
ಬೆಂಗಳೂರು(ಸೆ.20): ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇಂದಿನಿಂದ ಯುಎಇ ಚರಣದಲ್ಲಿ ತನ್ನ ಅಭಿಯಾನ ಆರಂಭಿಸಲಿದ್ದು, ಕೋಲ್ಕತ ನೈಟ್ ರೈಡರ್ಸ್ ಎದುರು ಮೊದಲ ಪಂದ್ಯವನ್ನಾಡಲಿದೆ. ಈ ಪಂದ್ಯ ನಾಯಕ ವಿರಾಟ್ ಕೊಹ್ಲಿ ಪಾಲಿಗೆ ಅತ್ಯಂತ ಸ್ಮರಣೀಯ ಪಂದ್ಯವಾಗಿರಲಿದೆ.
ಹೌದು, ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ 200ನೇ ಐಪಿಎಲ್ ಪಂದ್ಯ ಆಡಲಿದ್ದಾರೆ. ಐಪಿಎಲ್‌ನಲ್ಲಿ 200 ಪಂದ್ಯಗಳ ಮೈಲಿಗಲ್ಲು ತಲುಪಲಿರುವ 5ನೇ ಆಟಗಾರ ಎನ್ನುವ ಹಿರಿಮೆಗೆ ಕಿಂಗ್ ಕೊಹ್ಲಿ ಪಾತ್ರರಾಗಲಿದ್ದಾರೆ. ಎಂ.ಎಸ್.ಧೋನಿ, ರೋಹಿತ್ ಶರ್ಮಾ, ದಿನೇಶ್ ಕಾರ್ತಿಕ್ ಹಾಗೂ ಸುರೇಶ್ ರೈನಾ 200ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿದ್ದಾರೆ. ಮತ್ತೊಂದು ವಿಶೇಷ ಎಂದರೆ ಒಂದು ಐಪಿಎಲ್ ತಂಡದ ಪರ 200 ಪಂದ್ಯ ಆಡಲಿರುವ ಮೊದಲ ಆಟಗಾರ ಎನ್ನುವ ದಾಖಲೆಯನ್ನು ಕೊಹ್ಲಿ ಬರೆಯಲಿದ್ದಾರೆ. 2008ರಿಂದಲೂ ಅವರು ಆರ್‌ಸಿಬಿ ಪರವೇ ಆಡುತ್ತಿದ್ದಾರೆ. 199 ಪಂದ್ಯಗಳಲ್ಲಿ ಕೊಹ್ಲಿ, 6,076 ರನ್ ಕಲೆಹಾಕಿದ್ದಾರೆ.
BREAKING: ಐಪಿಎಲ್ 2021ರ ಬಳಿಕ RCB ನಾಯಕತ್ವಕ್ಕೆ ಕೊಹ್ಲಿ ಗುಡ್‌ಬೈ!
ಮುಂಬರುವ ಐಸಿಸಿ ಟಿ20 ವಿಶ್ವಕಪ್ ಮುಕ್ತಾಯದ ಬಳಿಕ ಭಾರತ ಟಿ20 ತಂಡದ ನಾಯಕತ್ವದಿಂದ ಕೆಳಗಿಳಿಯುವುದಾಗಿ ಈ ಮೊದಲೇ ಘೋಷಿಸಿರುವ ವಿರಾಟ್ ಕೊಹ್ಲಿ, ಇದೀಗ 14ನೇ ಆವೃತ್ತಿಯ ಐಪಿಎಲ್ ಟೂರ್ನಿ ಮುಕ್ತಾಯದ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವದಿಂದಲೂ ಕೆಳಗಿಳಿಯುವುದಾಗಿ ತಿಳಿಸಿದ್ದಾರೆ. ಕೆಕೆಆರ್ ವಿರುದ್ದದ ಪಂದ್ಯ ಆರಂಭಕ್ಕೂ ಮೊದಲೇ ವಿರಾಟ್ ಈ ಘೋಷಣೆ ಮಾಡಿದ್ದಾರೆ. ಆದರೆ ಇದೇ ವೇಳೆ ತಾವು ಐಪಿಎಲ್ ಆಡುವವರೆಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮಾತ್ರ ಪ್ರತಿನಿಧಿಸುವುದಾಗಿ ತಿಳಿಸಿದ್ದಾರೆ.
ನೀಲಿ ಜೆರ್ಸಿ ತೊಟ್ಟು ಆಡಲಿರುವ ಆರ್‌ಸಿಬಿ
ಕೋವಿಡ್ ವಾರಿಯರ್ಸ್ಗೆ ಗೌರವ ಸಲ್ಲಿಸುವ ಉದ್ದೇಶದಿಂದ ಆರ್‌ಸಿಬಿ ತಂಡ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ನೀಲಿ ಬಣ್ಣ(ಪಿಪಿಇ ಕಿಟ್ ಬಣ್ಣ)ದ ಜೆರ್ಸಿ ತೊಟ್ಟು ಆಡಲಿದೆ. 2 ದಿನಗಳ ಹಿಂದಷ್ಟೇ ಕೊಹ್ಲಿ ನೀಲಿ ಜೆರ್ಸಿಯನ್ನು ಅನಾವರಣಗೊಳಿಸಿದರು. ಪಂದ್ಯದ ಬಳಿಕ ಆಟಗಾರರ ಜೆರ್ಸಿಗಳನ್ನು ಆರ್‌ಸಿಬಿ ಹರಾಜು ಹಾಕಲಿದ್ದು, ಸಂಗ್ರಹವಾಗುವ ಹಣವನ್ನು ಕೋವಿಡ್ ಲಸಿಕಾಕರಣ ಕಾರ್ಯಕ್ರಮಕ್ಕೆ ದೇಣಿಗೆಯಾಗಿ ನೀಡಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.