
ಬೆಂಗಳೂರು(ಜೂ.19): ಕಳೆದ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಅವರ ಅಮೋಘ ಬ್ಯಾಟಿಂಗ್ ಪ್ರದರ್ಶನದಿಂದಾಗಿ ಭಾರತ ಹಾಗೂ ದಕ್ಷಿಣ ಆಫ್ರಿಕಾ (India vs South Africa) ತಂಡಗಳ ನಡುವಿನ 4ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ 5 ಪಂದ್ಯಗಳ ಟಿ20 ಸರಣಿಯಲ್ಲಿ ಉಭಯ ತಂಡಗಳು 2-2 ಅಂತರದಲ್ಲಿ ಸಮಬಲ ಸಾಧಿಸಿದ್ದು, ಇದೀಗ ಎಲ್ಲರ ಚಿತ್ತ ಇಂದು ಸಂಜೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ 5ನೇ ಹಾಗೂ ನಿರ್ಣಾಯಕ ಟಿ20 ಪಂದ್ಯದ ಮೇಲೆ ನೆಟ್ಟಿದೆ. ಈ ಪಂದ್ಯದಲ್ಲಿ ಹರಿಣಗಳ ಪಡೆಯನ್ನು ಭೇಟೆಯಾಡಿ ಇತಿಹಾಸ ನಿರ್ಮಿಸಲು ರಿಷಭ್ ಪಂತ್ ನೇತೃತ್ವದ ಭಾರತದ ಹುಲಿಗಳು ಸಜ್ಜಾಗಿವೆ.
ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ಆರಂಭಿಕ ಎರಡು ಪಂದ್ಯಗಳಲ್ಲಿ ಭಾರತ ಸೋಲನುಭವಿಸಿತ್ತು. ಆದರೆ ಕಳೆದೆರಡು ಪಂದ್ಯಗಳಲ್ಲಿ ಗೆಲುವಿನ ಲಯಕ್ಕೆ ಮರಳಿರುವ ರಿಷಭ್ ಪಂತ್ (Rishabh Pant) ನೇತೃತ್ವದ ಭಾರತ ಹ್ಯಾಟ್ರಿಕ್ ಗೆಲುವಿನೊಂದಿಗೆ ಸರಣಿ ಕೈವಶಪಡಿಸಿಕೊಳ್ಳಲು ಎದುರು ನೋಡುತ್ತಿದೆ. ಈ ಪಂದ್ಯ ಗೆದ್ದರೆ ಭಾರತ, ದಕ್ಷಿಣ ಆಫ್ರಿಕಾ ವಿರುದ್ಧ ತನ್ನ ನೆಲದಲ್ಲಿ ಮೊದಲ ಟಿ20 ಸರಣಿ ಗೆದ್ದಂತಾಗುತ್ತದೆ. ಇದುವರೆಗೂ ಟೀಂ ಇಂಡಿಯಾವೂ ತವರಿನಲ್ಲಿ ದಕ್ಷಿಣ ಆಫ್ರಿಕಾ ಎದುರು ಟಿ20 ಸರಣಿಯನ್ನು ಜಯಿಸಿಲ್ಲ. ಇದಕ್ಕೂ ಮೊದಲು 2015-16ರಲ್ಲಿ ನಡೆದಿದ್ದ 3 ಪಂದ್ಯಗಳ ಸರಣಿಯಲ್ಲಿ ದಕ್ಷಿಣ ಆಫ್ರಿಕಾ 2-0 ಅಂತರದಲ್ಲಿ ಗೆದ್ದಿದ್ದರೆ, 2019-20ರ ಸರಣಿ 1-1ರಿಂದ ಸಮಬಲಗೊಂಡಿತ್ತು.
ಇನ್ನು ಟಿ20 ಕ್ರಿಕೆಟ್‌ನಲ್ಲಿ ಉಭಯ ತಂಡಗಳ ಮುಖಾಮುಖಿಯನ್ನು ಗಮನಿಸುವುದಾದರೇ, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಒಟ್ಟು 21 ಬಾರಿ ಮುಖಾಮುಖಿಯಾಗಿದ್ದು, ಈ ಪೈಕಿ ಆತಿಥೇಯ ಭಾರತ ತಂಡವು 11 ಪಂದ್ಯಗಳಲ್ಲಿ ಗೆಲುವನ್ನು ದಾಖಲಿಸಿದೆ. ಇನ್ನು ದಕ್ಷಿಣ ಆಫ್ರಿಕಾ ತಂಡವು 8 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದೆ. ಎರಡು ಪಂದ್ಯಗಳಲ್ಲಿ ಯಾವುದೇ ಫಲಿತಾಂಶ ಹೊರಬಿದ್ದಿಲ್ಲ. ಇನ್ನು ಭಾರತದಲ್ಲಿ ಉಭಯ ತಂಡಗಳು 10 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಈ ಪೈಕಿ ಟೀಂ ಇಂಡಿಯಾ 3 ಪಂದ್ಯಗಳಲ್ಲಿ ಗೆಲುವು ದಾಖಲಿಸಿದ್ದರೇ, ಪ್ರವಾಸಿ ದಕ್ಷಿಣ ಆಫ್ರಿಕಾ ತಂಡವು 5 ಪಂದ್ಯಗಳನ್ನು ಜಯಿಸಿದೆ. ಇನ್ನೆರಡು ಪಂದ್ಯಗಳಲ್ಲಿ ಫಲಿತಾಂಶ ಹೊರಬಿದ್ದಿರಲಿಲ್ಲ.
Weather Forecast: ಇಂಡೋ-ದ. ಆಫ್ರಿಕಾ ನಡುವಿನ ಬೆಂಗಳೂರಿನ ಪಂದ್ಯಕ್ಕೆ ಮಳೆ ಅಡ್ಡಿಯಾಗುತ್ತಾ?
ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ 5ನೇ ಪಂದ್ಯದಲ್ಲಿ ಹಲವು ಮೈಲಿಗಲ್ಲು ಸ್ಥಾಪನೆಯಾಗುವ ಸಾಧ್ಯತೆಯಿದೆ. ಬೆಂಗಳೂರಿನಲ್ಲಿ ನಡೆಯುತ್ತಿರುವ 5ನೇ ಟಿ20 ಪಂದ್ಯಕ್ಕೂ ಮುನ್ನ ಕೆಲವು ಇಂಟ್ರಿಸ್ಟಿಂಗ್ ಅಂಕಿ-ಅಂಶಗಳನ್ನು ನಿಮ್ಮ ಮುಂದಿಡುತ್ತಿದ್ದೇವೆ ನೋಡಿ..
ಸಿಕ್ಸ್ ಸೆಂಚುರಿಗೆ ಪಂತ್‌ಗೆ ಬೇಕಿದೆ ಇನ್ನೊಂದು ಸಿಕ್ಸ್: ಟೀಂ ಇಂಡಿಯಾ ಸ್ಪೋಟಕ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಮೂರು ಮಾದರಿಯ ಕ್ರಿಕೆಟ್‌ನಲ್ಲಿ ಇದುವರೆಗೂ 99 ಸಿಕ್ಸರ್ ಸಿಡಿಸಿದ್ದು, ಇನ್ನೊಂದು ಸಿಕ್ಸರ್ ಬಾರಿಸಿದರೇ ಪಂತ್ 100 ಅಂತಾರಾಷ್ಟ್ರೀಯ ಸಿಕ್ಸರ್ ಸಿಡಿಸಿದ ಸಾಧನೆ ಮಾಡಲಿದ್ದಾರೆ.
ನೂರನೇ ಟಿ20 ಪಂದ್ಯವನ್ನಾಡಲು ಮಿಲ್ಲರ್: ಕಿಲ್ಲರ್ ಮಿಲ್ಲರ್ ಖ್ಯಾತಿಯ ಡೇವಿಡ್ ಮಿಲ್ಲರ್, ಏಕಾಂಗಿಯಾಗಿ ದಕ್ಷಿಣ ಆಫ್ರಿಕಾ ತಂಡಕ್ಕೆ ಹಲವು ಪಂದ್ಯಗಳಲ್ಲಿ ಗೆಲುವು ತಂದುಕೊಟ್ಟಿದ್ದಾರೆ. ಭಾರತದ ಎದುರಿನ 5ನೇ ಟಿ20 ಪಂದ್ಯವು ಡೇವಿಡ್ ಮಿಲ್ಲರ್ ಪಾಲಿಗೆ ನೂರನೇ ಅಂತಾರಾಷ್ಟ್ರೀಯ ಟಿ20 ಪಂದ್ಯವೆನಿಸಲಿದೆ.
ಡುಮಿನಿ ದಾಖಲೆ ಹಿಂದಿಕ್ಕಲು ಡಿ ಕಾಕ್‌ಗೆ ಬೇಕಿದೆ 72 ರನ್: ದಕ್ಷಿಣ ಆಫ್ರಿಕಾ ಪರ ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ಗರಿಷ್ಟ ರನ್ ಬಾರಿಸಿದ ದಾಖಲೆ ಜೆಪಿ ಡುಮಿನಿ ಹೆಸರಿನಲ್ಲಿದೆ. ಡುಮಿನಿ ಒಟ್ಟು 1934 ರನ್ ಬಾರಿಸಿದ್ದು, ಈ ದಾಖಲೆ ಹಿಂದಿಕ್ಕಲು 1863 ರನ್ ಗಳಿಸಿರುವ ಕ್ವಿಂಟನ್ ಡಿ ಕಾಕ್‌ಗೆ 72 ರನ್‌ಗಳ ಅಗತ್ಯವಿದ್ದು, ಡಿ ಕಾಕ್ ಈ ಸಾಧನೆ ಮಾಡುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.
ಎರಡು ಮೈಲುಗಲ್ಲುಗಳ ಹೊಸ್ತಿಲ್ಲಲ್ಲಿ ಹಾರ್ದಿಕ್ ಪಾಂಡ್ಯ: ಟೀಂ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಮೂರು ಮಾದರಿಯ ಕ್ರಿಕೆಟ್‌ನಲ್ಲಿ ಇದುವರೆಗೂ 2488 ರನ್ ಬಾರಿಸಿದ್ದಾರೆ. ಇನ್ನು ಕೇವಲ 12 ರನ್ ಬಾರಿಸಿದರೇ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 2500 ರನ್ ಪೂರೈಸಲಿದ್ದಾರೆ. ಇನ್ನು ಹಾರ್ದಿಕ್ ಪಾಂಡ್ಯ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಇದುವರೆಗೂ 44 ಬೌಂಡರಿ ಬಾರಿಸಿದ್ದು, ಇನ್ನು ಕೇವಲ 6 ಬೌಂಡರಿ ಬಾರಿಸಿದರೇ 50 ಬೌಂಡರಿ ಬಾರಿಸಿದವರ ಕ್ಲಬ್ ಸೇರಲಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.