ಆಸೀಸ್‌ ಸತತ 26 ಪಂದ್ಯಗಳ ಗೆಲುವಿನ ನಾಗಾಲೋಟಕ್ಕೆ ಭಾರತೀಯ ಮಹಿಳಾ ತಂಡ ಬ್ರೇಕ್‌..!

By Suvarna NewsFirst Published Sep 26, 2021, 4:25 PM IST
Highlights

* ಆಸೀಸ್‌ ವಿರುದ್ದ ಮೂರನೇ ಏಕದಿನ ಪಂದ್ಯ ಗೆದ್ದ ಮಿಥಾಲಿ ರಾಜ್‌ ಪಡೆ

* ಅಸೀಸ್‌ 26 ಪಂದ್ಯಗಳ ಗೆಲುವಿನ ನಾಗಾಲೋಟಕ್ಕೆ ಭಾರತ ಬ್ರೇಕ್‌

* ಮೂರು ಪಂದ್ಯಗಳ ಏಕದಿನ ಸರಣಿ 2-1 ಅಂತರದಲ್ಲಿ ಆಸ್ಟ್ರೇಲಿಯಾ ಪಾಲು

ಮೆಕೇ(ಸೆ.26): ಭಾರತ ಹಾಗೂ ಆಸ್ಟ್ರೇಲಿಯಾ ಮಹಿಳಾ ತಂಡಗಳ ನಡುವಿನ ದ್ವಿಪಕ್ಷೀಯ ಸರಣಿಯ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಮಿಥಾಲಿ ರಾಜ್(Mithali Raj) ನೇತೃತ್ವದ ಭಾರತೀಯ ಮಹಿಳಾ ತಂಡವು 2 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ. ಇದರೊಂದಿಗೆ ಏಕದಿನ ಕ್ರಿಕೆಟ್‌ನಲ್ಲಿ ಸತತ 26 ಪಂದ್ಯಗಳಲ್ಲಿ ಗೆಲುವಿನ ನಾಗಾಲೋಟಕ್ಕೆ ಭಾರತ ಮಹಿಳಾ ತಂಡ ಬ್ರೇಕ್‌ ಹಾಕಿದೆ. ಈ ಗೆಲುವಿನ ಹೊರತಾಗಿಯೂ ಮೊದಲೆರಡು ಪಂದ್ಯಗಳಲ್ಲಿ ಗೆಲುವು ದಾಖಲಿಸಿದ್ದ ಆಸ್ಟ್ರೇಲಿಯಾ ಮಹಿಳಾ ತಂಡವು 2-1 ಅಂತರದಲ್ಲಿ ಏಕದಿನ ಸರಣಿಯನ್ನು ಕೈವಶ ಮಾಡಿಕೊಂಡಿದೆ.

ಆಸ್ಟ್ರೇಲಿಯಾ ನೀಡಿದ್ದ 265 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಭಾರತ ತಂಡಕ್ಕೆ ಶೆಫಾಲಿ ವರ್ಮಾ(Shafali Verma) ಹಾಗೂ ಯಶ್ತಿಕಾ ಭಾಟಿಯಾ ಬಾರಿಸಿದ ಚೊಚ್ಚಲ ಅರ್ಧಶತಕ ಹಾಗೂ ಕೊನೆಯಲ್ಲಿ ಸ್ನೆಹ್ ರಾಣಾ ಹಾಗೂ ಜೂಲನ್‌ ಗೋಸ್ವಾಮಿ ಬಾರಿಸಿದ ಸಮಯೋಚಿತ ಬ್ಯಾಟಿಂಗ್‌ ನೆರವಿನಿಂದ ಭಾರತ ರೋಚಕ ಗೆಲುವು ದಾಖಲಿಸಿತು. 

Team India Tour England 2022ರಲ್ಲಿ ಇಂಗ್ಲೆಂಡ್‌ನಲ್ಲಿ 1 ಟೆಸ್ಟ್‌ ಆಡಲಿದೆ ಟೀಂ ಇಂಡಿಯಾ..!

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ ತಂಡವು ಬೆಥ್ ಮೂನಿ(52 ರನ್ 64 ಎಸೆತ) ಹಾಗೂ ಗಾರ್ಡ್ನರ್‌(67 ರನ್‌ 62 ಎಸೆತ) ಬಾರಿಸಿದ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ 9 ವಿಕೆಟ್ ಕಳೆದುಕೊಂಡು 264 ರನ್‌ ಕಲೆಹಾಕಿತ್ತು. ಭಾರತ ಪರ ಜೂಲನ್ ಗೋಸ್ವಾಮಿ(Julan Goswami)(37/3) ಹಾಗೂ ವಸ್ತ್ರಾಕರ್(46/3) ತಲಾ 3 ವಿಕೆಟ್ ಕಬಳಿಸುವ ಮೂಲಕ ಆಸೀಸ್‌ ರನ್‌ ವೇಗಕ್ಕೆ ಕಡಿವಾಣ ಹಾಕಿದರು.

ಈ ಗುರಿ ಬೆನ್ನತ್ತಿದ ಭಾರತೀಯ ಮಹಿಳಾ ತಂಡಕ್ಕೆ ಮೊದಲ ವಿಕೆಟ್‌ಗೆ ಮಂಧನಾ ಹಾಗೂ ಶೆಫಾಲಿ ವರ್ಮಾ 22 ರನ್‌ಗಳ ಜತೆಯಾಟ ನಿಭಾಯಿಸಿದರು. ಇದಾದ ಬಳಿಕ ಶಫಾಲಿ ಹಾಗೂ ಭಾಟಿಯಾ 64 ರನ್‌ಗಳ ಜತೆಯಾಟ ನಿಭಾಯಿಸುವ ಮೂಲಕ ತಂಡಕ್ಕೆ ಆಸರೆಯಾದರು. ಇದಾದ ಬಳಿಕ ಮಧ್ಯಮ ಕ್ರಮಾಂಕ ಮತ್ತೊಮ್ಮೆ ದಿಢೀರ್ ಕುಸಿತ ಕಂಡಿತು. ಆದರೆ ಕೆಳ ಮಧ್ಯಮ ಕ್ರಮಾಂಕದಲ್ಲಿ ದೀಪ್ತಿ ಶರ್ಮಾ(31) ಹಾಗೂ ಸ್ನೆಹ್ ರಾಣಾ(30) ಉಪಯುಕ್ತ ರನ್‌ ಕಾಣಿಕೆ ನೀಡುವ ಮೂಲಕ ತಂಡಕ್ಕೆ ಆಸರೆಯಾದರು

Game. Over. pic.twitter.com/JEZff6viyK

— cricket.com.au (@cricketcomau)

ರೋಚಕತೆ ಹೆಚ್ಚಿಸಿದ ಕೊನೆಯ ಓವರ್‌: ಪಂದ್ಯ ಗೆಲ್ಲಲು ಕೊನೆಯ ಕ್ಷಣದಲ್ಲಿ ಸ್ನೆಹ್‌ ರಾಣಾ ವಿಕೆಟ್ ಕೈಚೆಲ್ಲಿದರು. ಕೊನೆಯ ಓವರ್‌ನಲ್ಲಿ ಭಾರತ ಗೆಲ್ಲಲು 4 ರನ್‌ಗಳ ಅಗತ್ಯವಿತ್ತು. ಕೊನೆಯ ಓವರ್‌ನ ಮೂರನೇ ಎಸೆತದಲ್ಲಿ ಜೂಲನ್‌ ಗೋಸ್ವಾಮಿ ಬೌಂಡರಿ ಬಾರಿಸುವ ಮೂಲಕ ಭಾರತ ತಂಡಕ್ಕೆ ರೋಚಕ ಗೆಲುವು ತಂದುಕೊಂಡರು.

2017ರ ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡವು ಏಕದಿನ ಕ್ರಿಕೆಟ್‌ನಲ್ಲಿ ಕೊನೆಯ ಬಾರಿಗೆ ಸೋಲು ಕಂಡಿತ್ತು. ಇದಾದ ಬಳಿಕ ಸತತ 26 ಏಕದಿನ ಪಂದ್ಯಗಳಲ್ಲಿ ಆಸೀಸ್‌ ಮಹಿಳಾ ಕ್ರಿಕೆಟ್‌ ತಂಡವು ಗೆಲುವಿನ ನಾಗಾಲೋಟ ಮುಂದುವರೆಸಿತ್ತು. ಇದೀಗ ಮಿಥಾಲಿ ಪಡೆ ಕಾಂಗರೂಗಳ ಗೆಲುವಿನ ವಿಜಯಯಾತ್ರೆಗೆ ಬ್ರೇಕ್‌ ಹಾಕಿದೆ.

click me!