
ವಿಶಾಖಪಟ್ಟಣ (ಡಿ.6): ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಎದುರಿಸಿದ ಅವಮಾನಕರ ಸರಣಿ ಸೋಲಿಗೆ ಟೀಮ್ ಇಂಡಿಯಾ ಏಕದಿನ ಸರಣಿಯಲ್ಲಿ ಸೇಡು ತೀರಿಸಿಕೊಂಡಿದೆ. ಶನಿವಾರ ವಿಶಾಖಪಟ್ಟಣದಲ್ಲಿ ನಡೆದ ಮೂರು ಪಂದ್ಯಗಳ ಏಕದಿನ ಸರಣಿಯ 3ನೇ ಹಾಗೂ ಅಂತಿಮ ಪಂದ್ಯದಲ್ಲಿ ಅಧಿಕಾರಯುತ ಪ್ರದರ್ಶನ ನೀಡಿದ ಟೀಮ್ ಇಂಡಿಯಾ, ಯಶಸ್ವಿ ಜೈಸ್ವಾಲ್ ಅವರ ಆಕರ್ಷಕ ಶತಕದೊಂದಿಗೆ 9 ವಿಕೆಟ್‌ಗಳಿಂದ ದಕ್ಷಿಣ ಆಫ್ರಿಕಾವನ್ನು ಸೋಲಿಸಿದೆ. ಆ ಮೂಲಕ ಮೂರು ಪಂದ್ಯಗಳ ಸರಣಿಯನ್ನು 2-1 ರಿಂದ ಗೆದ್ದುಕೊಂಡಿದೆ. ಮೊದಲ ಎರಡು ಏಕದಿನ ಪಂದ್ಯಗಳಲ್ಲಿ ಭಾರತಕ್ಕೆ ಸವಾಲಾಗಿದ್ದ ದಕ್ಷಿಣ ಆಫ್ರಿಕಾ ಮೂರನೇ ಏಕದಿನ ಪಂದ್ಯದಲ್ಲಿ ಭಾರತದ ಶಿಸ್ತಿನ ಆಟದ ಮುಂದೆ ಹೆಚ್ಚೇನೂ ಆಟವಾಡಲು ಸಾಧ್ಯವಾಗಲಿಲ್ಲ.
ಎಸಿಎ-ವಿಡಿಸಿಎ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ, ಅನುಭವಿ ಆರಂಭಿಕ ಆಟಗಾರ ಕ್ವಿಂಟನ್ ಡಿ ಕಾಕ್ (106 ರನ್, 89 ಎಸೆತ, 8 ಬೌಂಡರಿ, 6 ಸಿಕ್ಸರ್) ನೆರವಿನಿಂದ 47.5 ಓವರ್‌ಗಳಲ್ಲಿ 270 ರನ್‌ಗೆ ಆಲೌಟ್ ಆಯಿತು. ಪ್ರತಿಯಾಗಿ ಟೀಮ್ ಇಂಡಿಯಾ ಯಶಸ್ವಿ ಜೈಸ್ವಾಲ್ (116* ರನ್, 121 ಎಸೆತ, 12 ಬೌಂಡರಿ, 2 ಸಿಕ್ಸರ್) ಶತಕ ಮಾತ್ರವಲ್ಲದೆ, ರೋಹಿತ್ ಶರ್ಮ (75 ರನ್, 73 ಎಸೆತ, 7 ಬೌಂಡರಿ, 3 ಸಿಕ್ಸರ್) ಹಾಗೂ ವಿರಾಟ್ ಕೊಹ್ಲಿ (65*ರನ್, 45 ಎಸೆತ, 6 ಬೌಂಡರಿ, 3 ಸಿಕ್ಸರ್) ಸ್ಪೋಟಕ ಅರ್ಧಶತಕಗಳ ನೆರವಿನಿಂದ ಇನ್ನೂ 61 ಎಸೆತಗಳು ಬಾಕಿ ಇರುವಂತೆಯೇ 39.5 ಓವರ್‌ಗಳಲ್ಲಿ1 ವಿಕೆಟ್‌ಗೆ 271 ರನ್ ಬಾರಿಸಿ ಗೆಲುವು ಕಂಡಿತು.
ಬರೋಬ್ಬರಿ 20 ಪಂದ್ಯಗಳ ಬಳಿಕ ಭಾರತ ಇಲ್ಲಿ ಟಾಸ್ ಗೆಲುವು ಕಂಡಿತ್ತು. ಟಾಸ್ ಗೆದ್ದ ಬೆನ್ನಲ್ಲಿಯೇ ಬೌಲಿಂಗ್ ಆಯ್ಕೆ ಮಾಡಿಕೊಂಡ ಕೆಎಲ್ ರಾಹುಲ್ ಅದರಲ್ಲಿ ಯಶಸ್ವಿಯೂ ಆದರು. ದಕ್ಷಿಣ ಆಫ್ರಿಕಾವನ್ನು 270 ರನ್‌ಗೆ ಕಟ್ಟಿಹಾಕಿದ್ದು ತಂಡಕ್ಕೆ ಗೆಲುವಿನ ವಿಶ್ವಾಸ ಮೂಡಿಸಿತ್ತು. 2ನೇ ಇನ್ನಿಂಗ್ಸ್‌ನಲ್ಲಿ ಪಿಚ್ ಬ್ಯಾಟಿಂಗ್‌ಗೆ ಇನ್ನಷ್ಟು ಸಹಾಯ ಮಾಡಿತು.
ಜೈಸ್ವಾಲ್ ಹಾಗೂ ರೋಹಿತ್ ಶರ್ಮ ಆರಂಭದಲ್ಲಿ ದಕ್ಷಿಣ ಆಫ್ರಿಕಾ ಬೌಲರ್‌ಗಳಿಗೆ ಕೊಂಚ ಮರ್ಯಾದೆ ನೀಡಿದರೂ, ಒಮ್ಮೆ ಲಯ ಕಂಡುಕೊಂಡ ಬಳಿಕ ತಮ್ಮ ಎಂದಿನ ಆಟವಾಡಲು ಆರಂಭಿಸಿದರು. ತಮ್ಮ ಟ್ರೇಡ್‌ಮಾರ್ಕ್ ಪುಲ್‌ಶಾಟ್‌ಗಳನ್ನು ಲೀಲಾಜಾಲವಾಗಿ ಬಾರಿಸಿದ ರೋಹಿತ್ ಶರ್ಮ ಸಲೀಸಾಗಿ ಶತಕ ಬಾರಿಸುವ ಅವಕಾಶ ಹೊಂದಿದ್ದರು. ಆದರೆ, ಕೇಶವ್ ಮಹಾರಾಜ್ ಇವರ ಆಸೆಯನ್ನು ಭಗ್ನ ಮಾಡಿದರು.
ಬಳಿಕ ಕ್ರೀಸ್‌ಗೆ ಬಂದ ವಿರಾಟ್ ಕೊಹ್ಲಿ, ಜೈಸ್ವಾಲ್ ಎದುರಿಗೆ ಇದ್ದ ಕೆಲಸವನ್ನು ಇನ್ನಷ್ಟು ಸುಲಣ ಮಾಡಿದರು. ಒಮ್ಮೆ 50 ರನ್ ಗಡಿ ದಾಟಿದ ಬಳಿಕ ಟಿ20 ಮೋಡ್‌ಗೆ ಬದಲಾದ ಯಶಸ್ವಿ ಜೈಸ್ವಾಲ್ ಚೊಚ್ಚಲ ಏಕದಿನ ಶತಕ ಬಾರಿಸಲು ಯಶ ಕಂಡರು. ಇನ್ನೊಂದಷ್ಟು ರನ್ ಇದ್ದಿದ್ದರೆ, ಬಹುಶಃ ಹ್ಯಾಟ್ರಿಕ್ ಶತಕ ಬಾರಿಸುವ ಅವಕಾಶ ಕೊಹ್ಲಿ ಪಾಲಿಗೂ ಇತ್ತ. ದಕ್ಷಿಣ ಆಫ್ರಿಕಾದ ಬೌಲರ್‌ಗಳು ದುರ್ಬಲವಾಗಿ ಕಂಡಿದ್ದರಿಂದ ಸರಾಗವಾಗಿ ಬೌಂಡರಿಗಳು ಬರುತ್ತಿದ್ದವು.
ಇದು ನಾಯಕನಾಗಿ ಕೆಎಲ್ ರಾಹುಲ್ ಅವರ 2ನೇ ಏಕದಿನ ಸರಣಿ ಗೆಲುವು ಎನಿಸಿದೆ. ಇದಕ್ಕೂ ಮುನ್ನ ದಕ್ಷಿಣ ಆಫ್ರಿಕಾ ವಿರುದ್ಧವೇ 2023ರಲ್ಲಿ ಏಕದಿನ ಸರಣಿ ಗೆಲುವು ಕಂಡಿದ್ದರು.
ಟೆಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾ, ಏಕದಿನದಲ್ಲಿ ಭಾರತ ಗೆಲುವು ಕಂಡಿದೆ. ಒಟ್ಟಾರೆ ಭಾರತ-ದಕ್ಷಿಣ ಆಫ್ರಿಕಾ ಸರಣಿಗಳಲ್ಲಿ ವಿನ್ನರ್ ಯಾರು ಅನ್ನೋದನ್ನ 5 ಪಂದ್ಯಗಳ ಟಿ20 ಸರಣಿ ನಿರ್ಧಾರ ಮಾಡಲಿದೆ. ಟಿ20 ಸರಣಿ ಡಿ.9 (ಮಂಗಳವಾರ), ಡಿ. 11 (ಗುರುವಾರ) ಡಿ. 14 (ಭಾನುವಾರ), ಡಿ. 17 (ಬುಧವಾರ) ಹಾಗೂ ಡಿ.19 (ಶುಕ್ರವಾರ) ನಿಗದಿಯಾಗಿದೆ. ಮೊದಲ ಪಂದ್ಯ ಒಡಿಶಾದ ಕಟಕ್‌ನಲ್ಲಿ ನಡೆಯಲಿದ್ದರೆ, ನಂತರದ 4 ಪಂದ್ಯಗಳು ಪಂಜಾಬ್‌ನ ಮಲ್ಲನ್‌ಪುರ, ಹಿಮಾಚಲ ಪ್ರದೇಶ ಧರ್ಮಶಾಲಾ, ಉತ್ತರ ಪ್ರದೇಶದ ಲಕ್ನೋ ಹಾಗೂ ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆಯಲಿದೆ. ಇದೇ ಸಮಯದಲ್ಲಿ ಐಪಿಎಲ್ ಹರಾಜು ಕೂಡ ನಡೆಯಲಿರುವ ಕಾರಣ ಈ ಸರಣಿ ಕುತೂಹಲ ಮೂಡಿಸಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.