IPL 2022 ಕೊನೇ 60 ಎಸೆತಗಳಲ್ಲಿ 156 ರನ್ !, ಚೆನ್ನೈ ಆಟಕ್ಕೆ ಬೆಚ್ಚಿದ ಆರ್ ಸಿಬಿ!

By Santosh Naik  |  First Published Apr 12, 2022, 9:23 PM IST

ರಾಬಿನ್ ಉತ್ತಪ್ಪ ಹಾಗೂ ಶಿವಂ ದುಬೆ ಆಡಿದ ದಾಖಲೆಯ 165 ರನ್ ಗಳ ಜೊತೆಯಾಟದ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಆರ್ ಸಿಬಿ ಗೆಲುವಿಗೆ 216 ರನ್ ಗಳ ಬೃಹತ್ ಸವಾಲು ನೀಡಿದೆ.


ಮುಂಬೈ (ಏ.12): ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore ) ತಂಡದ ಬೌಲಿಂಗ್ ವಿಭಾಗವನ್ನು ಭರ್ಜರಿಯಾಗಿ ದಂಡಿಸಿದ ಕರ್ನಾಟಕದ ರಾಬಿನ್ ಉತ್ತಪ್ಪ (Robin Uthappa) ಹಾಗೂ ವೇಗದ ಬೌಲಿಂಗ್ ಆಲ್ರೌಂಡರ್ ಶಿವಂ ದುಬೆ (Shivam Dube) 15ನೇ ಆವೃತ್ತಿಯ ಐಪಿಎಲ್ ನಲ್ಲಿ (IPL 2022) ಚೆನ್ನೈ ಸೂಪರ್ ಕಿಂಗ್ಸ್ (Chennai Super Kings ) ತಂಡದ ಬೃಹತ್ ಮೊತ್ತಕ್ಕೆ ಕಾರಣರಾಗಿದ್ದಾರೆ. ಮೊದಲ ಹತ್ತು ಓವರ್ ಗಳಲ್ಲಿ ಕೇವಲ 60 ರನ್ ಬಾರಿಸಿದ್ದ ಚೆನ್ನೈ, ನಂತರದ 60 ಎಸೆತಗಳಲ್ಲಿ 156  ರನ್ ಕಲೆಹಾಕುವ ಮೂಲಕ ದೊಡ್ಡ ಮೊತ್ತ ಕಲೆಎಹಾಕಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡ ಕೆಟ್ಟ ಆರಂಭ ಕಂಡಿತು. ಹಾಗಿದ್ದರೂ ಆರಂಭಿಕ ಆಟಗಾರ ಕನ್ನಡಿಗ ರಾಬಿನ್ ಉತ್ತಪ್ಪ (88ರನ್, 50 ಎಸೆತ, 4 ಬೌಂಡರಿ, 9 ಸಿಕ್ಸರ್ ) ಹಾಗೂ ಶಿವಂ ದುಬೆ (94 ರನ್, 46 ಎಸತ, 5 ಬೌಂಡರಿ, 8 ಸಿಕ್ಸರ್ ) ಆಡಿದ ಸ್ಪೋಟಕ ಇನ್ನಿಂಗ್ಸ್ ನೆರವಿನಿಂದ 5 ವಿಕೆಟ್ ಗೆ 216 ಮೊತ್ತ ಕಲೆಹಾಕಿದೆ. ಹಾಲಿ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮೊದಲ ಜಯದ ನಿರೀಕ್ಷೆಯಲ್ಲಿದೆ.

Tap to resize

Latest Videos

ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ನಿರೀಕ್ಷೆ ಮಾಡಿದಂತೆ ಆರಂಭ ಸಿಗಲಿಲ್ಲ. ಫಾರ್ಮ್ ಕಂಡುಕೊಳ್ಳಲು ಒದ್ದಾಡುತ್ತಿರುವ ಆರಂಭಿಕ ಆಟಗಾರ ರುತುರಾಜ್ ಗಾಯಕ್ವಾಡ್ ಮತ್ತೊಮ್ಮೆ ನಿರಾಸೆ ಮೂಡಿಸಿದರು. ಕಳೆದ ವರ್ಷ ಜೋಸ್ ಹ್ಯಾಸಲ್ ವುಡ್ ರನ್ನು ತಮ್ಮ ತಂಡದಲ್ಲಿ ಹೊಂದಿದ್ದ ಚೆನ್ನೈ ಸೂಪರ್ ಕಿಂಗ್ಸ್, ಈ ಬಾರಿ ಆರ್ ಸಿಬಿ ತಂಡದ ಪರವಾಗಿ ಅವರ ದಾಳಿಯನ್ನು ಎದುರಿಸಲು ಕಷ್ಟಪಟ್ಟಿತು. ಇದರಿಂದಾಗಿ ಮೊದಲ ಎರಡು ಓವರ್ ಗಳ ಅಂತ್ಯಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ಕೇವಲ 8 ರನ್ ಬಾರಿಸಿತ್ತು. ರನ್ ಗಳಿಸಲು ಪರದಾಟ ನಡೆಸುತ್ತಿರುವ ರುತುರಾಜ್ ಗಾಯಕ್ವಾಡ್ 16 ಎಸೆತಗಳಲ್ಲಿ 3 ಬೌಂಡರಿಗಳಿದ್ದ 17 ರನ್ ಬಾರಿಸಿ ಹ್ಯಾಸಲ್ ವುಡ್ ಗೆ ವಿಕೆಟ್ ನೀಡಿದರು. ಹಾಲಿ ಐಪಿಎಲ್ ನಲ್ಲಿ ಕೇವಲ 7 ರ ಸರಾಸರಿಯಲ್ಲಿ ಐದು ಇನ್ನಿಂಗ್ಸ್ ಗಳಿಂದ ರುತುರಾಜ್ ಗಾಯಕ್ವಾಡ್ ಕೇವಲ 35 ರನ್ ಬಾರಿಸಿದ್ದಾರೆ.

ಬಳಿಕ ಕ್ರೀಸ್ ಗಿಳಿದ ಮೊಯಿನ್ ಅಲಿ ಆರಂಭಿಕ ಆಟಗಾರ ರಾಬಿನ್ ಉತ್ತಪ್ಪ ಜೊತೆಗೂಡಿ ಉತ್ತಮ ಜೊತೆಯಾಟದ ನಿರೀಕ್ಷೆ ಮೂಡಿಸಿದ್ದರು. 2ನೇ ವಿಕೆಟ್ ಗೆ 17 ರನ್ ಜೊತೆಯಾಟ ನಡೆಸಿದ್ದ ವೇಳೆ, ಗೋವಾದ ಸುಯಾಶ್ ಪ್ರಭುದೇಸಾಯಿ ಅವರ ಆಕರ್ಷಕ ಫೀಲ್ಡಿಂಗ್ ಸಾಹಸಕ್ಕೆ ಹೊರಬಿದ್ದರು. ಇದರಿಂದಾಗಿ 7 ಓವರ್ ಗಳ ಅಂತ್ಯಕ್ಕೆ ಚೆನ್ನೈ 37 ರನ್ ಗೆ 2 ವಿಕೆಟ್ ಕಳೆದುಕೊಂಡಿತ್ತು.

ಆರ್ ಸಿಬಿ ಬೌಲಿಂಗ್ ಛಿದ್ರ ಮಾಡಿದ ಉತ್ತಪ್ಪ-ಶಿವಂ ದುಬೆ: ಆರ್ ಸಿಬಿಯ ಇಬ್ಬರು ಮಾಜಿ ಆಟಗಾರರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೌಲಿಂಗ್ ಅನ್ನು ಬಳಿಕ ಛಿದ್ರ ಮಾಡಿದರು. ಆರಂಭದಲ್ಲಿ ನಿಧಾನಗತಿಯ ಬ್ಯಾಟಿಂಗ್ ಗೆ ಇಳಿದ ಈ ಜೋಡಿ ಓವರ್ ಗಳು ಕಳೆದಂತೆ ಆರ್ ಸಿಬಿಯ ಬೌಲಿಂಗ್ ಅನ್ನು ಧೂಳೀಪಟ ಮಾಡಿದರು. 11 ಓವರ್ ನ ವೇಳೆಗೆ 2 ವಿಕೆಟ್ ಗೆ 73 ರನ್ ಬಾರಿಸಿದ್ದ ಚೆನ್ನೈ ಸೂಪರ್ ಕಿಂಗ್ಸ್, ಹೆಚ್ಚೆಂದರೆ, 160-170 ರನ್ ಬಾರಿಸಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಈ ಎಲ್ಲಾ ನಿರೀಕ್ಷೆಗಳನ್ನೂ ಮೀರುವಂತೆ ಇವರಿಬ್ಬರೂ ಬ್ಯಾಟಿಂಗ್ ನಡೆಸಿದರು. ಹಸರಂಗ ಎಸೆದ 11ನೇ ಓವರ್ ನಲ್ಲಿ 1 ಬೌಂಡರಿ ಹಾಗೂ ಸಿಕ್ಸರ್ ನೊಂದಿಗೆ 13 ರನ್ ದೋಚಿದ್ದ ಶಿವಂ ದುಬೆ ನಂತರ ಆರ್ ಸಿಬಿಯ ಎಲ್ಲಾ ಬೌಲರ್ ಗಳಿಗೂ ಮೈಚಳಿ ಬಿಟ್ಟು ಬ್ಯಾಟಿಂಗ್ ನಡೆಸಿದರು. ಒಂದೆಡೆ ಶಿವಂ ದುಬೆ ಅಬ್ಬರದ ಬ್ಯಾಟಿಂಗ್ ನಡೆಸುತ್ತಿದ್ದರೆ, ಇನ್ನೊಂದೆಡೆ ರಾಬಿನ್ ಉತ್ತಪ್ಪ ಗ್ಲೆನ್ ಮ್ಯಾಕ್ಸ್ ವೆಲ್ ಎಸೆದ 13ನೇ ಓವರ್ ನಲ್ಲಿ ಮೂರು ಸಿಕ್ಸರ್ ಗಳನ್ನು ಸಿಡಿಸದರು. 11, 12 ಹಾಗೂ 13ನೇ ಓವರ್ ಗಳಿಂದ ಚೆನ್ನೈ ತಂಡ ಬರೋಬ್ಬರಿ 45 ರನ್ ಗಳನ್ನು ಸಿಡಿಸಿತು.

ಹರ್ಷಲ್ ಪಟೇಲ್ ಅನುಪಸ್ಥಿತಿಯ ಎಲ್ಲಾ ಲಾಭ ಪಡೆದುಕೊಂಡ ಈ ಬ್ಯಾಟ್ಸ್ ಮನ್ ಗಳು, ಆಕಾಶ್ ದೀಪ್ ಎಸೆದ 15ನೇ ಓವರ್ ನಲ್ಲಿ ವೈಯಕ್ತಿಕ ಅರ್ಧಶತಕಗಳನ್ನು ಪೂರೈಸಿಕೊಂಡರು. ಉತ್ತಪ್ಪ 33 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರೆ, ಶಿವಂ ದುಬೆ 30 ಎಸೆತಗಳಲ್ಲಿ ಅರ್ಧಶತಕದ ಗಡಿ ದಾಟಿದರು.

ಐಪಿಎಲ್ ನಲ್ಲಿ ಉತ್ತಪ್ಪ ಗರಿಷ್ಠ ಮೊತ್ತ: ಉತ್ತಪ್ಪ ಬಾರಿಸಿದ 88 ರನ್ ಐಪಿಎಲ್ ಕ್ರಿಕೆಟ್ ಜೀವನದಲ್ಲಿ ರಾಬಿನ್ ಉತ್ತಪ್ಪ ಅವರ ಸರ್ವಶ್ರೇಷ್ಠ ಮೊತ್ತವಾಗಿದೆ. ಇದಕ್ಕೂ ಮುನ್ನ 2017ರಲ್ಲಿ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ವಿರುದ್ಧ ಪುಣೆ ಮೈದಾನದಲ್ಲಿ 87 ರನ್ ಬಾರಿಸಿದ್ದು ಅವರ ಗರಿಷ್ಠ ಮೊತ್ತವಾಗಿತ್ತು. 2014ರಲ್ಲಿ ಆರ್ ಸಿಬಿ ವಿರುದ್ಧವೇ ಕೋಲ್ಕತ ಈಡನ್ ಗಾರ್ಡನ್ಸ್ ನಲ್ಲಿ ಅಜೇಯ 83 ರನ್ ಸಿಡಿಸಿದ್ದರು.
 

click me!