IPL 2021: ಚೆನ್ನೈ ಸೋಲಿಸಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದ ಡೆಲ್ಲಿ!

By Suvarna NewsFirst Published Oct 4, 2021, 11:15 PM IST
Highlights
  • ಕಡಿಮೆ ಮೊತ್ತದ ರೋಚಕ ಪಂದ್ಯಕ್ಕೆ ಸಾಕ್ಷಿಯಾದ ದುಬೈ
  • ಕುತೂಹಲ ಮೂಡಿಸಿದ ಚೆನ್ನೈ ಹಾಗೂ ಡೆಲ್ಲಿ ನಡುವಿನ ಹೋರಾಟ
  • ಅಂತಿಮ ಓವರ್‌ನಲ್ಲಿ 3 ವಿಕೆಟ್ ಗೆಲುು ಸಾಧಿಸಿದ  ಡೆಲ್ಲಿ

ದುಬೈ(ಅ.04):  ಅಂಕಪಟ್ಟಿ ಅಗ್ರಸ್ಥಾನಕ್ಕಾಗಿ ನಡೆದ ಹೋರಾಟದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ  ಚೆನ್ನೈ ಸೂಪರ್ ಕಿಂಗ್ಸ್ ಮಣಿಸಿ ಅಗ್ರಸ್ಥಾನಕ್ಕೇರಿದೆ. 50ನೇ ಲೀಗ್ ಪಂದ್ಯದಲ್ಲಿ ಮೊತ್ತ ಕಡಿಮೆಯಾಗಿದ್ದರೂ, ರೋಚಕ ಹೋರಾಟಕ್ಕೆ ಕೊರತೆ ಇರಲಿಲ್ಲ. ಶಿಖರ್ ಧವನ್ ಹೋರಾಟ, ಅಂತಿಮ ಹಂತದಲ್ಲಿ ಶಿಮ್ರೊನ್ ಹೆಟ್ಮೆಯರ್ ಅಬ್ಬರದಿಂದ ಡೆಲ್ಲಿ ಕ್ಯಾಪಿಟಲ್ಸ್  19.4 ಓವರ್‌ಗಳಲ್ಲಿ 3 ವಿಕೆಟ್ ಗೆಲುವು ಕಂಡಿತು. 

ರೋಹಿತ್ ಶರ್ಮಾ-ಜಸ್ಪ್ರೀತ್ ಬುಮ್ರಾ: ಟೀಮ್‌ ಇಂಡಿಯಾದ ಆಟಗಾರರ ಲುಕ್‌ಅಲೈಕ್‌ ಇಲ್ಲಿದ್ದಾರೆ!

ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 136 ರನ್‌ಗಳಿಗೆ ಕಟ್ಟಿಹಾಕಿದ ಡೆಲ್ಲಿ ಕ್ಯಾಪಿಟಲ್ಸ್, ಸುಲಭ ಗೆಲುವಿನ ನಿರೀಕ್ಷೆಯಲ್ಲಿತ್ತು. ಕಾರಣ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಗೆಲುವಿನ ಟಾರ್ಗೆಟ್ 137 ರನ್. ಆದರೆ ಚೇಸಿಂಗ್ ಇಳಿದ ಡೆಲ್ಲಿ ತಂಡ 24 ರನ್ ಗಳಿಸುವಷ್ಟರಲ್ಲೇ ಮೊದಲ ವಿಕೆಟ್ ಕಳೆದುಕೊಂಡಿತು. ಪೃಥ್ವಿ ಶಾ 18 ರನ್ ಸಿಡಿಸಿ ಔಟಾದರು.

ಮೊದಲ ವಿಕೆಟ್ ಪತನ ಡೆಲ್ಲಿ ತಂಡದಲ್ಲಿ ಯಾವ ಆತಂಕವನ್ನೂ ತರಲಿಲ್ಲ. ಕಾರಣ ಅಲ್ಪಮೊತ್ತದ ಟಾರ್ಗೆಟ್. ಜೊತೆ ಶಿಖರ್ ಧವನ್ ಕ್ರೀಸ್‌ನಲ್ಲಿರುವುದು ಡೆಲ್ಲಿ ಆತ್ಮವಿಶ್ವಾಸ ಹೆಚ್ಚಿಸಿತು. ಪೃಥ್ವಿ ಶಾ ಬೆನ್ನಲ್ಲೇ ಶ್ರೇಯಸ್ ಅಯ್ಯರ್ ಕೇವಲ 2 ರನ್ ಸಿಡಿಸಿ ಔಟಾದರು. ಅಷ್ಟರಲ್ಲಿ ಡೆಲ್ಲಿ ತಂಡ ಎಚ್ಚರಿಕೆಯ ಬ್ಯಾಟಿಂಗ್ ಮೊರೆ ಹೋಯಿತು.

IPL 2021 ಕ್ವಾಲಿಫೈ ಲೆಕ್ಕಾಚಾರ: KKR, ಪಂಜಾಬ್, ರಾಜಸ್ಥಾನ & ಮುಂಬೈಗೆ ಈಗಲೂ ಇದೆ ಪ್ಲೇ-ಆಫ್‌ಗೇರುವ ಅವಕಾಶ..!

ನಾಯಕ ರಿಷಬ್ ಪಂತ್ ಹಾಗೂ ಶಿಖರ್ ಧವನ್ ಜೊತೆಯಾಟ ದೆಹಲಿ ತಂಡಕ್ಕೆ ಚೇತರಿಕೆ ನೀಡಿತು. ಆದರೆ ಪಂತ್ ಆಟ 15 ರನ್‌ಗೆ ಅಂತ್ಯವಾಯಿತು . ರಿಪಾಲ್ ಪಟೇಲ್ 18 ರನ್ ಸಿಡಿಸಿ ನಿರ್ಗಮಿಸಿದರು. ಆರ್ ಅಶ್ವಿನ್ ಕೇವಲ 2 ರನ್ ಸಿಡಿಸಿ ಔಟಾದರು. ಹೋರಾಟ ನೀಡಿದ ಧವನ್ ಆಟ 39 ರನ್‌ಗೆ ಅಂತ್ಯವಾಯಿತು. 99 ರನ್‌ಗೆ ಡೆಲ್ಲಿ ಕ್ಯಾಪಿಟಲ್ಸ್ 6 ವಿಕೆಟ್ ಕಳೆದುಕೊಂಡಿತು. 

ಶಿಮ್ರೊನ್ ಹೆಟ್ಮೆಯರ್ ಹಾಗೂ ಅಕ್ಸರ್ ಪಟೇಲ್ ಮೇಲೆ ಹೆಚ್ಚಿನ ಒತ್ತಡ ಬಿದ್ದಿತು. ಇತ್ತ ಚೆನ್ನೈ ಬೌಲರ್‌ಗಳು ದಾಳಿ ಚುರುಕುಗೊಳಿಸಿದರು. ಅಂತಿಮ 12 ಎಸೆತದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಗೆಲುವಿಗೆ 16 ರನ್ ಅವಶ್ಯಕತೆ ಇತ್ತು. ಜೋಶ್ ಹೇಜಲ್‌ವುಡ್ 19ನೇ ಓವರ್‌ನ ಆರಂಭಿಕ 3 ಎಸೆತ  ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆತಂಕ ಹೆಚ್ಚಿಸಿತು. ಆದರೆ 4ನೇ ಎಸೆತದಲ್ಲಿ ಸಿಡಿಸಿದ ಸಿಕ್ಸರ್ ಡೆಲ್ಲಿ ತಂಡವನ್ನು ಮತ್ತೆ ಗೆಲುವಿನ ಹಾದಿಗೆ ತಂದಿತು.

ಹೆಟ್ಮೆಯರ್ ಸಿಕ್ಸರ್‌ನಿಂದ ಅಂತಿಮ 6 ಎಸೆತದಲ್ಲಿ ಡೆಲ್ಲಿ ಗೆಲುವಿಗೆ 6 ರನ್ ಬೇಕಿತ್ತು.  ಡ್ವೈನ್ ಬ್ರಾವೋ ಎಸೆದ ಮೊದಲ ಎಸೆತದಲ್ಲಿ ಹೆಟ್ಮೆಯರ್ 2 ರನ್ ಸಿಡಿಸಿದರು. ಮರು ಎಸೆತವೇ ನೋ ಬಾಲ್ ಹಾಗೂ 1 ರನ್ ಗಳಿಸಿತು.  ಅಕ್ಸರ್ ಪಟೇಲ್ ಸ್ಟ್ರೈಕ್‌ಗೆ ಬಂದು 2ನೇ ಎಸೆತದಲ್ಲಿ ರನ್‌ಗಳಿಸಲು ಸಾಧ್ಯವಾಗಲಿಲ್ಲ. ಆದರೆ 3ನೇ ಎಸೆತದಲ್ಲಿ ವಿಕೆಟ್ ಕೈಚೆಲ್ಲಿ ಹೊರನಡೆದರು. ಅಷ್ಟರಲ್ಲಿ ಪಂದ್ಯ ಮತ್ತೆ ಚೆನ್ನೈ ಕಡೆ ವಾಲತೊಡಗಿತು.

ಅಂತಿಮ 3 ಎಸೆತದಲ್ಲಿ ಕೇವಲ 2 ರನ್ ಬೇಕಿದೆ. ಕ್ರೀಸ್‌ಗೆ ಬಂದ ಕಾಗಿಸೋ ರಬಾಡಾ ಎಲ್ಲಾ ಟೆನ್ಶನ್ ದೂರ ಮಾಡಿದರು. ನೇರವಾಗಿ ಬೌಂಡರಿ ಸಿಡಿಸಿ ಡೆಲ್ಲಿ ತಂಡಕ್ಕೆ 3 ವಿಕೆಟ್ ರೋಚಕ ಗೆಲುವು ತಂದುಕೊಟ್ಟರು. ಹೆಟ್ಮೆಯರ್ ಅಜೇಯ 28 ರನ್ ಸಿಡಿಸಿದರು. 

ಡೆಲ್ಲಿ ಕ್ಯಾಪಿಟಲ್ಸ್ ಇದೀಗ 20 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಅಲಂಕರಿಸಿದೆ. 18 ಅಂಕ ಸಂಪಾದಿಸಿರುವ ಚೆನ್ನೈ ಸೂಪರ್ ಕಿಂಗ್ಸ್ 2ನೇ ಸ್ಥಾನಕ್ಕೆ ಕುಸಿದಿದೆ. ಡೆಲ್ಲಿ ಹಾಗೂ ಚೆನ್ನೈ ತಂಡಕ್ಕೆ ಲೀಗ್ ಹಂತದಲ್ಲಿ ತಲಾ ಒಂದೊಂದು ಪಂದ್ಯ ಬಾಕಿ ಇದೆ. 
 

click me!