ಅಂಡರ್-19 ಏಷ್ಯಾಕಪ್ ಸೆಮೀಸ್‌ನಲ್ಲಿ ಮತ್ತೆ ಗುಡುಗಿದ ಆರ್ಯವೀರ್ ಸೆಹ್ವಾಗ್; ಫೈನಲ್‌ನಲ್ಲಿ ಭಾರತ vs ಪಾಕಿಸ್ತಾನ ಫೈಟ್..!

Published : Nov 12, 2026, 05:16 PM IST
India U19 Asia Cup

ಸಾರಾಂಶ

ಅಂಡರ್‌-19 ಏಷ್ಯಾಕಪ್‌ ಟೂರ್ನಿಯಲ್ಲಿ ಅಫ್ಘಾನಿಸ್ತಾನವನ್ನು ಮಣಿಸಿ ಭಾರತ ಫೈನಲ್‌ಗೆ ಲಗ್ಗೆ ಇಟ್ಟಿದೆ. ಪ್ರಶಸ್ತಿ ಸುತ್ತಿನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ, ಫೈನಲ್ ಪಂದ್ಯದ ಕುತೂಹಲ ಹೆಚ್ಚಿದೆ.

ಅಲ್ ಅಮರಿತ್(ನ.12): ಅಂಡರ್‌-19 ಏಷ್ಯಾಕಪ್‌ ಟೂರ್ನಿಯಲ್ಲಿ ಭಾರತ ತಂಡ ಫೈನಲ್‌ಗೆ ಲಗ್ಗೆ ಇಟ್ಟಿದೆ. ಅಫ್ಘಾನಿಸ್ತಾನ ವಿರುದ್ಧದ ಸೆಮಿಫೈನಲ್‌ ಪಂದ್ಯದಲ್ಲಿ ಎಂಟು ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದ ಭಾರತ, ಪ್ರಶಸ್ತಿ ಸುತ್ತಿನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ. ಮತ್ತೊಂದು ಭಾರತ-ಪಾಕಿಸ್ತಾನ ಫೈನಲ್‌ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ.

ಅಫ್ಘಾನಿಸ್ತಾನ ನೀಡಿದ್ದ 228 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತ, ಬ್ಯಾಟಿಂಗ್‌ನಲ್ಲಿ ಪ್ರಾಬಲ್ಯ ಮೆರೆಯಿತು. ಲಕ್ಷ್ಯ ರೈಚಂದಾನಿ ಅವರ ಅಮೋಘ 93 ರನ್‌, ಆರ್ಯವೀರ್ ಸೆಹ್ವಾಗ್ ಹಾಗೂ ವಿಕೆ ವಿನೀತ್‌ ಅವರ ಅರ್ಧಶತಕದ ನೆರವಿನಿಂದ ಭಾರತ ಸುಲಭವಾಗಿ ಗುರಿ ತಲುಪಿತು. ವಿನೀತ್‌ ಅರ್ಧಶತಕ ಪೂರೈಸಲು ಬೌಂಡರಿ ಬಾರಿಸಿದರೆ, ನಂತರ ಲಾಂಗ್‌ ಆನ್‌ ಮೇಲೆ ಸಿಕ್ಸರ್‌ ಸಿಡಿಸುವ ಮೂಲಕ ಭಾರತಕ್ಕೆ ಗೆಲುವು ತಂದುಕೊಟ್ಟರು. ಈ ಮೂಲಕ ಭಾರತ ತಂಡ ಫೈನಲ್‌ ಸ್ಥಾನವನ್ನು ಖಚಿತಪಡಿಸಿಕೊಂಡಿತು.

93 ರನ್‌ಗೆ ಔಟಾದ ಲಕ್ಷ್ಯ ರೈಚಂದಾನಿ

ಶತಕದತ್ತ ಸಾಗುತ್ತಿದ್ದ ಲಕ್ಷ್ಯ ರೈಚಂದಾನಿ ಕೇವಲ ಏಳು ರನ್‌ಗಳ ಅಂತರದಲ್ಲಿ ಶತಕ ವಂಚಿತರಾದರು. 90 ಎಸೆತಗಳಲ್ಲಿ 13 ಬೌಂಡರಿ ಹಾಗೂ ಒಂದು ಸಿಕ್ಸರ್‌ ನೆರವಿನಿಂದ 93 ರನ್‌ ಗಳಿಸಿದ್ದ ಲಕ್ಷ್ಯ, ಶತಕ ಪೂರೈಸುವ ನಿರೀಕ್ಷೆಯಲ್ಲಿದ್ದರು. ಆದರೆ, ಶತಕದ ಸನಿಹದಲ್ಲಿದ್ದಾಗಲೇ ವಿಕೆಟ್‌ ಕಳೆದುಕೊಂಡರು. ಲಕ್ಷ್ಯ ಅವರ ಅಮೋಘ ಇನ್ನಿಂಗ್ಸ್‌ ಭಾರತವನ್ನು ಗೆಲುವಿನ ಸನಿಹಕ್ಕೆ ತಂದು ನಿಲ್ಲಿಸಿತ್ತು. ಅವರ ನಿರ್ಗಮನದ ಬಳಿಕವೂ ವಿನೀತ್‌ ಜವಾಬ್ದಾರಿಯುತ ಬ್ಯಾಟಿಂಗ್‌ ಮುಂದುವರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಅರ್ಧಶತಕ ಸಿಡಿಸಿ ಔಟಾದ ಆರ್ಯವೀರ್‌ ಸೆಹ್ವಾಗ್‌

ಭಾರತದ ಇನ್ನಿಂಗ್ಸ್‌ನಲ್ಲಿ ಆರ್ಯವೀರ್‌ ಸೆಹ್ವಾಗ್‌ ಕೂಡ ಗಮನ ಸೆಳೆದರು. ಲಕ್ಷ್ಯ ರೈಚಂದಾನಿ ಅವರೊಂದಿಗೆ ಉತ್ತಮ ಜೊತೆಯಾಟವಾಡಿದ ಆರ್ಯವೀರ್‌ 57 ಎಸೆತಗಳಲ್ಲಿ 51 ರನ್‌ ಗಳಿಸಿ ಔಟಾದರು. ಅವರ ಇನ್ನಿಂಗ್ಸ್‌ನಲ್ಲಿ ನಾಲ್ಕು ಬೌಂಡರಿ ಹಾಗೂ ನಾಲ್ಕು ಸಿಕ್ಸರ್‌ಗಳು ಸೇರಿದ್ದವು. ಸಿಕ್ಸರ್ ಸಿಡಿಸುವ ಮೂಲಕ ಅರ್ಧಶತಕ ಪೂರೈಸಿದ ಬೆನ್ನಲ್ಲೇ ಮತ್ತೊಂದು ಆಕ್ರಮಣಕಾರಿ ಹೊಡೆತಕ್ಕೆ ಮುಂದಾದ ಆರ್ಯವೀರ್‌, ಟಾಪ್‌ ಎಡ್ಜ್‌ ನೀಡಿದರು. ಬ್ಯಾಕ್‌ವರ್ಡ್‌ ಪಾಯಿಂಟ್‌ನಲ್ಲಿ ಫರೀದುಲ್ಲಾ ಇಹ್ಸಾಸ್‌ ಅದ್ಭುತ ಕ್ಯಾಚ್‌ ಹಿಡಿದು ಅವರನ್ನು ಪೆವಿಲಿಯನ್‌ಗೆ ಕಳುಹಿಸಿದರು. ನೂರ್‌ ಅಲಿ ನಿಯಾಜಿ ಈ ವಿಕೆಟ್‌ ಪಡೆಯುವ ಮೂಲಕ ಭಾರತದ 117 ರನ್‌ಗಳ ಜೊತೆಯಾಟಕ್ಕೆ ತೆರೆ ಎಳೆದರು.

ಇದಕ್ಕೂ ಮೊದಲು, ಆಫ್‌ ಸ್ಪಿನ್ನರ್‌ ಸೊಹೈಲ್‌ ಬೌಲಿಂಗ್‌ನಲ್ಲಿ ಆರ್ಯವೀರ್‌ ಸತತ ಎರಡು ಸಿಕ್ಸರ್‌ಗಳನ್ನು ಸಿಡಿಸಿ ಗಮನ ಸೆಳೆದಿದ್ದರು. ಕ್ರೀಸ್‌ನಿಂದ ಮುಂದೆ ಬಂದು ಚೆಂಡನ್ನು ಲಾಂಗ್‌ ಆನ್‌ ಕಡೆಗೆ ಸಿಕ್ಸರ್‌ಗೆ ಅಟ್ಟಿದ ಅವರ ಹೊಡೆತಗಳು ಪ್ರೇಕ್ಷಕರನ್ನು ರಂಜಿಸಿದವು. ತಂದೆ ವೀರೇಂದ್ರ ಸೆಹ್ವಾಗ್‌ ಅವರ ಆಕ್ರಮಣಕಾರಿ ಬ್ಯಾಟಿಂಗ್‌ ಶೈಲಿಯನ್ನು ನೆನಪಿಸುವಂತೆ ಆರ್ಯವೀರ್‌ ಬ್ಯಾಟ್‌ ಬೀಸಿದರು.

ಮತ್ತೊಮ್ಮೆ ಭಾರತ-ಪಾಕಿಸ್ತಾನ ಫೈನಲ್ ಫೈಟ್‌!

ಅಫ್ಘಾನಿಸ್ತಾನ ವಿರುದ್ಧ ಭರ್ಜರಿ ಗೆಲುವು ಸಾಧಿಸಿರುವ ಭಾರತ ಈಗ ಪ್ರಶಸ್ತಿ ಗೆಲ್ಲುವ ಗುರಿಯೊಂದಿಗೆ ಫೈನಲ್‌ಗೆ ಸಜ್ಜಾಗಿದೆ. ಇನ್ನೊಂದೆಡೆ ಬಾಂಗ್ಲಾದೇಶ ಹಾಗೂ ಪಾಕಿಸ್ತಾನ ನಡುವಿನ ಮೊದಲ ಸೆಮಿಫೈನಲ್‌ನಲ್ಲಿ ಪಾಕಿಸ್ತಾನ ಕಿರಿಯರ ತಂಡವು 9 ವಿಕೆಟ್‌ಗಳ ಸುಲಭ ಗೆಲುವು ಸಾಧಿಸಿ ಫೈನಲ್‌ಗೆ ಲಗ್ಗೆಯಿಟ್ಟಿದೆ. ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ ತಂಡವು ಆರಂಭಿಕ ಬ್ಯಾಟರ್ ಅಬ್ದುಲ್ಲಾ ಎಲ್ ಮಹಿ ಅವರ ಆಕರ್ಷಕ ಅರ್ಧಶತಕ(50)ದ ಹೊರತಾಗಿಯೂ ಕೇವಲ 138 ರನ್‌ಗಳಿಗೆ ಸರ್ವಪತನ ಕಂಡಿತು. ಸಾಧಾರಣ ಗುರಿ ಬೆನ್ನತ್ತಿದ ಪಾಕಿಸ್ತಾನ ಕೇವಲ ಒಂದು ವಿಕೆಟ್ ಕಳೆದುಕೊಂಡು 21.5 ಓವರ್‌ಗಳಲ್ಲೇ ಗೆಲುವಿನ ನಗೆ ಬೀರಿತು.

ಸೇಡು ತೀರಿಸಿಕೊಳ್ಳುತ್ತಾ ಭಾರತ?

ಅಂದಹಾಗೆ ಗ್ರೂಪ್‌ ಹಂತದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದ್ದವು. ಆ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ಭಾರತ ಕಿರಿಯರ ಕ್ರಿಕೆಟ್ ತಂಡವು ಪಾಕಿಸ್ತಾನಕ್ಕೆ ಶರಣಾಗಿತ್ತು. ಇದೀಗ ಮತ್ತೊಮ್ಮೆ ಭಾರತ ಹಾಗೂ ಪಾಕಿಸ್ತಾನ ತಂಡಗಳು ಫೈನಲ್‌ನಲ್ಲಿ ಮುಖಾಮುಖಿಯಾಗುತ್ತಿದ್ದು, ಗ್ರೂಪ್‌ ಹಂತದಲ್ಲಿ ಅನುಭವಿಸಿದ ಸೋಲಿಗೆ ಫೈನಲ್‌ನಲ್ಲಿ ಸೇಡು ತೀರಿಸಿಕೊಳ್ಳಲು ರೆಡಿಯಾಗಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

‘ಮನೆ ಪೂರ್ಣವಾಗುತ್ತೆ ಎಂದು ಕನಸಲ್ಲೂ ಅಂದುಕೊಂಡಿರಲಿಲ್ಲ’ ಮಹಿಳೆ ಭಾವುಕ; 10 ವರ್ಷ ಕಾಯುವಿಕೆಗೆ ಕೊನೆ ಹಾಡಿದ ಸಂಜು ಸ್ಯಾಮ್ಸನ್
IND vs NZ 4th ODI: ಭಾರತ-ನ್ಯೂಜಿಲೆಂಡ್ ನಡುವಿನ 4ನೇ ಪಂದ್ಯಕ್ಕೆ ಮಳೆ ಅಡ್ಡಿಯಾಗುತ್ತಾ? ಇಲ್ಲಿದೆ ಹವಾಮಾನ ವರದಿ