
ವಿಶಾಖಪಟ್ಟಣಂ: ತವರಿನಲ್ಲೇ ಎದುರಾದ ಟೆಸ್ಟ್ ಸರಣಿ ವೈಟ್‌ವಾಶ್‌ನ ಕಹಿ ನೆನಪನ್ನು ಮರೆಯಲು ಪ್ರಯತ್ನಿಸುತ್ತಿರುವ ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿ ಗೆಲ್ಲುವ ಕಾತರದಲ್ಲಿದೆ. ಪ್ರವಾಸಿ ತಂಡದ ವಿರುದ್ಧ ಕೆ.ಎಲ್.ರಾಹುಲ್ ನಾಯಕತ್ವದ ಭಾರತ ತಂಡ ಶನಿವಾರ 3ನೇ ಹಾಗೂ ಕೊನೆ ಏಕದಿನ ಪಂದ್ಯವಾಡಲಿದೆ. ಆರಂಭಿಕ 2 ಪಂದ್ಯಗಳ ಬಳಿಕ ಸರಣಿ 1-1 ಸಮಗೊಂಡಿದ್ದು, ಈ ಪಂದ್ಯದಲ್ಲಿ ಗೆಲ್ಲುವ ತಂಡ ಸರಣಿ ಕೈವಶಪಡಿಸಿಕೊಳ್ಳಲಿದೆ.
ರಾಂಚಿ ಹಾಗೂ ರಾಯ್ಪುರ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ್ದ ವಿರಾಟ್ ಕೊಹ್ಲಿ 3ನೇ ಪಂದ್ಯದಲ್ಲೂ ಅಬ್ಬರಿಸಬಲ್ಲರೇ ಎಂಬ ಕುತೂಹಲ ಅಭಿಮಾನಿಗಳಲ್ಲಿದೆ. ಅವರ ಜೊತೆ ರೋಹಿತ್ ಶರ್ಮಾ ಕೂಡಾ ಮತ್ತೊಂದು ಸ್ಫೋಟಕ ಇನ್ನಿಂಗ್ಸ್ ಕಟ್ಟುವ ವಿಶ್ವಾಸದಲ್ಲಿದ್ದು, ರೋ-ಕೊ ಶೋಗೆ ಸಾಕ್ಷಿಯಾಗಲು ವಿಶಾಖಪಟ್ಟಣದ ಕ್ರಿಕೆಟ್ ಅಭಿಮಾನಿಗಳು ಕಾತರಿಸುತ್ತಿದ್ದಾರೆ. ಇವರ ಜೊತೆಗೆ ಋತುರಾಜ್ ಗಾಯಕ್ವಾಡ್, ನಾಯಕ ರಾಹುಲ್ ಕೂಡಾ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದು, ನಿರ್ಣಾಯಕ ಪಂದ್ಯದಲ್ಲೂ ತಂಡದ ಕೈಹಿಡಿಯಬೇಕಿದೆ. ಆದರೆ ಯಶಸ್ವಿ ಜೈಸ್ವಾಲ್‌ರ ಕಳಪೆ ಆಟ ತಂಡಕ್ಕೆ ತಲೆನೋವಾಗಿದ್ದು, ಅವರು ಏಕದಿನ ತಂಡದಲ್ಲಿ ಸ್ಥಾನ ಭದ್ರಪಡಿಸಿಕೊಳ್ಳಬೇಕಿದ್ದರೆ ಈ ಪಂದ್ಯದಲ್ಲಿ ಮಿಂಚಲೇಬೇಕಿದೆ.
ಆರಂಭಿಕ 2 ಪಂದ್ಯಗಳಲ್ಲಿ ಭಾರತೀಯ ಬೌಲರ್‌ಗಳು ತಲಾ 330+ ರನ್ ಬಿಟ್ಟುಕೊಟ್ಟಿದ್ದು, ದ.ಆಫ್ರಿಕಾ ಬ್ಯಾಟರ್‌ಗಳನ್ನು ಕಟ್ಟಿಹಾಕಲು ವಿಫಲರಾಗಿದ್ದಾರೆ. ಹರ್ಷಿತ್ ರಾಣಾ, ಪ್ರಸಿದ್ಧ್ ಕೃಷ್ಣ, ಅರ್ಶ್‌ದೀಪ್ ಸಿಂಗ್ ಸೇರಿ ಬಹುತೇಕ ಎಲ್ಲಾ ಬೌಲರ್‌ಗಳೂ ದುಬಾರಿಯಾಗುತ್ತಿದ್ದಾರೆ. ಬುಮ್ರಾ, ಸಿರಾಜ್ ಅನುಪಸ್ಥಿತಿ ಕಾಡದಂತೆ ತಂಡಕ್ಕೆ ಸರಣಿ ಗೆಲ್ಲಿಸಿಕೊಡುವ ಹೊಣೆ ಈಗ ಯುವ ಬೌಲರ್‌ಗಳ ಮೇಲಿದೆ. ಆಲ್ರೌಂಡರ್‌ಗಳಾದ ಜಡೇಜಾ, ವಾಷಿಂಗ್ಟನ್ ಸುಂದರ್ ಕೂಡಾ ತಮ್ಮ ಸಾಮರ್ಥ್ಯ ಸಾಬೀತುಪಡಿಸಲೇಬೇಕಾದ ನಿರ್ಣಾಯಕ ಘಟ್ಟದಲ್ಲಿದ್ದಾರೆ. ಈ ಪಂದ್ಯದಲ್ಲಿ ಸುಂದರ್ ಬದಲು ತಿಲಕ್ ವರ್ಮಾ ಸ್ಥಾನ ಗಿಟ್ಟಿಸಿಕೊಳ್ಳಲೂಬಹುದು.
ಟೆಸ್ಟ್ ಸರಣಿ 2-0 ಅಂತರದಲ್ಲಿ ಗೆದ್ದಿದ್ದ ದ.ಆಫ್ರಿಕಾ ಏಕದಿನ ಸರಣಿಯಲ್ಲೂ ಅಮೋಘ ಆಟವಾಡಿದೆ. ಭಾರತವನ್ನು ಅದರದೇ ತವರಿನಲ್ಲಿ ಸೋಲಿಸುವ ಮೂಲಕ ತಮ್ಮ ತಾಕತ್ತು ಏನು ಎಂಬುದನ್ನು ತೋರಿಸಿಕೊಟ್ಟಿರುವ ದ.ಆಫ್ರಿಕಾ ಏಕದಿನ ಸರಣಿಯನ್ನೂ ಕೈವಶಪಡಿಸಿಕೊಳ್ಳುವ ವಿಶ್ವಾಸದಲ್ಲಿದೆ. ಏಡನ್ ಮಾರ್ಕ್‌ರಮ್, ಬವುಮಾ, ಡೆವಾಲ್ಡ್ ಬ್ರೆವಿಸ್, ಮ್ಯಾಥ್ಯೂ ಬ್ರೀಟ್ಸ್‌ಕೆ ಅಬ್ಬರದ ಆಟವಾಡುತ್ತಿದ್ದಾರೆ. ಮಾರ್ಕೊ ಯಾನ್ಸನ್ ಆಲ್ರೌಂಡ್ ಆಟ ತಂಡಕ್ಕೆ ನಿರ್ಣಾಯಕ ಎನಿಸಿಕೊಂಡಿದೆ.
ಪಂದ್ಯ ಆರಂಭ: ಮಧ್ಯಾಹ್ನ 1.30ಕ್ಕೆ
ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್, ಜಿಯೋಹಾಟ್‌ಸ್ಟಾರ್
ದ.ಆಫ್ರಿಕಾ ತಂಡ ಈವರೆಗೂ ಭಾರತದಲ್ಲಿ 6 ಬಾರಿ ಏಕದಿನ ಸರಣಿ ಆಡಿದ್ದು, ಒಮ್ಮೆ ಮಾತ್ರ ಗೆದ್ದಿದೆ. 2015-16ರ ಪ್ರವಾಸದಲ್ಲಿ ದ.ಆಫ್ರಿಕಾ 5 ಪಂದ್ಯಗಳ ಸರಣಿಯನ್ನು 3-2 ಅಂತರದಲ್ಲಿ ಗೆದ್ದಿತ್ತು. ಉಳಿದ 4 ಸರಣಿಗಳಲ್ಲಿ ಭಾರತ ಗೆದ್ದಿದ್ದು, ಒಂದು ಬಾರಿ ಸರಣಿ ಡ್ರಾಗೊಂಡಿದೆ. ಒಟ್ಟಾರೆ ಉಭಯ ತಂಡಗಳು 14 ಬಾರಿ ಸರಣಿ ಆಡಿದ್ದು, ಭಾರತ 7ರಲ್ಲಿ, ದ.ಆಫ್ರಿಕಾ 6ರಲ್ಲಿ ಜಯಗಳಿಸಿದೆ. ಒಂದು ಸರಣಿ ಡ್ರಾ ಆಗಿದೆ.
ಭಾರತ ತಂಡ ಕಳೆದ 40 ವರ್ಷಗಳಲ್ಲಿ ತವರಿನಲ್ಲಿ ಟೆಸ್ಟ್ ಹಾಗೂ ಏಕದಿನ ಸರಣಿ ಒಟ್ಟಿಗೇ ಸೋತಿಲ್ಲ. 1986-87ರಲ್ಲಿ ಪಾಕಿಸ್ತಾನ ವಿರುದ್ಧ ಭಾರತ ತಂಡ ತವರಿನ ಏಕದಿನ, ಟೆಸ್ಟ್ ಎರಡೂ ಸರಣಿಯಲ್ಲಿ ಸೋಲು ಕಂಡಿತ್ತು. ಈ ಬಾರಿ ದ.ಆಫ್ರಿಕಾ ಗೆದ್ದರೆ 4 ದಶಕಗಳಲ್ಲೇ ಪ್ರವಾಸಿ ತಂಡವೊಂದು ಭಾರತದಲ್ಲಿ ಒಟ್ಟಿಗೇ ಎರಡೂ ಸರಣಿ ಗೆದ್ದ ವಿಶೇಷ ದಾಖಲೆ ಬರೆಯಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.