IPL 2021: ಪಂದ್ಯ ಸೋತರೂ ಅಭಿಮಾನಿಗಳ ಮನಗೆದ್ದ ರೋಹಿತ್ ಶರ್ಮಾ

By Suvarna NewsFirst Published Apr 10, 2021, 5:57 PM IST
Highlights

ಹಿಟ್‌ಮ್ಯಾನ್‌ ಖ್ಯಾತಿಯ ರೋಹಿತ್ ಶರ್ಮಾ ಐಪಿಎಲ್‌ ಉದ್ಘಾಟನಾ ಪಂದ್ಯದಲ್ಲಿ ವಿಶೇಷ ಕಾರಣಕ್ಕಾಗಿ ಅಭಿಮಾನಿಗಳ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಚೆನ್ನೈ(ಏ.10): 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ನಾಯಕ ರೋಹಿತ್ ಶರ್ಮಾ ಒಂದು ಮಹತ್ವದ ಕಾರ್ಯಕ್ಕಾಗಿ ಬ್ಯಾಟ್‌ ಬೀಸಿ ಗಮನ ಸೆಳೆದಿದ್ದಾರೆ. ಇದರೊಂದಿಗೆ ಪಂದ್ಯ ಸೋತರೂ ಕ್ರಿಕೆಟ್‌ ಅಭಿಮಾನಿಗಳ ಮನಗೆಲ್ಲುವಲ್ಲಿ ಹಿಟ್‌ಮ್ಯಾನ್‌ ಯಶಸ್ವಿಯಾಗಿದ್ದಾರೆ.

ಹೌದು, ಇಲ್ಲಿನ ಎಂ ಎ ಚಿದಂಬರಂ ಸ್ಟೇಡಿಯಂನಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ದ ಐಪಿಎಲ್‌ ಉದ್ಘಾಟನಾ ಪಂದ್ಯದಲ್ಲಿ ಘೇಂಡಾಮೃಗ(ಸೇವ್‌ ದ ರೈನೋ) ಕಾಪಾಡಿ ಎನ್ನುವ ಸಂದೇಶ ಸಾರುವ ಶೂಗಳನ್ನು ಧರಿಸಿ ಮೈದಾನಕ್ಕಿಳಿದಿದ್ದರು. ರೋಹಿತ್ ಶರ್ಮಾ 2018ರಲ್ಲಿ WWW(World Wide Fund for Nature) ಜೊತೆ ಕೈಜೋಡಿಸಿದ್ದು, ರೈನೋ ಉಳಿಸುವಿಕೆಯ ಯೋಜನೆಗೆ  ಬ್ರ್ಯಾಂಡ್‌ ಅಂಬಾಸಿಡರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಲ್ಲಿಂದ ಅಳಿವಿನಂಚಿನಲ್ಲಿರುವ ಒಂಟಿಕೊಂಬಿನ ಭಾರತ ರೈನೋ ತಳಿಯನ್ನು ರಕ್ಷಣೆಯ ಬಗ್ಗೆ ರೋಹಿತ್ ಶರ್ಮಾ ಜಾಗೃತಿ ಮೂಡಿಸುತ್ತಿದ್ದಾರೆ.

ಮೊದಲ ಪಂದ್ಯ ಗೆಲ್ಲುವುದು ಮುಖ್ಯವಲ್ಲ; ಆರ್‌ಸಿಬಿ ಕಾಲೆಳೆದ ರೋಹಿತ್ ಶರ್ಮಾ

ಆರ್‌ಸಿಬಿ ವಿರುದ್ದದ ಮೊದಲ ಪಂದ್ಯದಲ್ಲಿ ರೈನೋ ಉಳಿಸುವ ಕೆಲಸಕ್ಕೆ ರೋಹಿತ್ ಸಾಥ್‌ ನೀಡಿದ್ದು, ಈ ಕುರಿತಂತೆ ನಿನ್ನೆ ನಾನು ಆಟವಾಡಲು ಮೈದಾನಕ್ಕಿಳಿದಾಗ ಅದು ಕೇವಲ ಪಂದ್ಯಕ್ಕಾಗಿ ಅಷ್ಟೇ ಅಲ್ಲ. ಕ್ರಿಕೆಟ್‌ ಆಡುವುದು ನನ್ನ ಕನಸು. ಈ ಮೂಲಕ ಈ ಜಗತ್ತನ್ನು ಇನ್ನಷ್ಟು ಉತ್ತಮ ಪಡಿಸಲು ನಾವು ನೀವೆಲ್ಲರೂ ಕೈಜೋಡಿಸಬೇಕು. ನನ್ನ ಹೃದಯಕ್ಕೆ ಹತ್ತಿರವಾದ ಕೆಲಸ ಮಾಡಲು ತುಂಬಾ ಸಂತೋಷವಾಗುತ್ತದೆ. ಈ ನಿಟ್ಟಿನಲ್ಲಿ ನಾವು ಇಡುವ ಪ್ರತಿಯೊಂದು ಹೆಜ್ಜೆಯೂ ಮಹತ್ವದ್ದಾಗುತ್ತದೆ ಎಂದು ಹಿಟ್‌ಮ್ಯಾನ್‌ ಟ್ವೀಟ್‌ ಮಾಡಿದ್ದಾರೆ.

Yesterday when I walked on to the field it was more than just a game for me. Playing cricket is my dream and helping make this world a better place is a cause we all need to work towards. (1/2) pic.twitter.com/fM22VolbYq

— Rohit Sharma (@ImRo45)

ರೋಹಿತ್ ಶರ್ಮಾ ಅವರ ಈ ಸಾಮಾಜಿಕ ಬದ್ದತೆಗೆ ಇಂಗ್ಲೆಂಡ್‌ ಮಾಜಿ ಕೆವಿನ್ ಪೀಟರ್‌ಸನ್‌ ಸಹಾ ಟ್ವೀಟ್‌ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

The great mams boots last night in the opener. continually playing for a cause - SAVING RHINOS! 🙏🏽🦏 pic.twitter.com/aGTveMOWBh

— Kevin Pietersen🦏 (@KP24)
click me!