ಐಪಿಎಲ್ 2021: ಕೊನೆಗೂ ಆಸ್ಪ್ರೇಲಿಯಾಗೆ ತೆರಳಿದ ಮೈಕ್‌ ಹಸ್ಸಿ!

By Suvarna NewsFirst Published May 17, 2021, 8:29 AM IST
Highlights

* ಕೊನೆಗೂ ನೆಮ್ಮದಿಯ ನಿಟ್ಟುಸಿರು ಬಿಟ್ಟ ಮೈಕಲ್ ಹಸ್ಸಿ

* ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಆರ್‌ಟಿ-ಪಿಸಿಆರ್‌ ಪರೀಕ್ಷೆಯಲ್ಲಿ ನೆಗೆಟಿವ್‌ ಬಂದಿತ್ತು.

* ಬಯೋ ಬಬಲ್‌ನಲ್ಲಿದ್ದ ಸಿಎಸ್‌ಕೆ ಬ್ಯಾಟಿಂಗ್ ಕೋಚ್‌ ಹಸ್ಸಿಗೆ ಕೋವಿಡ್ 19 ದೃಢಪಟ್ಟಿತ್ತು.

ಚೆನ್ನೈ(ಮೇ.17): ಕೊರೋನಾ ದೃಢಪಟ್ಟು ಭಾರತದಲ್ಲೇ ಚಿಕಿತ್ಸೆ ಪಡೆಯುತ್ತಿದ್ದ ಚೆನ್ನೈ ಸೂಪರ್‌ ಕಿಂಗ್ಸ್‌ನ ಬ್ಯಾಟಿಂಗ್‌ ಕೋಚ್‌ ಮೈಕಲ್‌ ಹಸ್ಸಿ, ಕೊನೆಗೂ ಭಾನುವಾರ ಆಸ್ಪ್ರೇಲಿಯಾಗೆ ಹೊರಟರು. ದೋಹಾ ಮೂಲಕ ಅವರು ಸೋಮವಾರ ಆಸ್ಪ್ರೇಲಿಯಾ ತಲುಪಲಿದ್ದಾರೆ. 

ಐಪಿಎಲ್‌ 14ನೇ ಆವೃತ್ತಿ ಮುಂದೂಡಿಕೆಯಾದ ಬಳಿಕವೂ ಹಸ್ಸಿ, ಭಾರತದಲ್ಲೇ ಉಳಿದಿದ್ದರು. ಚೆನ್ನೈನಲ್ಲಿ ಅವರಿಗೆ ಸಿಎಸ್‌ಕೆ ತಂಡ ಚಿಕಿತ್ಸೆ ಕೊಡಿಸುತ್ತಿತ್ತು. ಕಳೆದ ಗುರುವಾರ ನಡೆಸಿದ್ದ ಆರ್‌ಟಿ-ಪಿಸಿಆರ್‌ ಪರೀಕ್ಷೆಯಲ್ಲಿ ನೆಗೆಟಿವ್‌ ಬಂದಿತ್ತು. ಇದೇ ವೇಳೆ ಭಾರತದಿಂದ ಮಾಲ್ಡೀವ್ಸ್‌ಗೆ ತೆರಳಿ ತವರಿಗೆ ತೆರಳಲು ಕಾಯುತ್ತಿದ್ದ ಆಟಗಾರರು, ಕೋಚ್‌ಗಳು ಸೇರಿ ಒಟ್ಟು 38 ಮಂದಿ ಸೋಮವಾರ ಆಸ್ಪ್ರೇಲಿಯಾಗೆ ತಲುಪಲಿದ್ದಾರೆ. ಆಸ್ಟ್ರೇಲಿಯಾದಲ್ಲೂ 10 ದಿನಗಳ ಕಾಲ ಎಲ್ಲರೂ ಹೋಟೆಲ್‌ ಕ್ವಾರಂಟೈನ್‌ನಲ್ಲಿ ಇರಲಿದ್ದಾರೆ.

ಕೋವಿಡ್ ಸೋಂಕಿನಿಂದ ಹಸ್ಸಿ ಗುಣಮುಖ, ಸಾಹಗೆ ಮತ್ತೆ ಪಾಸಿಟಿವ್‌!

ಭಾರತದಲ್ಲಿ ಪ್ರತಿನಿತ್ಯ ಲಕ್ಷಾಂತರ ಕೋವಿಡ್ ಪ್ರಕರಣಗಳು ಪತ್ತೆಯಾಗುತ್ತಿವೆ. ಹೀಗಾಗಿ ಭಾರತದಿಂದ ಬರುವ ವಿಮಾನಗಳಿಗೆ ಆಸ್ಟ್ರೇಲಿಯಾ ಸರ್ಕಾರ ನಿರ್ಬಂಧ ವಿಧಿಸಿದೆ. ಬಯೋ ಬಬಲ್‌ ನೊಳಗೆ ಕೋವಿಡ್ ಪ್ರಕರಣಗಳು ಪತ್ತೆಯಾದ ಬೆನ್ನಲ್ಲೇ ಬಿಸಿಸಿಐ ಮೇ 04ರಂದು 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!