
ಮುಂಬೈ(ಏ.16): ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ನಿರಾಶಾದಾಯಕ ಸುದ್ದಿಯೊಂದು ಹೊರಬಿದ್ದಿದ್ದು, ಗಾಯದ ಸಮಸ್ಯೆಯಿಂದಾಗಿ ಇಂಗ್ಲೆಂಡ್ ಸ್ಟಾರ್ ಆಲ್ರೌಂಡರ್ ಬೆನ್ ಸ್ಟೋಕ್ಸ್ ಮುಂದಿನ 3 ತಿಂಗಳುಗಳ ಕಾಲ ಕ್ರಿಕೆಟ್ ಚಟುವಟಿಕೆಗಳಿಂದ ದೂರ ಉಳಿಯಲಿದ್ದಾರೆ.
ಬೆನ್ ಸ್ಟೋಕ್ಸ್ ಸದ್ಯ ಭಾರತದಲ್ಲೇ ರಾಜಸ್ಥಾನ ರಾಯಲ್ಸ್ ತಂಡದ ಜತೆಗಿದ್ದು, ಕೈ ಬೆರಳು ಮುರಿದುಕೊಂಡಿರುವ ಆಲ್ರೌಂಡರ್ ಶಸ್ತ್ರಚಿಕಿತ್ಸೆಗೆ ಒಳಗಾಗಲು ಶನಿವಾರ(ಏ.17)ದಂದು ತವರಿಗೆ ತೆರಳಲಿದ್ದಾರೆ. ಬೆನ್ ಸ್ಟೋಕ್ಸ್ ಪಂಜಾಬ್ ಕಿಂಗ್ಸ್ ವಿರುದ್ದ ಪಂದ್ಯದಲ್ಲಿ ಕ್ರಿಸ್ ಗೇಲ್ ಬಾರಿಸಿದ ಚೆಂಡನ್ನು ಕ್ಯಾಚ್ ಪಡೆಯುವ ಯತ್ನದಲ್ಲಿ ಕೈಬೆರಳಿನ ಗಾಯಕ್ಕೆ ತುತ್ತಾಗಿದ್ದರು. ಬಳಿಕ ಹೆಚ್ಚಿನ ಪರೀಕ್ಷೆ ನಡೆಸಿದಾಗ ಎಡಗೈಬೆರಳು ಮುರಿದಿರುವುದು ಖಚಿತವಾಗಿದೆ.
ಬೆನ್ ಸ್ಟೋಕ್ಸ್ ಸಂಪೂರ್ಣ ಫಿಟ್ನೆಸ್ ಕಾಪಾಡಿಕೊಳ್ಳಲು 12 ವಾರಗಳು ಕಾಲ ವಿಶ್ರಾಂತಿ ಪಡೆಯಲಿದ್ದಾರೆ. ಹೀಗಾಗಿ ಬೆನ್ ಸ್ಟೋಕ್ಸ್ ತವರಿನಲ್ಲಿ ನಡೆಯಲಿರುವ ನ್ಯೂಜಿಲೆಂಡ್ ವಿರುದ್ದದ ಟೆಸ್ಟ್ ಸರಣಿ ಹಾಗೂ ಶ್ರೀಲಂಕಾ ಹಾಗೂ ಪಾಕಿಸ್ತಾನ ವಿರುದ್ದದ ಸೀಮಿತ ಓವರ್‌ಗಳ ಸರಣಿಯಿಂದ ಹೊರಗುಳಿಯಲಿದ್ದಾರೆ. ಯುನೈಟೆಡ್ ಕಿಂಗ್‌ಡಂನಲ್ಲಿ ಭಾರತ ವಿರುದ್ದ ನಡೆಯಲಿರುವ ಟೆಸ್ಟ್ ಸರಣಿಯ ವೇಳಗೆ ಬೆನ್ ಸ್ಟೋಕ್ಸ್ ತಂಡ ಕೂಡಿಕೊಳ್ಳುವ ಸಾಧ್ಯತೆಯಿದೆ.
IPL 2021 ಗಾಯದ ಮೇಲೆ ಬರೆ; ರಾಜಸ್ಥಾನ ರಾಯಲ್ಸ್‌ನಿಂದ ಬೆನ್ ಸ್ಟೋಕ್ಸ್ ಔಟ್
ಇಂಗ್ಲೆಂಡ್ ಆಲ್ರೌಂಡರ್ ಬೆನ್ ಸ್ಟೋಕ್ಸ್‌ಗೆ ನಿರಂತರ ಎಕ್ಸ್ ರೇ ಹಾಗೂ ಸಿಟಿ ಸ್ಕ್ಯಾನ್ ಮಾಡಿಸಿದ ಬಳಿಕ ಎಡಗೈ ತೋರುಬೆರಳು ಮುರಿದಿರುವುದು ಖಚಿತವಾಗಿದ್ದು, ಮುಂದಿನ 12 ವಾರಗಳ ಕಾಲ ಕ್ರಿಕೆಟ್‌ನಿಂದ ದೂರ ಉಳಿಯಲಿದ್ದಾರೆ ಎಂದು ಇಂಗ್ಲೆಂಡ್ ಕ್ರಿಕೆಟ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಬೆನ್ ಸ್ಟೋಕ್ಸ್ ಸೋಮವಾರ(ಏ.19) ಲೀಡ್ಸ್‌ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಇದೀಗ ಬೆನ್ ಸ್ಟೋಕ್ಸ್ ಬದಲಿಗೆ ರಾಜಸ್ಥಾನ ರಾಯಲ್ಸ್ ಯಾವ ಆಟಗಾರರನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳಲಿದೆ ಎನ್ನುವ ಕುತೂಹಲ ಜೋರಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.