ಡೆಲ್ಲಿ ಎದುರಿನ ಪಂದ್ಯದ ವೇಳೆ ಧೋನಿ ಬ್ಯಾಟ್‌ ಕಚ್ಚಿದ್ದೇಕೆ..? ಈ ಬಗ್ಗೆ ಅಮಿತ್ ಮಿಶ್ರಾ ಹೇಳಿದ್ದೇನು..?

By Naveen KodaseFirst Published May 9, 2022, 5:00 PM IST
Highlights

* ಡೆಲ್ಲಿ ಕ್ಯಾಪಿಟಲ್ಸ್ ಎದುರು ಭರ್ಜರಿ ಗೆಲುವು ಸಾಧಿಸಿದ ಚೆನ್ನೈ ಸೂಪರ್ ಕಿಂಗ್ಸ್

* ಡೆಲ್ಲಿ ಎದುರು ಕ್ರೀಸ್‌ಗಿಳಿಯುವ ಮುನ್ನ ಬ್ಯಾಟ್ ಕಚ್ಚಿ ಗಮನ ಸೆಳೆದ ಎಂ ಎಸ್ ಧೋನಿ

* ಧೋನಿ ಡ್ರೆಸ್ಸಿಂಗ್ ರೂಂನಲ್ಲಿ ಬ್ಯಾಟ್ ಕಚ್ಚಿದ್ದೇಕೆ ಎನ್ನುವ ಸೀಕ್ರೇಟ್ ಬಿಚ್ಚಿಟ್ಟ ಅಮಿತ್ ಮಿಶ್ರಾ

ಬೆಂಗಳೂರು(ಮೇ.09): ಚೆನ್ನೈ ಸೂಪರ್ ಕಿಂಗ್ಸ್‌ (Chennai Super Kings) ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) 41ನೇ ಹುಟ್ಟುಹಬ್ಬ ಆಚರಿಸಿಕೊಳ್ಳುವ ಹೊಸ್ತಿಲಲ್ಲಿದ್ದಾರೆ. 41 ಕೇವಲ ನಂಬರ್ ಅಷ್ಟೇ ಎನ್ನುವುದನ್ನು ಧೋನಿ 2022ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (Indian Premier League) ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಧೋನಿ ಕೇವಲ ಚುರುಕಿನ ವಿಕೆಟ್ ಕೀಪಿಂಗ್ ಮಾತ್ರವಲ್ಲದೇ ಮ್ಯಾಚ್‌ ಫಿನಿಶಿಂಗ್‌ ಮೂಲಕವೂ ಅಭಿಮಾನಿಗಳಿಗೆ ಭರಪೂರ ಮನರಂಜನೆಯನ್ನು ನೀಡುತ್ತಿದ್ದಾರೆ. ಕಳೆದ ವಾರವಷ್ಟೇ ಮತ್ತೊಮ್ಮೆ ಚೆನ್ನೈ ಸೂಪರ್‌ ಕಿಂಗ್ಸ್ ತಂಡದ ನಾಯಕರಾಗಿ ನೇಮಕವಾಗಿರುವ ಧೋನಿ ತಂಡದ ತಪ್ಪುಗಳನ್ನು ತಿದ್ದಿಕೊಂಡು ತಂಡ ಗೆಲುವಿನ ಹಳಿಗೆ ಮರಳುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಇದೇ ವೇಳೆ ಟೀಂ ಇಂಡಿಯಾದ ಮಾಜಿ ಸ್ಪಿನ್ನರ್ ಅಮಿತ್ ಮಿಶ್ರಾ (Amit Mishra), ಧೋನಿ ಬ್ಯಾಟಿಂಗ್ ಮಾಡಲಿಳಿಯುವ ಮುನ್ನ ತಮ್ಮ ಬ್ಯಾಟ್ ಕಚ್ಚಿದ್ದೇಕೆ ಎನ್ನುವುದ ಸೀಕ್ರೇಟ್ ಬಿಚ್ಚಿಟ್ಟಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ನಾಯಕ ಧೋನಿ, ಡೆಲ್ಲಿ ಕ್ಯಾಪಿಟಲ್ಸ್‌ ಎದುರಿನ ಪಂದ್ಯದ ವೇಳೆ ಬ್ಯಾಟಿಂಗ್ ಮಾಡಲು ಕ್ರೀಸ್‌ಗಿಳಿಯುವ ಮುನ್ನ ಡ್ರೆಸ್ಸಿಂಗ್ ರೂಂನಲ್ಲಿ ತಮ್ಮ ಬ್ಯಾಟ್ ಕಚ್ಚುತ್ತಿರುವ ರೀತಿಯ ಕ್ಷಣ ಕ್ಯಾಮರಾ ಕಣ್ಣುಗಳಲ್ಲಿ ಸೆರೆಯಾಗಿತ್ತು. ಧೋನಿ ಯಾಕೆ ಹೀಗೆ ಮಾಡಿದರೂ ಎನ್ನುವ ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ ಸಿಕ್ಕಿರಲಿಲ್ಲ, ಆದರೆ ಇದೀಗ ಮಾಜಿ ಕ್ರಿಕೆಟಿಗ ಅಮಿತ್ ಮಿಶ್ರಾ ಈ ಕುತೂಹಲಕ್ಕೆ ತೆರೆ ಎಳೆದಿದ್ದಾರೆ.

ಈ ಕುರಿತಂತೆ ಟ್ವೀಟ್ ಮಾಡಿರುವ ಅಮಿತ್ ಮಿಶ್ರಾ, ಧೋನಿ ಏಕೆ ಬ್ಯಾಟ್ 'ತಿನ್ನುತ್ತಿದ್ದಾರೆ' ಎಂದು ನೀವೆಲ್ಲರೂ ಅಚ್ಚರಿಗೊಳಗಾಗಿರಬಹುದು. ಅವರು ತಮ್ಮ ಬ್ಯಾಟ್‌ಗೆ ಸುತ್ತಿದ ಟೇಪ್‌ ಕಟ್ ಮಾಡುವ ಸಲುವಾಗಿ ಬ್ಯಾಟ್ ಕಚ್ಚುತ್ತಿರುತ್ತಾರೆ. ಯಾಕೆಂದರೆ ಧೋನಿ ತಮ್ಮ ಬ್ಯಾಟ್‌ ಕ್ಲೀನ್ ಆಗಿರಲು ಬಯಸುತ್ತಾರೆ. ಧೋನಿ ಬ್ಯಾಟ್‌ನಲ್ಲಿ ಒಂದೇ ಒಂದು ಸಣ್ಣ ಟೇಪಿನ ತುಣುಕು ಅಥವಾ ದಾರವೂ ನೀವು ಕಾಣಲು ಸಿಗುವುದಿಲ್ಲ ಎಂದು ಅಮಿತ್ ಮಿಶ್ರಾ ಟ್ವೀಟ್ ಮಾಡಿದ್ದಾರೆ.

In case you’re wondering why Dhoni often ‘eats’ his bat. He does that to remove tape of the bat as he likes his bat to be clean. You won’t see a single piece of tape or thread coming out of MS’s bat.

— Amit Mishra (@MishiAmit)

ಈ ಮೊದಲು 2019ರ ಐಸಿಸಿ ಏಕದಿನ ವಿಶ್ವಕಪ್ ಸೆಮಿಫೈನಲ್‌ನಲ್ಲಿಯೂ ಮಹೇಂದ್ರ ಸಿಂಗ್ ಧೋನಿ ತಮ್ಮ ಬ್ಯಾಟ್ ಕಚ್ಚುತ್ತಿರುವ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. ನ್ಯೂಜಿಲೆಂಡ್ ವಿರುದ್ದ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ವಿರೋಚಿತ ಸೋಲು ಕಾಣುವ ಮೂಲಕ ಸೆಮೀಸ್‌ನಲ್ಲೇ ಮುಗ್ಗರಿಸಿ ನಿರಾಸೆ ಅನುಭವಿಸಿತ್ತು. ಇದೇ ಪಂದ್ಯವು ಮಹೇಂದ್ರ ಸಿಂಗ್ ಧೋನಿ ಪಾಲಿಗೆ ಕಡೆಯ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯ ಎನಿಸಿತ್ತು.

IPL 2022: ಚೆನ್ನೈ ಸೂಪರ್ ಕಿಂಗ್ಸ್‌ ಎದುರು ಡೆಲ್ಲಿ ಕ್ಯಾಪಿಟಲ್ಸ್‌ಗೆ ಹೀನಾಯ ಸೋಲು

ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಡೆಲ್ಲಿ ಎದುರು ಭರ್ಜರಿ ಜಯ: ಚೆನ್ನೈ ಸೂಪರ್‌ ಕಿಂಗ್ಸ್ ವಿರುದ್ಧ ಭಾನುವಾರ ನಡೆದ ಪಂದ್ಯದಲ್ಲಿ 91 ರನ್‌ಗಳ ಹೀನಾಯ ಸೋಲು ಅನುಭವಿಸಿದ ಡೆಲ್ಲಿ, ಲೀಗ್‌ ಹಂತದಲ್ಲೇ ಹೊರಬೀಳುವ ಆತಂಕಕ್ಕೆ ಸಿಲುಕಿದೆ. ಈ ಸೋಲಿನಿಂದ ತಂಡದ ನೆಟ್‌ ರನ್‌ರೇಟ್‌ ಸಹ ಕುಸಿದಿದ್ದು, ಪ್ಲೇ-ಆಫ್‌ ರೇಸ್‌ನಲ್ಲಿರುವ ಉಳಿದ ತಂಡಗಳಿಗೆ ಲಾಭವಾಗಲಿದೆ. ಮೊದಲು ಬ್ಯಾಟ್‌ ಮಾಡಿದ ಚೆನ್ನೈ 20 ಓವರಲ್ಲಿ 6 ವಿಕೆಟ್‌ ನಷ್ಟಕ್ಕೆ 208 ರನ್‌ ಕಲೆಹಾಕಿತು. ದೊಡ್ಡ ಗುರಿ ಬೆನ್ನತ್ತಿದ ಡೆಲ್ಲಿ 17.4 ಓವರಲ್ಲಿ 117 ರನ್‌ಗೆ ಆಲೌಟ್‌ ಆಯಿತು.

15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಕ್ಕೂ ಮುನ್ನ ಬೆಂಗಳೂರಿನಲ್ಲಿ ನಡೆದ ಐಪಿಎಲ್ ಆಟಗಾರರ ಹರಾಜಿನಲ್ಲಿ ಲೆಗ್‌ ಸ್ಪಿನ್ನರ್ ಅಮಿತ್ ಮಿಶ್ರಾ ಅವರನ್ನು ಖರೀದಿಸಲು ಯಾವ ಫ್ರಾಂಚೈಸಿಯು ಯಶಸ್ವಿಯಾಗಿರಲಿಲ್ಲ. ಹೀಗಿದ್ದೂ ಡೆಲ್ಲಿ ಕ್ಯಾಪಿಟಲ್ಸ್‌ ಫ್ರಾಂಚಿಸಿ ಬಾಸ್ ಪಾರ್ಥ್‌ ಜಿಂದಾಲ್‌ ಅವರಲ್ಲಿ ತಾವು ಬಯಸಿದರೆ ಡೆಲ್ಲಿ ತಂಡದ ಪರ ಕೆಲಸ ಮಾಡಲು ಸಿದ್ದರಿರುವುದಾಗಿ ಹೇಳಿದ್ದರು.

click me!