ದೇವದತ್ ಪಡಿಕ್ಕಲ್ ಆಡುತ್ತಿರುವ ರೀತಿ ನೋಡಿದರೆ ಸದ್ಯದಲ್ಲೇ ಟೀಂ ಇಂಡಿಯಾ ಪರ ಕಾಣಿಸಿಕೊಂಡರೆ ಅಚ್ಚರಿಪಡುವಂತಿಲ್ಲ ಎಂದು ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಮುಂಬೈ(ಏ.23): ಕರ್ನಾಟಕದ ಪ್ರತಿಭಾನ್ವಿತ ಬ್ಯಾಟ್ಸ್‌ಮನ್ ದೇವದತ್ ಪಡಿಕ್ಕಲ್ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ದದ ಪಂದ್ಯದಲ್ಲಿ ಆರ್‌ಸಿಬಿ ಪರ ಚೊಚ್ಚಲ ಶತಕ ಬಾರಿಸಿ ಮಿಂಚಿದ್ದಾರೆ. ಯುವ ಎಡಗೈ ಬ್ಯಾಟ್ಸ್‌ಮನ್ ಆಡಿದ ರೀತಿ ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಮೆಚ್ಚುಗೆಗೆ ಪಾತ್ರವಾಗಿದೆ.
ಕೆಲವು ತಿಂಗಳ ಹಿಂದಷ್ಟೇ ಮುಕ್ತಾಯವಾದ ವಿಜಯ್ ಹಜಾರೆ ಟೂರ್ನಿಯಲ್ಲಿ 700ಕ್ಕೂ ಅಧಿಕ ರನ್ ಬಾರಿಸಿ ಗಮನ ಸೆಳೆದಿದ್ದ ಪಡಿಕ್ಕಲ್, ಇದೀಗ ಐಪಿಎಲ್‌ನಲ್ಲೂ ತಮ್ಮ ಜಾದೂ ತೋರಿಸಿದ್ದಾರೆ. ರಾಜಸ್ಥಾನ ರಾಯಲ್ಸ್ ವಿರುದ್ದದ ಪಂದ್ಯದಲ್ಲಿ ಕೇವಲ 52 ಎಸೆತಗಳಲ್ಲಿ ಅಜೇಯ 101 ರನ್ ಬಾರಿಸುವ ಮೂಲಕ ತಾವೆಷ್ಟು ಅಪಾಯಕಾರಿ ಬ್ಯಾಟ್ಸ್‌ಮನ್ ಎನ್ನುವುದನ್ನು ಮತ್ತೊಮ್ಮೆ ಜಗತ್ತಿನ ಮುಂದೆ ಅನಾವರಣ ಮಾಡಿದ್ದಾರೆ.
IPL 2021: ಒಂದು ಶತಕ: ಅಪರೂಪದ ದಾಖಲೆಗಳು ಕನ್ನಡಿಗ ಪಡಿಕ್ಕಲ್ ಪಾಲು..!
ಪಡಿಕ್ಕಲ್ ಹೊಂದಿರುವ ಪ್ರತಿಭೆ ಹಾಗೂ ಸಾಮರ್ಥ್ಯಕ್ಕೆ ಮುಂಬರುವ ದಿನಗಳಲ್ಲಿ ಅವರು ಯಾವೊದಾದರೊಂದು ಮಾದರಿಯಲ್ಲಿ ಟೀಂ ಇಂಡಿಯಾ ಪ್ರತಿನಿಧಿಸಿದರೆ ಅಚ್ಚರಿಪಡುವಂತದ್ದೇನು ಇಲ್ಲ. ಪ್ರಥಮ ದರ್ಜೆ ಕ್ರಿಕೆಟ್ ಹಾಗೂ ರಣಜಿ ಟ್ರೋಫಿಯಲ್ಲಿ ರನ್‌ಗಳ ರಾಶಿಯನ್ನೇ ಗುಡ್ಡೆಹಾಕಿದ್ದಾರೆ. 50 ಓವರ್‌ಗಳ ಕ್ರಿಕೆಟ್‌ನಲ್ಲೂ ಸಾಕಷ್ಟು ರನ್ ಹಾಗೂ ಶತಕಗಳನ್ನು ಬಾರಿಸಿದ್ದಾರೆ. ದೇಸಿ ಟಿ20 ಟೂರ್ನಿಯಲ್ಲೂ ಪಡಿಕ್ಕಲ್ ರನ್ ಗಳಿಸಿದ್ದಾರೆ. ಹೀಗಾಗಿ ಪಡಿಕ್ಕಲ್ ಆದಷ್ಟು ಶೀಘ್ರದಲ್ಲೇ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದರೆ ನನಗೇನು ಆಶ್ಚರ್ಯವಾಗುವುದಿಲ್ಲ ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ.
20 ವರ್ಷದ ದೇವದತ್ ಪಡಿಕ್ಕಲ್ ಯುಎಇನಲ್ಲಿ ನಡೆದ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ 493 ರನ್ ಬಾರಿಸುವ ಮೂಲಕ ಉದಯೋನ್ಮುಖ ಐಪಿಎಲ್ ಆಟಗಾರರಾಗಿ ಹೊರಹೊಮ್ಮಿದ್ದರು.