
ಬ್ರಿಸ್ಬೇನ್: ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಶತಕವಿಲ್ಲ ಎಂಬ ಮುಜುಗರವನ್ನು ಇಂಗ್ಲೆಂಡ್ ಸೂಪರ್ ಸ್ಟಾರ್ ಜೋ ರೂಟ್ ಅಳಿಸಿಹಾಕಿದ್ದಾರೆ. ಆ್ಯಷಸ್ ಸರಣಿಯ ಎರಡನೇ ಟೆಸ್ಟ್‌ನಲ್ಲಿ ಶತಕ ಸಿಡಿಸಿದ ಜೋ ರೂಟ್ ಕೊನೆಗೂ ಕಾಂಗರೂ ನಾಡಿನಲ್ಲಿ ಟೆಸ್ಟ್ ಶತಕದ ಬರ ನೀಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಶತಕದೊಂದಿಗೆ ಮ್ಯಾಥ್ಯೂ ಹೇಡನ್, ಮೆಲ್ಬರ್ನ್ ಸ್ಟೇಡಿಯಂನಲ್ಲಿ ಬೆತ್ತಲಾಗುವ ಭೀತಿಯಿಂದ ಪಾರಾಗಿದ್ದಾರೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ ಇಂಗ್ಲೆಂಡ್ ಮೊದಲ ದಿನದಾಟದ ಅಂತ್ಯಕ್ಕೆ 9 ವಿಕೆಟ್ ನಷ್ಟಕ್ಕೆ 325 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿದೆ. 135 ರನ್ ಗಳಿಸಿದ ಜೋ ರೂಟ್ ಮತ್ತು 32 ರನ್ ಗಳಿಸಿದ ಜೋಫ್ರಾ ಆರ್ಚರ್ ಕ್ರೀಸ್‌ನಲ್ಲಿದ್ದಾರೆ. ಕೊನೆಯ ವಿಕೆಟ್ ಜೊತೆಯಾಟದಲ್ಲಿ ಇಬ್ಬರೂ 44 ಎಸೆತಗಳಲ್ಲಿ 64 ರನ್ ಸೇರಿಸಿದ್ದಾರೆ. ಇಂಗ್ಲೆಂಡ್ ಪರ ಆರಂಭಿಕ ಆಟಗಾರ ಝಾಕ್ ಕ್ರಾಲಿ 76 ರನ್ ಗಳಿಸಿದರೆ, ಹ್ಯಾರಿ ಬ್ರೂಕ್ 31 ರನ್ ಗಳಿಸಿದರು. ಆಸೀಸ್ ಪರ ಮಿಚೆಲ್ ಸ್ಟಾರ್ಕ್ ಸತತ ಎರಡನೇ ಟೆಸ್ಟ್‌ನಲ್ಲೂ ಐದು ವಿಕೆಟ್ ಪಡೆದರು.
ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಸೊನ್ನೆಗೆ ಔಟಾಗಿದ್ದ ರೂಟ್, ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ ಎಂಟು ರನ್ ಗಳಿಸಿ ಔಟಾಗಿದ್ದರು. ಆದರೆ ಎರಡನೇ ಟೆಸ್ಟ್‌ನಲ್ಲೇ ರೂಟ್ ಆಸೀಸ್ ನೆಲದಲ್ಲಿ ತಮ್ಮ ಮೊದಲ ಟೆಸ್ಟ್ ಶತಕವನ್ನು ಗಳಿಸಿದರು. 182 ಎಸೆತಗಳಲ್ಲಿ ರೂಟ್ ಮೂರಂಕಿ ಮೊತ್ತ ತಲುಪಿದರು. ಆಸೀಸ್ ನೆಲದಲ್ಲಿ 30ನೇ ಇನ್ನಿಂಗ್ಸ್‌ನಲ್ಲಿ ರೂಟ್ ಅವರ ಮೊದಲ ಶತಕ ಬಂದಿದೆ. ವೃತ್ತಿಜೀವನದ 40ನೇ ಟೆಸ್ಟ್ ಶತಕ ಗಳಿಸಿದ ರೂಟ್, ಸಚಿನ್ ತೆಂಡೂಲ್ಕರ್ ಅವರ 51 ಟೆಸ್ಟ್ ಶತಕಗಳ ದಾಖಲೆಗೆ ಮತ್ತೊಂದು ಹೆಜ್ಜೆ ಹತ್ತಿರವಾದರು.
ಈ ಬಾರಿ ರೂಟ್ ಆಸ್ಟ್ರೇಲಿಯಾದಲ್ಲಿ ಶತಕ ಗಳಿಸದಿದ್ದರೆ, ತಾನು ಮೆಲ್ಬೋರ್ನ್ ಮೈದಾನದಲ್ಲಿ ಬೆತ್ತಲೆಯಾಗಿ ಓಡುವುದಾಗಿ ಮಾಜಿ ಆಸೀಸ್ ಆರಂಭಿಕ ಆಟಗಾರ ಮ್ಯಾಥ್ಯೂ ಹೇಡನ್ ಈ ಹಿಂದೆ ಘೋಷಿಸಿದ್ದರು. ಆದರೆ, 54ನೇ ವಯಸ್ಸಿನಲ್ಲಿ ಜೈಲಿಗೆ ಹೋಗಲು ಇಷ್ಟವಿಲ್ಲದ ಕಾರಣ, ಆ ಘೋಷಣೆಯಿಂದ ಹಿಂದೆ ಸರಿಯುತ್ತಿರುವುದಾಗಿ ನಿನ್ನೆ ಹೇಳಿದ್ದರು. ಇದರ ಬೆನ್ನಲ್ಲೇ ರೂಟ್ ಆಸ್ಟ್ರೇಲಿಯಾದಲ್ಲಿ ತಮ್ಮ ಮೊದಲ ಶತಕವನ್ನು ಗಳಿಸಿದರು.
159 ಟೆಸ್ಟ್‌ಗಳಲ್ಲಿ 39 ಶತಕಗಳನ್ನು ಗಳಿಸಿದ್ದ ರೂಟ್‌ಗೆ ಈ ಹಿಂದೆ ಆಸ್ಟ್ರೇಲಿಯಾದಲ್ಲಿ ಒಂದೇ ಒಂದು ಶತಕ ಗಳಿಸಲು ಸಾಧ್ಯವಾಗಿರಲಿಲ್ಲ. ಆಸ್ಟ್ರೇಲಿಯಾದಲ್ಲಿ ಒಂಬತ್ತು ಅರ್ಧಶತಕಗಳನ್ನು ಗಳಿಸಿದ್ದ ರೂಟ್ ಅವರ ಗರಿಷ್ಠ ಸ್ಕೋರ್ 89 ರನ್‌ಗಳಾಗಿತ್ತು. ಅದನ್ನೇ ಇಂದು ಬ್ರಿಸ್ಬೇನ್‌ನಲ್ಲಿ ಮುರಿದು ಹೊಸ ದಾಖಲೆ ಬರೆದಿದ್ದಾರೆ.
2021ರಲ್ಲಿ ಕೇವಲ 18 ಟೆಸ್ಟ್ ಶತಕಗಳನ್ನು ಹೊಂದಿದ್ದ ರೂಟ್, ಕಳೆದ ನಾಲ್ಕು ವರ್ಷಗಳಲ್ಲಿ 21 ಶತಕಗಳನ್ನು ಬಾರಿಸಿದ್ದಾರೆ. ಟೆಸ್ಟ್‌ನಲ್ಲಿ 13,664 ರನ್ ಗಳಿಸಿರುವ ರೂಟ್, 15921 ರನ್‌ಗಳೊಂದಿಗೆ ಅಗ್ರಸ್ಥಾನದಲ್ಲಿರುವ ಭಾರತೀಯ ಬ್ಯಾಟಿಂಗ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿಯುವ ನಿರೀಕ್ಷೆಯಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.