ಭಾರತ ತಂಡದ ಮಹಿಳಾ ತಂಡದ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಸಹೋದರಿ ವತ್ಸಲಾ ಕೃಷ್ಣಮೂರ್ತಿ ಕೋವಿಡ್‌ನಿಂದಾಗಿ ಕೊನೆಯುಸಿರೆಳೆದಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಕಡೂರು(ಮೇ.06): ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಸಹೋದರಿ ವತ್ಸಲಾ ಕೃಷ್ಣಮೂರ್ತಿ(40) ಕೋವಿಡ್ ವಿರುದ್ದ ಜೀವನ್ಮರಣ ಹೋರಾಟ ನಡೆಸಿ ಕೊನೆಯುಸಿರೆಳೆದಿದ್ದಾರೆ.
ಕೇವಲ 10 ದಿನಗಳ ಹಿಂದಷ್ಟೇ ವೇದಾ ಕೃಷ್ಣಮೂರ್ತಿ ತಾಯಿ ಚಲುವಾಂಬ(63) ಕೊರೋನಾದಿಂದಾಗಿ ಚಿಕ್ಕಮಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ನ್ಯೂಮೊನಿಯಾದಿಂದ ಬಳಲುತ್ತಿದ್ದ ವತ್ಸಲಾ ಸಹ ಇದೀಗ ಕೋವಿಡ್‌ಗೆ ಬಲಿಯಾಗಿದ್ದಾರೆ. ಕಡೂರು ಪಟ್ಟಣದ ನಿವಾಸಿಯಾಗಿದ್ದ ವತ್ಸಲಾ ಕೃಷ್ಣಮೂರ್ತಿ ಚಿಕ್ಕಮಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.
ಖ್ಯಾತ ಮಹಿಳಾ ಕ್ರಿಕೆಟರ್ ವೇದಾ ಕೃಷ್ಣಮೂರ್ತಿಗೆ ಮಾತೃ ವಿಯೋಗ
ಇದು ವೇದಾ ಕೃಷ್ಣಮೂರ್ತಿ ಕುಟುಂಬದ ಪಾಲಿಗೆ ಡಬಲ್ ಶಾಕ್ ಆದಂತೆ ಆಗಿದೆ. ವೇದಾ ಕೇವಲ 10 ದಿನಗಳ ಅಂತರದಲ್ಲಿ ಕೋವಿಡ್‌ನಿಂದಾಗಿ ತಾಯಿ ಹಾಗೂ ಸಹೋದರಿಯನ್ನು ಕಳೆದುಕೊಂಡಂತೆ ಆಗಿದೆ. ವೇದಾ ಕೃಷ್ಣಮೂರ್ತಿ ಮಾತ್ರವಲ್ಲದೇ ಟೀಂ ಇಂಡಿಯಾ ಕ್ರಿಕೆಟಿಗರಾದ ರವಿಚಂದ್ರನ್ ಅಶ್ವಿನ್ ಹಾಗೂ ಎಂ ಎಸ್ ಧೋನಿ ಕುಟುಂಬಸ್ಥರು ಸಹ ಕೋವಿಡ್ 19 ಸೋಂಕಿಗೆ ಒಳಾಗಾಗಿ ಚೇತರಿಸಿಕೊಂಡಿದ್ದರು. ಈ ಮೊದಲು ಸಚಿನ್ ತೆಂಡುಲ್ಕರ್, ಯೂಸುಫ್ ಪಠಾಣ್ ಹಾಗೂ ಹರ್ಮನ್‌ಪ್ರೀತ್ ಕೌರ್ ಸಹಾ ಕೋವಿಡ್‌ಗೆ ಒಳಗಾಗಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದರು.
ಬುಧವಾರ ಒಂದೇ ದಿನ ದೇಶಾದ್ಯಂತ ದಾಖಲೆಯ 4.12 ಲಕ್ಷ ಮಂದಿಗೆ ಕೋವಿಡ್ 19 ಸೋಂಕು ದೃಢಪಟ್ಟಿತ್ತು. ಈ ಪೈಕಿ 3979 ಮಂದಿ ಕೋವಿಡ್‌ನಿಂದ ಕೊನೆಯುಸಿರೆಳೆದಿದ್ದಾರೆ. ಇನ್ನು ರಾಜ್ಯದಲ್ಲಿ 50 ಸಾವಿರ ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona