ಭಾರತ-ಪಾಕ್‌ ಹೈವೋಲ್ಟೇಜ್ ಮ್ಯಾಚ್: ಇಂದು ಟಿ20 ವಿಶ್ವಕಪ್ ಯುದ್ಧ ಗೆಲ್ಲೋರ್‍ಯಾರು?

Kannadaprabha News   | Kannada Prabha
Published : Feb 15, 2026, 06:37 AM IST
India vs Pakistan

ಸಾರಾಂಶ

ಭಾನುವಾರ ಕೊಲಂಬೊದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಲಿವೆ. ಪಾಕಿಸ್ತಾನದ ಬಲಿಷ್ಠ ಸ್ಪಿನ್ ದಾಳಿಯು ಭಾರತದ ಬ್ಯಾಟಿಂಗ್‌ಗೆ ದೊಡ್ಡ ಸವಾಲಾಗಿದ್ದು, ಈ ಪಂದ್ಯದಲ್ಲಿ ಗೆದ್ದ ತಂಡ ಸೂಪರ್‌-8 ಹಂತಕ್ಕೆ ಬಹುತೇಕ ಪ್ರವೇಶ ಖಚಿತಪಡಿಸಿಕೊಳ್ಳಲಿದೆ.

ಕೊಲಂಬೊ: ಕ್ರಿಕೆಟ್‌ ಲೋಕವೇ ತುದಿಗಾಲಲ್ಲಿ ನಿಂತು ಕಾಯುತ್ತಿರುವ, ಈ ಬಾರಿ ಟಿ20 ವಿಶ್ವಕಪ್‌ನ ಅತ್ಯಂತ ಮಹತ್ವ, ರೋಚಕ ಹಾಗೂ ಬಹುನಿರೀಕ್ಷಿತ ಪಂದ್ಯ ಎನಿಸಿಕೊಂಡಿರುವ ಭಾರತ ಹಾಗೂ ಪಾಕಿಸ್ತಾನ ನಡುವಿನ ಕಾದಾಟಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ಬದ್ಧವೈರಿಗಳ ನಡುವಿನ ಹೈವೋಲ್ಟೇಜ್‌ ಪಂದ್ಯಕ್ಕೆ ಭಾನುವಾರ ಶ್ರೀಲಂಕಾ ರಾಜಧಾನಿ ಕೊಲಂಬೊ ಕ್ರೀಡಾಂಗಣ ಆತಿಥ್ಯ ವಹಿಸಲಿದ್ದು, ಈ ಪಂದ್ಯವನ್ನು ಕಣ್ತುಂಬಿಕೊಳ್ಳಲು ಕೋಟ್ಯಂತರ ಕ್ರೀಡಾಭಿಮಾನಿಗಳು ಕಾತರಿಸುತ್ತಿದ್ದಾರೆ.

ಉಭಯ ತಂಡಗಳ ನಡುವಿನ ಯಾವುದೇ ಪಂದ್ಯವಾದರೂ ಅಲ್ಲಿ ಗದ್ದಲ, ಕುತೂಹಲ ಹೆಚ್ಚಿರುತ್ತದೆ. ಈ ಬಾರಿ ಪಾಕ್‌ನ ಬಹಿಷ್ಕಾರದ ಹೈಡ್ರಾಮಾದಿಂದಾಗಿ ಪಂದ್ಯದ ರೋಚಕತೆ ಮತ್ತಷ್ಟು ಏರಿಕೆಯಾಗಿದೆ. ಉಭಯ ತಂಡಗಳು ಈಗಾಗಲೇ ತಲಾ 2 ಪಂದ್ಯಗಳಲ್ಲಿ ಗೆದ್ದಿದ್ದು, ಹ್ಯಾಟ್ರಿಕ್‌ ಗೆಲುವಿವಾಗಿ ಹೋರಾಡಲಿದೆ. ಇದರಲ್ಲಿ ಗೆದ್ದ ತಂಡ ಸೂಪರ್‌-8ನಲ್ಲಿ ಸ್ಥಾನ ಬಹುತೇಕ ಖಚಿತಪಡಿಸಿಕೊಳ್ಳಲಿದೆ.

ಸ್ಪಿನ್‌ ಪರೀಕ್ಷೆ: ಭಾರತ ಈ ಬಾರಿ 2 ಪಂದ್ಯಗಳಲ್ಲೂ ಗೆದ್ದಿದ್ದರೂ, ತಂಡದ ಬ್ಯಾಟಿಂಗ್‌ ಪ್ರದರ್ಶನ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ. ಸೂರ್ಯಕುಮಾರ್‌, ಇಶಾನ್‌ ಕಿಶನ್‌, ಹಾರ್ದಿಕ್‌ ಪಾಂಡ್ಯ ಅಬ್ಬರಿಸಿದರೂ ಇತರರು ಉತ್ತಮ ಆಟವಾಡಿಲ್ಲ. ಅದರಲ್ಲೂ, ಯುಎಸ್‌ಎ ಹಾಗೂ ನಮೀಬಿಯಾ ವಿರುದ್ಧ ಪಂದ್ಯಗಳಲ್ಲಿ ಭಾರತೀಯ ಬ್ಯಾಟರ್‌ಗಳು ಸ್ಪಿನ್‌ ದಾಳಿ ವಿರುದ್ಧ ಮುಗ್ಗರಿಸಿದ್ದರು. ಮತ್ತೊಂದೆಡೆ ಪಾಕ್‌ ತಂಡದಲ್ಲಿ ಐವರು ಸ್ಪಿನ್ನರ್‌ಗಳಿದ್ದಾರೆ. ಉಸ್ಮಾನ್‌ ತಾರಿಖ್‌, ಸೈಮ್‌ ಅಯೂಬ್‌, ಅಬ್ರಾರ್‌ ಅಹ್ಮದ್‌, ಶದಾಬ್‌ ಖಾನ್‌ ಹಾಗೂ ಮೊಹಮ್ಮದ್‌ ನವಾಜ್‌ ಪಾಕ್‌ನ ಸ್ಪಿನ್ ಅಸ್ತ್ರ. ಹೀಗಾಗಿ, ಪಾಕ್‌ ಸ್ಪಿನ್ನರ್‌ಗಳನ್ನು ಎದುರಿಸುವಲ್ಲಿ ಭಾರತೀಯರು ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದ್ದಾರೆ ಎಂಬುದರ ಮೇಲೆ ಪಂದ್ಯದ ಫಲಿತಾಂಶ ನಿರ್ಧಾರವಾಗಲಿದೆ.

ಮಧ್ಯಮ ಕ್ರಮಾಂಕದ ಚಿಂತೆ:

ಅನಾರೋಗ್ಯಕ್ಕೆ ತುತ್ತಾಗಿರುವ ಅಭಿಷೇಕ್‌ ಶರ್ಮಾ ಈ ಪಂದ್ಯದಲ್ಲಿ ಆಡುವ ಬಗ್ಗೆ ನಿರ್ಧಾರವಾಗಿಲ್ಲ. ಅವರು ಆಡದಿದ್ದರೆ ತಂಡಕ್ಕೆ ನಷ್ಟ. ಅಲ್ಲದೆ, ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳ ಮೇಲೆ ಹೆಚ್ಚಿನ ಒತ್ತಡ ಕೂಡಾ ಬೀಳಲಿದೆ. ಅಭಿಷೇಕ್‌ ಅಲಭ್ಯರಾದರೆ ಸಂಜು ಸ್ಯಾಮ್ಸನ್‌ ದೊಡ್ಡ ಇನ್ನಿಂಗ್ಸ್‌ ಕಟ್ಟಬೇಕಿದ್ದು, ತಿಲಕ್‌ ವರ್ಮಾ, ಶಿವಂ ದುಬೆ ಅವರಿಂದಲೂ ಸ್ಫೋಟಕ ಆಟದ ವಿಶ್ವಾಸವಿದೆ. ಹಾರ್ದಿಕ್‌, ಅಕ್ಷರ್‌ ಆಲ್ರೌಂಡ್‌ ಆಟ ನಿರ್ಣಾಯಕ ಎನಿಸಿಕೊಂಡಿದೆ.

ಕುಲ್ದೀಪ್‌ ಅಥವಾ ರಿಂಕು?:

ಕೊಲಂಬೊ ಪಿಚ್‌ ಸ್ಪಿನ್ನರ್‌ಗಳಿಗೆ ನೆರವಾಗುವ ನಿರೀಕ್ಷೆ ಇರುವುದರಿಂದ ಭಾರತ ಹೆಚ್ಚುವರಿ ಸ್ಪಿನ್ನರ್‌ ಆಡಿಸುವ ಸಾಧ್ಯತೆಯೂ ಇದೆ. ಹೀಗಾದರೆ ಕುಲ್ದೀಪ್‌ ಯಾದವ್‌ಗೆ ಅವಕಾಶ ಸಿಗಬಹುದು. ಕುಲ್ದೀಪ್‌ ಆಡಿದರೆ ಅನಿವಾರ್ಯವಾಗಿ ರಿಂಕು ಸಿಂಗ್‌ ಹೊರಗುಳಿಯಬೇಕಾಗುತ್ತದೆ. ಬ್ಯಾಟಿಂಗ್‌ನಲ್ಲೂ ನೆರವು ಸಿಗುವ ಉದ್ದೇಶದಿಂದ ವಾಷಿಂಗ್ಟನ್‌ ಸುಂದರ್‌ರನ್ನು ಆಡಿಸಿದರೂ ಅಚ್ಚರಿಯಿಲ್ಲ. ಉಳಿದಂತೆ ಬೌಲಿಂಗ್‌ ವಿಭಾಗವನ್ನು ಬೂಮ್ರಾ ಮುನ್ನಡೆಸಲಿದ್ದು, ವರುಣ್ ಚಕ್ರವರ್ತಿ ಸ್ಪಿನ್‌ ದಾಳಿ ತಂಡದ ಟ್ರಂಪ್‌ಕಾರ್ಡ್‌. ಅರ್ಶ್‌ದೀಪ್‌ ಸಿಂಗ್‌, ಹಾರ್ದಿಕ್‌, ಅಕ್ಷರ್‌ ಮೇಲೆ ಹೆಚ್ಚಿನ ನಿರೀಕ್ಷೆಯಿದೆ.

ಪಾಕ್‌ಗೆ ಸ್ಪಿನ್ನರ್ಸ್‌ ಬಲ:

ಪಾಕ್‌ ತಂಡ ಈ ಬಾರಿ ಎರಡೂ ಪಂದ್ಯಗಳನ್ನು ಕೊಲಂಬೊ(ಸಿಂಹಳೀಸ್‌ ಕ್ರೀಡಾಂಗಣ)ದಲ್ಲಿ ಆಡಿದ್ದು, ಅಲ್ಲಿನ ವಾತಾವರಣಕ್ಕೆ ಹೊಂದಿಕೊಂಡಿದೆ.

ಇದು ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ. ಉಳಿದಂತೆ ತಂಡ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದು ಸ್ಪಿನ್ನರ್‌ಗಳ ಮೇಲೆ. ಅದರಲ್ಲೂ ವಿಶಿಷ್ಟ ಬೌಲಿಂಗ್‌ ಶೈಲಿ ಮೂಲಕ ಸಾಕಷ್ಟು ಟೀಕೆಗೂ ಗುರಿಯಾಗಿರುವ ಉಸ್ಮಾನ್‌ ತಾರೀಖ್‌, ಭಾರತೀಯರನ್ನು ಇಕ್ಕಟ್ಟಿಗೆ ಸಿಲುಕಿಸಲು ಕಾಯುತ್ತಿದ್ದಾರೆ. ಬ್ಯಾಟಿಂಗ್‌ ವಿಭಾಗದಲ್ಲಿ ಫರ್ಹಾನ್‌, ಸೈಮ್‌ ಅಯೂಬ್‌, ನಾಯಕ ಸಲ್ಮಾನ್‌ ಅಘಾ, ಬಾಬರ್‌ ಆಜಂ ತಂಡದ ಆಧಾರಸ್ತಂಭ.

ಟಿ20 ಮುಖಾಮುಖಿ: 16

ಭಾರತ: 13

ಪಾಕಿಸ್ತಾನ: 03

ಸಂಭವನೀಯ ಆಟಗಾರರ ಪಟ್ಟಿ:

ಭಾರತ: ಇಶಾನ್‌ ಕಿಶನ್‌, ಅಭಿಷೇಕ್‌, ತಿಲಕ್‌, ಸೂರ್ಯಕುಮಾರ್‌(ನಾಯಕ), ಹಾರ್ದಿಕ್‌ ಪಾಂಡ್ಯ, ಶಿವಂ ದುಬೆ, ರಿಂಕು/ ಕುಲ್ದೀಪ್‌, ಅಕ್ಷರ್‌, ಅರ್ಶ್‌ದೀಪ್‌, ವರುಣ್‌, ಬೂಮ್ರಾ.

ಪಾಕಿಸ್ತಾನ: ಫರ್ಹಾನ್‌, ಸೈಮ್‌, ಸಲ್ಮಾನ್‌(ನಾಯಕ), ಬಾಬರ್‌ ಆಜಂ, ಶದಾಬ್‌, ಉಸ್ಮಾನ್‌ ಖಾನ್‌/ಜಮಾನ್‌, ನವಾಜ್‌, ಫಹೀಂ ಅಶ್ರಫ್‌, ಶಾಹೀನ್‌, ತಾರಿಖ್‌, ಅಬ್ರಾರ್‌.

ಪಂದ್ಯ ಆರಂಭ: ಸಂಜೆ 7 ಗಂಟೆಗೆ

ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್, ಜಿಯೋ ಹಾಟ್‌ಸ್ಟಾರ್‌

 

ಪಿಚ್‌ ರಿಪೋರ್ಟ್‌

ಕೊಲಂಬೊ ಪಿಚ್‌ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಹೆಸರುವಾಸಿ. ಈ ಬಾರಿ ಟಿ20 ವಿಶ್ವಕಪ್‌ನಲ್ಲಿ ಇಲ್ಲಿ ನಡೆದ 3 ಪಂದ್ಯಗಳಲ್ಲಿ ಮೊದಲ ಇನ್ನಿಂಗ್ಸ್‌ ಸರಾಸರಿ ಮೊತ್ತ 171. ಈ 3 ಪಂದ್ಯಗಳಲ್ಲೂ ಮೊದಲು ಬ್ಯಾಟಿಂಗ್‌ ಮಾಡಿದ ತಂಡ ಗೆದ್ದಿದೆ. ಹೀಗಾಗಿ ಟಾಸ್‌ ಗೆಲ್ಲುವ ತಂಡ ಬ್ಯಾಟಿಂಗ್‌ ಆಯ್ಕೆ ಮಾಡಿಕೊಳ್ಳಬಹುದು.

ವಿಶ್ವಕಪ್‌: ಪಾಕಿ ವಿರುದ್ಧ ಭಾರತ 15-1 ಮುನ್ನಡೆ!

ಪಾಕಿಸ್ತಾನ ವಿರುದ್ಧ ಐಸಿಸಿ ವಿಶ್ವಕಪ್‌(ಏಕದಿನ, ಟಿ20) ಟೂರ್ನಿಗಳಲ್ಲಿ ಭಾರತದ ಸಾಧನೆ ಅದ್ವಿತೀಯ. ಈ ವರೆಗೂ ಭಾರತ ತಂಡ ಪಾಕ್‌ ವಿರುದ್ಧ ವಿಶ್ವಕಪ್‌ನ 16 ಪಂದ್ಯಗಳ ಪೈಕಿ 15ರಲ್ಲಿ ಗೆದ್ದಿದೆ. ಏಕದಿನ ವಿಶ್ವಕಪ್‌ನಲ್ಲಿ ಎಲ್ಲಾ 8ರಲ್ಲೂ ಭಾರತ ಗೆದ್ದಿದ್ದರೆ, ಟಿ20 ವಿಶ್ಬಕಪ್‌ನಲ್ಲಿ 8 ಪಂದ್ಯಗಳ ಪೈಕಿ 7ರಲ್ಲಿ ಗೆಲುವು ತನ್ನದಾಗಿಸಿಕೊಂಡಿದೆ. ಒಮ್ಮೆ ಮಾತ್ರ ಪಾಕ್‌ ಗೆದ್ದಿದೆ.

ಟಿ20 ವಿಶ್ವಕಪ್ ಮುಖಾಮುಖಿ

ಫಲಿತಾಂಶ ವರ್ಷ

ಬೌಲ್ ಔಟ್‌ನಲ್ಲಿ ಗೆದ್ದ ಭಾರತ 2007

ಭಾರತಕ್ಕೆ 5 ರನ್‌ ಜಯ(ಫೈನಲ್‌) 2007

ಭಾರತಕ್ಕೆ 8 ವಿಕೆಟ್‌ ಗೆಲುವು 2012

ಭಾರತಕ್ಕೆ 7 ವಿಕೆಟ್‌ ಜಯ 2014

ಭಾರತಕ್ಕೆ 6 ವಿಕೆಟ್‌ ಗೆಲುವು 2016

ಪಾಕ್‌ಗೆ 10 ವಿಕೆಟ್‌ ಜಯ 2021

ಭಾರತಕ್ಕೆ 4 ವಿಕೆಟ್‌ ಗೆಲುವು 2022

ಭಾರತಕ್ಕೆ 6 ರನ್‌ ಗೆಲುವು 2024

ಪಂದ್ಯಕ್ಕೆ ಮಳೆ ಭೀತಿ

ಈ ಬಾರಿ ವಿಶ್ವಕಪ್‌ನಲ್ಲಿ ಕೊಲಂಬೊದಲ್ಲಿ ನಡೆದ ಪಂದ್ಯಗಳಿಗೆ ಮಳೆ ಅಡ್ಡಿಯಾಗಿಲ್ಲ. ಆದರೆ ಭಾನುವಾರದ ಪಂದ್ಯಕ್ಕೆ ಮಳೆ ಭೀತಿ ಇದೆ. ಹವಾಮಾನ ಇಲಾಖೆ ಪ್ರಕಾರ, ಪಂದ್ಯದ ದಿನ ಸಂಜೆ ಶೇ.50ರಿಂದ 70ರಷ್ಟು ಮಳೆ ಸಾಧ್ಯತೆಯಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

'ಅವನನ್ನ ರೂಮ್‌ನಲ್ಲಿ ಲಾಕ್ ಮಾಡಿ ಇಡಬೇಕಿತ್ತು'; ಸೂರ್ಯಕುಮಾರ್ ಕ್ಯಾಪ್ಟನ್ಸಿ ವಿರುದ್ಧ ಕೃಷ್ಣಮಾಚಾರಿ ಶ್ರೀಕಾಂತ್ ಗರಂ
ನಾಳೆ ಭಾರತ-ಪಾಕ್ ಹೈವೋಲ್ಟೇಜ್ ಪಂದ್ಯ; ಮ್ಯಾಚ್ ಎಷ್ಟು ಗಂಟೆಗೆ ಆರಂಭ? ಉಚಿತ ವೀಕ್ಷಣೆ, ಹವಾಮಾನ ವರದಿ ಇಲ್ಲಿದೆ