ಐಪಿಎಲ್ 2021: ಲಕ್ಷ್ಮಿಪತಿ ಬಾಲಾಜಿ ಸೇರಿ ಸಿಎಸ್‌ಕೆ 3 ಮಂದಿಗೆ ಕೋವಿಡ್ ಪಾಸಿಟಿವ್..!

By Suvarna NewsFirst Published May 3, 2021, 3:47 PM IST
Highlights

ಕೆಕೆಆರ್ ಬಳಿಕ ಇದೀಗ ಸಿಎಸ್‌ಕೆ ಪಾಳಯದಲ್ಲೂ ಕೊರೋನಾ ಭೀತಿ ಎದುರಾಗಿದ್ದು, ಸಿಎಸ್‌ಕೆಯ ಮೂರು ಮಂದಿಗೆ ಕೋವಿಡ್ 19 ಸೋಂಕು ದೃಢಪಟ್ಟಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ನವದೆಹಲಿ(ಮೇ.03): 14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಬಯೋ-ಬಬಲ್‌ ನಿಯಮ ಉಲ್ಲಂಘನೆಯಾಗುತ್ತಿರುವ ಒಂದೊಂದೇ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಕೋಲ್ಕತ ನೈಟ್‌ ರೈಡರ್ಸ್‌ ತಂಡದ ಇಬ್ಬರು ಆಟಗಾರರಿಗೆ ಕೋವಿಡ್ 19 ಸೋಂಕು ದೃಢಪಟ್ಟ ಬೆನ್ನಲ್ಲೇ ಇದೀಗ ಚೆನ್ನೈ ಸೂಪರ್ ಕಿಂಗ್ಸ್‌ ಪಾಳಯದಲ್ಲೂ ಕೊರೋನಾ ವೈರಸ್ ಭೀತಿ ಎದುರಾಗಿದೆ.

ಹೌದು, ಚೆನ್ನೈ ಸೂಪರ್‌ ಕಿಂಗ್ಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಾಶಿ ವಿಶ್ವನಾಥ್, ಬೌಲಿಂಗ್ ಕೋಚ್ ಲಕ್ಷ್ಮಿಪತಿ ಬಾಲಾಜಿ ಹಾಗೂ ಸಿಎಸ್‌ಕೆ ಬಸ್‌ ಕ್ಲೀನರ್‌ಗೆ ಕೋವಿಡ್ 19 ಸೋಂಕು ತಗುಲಿರುವುದು ದೃಢಪಟ್ಟಿದೆ. ಆದರೆ ಒಂದು ಸಮಾಧಾನಕರ ಸಂಗತಿಯೆಂದರೆ ಭಾನುವಾರ(ಮೇ.02) ನಡೆಸಿದ ಕೋವಿಡ್‌ ಟೆಸ್ಟ್‌ನಲ್ಲಿ ಈ ಮೂವರನ್ನು ಹೊರತುಪಡಿಸಿ ಉಳಿದೆಲ್ಲಾ ಆಟಗಾರರ ಕೋವಿಡ್ ಟೆಸ್ಟ್ ವರದಿ ನೆಗೆಟಿವ್ ಬಂದಿದೆ.

ಇಎಸ್‌ಪಿಎನ್‌ ಕ್ರಿಕ್‌ಇನ್ಫೋ ಪ್ರಕಾರ ಚೆನ್ನೈನ ಈ ಮೂವರು ಮಂದಿ ಸೋಮವಾರ(ಮೇ.03)ವಾದ ಇಂದು ಮತ್ತೊಮ್ಮೆ ಹೊಸದಾಗಿ ಕೋವಿಡ್ ಟೆಸ್ಟ್‌ಗೆ ಒಳಗಾಗಲಿದ್ದಾರೆ. ಒಂದು ವೇಳೆ ಮತ್ತೊಮ್ಮೆ ಪಾಸಿಟಿವ್ ಬಂದರೆ ಈ ಮೂವರು ಬಿಸಿಸಿಐ ಮಾರ್ಗಸೂಚಿಯಂತೆ 10 ದಿನಗಳ ಕಾಲ ಕಡ್ಡಾಯ ಕ್ವಾರಂಟೈನ್‌ಗೆ ಒಳಗಾಗಬೇಕಾಗುತ್ತದೆ. ಸಿಎಸ್‌ಕೆ ತಂಡದವರು ಬಯೋ ಬಬಲ್ ನಿಯಮ ಉಲ್ಲಂಘಿಸಿದ್ದಾರೆಯೇ ಎನ್ನುವ ಅನುಮಾನ ಇದೀಗ ಕಾಡಲಾರಂಭಿಸಿದೆ.

ಬ್ರೇಕಿಂಗ್ ನ್ಯೂಸ್: ಇಂದು ನಡೆಯಬೇಕಿದ್ದ ಆರ್‌ಸಿಬಿ-ಕೆಕೆಆರ್ ಪಂದ್ಯ ಮುಂದೂಡಿಕೆ..!

ಈಗಾಗಲೇ ಇಂದು(ಮೇ.03) ನಡೆಯಬೇಕಿದ್ದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಕೋಲ್ಕತ ನೈಟ್‌ ರೈಡರ್ಸ್‌ ನಡುವಿನ ಪಂದ್ಯ ಕೋವಿಡ್ ಕಾರಣದಿಂದ ಮುಂದೂಡಲ್ಪಟ್ಟಿದೆ. ಕೆಕೆಆರ್ ತಂಡದ ವರುಣ್ ಚಕ್ರವರ್ತಿ ಹಾಗೂ ಸಂದೀಪ್ ವಾರಿಯರ್‌ಗೆ ಕೋವಿಡ್ 19 ಸೋಂಕು ದೃಢಪಟ್ಟಿದ್ದು ಐಪಿಎಲ್‌ ಟೂರ್ನಿಯನ್ನೇ ತಬ್ಬಿಬ್ಬಾಗುವಂತೆ ಮಾಡಿದೆ. ಈ ಇಬ್ಬರು ಆಟಗಾರರನ್ನು ಸದ್ಯ ಐಸೋಲೇಷನ್‌ನಲ್ಲಿ ಇಡಲಾಗಿದ್ದು, ಇವರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿರುವವರನ್ನು ಪತ್ತೆಹಚ್ಚಲಾಗುತ್ತಿದೆ.

ಒಟ್ಟಿನಲ್ಲಿ ಕೆಕೆಆರ್ ಹಾಗೂ ಸಿಎಸ್‌ಕೆ ಪಾಳಯದಲ್ಲಿ ಕೋವಿಡ್ ಪ್ರಕರಣಗಳು ಪತ್ತೆಯಾಗುತ್ತಿರುವುದು 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯ ಮೇಲೆ ಅನುಮಾನದ ತೂಗುಗತ್ತಿ ನೇತಾಡಲಾರಂಭಿಸಿದೆ. ಇದೇ ರೀತಿಯ ಪ್ರಕರಣಗಳು ಮತ್ತೆ ಮತ್ತೆ ಪತ್ತೆಯಾದರೆ ಟೂರ್ನಿ ಮುಂದೂಡಲ್ಪಟ್ಟರೂ ಅಚ್ಚರಿಪಡುವಂತಿಲ್ಲ.
 

click me!