
ಲಂಡನ್(ಆ.16): ಇಂಗ್ಲೆಂಡ್ ಅಭಿಮಾನಿಗಳ ಟೀಕೆ, ಬಾಟಲಿ ಎಸೆತ, ರೂಟ್ ಸೈನ್ಯದ ಸ್ಲೆಡ್ಜಿಂಗ್ ಸೇರಿದಂತೆ ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಹಲವು ಅಡೆತಡೆ ಎದುರಿಸಿದ ಟೀಂ ಇಂಡಿಯಾ ಭರ್ಜರಿ ಗೆಲುವಿನ ಮೂಲಕ ಉತ್ತರ ನೀಡಿದೆ. ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ ಸೈನ್ಯ 151 ರನ್ ಗೆಲುವು ದಾಖಲಿಸಿದೆ.
3 ಹಾಗೂ ನಾಲ್ಕನೇ ದಿನದಾಟದಲ್ಲಿ ಹಿಡಿತ ಸಾಧಿಸಿದ್ದ ಇಂಗ್ಲೆಂಡ್ ಅಂತಿಮ ದಿನದಾಟದಲ್ಲಿ ಸುಲಭ ಗೆಲುವು ನಿರೀಕ್ಷಿಸಿತ್ತು. ಆದರೆ ಟೀಂ ಇಂಡಿಯಾದ ತಿರುಗೇಟಿಗೆ ಇಂಗ್ಲೆಂಡ್ ತಂಡಕ್ಕೆ ಕನಿಷ್ಠ ಪಂದ್ಯ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಗೆಲುವಿಗೆ 272 ರನ್ ಟಾರ್ಗೆಟ್ ಪಡೆದ ಇಂಗ್ಲೆಂಡ್ ಅಂತಿಮ ದಿನದಲ್ಲಿ 10 ವಿಕೆಟ್ ಕಳೆದುಕೊಂಡು ಕೊಹ್ಲಿ ಸೈನ್ಯಕ್ಕೆ ಶರಣಾಯಿತು.
ಇಂಗ್ಲೆಂಡ್ ಲೆಕ್ಕಾಚಾರವೇ ತಲೆಕೆಳಗಾದಾಗ ತಂಡದ ಮೇಲೆ ಒತ್ತಡ ಹೆಚ್ಚಾಯಿತು. ಇತ್ತ ಟೀಂ ಇಂಡಿಯಾದ ಅದ್ಭುತ ದಾಳಿಗೆ ಇಂಗ್ಲೆಂಡ್ ಬಳಿ ಉತ್ತರವಿರಲಿಲ್ಲ. ರೋರಿ ಬರ್ನ್ಸ್, ಡೋಮಿನಿಕ್ ಸಿಬ್ಲೆ, ಹಸೀಬ್ ಹಮೀದ್ ಅಬ್ಬರಿಸಲಿಲ್ಲ. ನಾಯಕ ಜೋ ರೂಟ್ 33 ರನ್ ಸಿಡಿಸಿ ನಿರ್ಗಮಿಸಿದರು.
ಜಾನಿ ಬೈರ್‌ಸ್ಟೋ, ಮೊಯಿನ್ ಆಲಿ ಹಾಗೂ ಸ್ಯಾಮ್ ಕುರನ್ ನೆರವಾಗಲಿಲ್ಲ. ಒಲಿ ರಾಬಿನ್ಸ್ ಬಳಿಕ 25 ರನ್ ಸಿಡಿಸಿ ಹೋರಾಡಿದ ಜೋಸ್ ಬಟ್ಲರ್ ವಿಕೆಟ್ ಪತನಗೊಂಡಿತು. ಇದರ ಬೆನ್ನಲ್ಲೇ ಜೇಮ್ಸ್ ಆ್ಯಂಡರ್ಸ್ ಪೆವಿಲಿಯನ್ ಸೇರಿದರು. ಈ ಮೂಲಕ ಇಂಗ್ಲೆಂಡ್ ಕೇವಲ 120 ರನ್‌ಗಳಿಗೆ ಆಲೌಟ್ ಆಯಿತು. ಭಾರತ 151 ರನ್ ಭರ್ಜರಿ ಗೆಲುವು ಕಂಡಿತು. ಟೀಂ ಇಂಡಿಯಾ ಪರ ಮೊಹಮ್ಮದ್ ಸಿರಾಜ್ 4, ಬುಮ್ರಾ 3 ವಿಕೆಟ್ ಕಬಳಿಸಿ ಮಿಂಚಿದರು. ಈ ಮೂಲಕ 5 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿದೆ.
ಮೊದಲ ಟೆಸ್ಟ್
ಮೊದಲ ಟೆಸ್ಟ್ ಪಂದ್ಯದಲ್ಲೂ ಟೀಂ ಇಂಡಿಯಾ ಗೆಲುವಿನ ಸನಿಹಕ್ಕೆ ತಲುಪಿತ್ತು. ಅಂತಿಮ ದಿನದಲ್ಲಿ ಭಾರತದ ಗೆಲುವಿಗೆ 157 ರನ್ ಬೇಕಿತ್ತು. ಆದರೆ ಅಂತಿಮ ದಿನ ಮಳೆಯಿಂದ ರದ್ದಾಗಿತ್ತು. ಹೀಗಾಗಿ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತ್ತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.