ಮಹಿಳಾ ವಿಶ್ವಕಪ್ ಫೈನಲ್: ಮಳೆ ತಂದಿಟ್ಟ ಹೊಸ ಟ್ವಿಸ್ಟ್! ಆಯೋಜಕರಿಂದ ಮಹತ್ವದ ಅಪ್‌ಡೇಟ್

Published : Nov 02, 2025, 04:03 PM IST
Rain Delay Toss for IND vs SA Women's World Cup 2025 Final

ಸಾರಾಂಶ

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮಹಿಳಾ ಏಕದಿನ ವಿಶ್ವಕಪ್ ಫೈನಲ್‌ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದೆ. ಪಂದ್ಯಕ್ಕೆ ಮೀಸಲು ದಿನವಿದ್ದು, ಎರಡೂ ದಿನ ಆಟ ಸಾಧ್ಯವಾಗದಿದ್ದರೆ ತಂಡಗಳನ್ನು ಜಂಟಿ ವಿಜೇತರೆಂದು ಘೋಷಿಸುವ ನಿಯಮವಿದೆ. 

ನವಿ ಮುಂಬೈ: ಭಾರತ-ದಕ್ಷಿಣ ಆಫ್ರಿಕಾ ಮಹಿಳಾ ಏಕದಿನ ವಿಶ್ವಕಪ್ ಫೈನಲ್‌ ಪಂದ್ಯಕ್ಕೆ ಆರಂಭದಲ್ಲೇ ಮಳೆ ಅಡ್ಡಿಪಡಿಸಿದೆ. ಮಳೆಯಿಂದಾಗಿ ಪಂದ್ಯದ ಟಾಸ್ ಇನ್ನೂ ಆಗಿಲ್ಲ. 2.30ಕ್ಕೆ ಟಾಸ್ ಆಗಬೇಕಿತ್ತು. ಆದರೆ, ಆಗಾಗ ಸುರಿಯುತ್ತಿರುವ ಮಳೆಯಿಂದಾಗಿ ಔಟ್‌ಫೀಲ್ಡ್ ಒದ್ದೆಯಾಗಿದ್ದು, 3 ಗಂಟೆಗೆ ಟಾಸ್ ನಡೆಯಲಿದೆ ಎಂದು ಅಪ್‌ಡೇಟ್ ಸಿಕ್ಕಿತ್ತು. ಆದರೆ ಟಾಸ್‌ಗೂ ಮುನ್ನ ಮತ್ತೆ ಜಿಟಿಜಿಟಿ ಮಳೆ ಸುರಿಯುತ್ತಿರುವುದರಿಂದಾಗಿ ಟಾಸ್ ಮತ್ತಷ್ಟು ತಡವಾಗಲಿದೆ. ಹೀಗಿರುವಾಗಲೇ ಮತ್ತೊಂದು ಮಹತ್ವದ ಅಪ್‌ಡೇಟ್ ಸಿಕ್ಕಿದೆ.

ಕಟ್ ಆಫ್ ಟೈಮ್ ನಿಗದಿ ಮಾಡಿದ ಆಯೋಜಕರು

ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯ ನಾಕೌಟ್ ಪಂದ್ಯಗಳು ಅಂದರೆ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳಿಗೆ ಹೆಚ್ಚುವರಿ ಎರಡು ಗಂಟೆಗಳನ್ನು ಮೀಸಲಿಡಲಾಗಿದೆ. ಇನ್ನು ಇದಷ್ಟೇ ಅಲ್ಲದೇ ಮೀಸಲು ದಿನವನ್ನು ಕಾಯ್ದಿರಿಸಲಾಗಿದೆ. ಒಂದು ವೇಳೆ ಇಂದು ನಿರಂತರವಾಗಿ ಮಳೆ ಸುರಿಯುತ್ತಲೇ ಇದ್ದರೇ ಇಂದು ರಾತ್ರಿ 9.08 ಗಂಟೆಯವರೆಗೂ ಕಟ್‌ ಆಫ್ ಟೈಮ್ ನಿಗದಿ ಮಾಡಲಾಗಿದೆ. ಒಂದು ವೇಳೆ 9.08 ಗಂಟೆಗೆ ಪಂದ್ಯ ಆರಂಭವಾದರೇ ತಲಾ 20 ಓವರ್‌ಗಳ ಪಂದ್ಯ ನಡೆಯಲಿದೆ. ಆಯೋಜಕರು ಸಾಧ್ಯವಾದಷ್ಟು ಮೊದಲ ದಿನವೇ ಫಲಿತಾಂಶ ತರಲು ಪ್ರಯತ್ನ ಮಾಡುತ್ತಾರೆ. ಇದು ಸಾಧ್ಯವಾಗದಿದ್ದರೇ, ಮೀಸಲು ದಿನವಾದ ನಾಳೆ ಪಂದ್ಯವನ್ನು ಮುಂದುವರೆಸಲಿದ್ದಾರೆ.

 

ವಿಶ್ವಕಪ್‌ನಲ್ಲಿ ಯಾರು ಕಿರೀಟ ಗೆದ್ದರೂ ಮಹಿಳಾ ಕ್ರಿಕೆಟ್‌ಗೆ ಹೊಸ ಚಾಂಪಿಯನ್ ಸಿಗಲಿದ್ದಾರೆ ಎಂಬುದು ಇಂದಿನ ಫೈನಲ್‌ನ ವಿಶೇಷತೆ. ಇಂಗ್ಲೆಂಡ್ ಅಥವಾ ಆಸ್ಟ್ರೇಲಿಯಾ ಇಲ್ಲದೆ ಮಹಿಳಾ ಏಕದಿನ ವಿಶ್ವಕಪ್ ಫೈನಲ್ ನಡೆಯುತ್ತಿರುವುದು ಇದೇ ಮೊದಲು. ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಭಾರತಕ್ಕೆ ಇದು ಮೂರನೇ ಫೈನಲ್. ಭಾರತ ಈ ಹಿಂದೆ 2005 ಮತ್ತು 2017ರಲ್ಲಿ ಫೈನಲ್ ಆಡಿತ್ತು. 2005ರಲ್ಲಿ ಆಸೀಸ್ ಮುಂದೆ ಶರಣಾದರೆ, 2017ರಲ್ಲಿ ಗೆಲುವಿನ ಸನಿಹದಲ್ಲಿ ಇಂಗ್ಲೆಂಡ್ ವಿರುದ್ಧ 9 ರನ್‌ಗಳಿಂದ ಸೋಲು ಕಂಡಿತ್ತು. ಇನ್ನೊಂದೆಡೆ ದಕ್ಷಿಣ ಆಫ್ರಿಕಾಗೆ ಇದು ಮೊದಲ ಫೈನಲ್ ಆಗಿದೆ.

ಭಾರತದ ನಿರೀಕ್ಷೆಗಳು

ಶಫಾಲಿ ವರ್ಮಾ ಮತ್ತು ಸ್ಮೃತಿ ಮಂಧಾನ ಉತ್ತಮ ಆರಂಭ ನೀಡಿದರೆ ಭಾರತಕ್ಕೆ ಬ್ಯಾಟಿಂಗ್ ಹಾದಿ ಸುಲಭವಾಗಲಿದೆ. ಮಧ್ಯಮ ಕ್ರಮಾಂಕದಲ್ಲಿ ಜೆಮಿಮಾ, ಹರ್ಮನ್‌ಪ್ರೀತ್ ಕೌರ್, ದೀಪ್ತಿ ಶರ್ಮಾ ಮತ್ತು ರಿಚಾ ಘೋಷ್ ಬಲವಾಗಿದ್ದಾರೆ. ಕ್ರಾಂತಿ ಗೌಡ್, ಶ್ರೀ ಚರಣಿ ಮತ್ತು ರೇಣುಕಾ ಸಿಂಗ್ ಅವರ ಬೌಲಿಂಗ್ ಪ್ರದರ್ಶನ ಕೂಡ ಫೈನಲ್‌ನಲ್ಲಿ ನಿರ್ಣಾಯಕವಾಗಲಿದೆ. ಲಾರಾ ವೊಲ್ವಾರ್ಟ್, ನಡಿನ್ ಡಿ ಕ್ಲರ್ಕ್, ಮರಿಜಾನ್ನೆ ಕಪ್ ಮತ್ತು ಟಜ್ಮಿನ್ ಬ್ರಿಟ್ಸ್ ದಕ್ಷಿಣ ಆಫ್ರಿಕಾದ ಭರವಸೆಯಾಗಿದ್ದಾರೆ. ಎರಡನೇ ಇನ್ನಿಂಗ್ಸ್‌ನಲ್ಲಿ ಬೌಲಿಂಗ್ ಮಾಡುವ ತಂಡಕ್ಕೆ ಇಬ್ಬನಿ ಸವಾಲಾಗುವುದರಿಂದ ಟಾಸ್ ನಿರ್ಣಾಯಕವಾಗಲಿದೆ.

ಪಂದ್ಯಕ್ಕೆ ಮಳೆ ಅಡ್ಡಿಯಾದರೇ ಮುಂದೇನು?

ಒಂದು ವೇಳೆ ಪಂದ್ಯಕ್ಕೆ ಮಳೆ ಅಡ್ಡಿಯಾಗಿ, ಭಾನುವಾರ ಪಂದ್ಯ ಮುಕ್ತಾಯಗೊಳಿಸಲು ಸಾಧ್ಯವಾಗದೆ ಇದ್ದರೆ ಪಂದ್ಯ ಮೀಸಲು ದಿನಕ್ಕೆ ಕಾಲಿಡಲಿದೆ. ಭಾನುವಾರ ಪಂದ್ಯ ಎಲ್ಲಿ ಸ್ಥಗಿತಗೊಂಡಿರುತ್ತದೆಯೋ, ಸೋಮವಾರ ಅಲ್ಲಿಂದಲೇ ಮುಂದುವರಿಯಲಿದೆ. ಒಂದು ವೇಳೆ ಮೀಸಲು ದಿನದಂದೂ ಪಂದ್ಯ ಮುಗಿಸಲು ಸಾಧ್ಯವಾಗದೆ ಇದ್ದರೆ, ಆಗ ಎರಡೂ ತಂಡಗಳನ್ನು ಜಂಟಿ ವಿಜೇತರು ಎಂದು ಘೋಷಿಸಲಾಗುತ್ತದೆ.

ಎಲ್ಲಾ ಟಿಕೆಟ್ ಸೋಲ್ಡೌಟ್:

ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಟೀಂ ಇಂಡಿಯಾವನ್ನು ಹುರಿದುಂಬಿಸಲು ಸಾಗರೋಪಾದಿಯಲ್ಲಿ ಅಭಿಮಾನಿಗಳು ಮೈದಾನಕ್ಕೆ ಆಗಮಿಸಿದ್ದಾರೆ. ಮಳೆಯ ಹೊರತಾಗಿಯೂ ಅಭಿಮಾನಿಗಳ ಉತ್ಸಾಹಕ್ಕೆ ಧಕ್ಕೆಯಾಗಿಲ್ಲ. ಎಲ್ಲಾ ಟಿಕೆಟ್‌ಗಳು ಸೋಲ್ಡೌಟ್ ಆಗಿದ್ದು, ಬ್ಲಾಕ್ ಮಾರ್ಕೆಟ್‌ನಲ್ಲಿ ಮ್ಯಾಚ್ ಟಿಕೆಟ್‌ಗಳ ಬೆಲೆ ಗಗನಕ್ಕೇರಿದೆ. 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೊನೆಗೂ ಮದುವೆಗೆ ರೆಡಿ ಆದ್ರಾ ಸ್ಮೃತಿ ಮಂಧನಾ-ಪಲಾಶ್‌ ಮುಚ್ಚಾಲ್‌?
ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ