
ದುಬೈ(ಅ.03): ಕೋಲ್ಕತಾ ನೈಟ್ ರೈಡರ್ಸ್(ಕೆಕೆಆರ್) ಹಾಗೂ ಸನ್‌ರೈಸರ್ಸ್ ಹೈದರಾಬಾದ್ (Sunrisers Hyderabad) ವಿರುದ್ಧದ ಹೋರಾಟಕ್ಕೆ ವೇದಿಕೆ ಸಜ್ಜಾಗಿದ್ದು, ಪ್ಲೇ-ಆಫ್ ದೃಷ್ಟಿಯಿಂದ ಕೆಕೆಆರ್ ಪಾಲಿಗೆ ಮಹತ್ವದ ಪಂದ್ಯವಾಗಿದೆ. ಈ ಪಂದ್ಯಕ್ಕೆ ದುಬೈನ ಅಂತಾರಾಷ್ಟ್ರೀಯ ಮೈದಾನ ಆತಿಥ್ಯವನ್ನು ವಹಿಸಿದೆ.
ಕೇನ್ ವಿಲಿಯಮ್ಸನ್ (Kane Williamson) ನೇತೃತ್ವದ ಸನ್‌ರೈಸರ್ಸ್ ಹೈದರಾಬಾದ್ ತಂಡವು ಆಡಿರುವ 11 ಪಂದ್ಯಗಳಲ್ಲಿ 9ರಲ್ಲಿ ಸೋತು ಕೇವಲ 2 ಪಂದ್ಯಗಳಲ್ಲಿ ಗೆಲುವು ಸಾಧಿಸಿ 04 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಂತಿಮ ಸ್ಥಾನದಲ್ಲಿದ್ದರೆ, 12 ಪಂದ್ಯಗಳಿಂದ 10 ಅಂಕಗಳಿಸಿರುವ ಕೆಕೆಆರ್ ನಾಕೌಟ್ ಹಂತಕ್ಕೇರಲು ಈ ಗೆಲುವು ಅನಿವಾರ್ಯವಾಗಿದೆ. ಒಂದೊಮ್ಮೆ ಸನ್ ಸಿಡಿದರೆ ಕೆಕೆಆರ್ ಪ್ಲೇ-ಆಫ್ ಹಾದಿ ಮತ್ತಷ್ಟು ಕಠಿಣವಾಗಲಿದ್ದು, ಮುಂಬೈ ಮತ್ತು ಪಂಜಾಬ್‌ನ ಸೋಲು-ಗೆಲುವಿನ ಮೇಲೆ ಕೆಕೆಆರ್ ಭವಿಷ್ಯ ನಿರ್ಧಾರವಾಗಲಿದೆ.
ಕೋಲ್ಕತ ನೈಟ್ ರೈಡರ್ಸ್ (Kolkata Knight Riders) ತಂಡದ ಪರ ವೆಂಕಟೇಶ್ ಅಯ್ಯರ್, ಶುಭ್‌ಮನ್ ಗಿಲ್, ನಿತೀಶ್ ರಾಣಾ ಹಾಗೂ ರಾಹುಲ್ ತ್ರಿಪಾಠಿ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಇದರ ಜತೆಗೆ ರಸೆಲ್ ಕೂಡಾ ತಂಡ ಕೂಡಿಕೊಂಡರೆ ಕೆಕೆಆರ್ ಮತ್ತಷ್ಟು ಬಲಾಢ್ಯವಾಗಲಿದೆ. ಯುಎಇನಲ್ಲಿ ಈ ಹಿಂದೆ ನಡೆದ ಎರಡು ಪಂದ್ಯಗಳಲ್ಲೂ ಸನ್‌ರೈಸರ್ಸ್ ಹೈದರಾಬಾದ್ ಎದುರು ಕೆಕೆಆರ್ ತಂಡವು ಗೆಲುವು ದಾಖಲಿಸಿದ್ದು, ಅದೇ ವಿಶ್ವಾಸದಲ್ಲಿ ಇಂದಿನ ಪಂದ್ಯಕ್ಕೆ ಮಾರ್ಗನ್ ಪಡೆ ಸಜ್ಜಾಗಿದೆ. ಆದರೆ ನಾಯಕ ಇಯಾನ್ ಮಾರ್ಗನ್ (Eoin Morgan) ಕಳಪೆ ಫಾರ್ಮ್‌ನಲ್ಲಿರುವುದು ತಂಡದ ತಲೆನೋವು ಹೆಚ್ಚಾಗುವಂತೆ ಮಾಡಿದೆ.
IPL 2021 ಡೆಲ್ಲಿಗೆ ಗೆಲುವಿನ ಉಡುಗೊರೆ ನೀಡಿದ ಅಯ್ಯರ್-ಅಶ್ವಿನ್ ಕಿಲಾಡಿ ಜೋಡಿ
ಇನ್ನೊಂದೆಡೆ ಈಗಾಗಲೇ 14ನೇ ಅವೃತ್ತಿಯ ಐಪಿಎಲ್ (IPL 2021) ಟೂರ್ನಿಯ ಪ್ಲೇ ಆಫ್ ರೇಸ್‌ನಿಂದ ಹೊರಬಿದ್ದಿರುವ ಸನ್‌ರೈಸರ್ಸ್ ತಂಡವು ಇನ್ನುಳಿದ ಮೂರು ಪಂದ್ಯಗಳಲ್ಲಿ ಪ್ರತಿಷ್ಠೆಗಾಗಿ ಕಾದಾಡಲಿದೆ. ಬ್ಯಾಟಿಂಗ್‌ನಲ್ಲಿ ಕೇನ್ ವಿಲಿಯಮ್ಸನ್, ವೃದ್ದಿಮಾನ್ ಸಾಹ ಹಾಗೂ ಜೇಸನ್ ರಾಯ್ ಅವರನ್ನು ಆರೆಂಜ್ ಆರ್ಮಿ ನೆಚ್ಚಿಕೊಂಡಿದೆ. ಬೌಲಿಂಗ್‌ನಲ್ಲಿ ಭುವನೇಶ್ವರ್ ಕುಮಾರ್, ರಶೀದ್ ಖಾನ್ ಹಾಗೂ ಜೇಸನ್ ಹೋಲ್ಡರ್ ಮಿಂಚಿನ ದಾಳಿ ನಡೆಸಿದರೆ ಕೆಕೆಆರ್‌ಗೆ ಸಂಕಷ್ಟ ಕಟ್ಟಿಟ್ಟ ಬುತ್ತಿ
ಐಪಿಎಲ್ ಇತಿಹಾಸದಲ್ಲಿ ಉಭಯ ತಂಡಗಳು ಇದುವರೆಗೂ ಒಟ್ಟು 20 ಬಾರಿ ಮುಖಾಮುಖಿಯಾಗಿದ್ದು, ಈ ಪೈಕಿ ಕೋಲ್ಕತ ನೈಟ್ ರೈಡರ್ಸ್ ಕೊಂಚ ಮೇಲುಗೈ ಸಾಧಿಸಿದೆ. 20 ಪಂದ್ಯಗಳ ಪೈಕಿ ಕೆಕೆಆರ್ 13 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದ್ದರೆ, ಸನ್‌ರೈಸರ್ಸ್ ಹೈದರಾಬಾದ್ ತಂಡವು 7 ಪಂದ್ಯಗಳಲ್ಲಿ ಗೆಲುವಿನ ಕೇಕೆ ಹಾಕಿದೆ
ಸಂಭವನೀಯ ಆಟಗಾರರ ಪಟ್ಟಿ
ಕೆಕೆಆರ್: ವೆಂಕಟೇಶ್ ಅಯ್ಯರ್, ಶುಭ್‌ಮನ್ ಗಿಲ್, ರಾಹುಲ್ ತ್ರಿಪಾಠಿ, ನಿತೀಶ್ ರಾಣಾ, ಇಯಾನ್ ಮಾರ್ಗನ್(ನಾಯಕ), ದಿನೇಶ್ ಕಾರ್ತಿಕ್, ಶಕೀಬ್ ಅಲ್ ಹಸನ್, ಸುನಿಲ್ ನರೇನ್, ಟೀಮ್ ಸೌಥಿ, ಶಿವಂ ಮಾವಿ, ವರುಣ್ ಚಕ್ರವರ್ತಿ
ಹೈದ್ರಾಬಾದ್: ಜೇಸನ್ ರಾಯ್, ವೃದ್ದಿಮಾನ್ ಸಾಹ, ಕೇನ್ ವಿಲಿಯಮ್ಸನ್(ನಾಯಕ), ಮನೀಶ್ ಪಾಂಡೆ, ಅಭಿಷೇಕ್ ಶರ್ಮಾ, ಅಬ್ದುಲ್ ಸಮದ್, ಜೇಸನ್ ಹೋಲ್ಡರ್, ರಶೀದ್ ಖಾನ್, ಭುವನೇಶ್ವರ್ ಕುಮಾರ್, ಸಂದೀಪ್ ಶರ್ಮಾ, ಸಿದ್ಧಾರ್ಥ್ ಕೌಲ್
ಸ್ಥಳ: ದುಬೈ
ಪಂದ್ಯ ಆರಂಭ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.