
ಚೆನ್ನೈ(ಏ.01): 14ನೇ ಆವೃತ್ತಿಯ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ತಂಡದ ನಾಯಕ ವಿರಾಟ್ ಕೊಹ್ಲಿ ಆರಂಭಿಕನಾಗಿ ಆಡುವುದು ಖಚಿತ ಎಂದು ತಂಡದ ಕ್ರಿಕೆಟ್ ನಿರ್ದೇಶಕ ಮೈಕ್ ಹೆಸನ್ ತಿಳಿಸಿದ್ದಾರೆ. ಈ ಆವೃತ್ತಿಯ ಮೊದಲ ಸುದ್ದಿಗೋಷ್ಠಿಯಲ್ಲಿ ಮಾತನಾಡುವ ವೇಳೆ ಹೆಸನ್ ಈ ವಿಷಯ ತಿಳಿಸಿದರು.
‘ವಿರಾಟ್ ಹಾಗೂ ಕರ್ನಾಟಕದ ದೇವದತ್ ಪಡಿಕ್ಕಲ್, ಆರಂಭಿಕರಾಗಿ ಆಡಲಿದ್ದಾರೆ. ಕೊಹ್ಲಿಯ ಈ ನಿರ್ಧಾರ ತಂಡದ ಸಮತೋಲನದ ದೃಷ್ಟಿಯಿಂದ ಸೂಕ್ತ’ ಎಂದು ಹೆಸನ್ ಹೇಳಿದರು. ಇತ್ತೀಚೆಗೆ ನಡೆದಿದ್ದ ಇಂಗ್ಲೆಂಡ್ ವಿರುದ್ಧದ 5ನೇ ಟಿ20 ಪಂದ್ಯದಲ್ಲಿ ರೋಹಿತ್ ಶರ್ಮಾ ಜೊತೆ ಇನ್ನಿಂಗ್ಸ್ ಆರಂಭಿಸಿದ್ದ ಕೊಹ್ಲಿ, ಆಕರ್ಷಕ ಆಟವಾಡಿದ್ದರು. ಪಂದ್ಯದ ಬಳಿಕ ಮಾತನಾಡುವ ವೇಳೆ ಐಪಿಎಲ್‌ನಲ್ಲೂ ಆರಂಭಿಕನಾಗಿ ಆಡಲಿದ್ದೇನೆ ಎಂಬ ವಿಷಯ ಬಹಿರಂಗಪಡಿಸಿದ್ದರು.
ಕೊಹ್ಲಿಯದ್ದೇ ನಿರ್ಧಾರ: ಆರಂಭಿಕನಾಗಿ ಆಡುವ ಬಗ್ಗೆ ಸ್ವತಃ ಕೊಹ್ಲಿಯೇ ನಿರ್ಧರಿಸಿದರು ಎಂದು ಹೆಸನ್ ಸುಳಿವು ನೀಡಿದ್ದಾರೆ. ‘ನನ್ನ ಪ್ರಕಾರ ಲಯ ಬಹಳ ಮುಖ್ಯ. ಅದಕ್ಕೂ ಮಿಗಿಲಾಗಿ ಆತ್ಮವಿಶ್ವಾಸವಿರಬೇಕು. ಕೊಹ್ಲಿ ಅನುಭವಿ ಆಟಗಾರ. ಅವರ ನಿರ್ಧಾರ ತಂಡದ ಹಿತದೃಷ್ಟಿಯಲ್ಲಿರುತ್ತದೆ. ಆರಂಭಿಕನಾಗಿ ಆಡುವುದರ ಜವಾಬ್ದಾರಿ ಬಗ್ಗೆ ಅವರಿಗೆ ಸಂಪೂರ್ಣ ಅರಿವಿದೆ’ ಎಂದು ಹೆಸನ್ ಹೇಳಿದ್ದಾರೆ. ಇದೇ ವೇಳೆ ಗ್ಲೆನ್ ಮ್ಯಾಕ್ಸ್‌ವೆಲ್ ಸೇರ್ಪಡೆಯಿಂದ ಮಧ್ಯಮ ಕ್ರಮಾಂಕದಲ್ಲಿ ಎಬಿ ಡಿ ವಿಲಿಯರ್ಸ್ ಮೇಲಿರುವ ಒತ್ತಡವನ್ನು ಕಡಿಮೆ ಮಾಡಲಿದೆ ಎಂದು ಹೆಸನ್ ಅಭಿಪ್ರಾಯಿಸಿದ್ದಾರೆ.
ಕೊರೋನಾದಿಂದಾಗಿ ಗಟ್ಟಿಗೊಂಡ ರೋಹಿತ್-ವಿರಾಟ್ ಫ್ರೆಂಡ್‌ಶಿಪ್..!
ಗುರುವಾರ ತಂಡ ಕೂಡಿಕೊಳ್ಳಲಿರುವ ಕೊಹ್ಲಿ, 7 ದಿನಗಳ ಕಡ್ಡಾಯ ಕ್ವಾರಂಟೈನ್‌ನಲ್ಲಿರಲಿದ್ದಾರೆ. ಏ.9ರಂದು ನಡೆಯಲಿರುವ ಈ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ, ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ಸೆಣಸಲಿದೆ.
ಆರಂಭಿಕನಾಗಿ ಅದ್ಭುತ ದಾಖಲೆ: ಐಪಿಎಲ್‌ನಲ್ಲಿ ಆರಂಭಿಕನಾಗಿ ಕೊಹ್ಲಿ ಅದ್ಭುತ ದಾಖಲೆ ಹೊಂದಿದ್ದಾರೆ. 61 ಪಂದ್ಯಗಳಲ್ಲಿ 47.86ರ ಸರಾಸರಿಯಲ್ಲಿ 2,345 ರನ್ ಕಲೆಹಾಕಿದ್ದಾರೆ. ಅವರ ಬಾರಿಸಿರುವ ಐದೂ ಶತಕಗಳು, ಆರಂಭಿಕನಾಗಿ ಆಡಿದಾಗಲೇ ದಾಖಲಾಗಿವೆ. 15 ಅರ್ಧಶತಕ ಸಹ ಗಳಿಸಿದ್ದಾರೆ. 2016ರ ಆವೃತ್ತಿಯಲ್ಲಿ ಕೊಹ್ಲಿ, ಆರಂಭಿಕನಾಗಿ ಆಡಿ ಬರೋಬ್ಬರಿ 973 ರನ್ ಕಲೆಹಾಕಿದ್ದರು. ಅಂತದ್ದೇ ಪ್ರದರ್ಶನವನ್ನು ಈ ಬಾರಿ ನಿರೀಕ್ಷಿಸುತ್ತಿರುವುದಾಗಿ ಮೈಕ್ ಹೆಸನ್ ಹೇಳಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.