ಕೋಲ್ಕತಾ(ಮೇ.25): ಐಪಿಎಲ್ 2022 ಟೂರ್ನಿಯ ಎಲಿಮಿನೇಟರ್ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡವನ್ನು ಮಣಿಸಿದ ಆರ್‌ಸಿಬಿ 2ನೇ ಕ್ವಾಲಿಫೈಯರ್ ಪಂದ್ಯಕ್ಕೆ ಅರ್ಹತೆ ಪಡೆದಿದೆ. ಇತ್ತ ಲಖನೌ ಸೂಪರ್ ಜೈಂಟ್ಸ್ ಟೂರ್ನಿಯಿಂದ ಹೊರಬಿದ್ದಿದೆ. ಆರ್‌ಸಿಬಿ ನೀಡಿದ ಬೃಹತ್ ಮೊತ್ತದ ಮುಂದೆ ಲಖನೌ ನಾಯಕ ಕೆಎಲ್ ರಾಹುಲ್ ನಡೆಸಿದ ಹೋರಾಟ ವ್ಯರ್ಥವಾಯಿತು.
ರಜತ್ ಪಾಟಿದಾರ್ ಸ್ಫೋಟಕ ಶತಕದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 207 ರನ್ ಸಿಡಿಸಿತ್ತು. 208 ರನ್ ಟಾರ್ಗೆಟ್ ಪಡೆದ ಲಖನೌ ಸೂಪರ್ ಜೈಂಟ್ಸ್ ತಂಡಕ್ಕೆ ಬ್ಯಾಟಿಂಗ್‌ನಲ್ಲೂ ಸಂಕಷ್ಟ ಎದುರಾಯಿತು. ಆರಂಭದಲ್ಲೇ ಕ್ವಿಂಟನ್ ಡಿಕಾಕ್ ವಿಕೆಟ್ ಕಳೆದುಕೊಂಡಿತು. ಡಿಕಾಕ್ 6 ರನ್ ಸಿಡಿಸಿ ಔಟಾದರು.
ನಾಯಕ ಕೆಎಲ್ ರಾಹುಲ್ ಹಾಗೂ ಮನನ್ ವೋಹ್ರಾ ತಂಡಕ್ಕೆ ಚೇತರಿಕೆ ನೀಡುವ ಪ್ರಯತ್ನ ಮಾಡಿದರು. ಆದರೆ ಇವರ ಜೊತೆಯಾಟ ಗಟ್ಟಿಯಾಗಿ ನೆಲೆಯೂರಲು ಆರ್‌ಸಿಬಿ ಅವಕಾಶ ನೀಡಲಿಲ್ಲ. ವೋಹ್ರಾ 19 ರನ್ ಸಿಡಿಸಿ ಔಟಾದರು. 41 ರನ್‌ಗಳಿಗೆ ಲಖನೌ ಪ್ರಮುಖ 2 ವಿಕೆಟ್ ಕಳೆದುಕೊಂಡಿತು.
ಕೆಎಲ್ ರಾಹುಲ್ ಹಾಗೂ ದೀಪಕ್ ಹೂಡ ಸ್ಫೋಟಕ ಬ್ಯಾಟಿಂಗ್ ಲಖನೌ ತಂಡದಲ್ಲಿ ಗೆಲುವಿನ ಆಸೆ ಚಿಗುರಿಸಿತ್ತು. ಆದರೆ ಹೂಡ 26 ಎಸೆತದಲ್ಲಿ 45 ರನ್ ಸಿಡಿಸಿ ಔಟಾದರು ಇತ್ತ ಹೋರಾಟ ಮುಂದುವರಿಸಿದ ಕೆಎಲ್ ರಾಹುಲ್ 79 ರನ್ ಸಿಡಿಸಿ ಔಟಾದರು.
ಮಾರ್ಕಸ್ ಸ್ಟೊಯ್ನಿಸ್ ಕೇವಲ 9 ರನ್ ಸಿಡಿಸಿ ನಿರಾಸೆ ಅನುಭವಿಸಿದರು. ಲಖನೌ ಗೆಲುವಿಗೆ ಅಂತಿಮ 6 ಎಸೆತದಲ್ಲಿ 24 ರನ್ ಅವಶ್ಯಕತೆ ಇತ್ತು. ಆದರೆ ಘಟಾನುಘಟಿ ಬ್ಯಾಟ್ಸ್‌ಮನ್ ಪೆವಿಲಿಯನ್ ಸೇರಿಕೊಂಡಿದ್ದರು. ಹೀಗಾಗಿ ಲಖನೌ 6 ವಿಕೆಟ್ ನಷ್ಟಕ್ಕೆ 193 ರನ್ ಸಿಡಿಸಿ ಸೋಲೋಪ್ಪಿಕೊಂಡಿತು. 14 ರನ್ ಗೆಲುವು ದಾಖಲಿಸಿದ ಆರ್‌ಸಿಬಿ 2ನೇ ಕ್ವಾಲಿಫೈಯರ್ ಪಂದ್ಯಕ್ಕೆ ಅರ್ಹತೆ ಪಡೆದಿದೆ.
ಮೇ.27 ರಂದು ನಡೆಯಲಿರುವ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಆರ್‌ಸಿಬಿ, ರಾಜಸ್ಥಾನ ರಾಯಲ್ಸ್ ವಿರುದ್ಧ ಹೋರಾಟ ನಡೆಸಲಿದೆ. ಇತ್ತ ಎಲಿಮಿನೇಟರ್ ಪಂದ್ಯ ಸೋತ ಲಖನೌ ಸೂಪರ್ ಜೈಂಟ್ಸ್ ಟೂರ್ನಿಯಿಂದ ನಿರ್ಗಮಿಸಿದೆ.
ಆರ್‌ಸಿಬಿ ಇನ್ನಿಂಗ್ಸ್
ಎಲಿಮಿನೇಟರ್ ಪಂದ್ಯದಲ್ಲಿ ಆರ್‌ಸಿಬಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದೆ. ಪ್ರಮುಖವಾಗಿ ರಜತ್ ಪಾಟಿದಾರ್ ಭರ್ಜರಿ ಶತಕ ತಂಡದ ಬೃಹತ್ ಮೊತ್ತಕ್ಕೆ ನೆರವಾಯಿತು. ರಜತ್ ಪಾಟಿದಾರ್ 49 ಎಸೆತದಲ್ಲಿ ಶತಕ ಪೂರೈಸಿದರು. ಒಟ್ಟು 54 ಎಸೆತ ಎದುರಿಸಿದ ರಜತ್ ಪಾಟಿದಾರ್ ಅಜೇಯ 112 ರನ್ ಸಿಡಿಸಿದರು. 12 ಬೌಂಡರಿ ಹಾಗೂ 7 ಸಿಕ್ಸರ್ ಸಿಡಿಸಿದರು. ಅಂತಿಮ ಹಂತದಲ್ಲಿ ದಿನೇಶ್ ಕಾರ್ತಿಕ್ ಕೂಡ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಕಾರ್ತಿಕ್ 23 ಎಸೆತದಲ್ಲಿ 5 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 37ರನ್ ಸಿಡಿಸಿದರು.
ಕೊಹ್ಲಿ 25 ರನ್, ನಾಯಕ ಫಾಫ್ ಡುಪ್ಲೆಸಿಸ್ ಶೂನ್ಯ, ಗ್ಲೆನ್ ಮ್ಯಾಕ್ಸ್‌ವೆಲ್ 9 ರನ್ ಹಾಗೂ ಮಹಿಪಾಲ್ ಲೊಮ್ರೊರ್ 14 ರನ್ ಸಿಡಿಸಿದರು. ಇದರೊಂದಿಗೆ ಆರ್‌ಸಿಬಿ 4 ವಿಕೆಟ್ ನಷ್ಟಕ್ಕೆ 207 ರನ್ ಸಿಡಿಸಿತು.