ಐಪಿಎಲ್ 2021: ಮನೀಶ್ ಪಾಂಡೆ ಉಳಿಸಲು ಹೋಗಿ ವಾರ್ನರ್‌ ತಲೆದಂಡ..?

By Suvarna NewsFirst Published May 2, 2021, 1:59 PM IST
Highlights

ಕನ್ನಡಿಗ ಮನೀಶ್ ಪಾಂಡೆ ಉಳಿಸಲು ಹೋಗಿ ಡೇವಿಡ್ ವಾರ್ನರ್ ತಮ್ಮ ನಾಯಕತ್ವ ಕಳೆದುಕೊಳ್ಳಬೇಕಾಯಿತು ಎನ್ನುವ ಮಾತುಗಳು ಕೇಳಿ ಬರುತ್ತಿವೆ.ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಹೈದರಾಬಾದ್‌(ಮೇ.02): 14ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಅರ್ಧದಲ್ಲೇ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ನಾಯಕತ್ವ ಪಟ್ಟದಿಂದ ಡೇವಿಡ್ ವಾರ್ನರ್‌ರನ್ನು ಕೆಳಗಿಳಿಸಿ, ಕೇನ್‌ ವಿಲಿಯಮ್ಸನ್‌ಗೆ ಪಟ್ಟ ಕಟ್ಟಲಾಗಿದೆ. ಆದರೆ ಮನೀಶ್ ಪಾಂಡೆಯನ್ನು ಉಳಿಸಲು ಹೋಗಿ ವಾರ್ನರ್ ತಲೆದಂಡವಾಯಿತೇ ಎನ್ನುವ ಪ್ರಶ್ನೆ ಕೇಳಿ ಬರಲಾರಂಭಿಸಿದೆ. 

ಹೌದು, ಕೆಲವು ದಿನಗಳ ಹಿಂದಷ್ಟೇ ಸನ್‌ರೈಸರ್ಸ್‌ ಹೈದರಾಬಾದ್ ತಂಡದ ನಾಯಕರಾಗಿದ್ದ ಡೇವಿಡ್‌ ವಾರ್ನರ್‌ ಬಹಿರಂಗವಾಗಿಯೇ ಆಯ್ಕೆಗಾರರ ಕುರಿತಂತೆ ತಮ್ಮ ಅಸಮಾಧಾನ ಹೊರಹಾಕಿದ್ದರು. ಇದರ ಭಾಗವಾಗಿಯೇ ವಾರ್ನರ್ ತಲೆದಂಡವಾಗಿದೆ ಎಂದು ಖ್ಯಾತ ವೀಕ್ಷಕ ವಿವರಣೆಗಾರ ಹಾಗೂ ನ್ಯೂಜಿಲೆಂಡ್‌ ಮಾಜಿ ಕ್ರಿಕೆಟಿಗ ಸಿಮೊನ್ ಡಲ್ ಅಭಿಪ್ರಾಯಪಟ್ಟಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ದದ ಪಂದ್ಯದಲ್ಲಿ ಸೋಲಿನ ಬಳಿಕ ಮಾತನಾಡಿದ್ದ ಡೇವಿಡ್ ವಾರ್ನರ್‌, ಮನೀಶ್ ಪಾಂಡೆಯನ್ನು ಆಯ್ಕೆಗಾರರು ತಂಡದಿಂದ ಕೈಬಿಟ್ಟಿದ್ದು ತಮ್ಮ ಪಾಲಿಗೆ ಮುಳುವಾಯಿತು ಎಂದು ತಮ್ಮ ಬೇಸರವನ್ನು ಹೊರಹಾಕಿದ್ದರು. ಇದಾದ ಬಳಿಕವೇ ಸನ್‌ರೈಸರ್ಸ್ ಹೈದರಾಬಾದ್ ತಂಡದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವ ಗಾಳಿಸುದ್ದಿಗೆ ಮತ್ತಷ್ಟು ಬಲಬಂದಂತೆ ಆಗಿತ್ತು.

ಐಪಿಎಲ್ 2021: ವಾರ್ನರ್ ತಲೆದಂಡ, ಸನ್‌ರೈಸರ್ಸ್‌ಗೆ ವಿಲಿಯಮ್ಸನ್‌ ಹೊಸ ನಾಯಕ

ಈ ಕುರಿತಂತೆ ಕ್ರಿಕ್‌ಬಜ್‌ ಜತೆ ಮಾತನಾಡಿದ ಸಿಮೊನ್ ಡಲ್, ಸನ್‌ರೈಸರ್ಸ್‌ ಹೈದರಾಬಾದ್‌ ತಂಡದಿಂದ ಮನೀಶ್ ಪಾಂಡೆಯನ್ನು ಕೈಬಿಡುವುದು ನಾಯಕ ವಾರ್ನರ್ ನಿರ್ಧಾರವಾಗಿರಲಿಲ್ಲ. ಈ ಆರೋಪವನ್ನು ಆಯ್ಕೆಗಾರರ ಮೇಲೆ ಹೊರಿಸಿದ್ದಕ್ಕೆ ವಾರ್ನರ್ ಈಗ ಬೆಲೆ ತೆತ್ತಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವು 6 ಪಂದ್ಯಗಳನ್ನಾಡಿ 5ರಲ್ಲಿ ಸೋಲು ಹಾಗೂ ಕೇವಲ ಒಂದು ಪಂದ್ಯದಲ್ಲಿ ಗೆಲುವು ದಾಖಲಿಸುವ ಮೂಲಕ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.

ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಅತ್ಯಂತ ಯಶಸ್ವಿ ಬ್ಯಾಟ್ಸ್‌ಮನ್‌ ಎನಿಸಿಕೊಂಡಿರುವ ಡೇವಿಡ್‌ ವಾರ್ನರ್‌, ನಾಯಕನಾಗಿ 2016ರಲ್ಲಿ ಹೈದರಾಬಾದ್‌ ತಂಡಕ್ಕೆ ಚೊಚ್ಚಲ ಐಪಿಎಲ್ ಟ್ರೋಫಿ ಗೆಲ್ಲಿಸಿಕೊಟ್ಟಿದ್ದರು. ಇನ್ನು ವಾರ್ನರ್‌ ಅನುಪಸ್ಥಿತಿಯಲ್ಲಿ 2018ರಲ್ಲಿ ಕೇನ್‌ ವಿಲಿಯಮ್ಸನ್‌ ಸನ್‌ರೈಸರ್ಸ್‌ ಹೈದರಾಬಾದ್ ತಂಡವನ್ನು ಫೈನಲ್‌ಗೆ ಮುನ್ನಡೆಸಿದ್ದರು. 

click me!