* ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಪ್ರಿಯಾ ಪೂನಿಯಾ ತಾಯಿ ಕೋವಿಡ್‌ಗೆ ಬಲಿ
* ತಾಯಿ ಸಾವಿನ ಬೆನ್ನಲ್ಲೇ ಭಾವನಾತ್ಮಕ ಪತ್ರ ಬರೆದ ಪ್ರಿಯಾ ಪೂನಿಯಾ
* ಕೆಲ ದಿನಗಳ ಹಿಂದಷ್ಟೇ ವೇದಾ ಕೃಷ್ಣಮೂರ್ತಿ ತಾಯಿ ಹಾಗೂ ಸಹೋದರಿ ಕೊರೋನಾಗೆ ಬಲಿಯಾಗಿದ್ದರು.
ನವದೆಹಲಿ(ಮೇ.18): ಕೋವಿಡ್ ಎರಡನೇ ಅಲೆಗೆ ಭಾರತ ತತ್ತರಿಸಿ ಹೋಗಿದೆ. ಇದೀಗ ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಪ್ರಿಯಾ ಪೂನಿಯಾ ತಾಯಿಯನ್ನು ಕೊರೋನಾ ಹೆಮ್ಮಾರಿ ಬಲಿ ಪಡೆದಿದೆ. ಈ ಆಘಾತಕಾರಿ ಸುದ್ದಿಯನ್ನು ಪ್ರಿಯಾ ಪೂನಿಯಾ ಸಾಮಾಜಿಕ ಜಾಲತಾಣಗಳ ಮೂಲಕ ಬಹಿರಂಗ ಪಡಿಸಿದ್ದಾರೆ.
2019ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿರುವ ಪ್ರಿಯಾ ಪೂನಿಯಾ, ಭಾರತ ಪರ 7 ಏಕದಿನ ಹಾಗೂ 3 ಟಿ20 ಪಂದ್ಯಗಳನ್ನಾಡಿದ್ದಾರೆ. ತಮ್ಮ ತಾಯಿಯ ಸಾವಿನ ವಿಚಾರವನ್ನು ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಹೃದಯಸ್ಪರ್ಶಿ ನುಡಿನಮನ ಸಲ್ಲಿಸಿದ್ದಾರೆ.
ಯಾವಾಗಲೂ ಧೈರ್ಯವಾಗಿರುವ ಎಂದು ನೀನೇಕೆ ಹೇಳುತ್ತಿದ್ದೆ ಎನ್ನುವುದು ನನಗಿಂದು ಅನುಭವಕ್ಕೆ ಬಂದಿದೆ. ನಾನು ನಿನ್ನನ್ನು ಕಳೆದುಕೊಂಡಾಗ ಆ ನೋವನ್ನು ಸಹಿಸಿಕೊಳ್ಳಲು ನನಗೆ ಶಕ್ತಿಬೇಕು ಎನ್ನುವುದು ನಿನಗೆ ಗೊತ್ತಿತ್ತು. ನಿನ್ನನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಅಮ್ಮ. ನಾನೆಷ್ಟೆ ದೂರವಿದ್ದರೂ, ನೀನು ಯಾವಾಗಲೂ ನನ್ನ ಜತೆಯೆ ಇರುತ್ತಿದೆ ಎನ್ನುವುದು ನನಗೆ ಗೊತ್ತು. ನೀನು ನನ್ನ ಗೈಡಿಂಗ್ ಸ್ಟಾರ್ ಎಂದು ಪ್ರಿಯಾ ಭಾವನಾತ್ಮಕವಾಗಿ ನುಡಿನಮನ ಸಲ್ಲಿಸಿದ್ದಾರೆ.
ಇದೇ ವೇಳೆ ಪ್ರಿಯಾ ಪೂನಿಯಾ ಎಲ್ಲರೂ ಕೋವಿಡ್ 19 ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಿ ಹಾಗೂ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಿ ಎಂದು ಮನವಿ ಮಾಡಿಕೊಂಡಿದ್ದಾರೆ. ದಯವಿಟ್ಟು ಎಲ್ಲರೂ ಕೊರೋನಾ ನಿಯಮಗಳನ್ನು ಪಾಲಿಸಿ ಹಾಗೂ ಮುನ್ನೆಚ್ಚರಿಕೆ ವಹಿಸಿ. ಈ ವೈರಸ್ ತುಂಬಾ ಅಪಾಯಕಾರಿಯಾದದ್ದು. ಮಾಸ್ಕ್ ಧರಿಸಿ, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಿ, ಸುರಕ್ಷಿತವಾಗಿರಿ ಹಾಗೂ ಸದೃಢರಾಗಿರಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಕೊರೋನಾ ಹೋರಾಟದಲ್ಲಿ ಸೋತ ತಾಯಿ, ಸಹೋದರಿಗೆ ವೇದಾ ಭಾವನಾತ್ಮಕ ಪತ್ರ!
ಪ್ರಿಯಾ ಪೂನಿಯಾ ಇಂಗ್ಲೆಂಡ್ ಪ್ರವಾಸಕ್ಕೆ ಆಯ್ಕೆಯಾಗಿದ್ದು, ಟೆಸ್ಟ್ ಹಾಗೂ ಏಕದಿನ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಮುಂಬರುವ ಇಂಗ್ಲೆಂಡ್ ಪ್ರವಾಸದಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡವು ಏಕೈಕ ಟೆಸ್ಟ್, ತಲಾ 3 ಏಕದಿನ ಹಾಗೂ ಟಿ20 ಪಂದ್ಯಗಳ ಸರಣಿಯನ್ನು ಆಡಲಿದೆ.
ಕೆಲವು ವಾರಗಳ ಹಿಂದಷ್ಟೇ ಭಾರತ ಮಹಿಳಾ ತಂಡದ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಕೇವಲ 10 ದಿನಗಳ ಅಂತರದಲ್ಲಿ ತಾಯಿ ಚಲುವಾಂಬ ಹಾಗೂ ಸಹೋದರಿ ವತ್ಸಲಾ ಅವರನ್ನು ಕೋವಿಡ್ ಕಾರಣದಿಂದಾಗಿ ಕಳೆದುಕೊಂಡಿದ್ದರು.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona