
ದುಬೈ: ಕಳೆದ ಏಪ್ರಿಲ್‌ನಲ್ಲಿ ಪಹಲ್ಗಾಂನಲ್ಲಿ ನಡೆದಿದ್ದ ಭೀಕರ ಉಗ್ರ ದಾಳಿ ಬಳಿಕ ಭಾರತ ತಂಡ ಪಾಕಿಸ್ತಾನ ವಿರುದ್ಧ ಕ್ರಿಕೆಟ್ ಆಡುವ ಬಗ್ಗೆ ಭಾರೀ ಚರ್ಚೆಯಾಗಿತ್ತು. ಪಾಕ್ ಜೊತೆಗಿನ ಎಲ್ಲಾ ರೀತಿ ಸಂಬಂಧ ಕಡಿದುಕೊಳ್ಳಲು ವ್ಯಾಪಕ ಒತ್ತಾಯ ಕೇಳಿಬಂದಿತ್ತು. ಆದರೆ ಕೇಂದ್ರ ಸರ್ಕಾರದ ಅನುಮತಿ ಸಿಕ್ಕಿದ್ದರಿಂದ ಪಾಕಿಸ್ತಾನ ವಿರುದ್ಧ ಆಡಲು ಭಾರತ ಈ ಬಾರಿ ಸಜ್ಜಾಗಿದೆ.
ಏಷ್ಯಾಕಪ್ ಟಿ20 ಟೂರ್ನಿಯ ಮಹತ್ವದ ಪಂದ್ಯದಲ್ಲಿ ಭಾನುವಾರ ಉಭಯ ತಂಡಗಳು ಮುಖಾಮುಖಿಯಾಗಲಿವೆ. ಪಂದ್ಯಕ್ಕೆ ಯುಎಇ ದೇಶದ ದುಬೈ ಕ್ರೀಡಾಂಗಣ ಆತಿಥ್ಯ ವಹಿಸಲಿದೆ. ಅಭಿಮಾನಿಗಳಿಂದ ಈ ಪಂದ್ಯಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದರೂ, ಪಂದ್ಯದ ಬಗ್ಗೆ ಕುತೂಹಲ ಕಡಿಮೆಯಾಗಿಲ್ಲ. 2 ತಂಡಗಳಲ್ಲೂ ವಿಶ್ವ ಶ್ರೇಷ್ಠ ಆಟಗಾರರಿದ್ದು, ಭಾರೀ ಪೈಪೋಟಿ ನಿರೀಕ್ಷಿಸಲಾಗಿದೆ. ಆದರೆ ಟಿ20 ಹಾಗೂ ಏಷ್ಯಾಕಪ್‌ನ ದಾಖಲೆ ಗಮನಿಸಿದರೆ ಭಾರತವೇ ಈ ಪಂದ್ಯದಲ್ಲಿ ಗೆಲ್ಲುವ ಫೇವರಿಟ್ ಎನಿಸಿಕೊಂಡಿದ್ದು, ಟೂರ್ನಿಯಲ್ಲಿ ಸತತ 2ನೇ ಗೆಲುವಿನ ವಿಶ್ವಾಸದಲ್ಲಿದೆ. ತಂಡ 'ಬಿ' ಗುಂಪಿನ ತನ್ನ ಆರಂಭಿಕ ಪಂದ್ಯದಲ್ಲಿ ಯುಎಇ ವಿರುದ್ಧ ಗೆದ್ದಿತ್ತು. ಅತ್ತ ಪಾಕ್ ತಂಡ ಒಮಾನ್ ವಿರುದ್ಧ ಗೆಲ್ಲುವ ಮೂಲಕ ಟೂರ್ನಿಗೆ ಕಾಲಿರಿಸಿದೆ.
ಸ್ಪಿನ್ನರ್ಸ್ , ಸ್ಪಿನ್ನರ್ಸ್: ಉಭಯ ತಂಡಗಳ ನಡುವೆ ಪಂದ್ಯ ನಡೆದಾಗಲೆಲ್ಲಾ ಭಾರತದ ಬ್ಯಾಟರ್ಸ್ ಹಾಗೂ ಪಾಕಿಸ್ತಾನದ ವೇಗಿಗಳ ನಡುವೆ ಪೈಪೋಟಿ ಎದುರಾಗುವುದು ಸಹಜ. ಆದರೆ ಈ ಬಾರಿ ಟ್ರೆಂಡ್ ಸ್ವಲ್ಪ ಬದಲಾಗಿದೆ. ತಂಡದಲ್ಲಿರುವ ವಿಶ್ವಶ್ರೇಷ್ಠ ಸ್ಪಿನ್ನರ್‌ಗಳು ಹಾಗೂ ಪಿಚ್ ಗುಣ ಗಮನಿಸಿದರೆ ಸ್ಪಿನ್ನರ್‌ಗಳ ನಡುವೆ ಪ್ರಬಲ ಪೈಪೋಟಿ ಎದುರಾಗುವ ಸಾಧ್ಯತೆಯಿದೆ. ಕುಲೀಪ್ ಯಾದವ್, ವರುಣ್ ಚಕ್ರವರ್ತಿ, ಅಕ್ಷರ್ ಪಟೇಲ್ ಭಾರತದ ಸ್ಪಿನ್ ಆಧಾರಸ್ತಂಭವಾಗಿದ್ದು, ಪಾಕ್‌ನಲ್ಲಿ ಅಬ್ರಾರ್ ಅಹ್ಮದ್, ಸುಫಿಯಾನ್ ಮುಖೀಮ್, ಮೊಹಮ್ಮದ್ ನವಾಜ್‌ರಂತದ ತಾರಾ ಸ್ಪಿನ್ನರ್ ಗಳಿದ್ದಾರೆ. ಉಳಿದಂತೆ ಬೂಮ್ರಾ ಹಾಗೂ ಶಾಹೀನ್ ಅಫ್ರಿದಿ ಉಭಯ ತಂಡಗಳಲ್ಲಿರುವ ತಜ್ಞವೇಗಿಗಳು.
ಆದರೆ ಬ್ಯಾಟಿಂಗ್ ವಿಭಾಗದಲ್ಲಿ ಭಾರತವೇ ಬಲಿಷ್ಠವಾಗಿದೆ. ಶುಭಮನ್ ಗಿಲ್, ಅಭಿಷೇಕ್ ಶರ್ಮಾ, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮನ್, ತಿಲಕ್ ವರ್ಮಾರಂತಹ ಶ್ರೇಷ್ಠ ಬ್ಯಾಟರ್ ಗಳಿದ್ದಾರೆ. ಪಾಕ್ ತಂಡ ಸೈಮ್ ಅಯೂಬ್, ಹಸನ್ ನವಾಜ್, ಫಖರ್ ಜಮಾನ್, ಮೊಹಮ್ಮದ್ ಹಾರಿಸ್‌ರನ್ನು ಹೆಚ್ಚಾಗಿ ಅವಲಂಬಿಸಿದೆ.
ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯವು ವಿಶ್ವದ ಯಾವುದೇ ಮೂಲೆಯಲ್ಲಿದ್ದರೂ, ಟಿಕೆಟ್‌ಗಳಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಮಾರಾಟಕ್ಕಿಟ್ಟ ಕೆಲ ಗಂಟೆ ಗಳಲ್ಲೇ ಟಿಕೆಟ್‌ಗಳು ಖಾಲಿಯಾಗುತ್ತಿದ್ದವು. ಆದರೆ ಈ ಬಾರಿ ದುಬೈ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಏಷ್ಯಾಕಪ್ ಪಂದ್ಯದ ಟಿಕೆಟ್‌ಗಳು ಇನ್ನೂ ಸಂಪೂರ್ಣವಾಗಿ ಮಾರಾಟ ವಾಗಿಲ್ಲ. ವೆಬ್‌ಸೈಟ್‌ನಲ್ಲಿ ಈಗಲೂ ಟಿಕೆಟ್‌ಗಳು ಲಭ್ಯವಿದೆ. ಟಿಕೆಟ್ ದರ ಹೆಚ್ಚಳ ಹಾಗೂ ಭಾರತ-ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯಕ್ಕೆ ಬಹಿಷ್ಕಾರ ಹಿನ್ನೆಲೆಯಲ್ಲಿ ಟಿಕೆಟ್‌ಗೆ ಬೇಡಿಕೆ ಕುಸಿದಿದೆ ಎಂದು ತಿಳಿದುಬಂದಿದೆ.
ಪಾಕಿಸ್ತಾನ ತಂಡ: ಸೈಮ್, ಫರ್ಹಾನ್, ಹಾರಿಸ್, ಫಖರ್, ಸಲ್ಮಾನ್ ಆಘಾ(ನಾಯಕ), ಹಸನ್ ನವಾಜ್, ಮೊಹಮ್ಮದ್ ನವಾಜ್, ಫಹೀಮ್, ಶಾಹೀನ್, ಸುಫಿಯಾನ್, ಅಬ್ರಾರ್ ಅಹ್ಮದ್.
ಭಾರತ ತಂಡ: ಅಭಿಷೇಕ್ ಶರ್ಮಾ, ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ಸಂಜು ಸ್ಯಾಮ್ಸನ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ.
ಆರಂಭ: ರಾತ್ರಿ 8.00 ಗಂಟೆಗೆ
ನೇರ ಪ್ರಸಾರ: ಸೋನಿ ಸ್ಪೋರ್ಟ್ಸ್, ಸೋನಿ ಲೈವ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.