INDvAUS ಅಂತಿಮ ಹಂತದಲ್ಲಿ ರೋಚಕ ಟ್ವಿಸ್ಟ್, ಬೆಂಗಳೂರು ಪಂದ್ಯ ಗೆದ್ದು 4-1 ಅಂತರದಲ್ಲಿ ಸರಣಿ ಕೈವಶ!

By Suvarna NewsFirst Published Dec 3, 2023, 10:29 PM IST
Highlights

ಬೆಂಗಳೂರಿನಲ್ಲಿ ನಡೆದ ಅಂತಿಮ ಟಿ20 ಪಂದ್ಯ ಹಲವು ತಿರುವು ಪಡೆದ ಕುತೂಹಲ ಹೆಚ್ಚಿಸಿತು. ರೋಚಕ ಪಂದ್ಯದಲ್ಲಿ ಭಾರತ ಅಂತಿಮ ಹಂತದಲ್ಲಿ 6 ರನ್ ಗೆಲುವು ದಾಖಲಿಸಿದೆ. ಇದರೊಂದಿಗೆ 4-1 ಅಂತರದಲ್ಲಿ ಸರಣಿ ಗೆದ್ದುಕೊಂಡಿದೆ.  
 

ಬೆಂಗಳೂರು(ಡಿ.03) ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಟಿ20 ಪಂದ್ಯ ಹಲವು ತಿರುವುಗಳನ್ನು ಪಡೆದುಕೊಂಡಿತ್ತು. ಒಮ್ಮೆ ಆಸ್ಟ್ರೇಲಿಯಾ, ಮತ್ತೊಮ್ಮೆ ಭಾರತ ಪಂದ್ಯದ ಮೇಲೆ ಹಿಡಿತ ಸಾಧಿಸಿತ್ತು. ಅಂತಿಮ ಓವರ್‌ನಲ್ಲಿ 10 ರನ್ ಅವಶ್ಯಕತೆ ಇತ್ತು. ನಾಯಕ ಮ್ಯಾಥ್ಯೂ ವೇಡ್ ವಿಕೆಟ್ ಕಬಳಿಸುವ ಮೂಲಕ ಭಾರತ 6 ರನ್ ರೋಚಕ ಗೆಲುವು ಕಂಡಿತು. ಇದರೊಂದಿಗೆ ಟಿ20 ಸರಣಿಯನ್ನು 4-1 ಅಂತರದಲ್ಲಿ ಗೆದ್ದುಕೊಂಡಿತು. 

ಬೆಂಗಳೂರು ಪಂದ್ಯದಲ್ಲಿ ಭಾರತ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಸ್ಲೋ ಪಿಚ್, ತುಂತುರು ಮಳೆ, ಟಾಸ್ ಸೋಲು ಭಾರತಕ್ಕೆ ಆರಂಭದಲ್ಲೇ ಹೊಡೆತ ನೀಡಿತು. ಅಬ್ಬರದ ಬ್ಯಾಟಿಂಗ್ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಮೂಡಿಬರಲಿಲ್ಲ. ಶ್ರೇಯಸ್ ಅಯ್ಯರ್ ಹೋರಾಟ ಹೊರತುಪಡಿಸಿದರೆ ಇತರರು ಎಂದಿನ ಆಟ ಪ್ರದರ್ಶಿಸಲು ಸಾಧ್ಯವಾಗಲಿಲ್ಲ. 

161 ರನ್ ಟಾರ್ಗೆಟ್ ಪಡೆದ ಆಸ್ಟ್ರೇಲಿಯಾಗೆ ಟ್ರಾವಿಸ್ ಹೆಡ್ ಸ್ಪೋಟಕ ಆರಂಭ ನೀಡಿದರು. ಬೌಂಡರಿ ಸಿಕ್ಸರ್ ಆಟದಿಂದ ಮೊದಲ ಎರಡು ಓವರ್‌ಗಳಲ್ಲಿ 10ರ ಸರಾಸರಿಯಲ್ಲಿ ರನ್ ಗಳಿಸಿದರು. ಆದರೆ ಜೋಶ್ ಫಿಲಿಪ್ ಕೇವಲ 4 ರನ್ ಗಳಿಸಿ ಔಟಾದರು. ಭಾರತ ಆರಂಭಿಕ ಮೇಲುಗೈ ಸಾಧಿಸಿತು. 18 ಎಸೆತದಲ್ಲಿ 28 ರನ್ ಸಿಡಿಸಿದ ಟ್ರಾವಿಸ್ ಹೆಡ್ ವಿಕೆಟ್ ಪತನ ಭಾರತದ ಆತ್ಮವಿಶ್ವಾಸ ಹೆಚ್ಚಿಸಿತು.

ಭಾರತ 161 ರನ್ ಡಿಫೆಂಡ್ ಮಾಡಿಕೊಳ್ಳಲಿದೆ ಅನ್ನೋ ಮಾತುಗಳು ಕೇಳಿಬರುತ್ತಿದ್ದಂತೆ ಬೆನ್ ಮೆಕ್‌ಡರ್ಮಾಟ್ ಹೋರಾಟ ಆತಂಕ ಮೂಡಿಸಿತು. ಇತ್ತ ಆ್ಯರೋನ್ ಹಾರ್ಡಿ  6 ರನ್ ಸಿಡಿಸಿ ಔಟಾದರು. ಆದರೆ ಬೆನ್ ಮೆಕ್‌ಡರ್ಮಾಟ್ ಹಾಫ್ ಸೆಂಚುರಿ ಸಿಡಿಸಿದರು. ಇದರಿಂದ ಪಂದ್ಯ ಆಸಿಸ್ ಪರ ವಾಲಿತು. 17 ರನ್  ಸಿಡಿಸಿದ ಟಿಮ್ ಡೇವಿಡ್ ವಿಕೆಟ್ ಪತನಗೊಂಡಿತು. ಇತ್ತ 54 ರನ್ ಸಿಡಿಸಿದ ಬೆನ್ ಮೆಕ್‌ಡರ್ಮಾಟ್ ವಿಕೆಟ್ ಪತನ ಪಂದ್ಯದ ಗತಿ ಬದಲಿಸುವ ಸೂಚನೆ ನೀಡಿತು.

ಅಂತಿಮ 24 ಎಸೆತದಲ್ಲಿ ಆಸ್ಟ್ರೇಲಿಯಾ ಗೆಲುವಿಗೆ 37 ರನ್ ಅವಶ್ಯಕತೆ ಇತ್ತು. ಮ್ಯಾಥ್ಯೂ ಶಾರ್ಟ್ ಹಾಗೂ ನಾಯಕ ಮಾಥ್ಯೂ ವೇಡ್ ಹೋರಾಟದಿಂದ ಆಸ್ಟ್ರೇಲಿಯಾ ಪಂದ್ಯದ ಮೇಲೆ ಹಿಡಿತ ಸಾಧಿಸಿತು. 16 ರನ್ ಸಿಡಿಸಿದ ಶಾರ್ಟ್ ವಿಕೆಟ್ ಪತನ ಅಭಿಮಾನಿಗಳ ಸಂಭ್ರಮ ಹೆಚ್ಚಿಸಿತು. ಇದರ ಬೆನ್ನಲ್ಲೇ ಬೆನ್ ಡ್ವಾರ್‌ಶೂಯಿಸ್ ಔಟಾದರು. 

ಮ್ಯಾಥ್ಯೂ ವೇಡ್ ಅಬ್ಬರದ ಬ್ಯಾಟಿಂಗ್ ಭಾರತದ ಆತಂಕ ಹೆಚ್ಚಿಸಿತು. ಅಂತಿಮ 6 ಎಸೆತದಲ್ಲಿ ಆಸಿಸ್ ಗೆಲುವಿಗೆ 10 ರನ್ ಅವಶ್ಯಕತೆ ಇತ್ತು.  22 ರನ್ ಸಿಡಿಸಿದ ವೇಡ್ ವಿಕೆಟ್ ಪತನ ಪಂದ್ಯಕ್ಕೆ ಹೊಸ ತಿರುವು ನೀಡಿತು. ಅದ್ಭುತ ಬೌಲಿಂಗ್ ದಾಳಿ ಸಂಘಟಿಸಿದ ಅರ್ಶದೀಪ್ ಅಂತಿಮ ಓವರ್‌ನಲ್ಲಿ ಕೇವಲ 3 ರನ್ ನೀಡಿದರು. ಈ ಮೂಲಕ ಭಾರತ 6 ರನ್ ರೋಚಕ ಗೆಲುವು ಕಂಡಿತು. 

click me!