಿಂಗ್‌ಗೆ ಸಹಕಾರಿಯಾಗಿರಲಿದ್ದು, ಈ ಪಂದ್ಯದಲ್ಲೂ ಟಾಸ್‌ ನಿರ್ಣಾಯಕ ಪಾತ್ರ ವಹಿಸಲಿದೆ. ಸಮಯ ಕಳೆದಂತೆ ಇಬ್ಬನಿ ಬೀಳುವ ಕಾರಣ ಟಾಸ್‌ ಗೆಲ್ಲುವ ತಂಡ ಮೊದಲು ಫೀಲ್ಡ್‌ ಮಾಡಲು ನಿರ್ಧರಿಸುವ ಸಾಧ್ಯತೆಯೇ ಹೆಚ್ಚು. ಮೊದಲು ಬ್ಯಾಟ್‌ ಮಾಡುವ ತಂಡ ಕನಿಷ್ಠ 190-200 ರನ್‌ ದಾಖಲಿಸಿದರಷ್ಟೇ ರಕ್ಷಿಸಿಕೊಳ್ಳುವ ಸಾಧ್ಯತೆ ಇರಲಿದೆ.
 

click me!