ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ರೋಚಕ ಪಂದ್ಯದಲ್ಲಿ ಹೊಡಿ ಬಡಿ ಆಟ ನಿರೀಕ್ಷಿಸಲಾಗಿತ್ತು. ಆದರೆ ಡೆಲ್ಲಿ ಕರಾರುವಕ್ ದಾಳಿಗೆ ಮುಂಬೈ ಇಂಡಿಯನ್ಸ್ 137 ರನ್ ಸಿಡಿಸಲಷ್ಟೇ ಶಕ್ತವಾಗಿತ್ತು. ಈ ಸುಲಭ ಗುರಿಯನ್ನು ಡೆಲ್ಲಿ ನಿರಾಯಾಸವಾಗಿ ದಾಟಿದೆ.
ಚೆನ್ನೈ(ಏ.20): ಮುಂಬೈ ಇಂಡಿಯನ್ಸ್ ತಂಡದ ಬ್ಯಾಟಿಂಗ್ ಲೈನ್‌ಅಪ್ ನೋಡಿದರೆ ಎಂತಹ ತಂಡ ಕೂಡ ಒಂದು ಕ್ಷಣ ಬೆಚ್ಚಿ ಬೀಳುವುದು ಖಚಿತ. ಆದರೆ ಘಟಾನುಘಟಿ ಬ್ಯಾಟ್ಸ್‌ಮನ್ ಹೊಂದಿರುವ ಮುಂಬೈ ಇಂಡಿಯನ್ಸ್ ಸಿಡಿಸಿದ್ದು ಕೇವಲ 137 ರನ್ ಮಾತ್ರ. ಈ ಸುಲಭ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ 6 ವಿಕೆಟ್ ಗೆಲುವು ದಾಖಲಿಸಿದೆ.
ಸುಲಭ ಟಾರ್ಗೆಟ್ ಆಗಿದ್ದರೂ, ಡೆಲ್ಲಿ ಕ್ಯಾಪಿಟಲ್ಸ್ ಆರಂಭದಲ್ಲೇ ಪೃಥ್ವಿ ಶಾ ವಿಕೆಟ್ ಕಳೆದುಕೊಂಡು ಆತಂಕ ಎದುರಿಸಿತು. ಆದರೆ ಶಿಖರ್ ಧವನ್ ಹಾಗೂ ಸ್ಟೀವ್ ಸ್ಮಿತ್ ಜೊತೆಯಾಟದಿಂದ ಡೆಲ್ಲಿ ತಂಡ ಸಂಕಷ್ಟದಿಂದ ಪಾರಾಯಿತು. ಸ್ಟೀವ್ ಸ್ಮಿತ್ 33 ರನ್ ಸಿಡಿಸಿ ಔಟಾದರು.
ಇತ್ತ ಫಾರ್ಮ್ ಮುಂದುವರಿಸಿರುವ ಶಿಖರ್ ಧವನ್ 45 ರನ್ ಕಾಣಿಕೆ ನೀಡಿದರು. ಧವನ್ ಹಾಗೂ ಸ್ಮಿತ್ ವಿಕೆಟ್ ಪತನ ಡೆಲ್ಲಿ ತಂಡದಲ್ಲಿ ಸ್ವಲ್ಪ ಮಟ್ಟಿಗೆ ಆತಂಕ ತಂದಿಟ್ಟಿತು. ಲಲಿತ್ ಯಾದವ್ ಹಾಗೂ ನಾಯಕ ರಿಷಬ್ ಪಂತ್ ಜೊತೆಯಾಟ ಗೆಲುವಿನ ಸೂಚನೆ ನೀಡಿತು. ಆದರೆ ಪಂತ್ 7 ರನ್ ಸಿಡಿಸಿ ಔಟಾದರು.
ಶಿಮ್ರೊನ್ ಹೆಟ್ಮೆಯರ್ ಜೊತೆ ಸೇರಿದ ಲಲಿತ್ ಯಾದವ್ ಮುಂಬೈ ಗೆಲುವಿನ ಕನಸಿಗೆ ಅಡ್ಡಿಯಾದರು. ಲಲಿತ್ ಯಾದವ್ ಅಜೇಯ 22 ರನ್ ಸಿಡಿಸಿದರು. ಹೆಟ್ಮೆಯರ್ ಅಜೇಯ 14 ರನ್ ಸಿಡಿಸಿದರು. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ 19.1 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗೆಲುವು ದಾಖಲಿಸಿತು. ಈ ಗೆಲುವಿನೊಂದಿಗೆ ಡೆಲ್ಲಿ 2ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ.