
India vs Pakistan Final ಟೋಕಿಯೋ: ಏಷ್ಯನ್ ಗೇಮ್ಸ್ ಪುರುಷರ ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಟೀಂ ಇಂಡಿಯಾ 212 ರನ್ ಸಿಡಿಸಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತದ ಪರ ಅಭಿಷೇಕ್ ಶರ್ಮಾ (28 ಎಸೆತಗಳಲ್ಲಿ 61 ರನ್) ಭರ್ಜರಿ ಆಟವಾಡಿದರು. ತಿಲಕ್ ವರ್ಮಾ (22 ಎಸೆತಗಳಲ್ಲಿ ಅಜೇಯ 51 ರನ್) ಇನ್ನಿಂಗ್ಸ್ ಕೂಡ ಬಹಳ ನಿರ್ಣಾಯಕವಾಯಿತು. ಏಷ್ಯಾಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡವನ್ನು ಇನ್ನಿಲ್ಲದಂತೆ ಕಾಡಿದ್ದ ತಿಲಕ್ ವರ್ಮಾ, ಇದೀಗ ಏಷ್ಯನ್ ಗೇಮ್ಸ್‌ನಲ್ಲೂ ಬದ್ದ ಎದುರಾಳಿ ಪಾಕಿಸ್ತಾನವನ್ನು ಕಂಗಾಲಾಗುವಂತೆ ಮಾಡಿದರು. ಪಾಕಿಸ್ತಾನದ ಪರ ಅರಾಫತ್ ಮಿನ್ಹಾಸ್ ಎರಡು ವಿಕೆಟ್ ಪಡೆದರು.
ಭಾರತಕ್ಕೆ ಸಾಧಾರಣ ಆರಂಭ ಸಿಕ್ಕಿತು. ವೈಭವ್ ಸೂರ್ಯವಂಶಿ (15) ಮತ್ತು ಅಭಿಷೇಕ್ ಮೊದಲ ವಿಕೆಟ್‌ಗೆ 28 ರನ್ ಸೇರಿಸಿದರು. ಆದರೆ ಮೂರನೇ ಓವರ್‌ನ ಮೊದಲ ಎಸೆತದಲ್ಲೇ ವೈಭವ್ ಔಟಾದರು. ಸೈಮ್ ಅಯೂಬ್ ಬೌಲಿಂಗ್‌ನಲ್ಲಿ ರಿವರ್ಸ್ ಸ್ವೀಪ್ ಮಾಡಲು ಹೋಗಿ ವಿಕೆಟ್ ಕೀಪರ್ ಉಸ್ಮಾನ್ ಖಾನ್‌ಗೆ ಕ್ಯಾಚ್ ನೀಡಿದರು. ನಂತರ ಬಂದ ಸಂಜು ಕೇವಲ ನಾಲ್ಕು ಎಸೆತಗಳನ್ನಷ್ಟೇ ಎದುರಿಸಿದರು. ಅಹ್ಮದ್ ದಾನಿಯಾಲ್ ಅವರ ವೇಗದ ಬೌಲಿಂಗ್‌ನಲ್ಲಿ ಸಂಜು ಎಡವಿದರು. ಬೌನ್ಸರ್ ಎಸೆತವನ್ನು ಲಾಂಗ್ ಆನ್ ಕಡೆ ಬಾರಿಸಲು ಯತ್ನಿಸಿದ ಸಂಜು, ಮಿಡ್ ಆನ್‌ನಲ್ಲಿ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು.
ಈ ನಡುವೆ ಅಭಿಷೇಕ್ ತಮ್ಮ ಅಬ್ಬರ ಮುಂದುವರಿಸಿದರು. ಶ್ರೇಯಸ್ ಅಯ್ಯರ್ (24 ಎಸೆತಗಳಲ್ಲಿ 21) ಜೊತೆಗೂಡಿ ಅಭಿಷೇಕ್ 42 ರನ್‌ಗಳ ಜೊತೆಯಾಟವಾಡಿದರು. ಎಂಟನೇ ಓವರ್‌ನಲ್ಲಿ ಔಟಾಗುವ ಮುನ್ನ ಅಭಿಷೇಕ್ ಬ್ಯಾಟ್‌ನಿಂದ ಏಳು ಸಿಕ್ಸರ್ ಹಾಗೂ ಮೂರು ಬೌಂಡರಿಗಳು ಸಿಡಿದಿದ್ದವು. ಬ್ಯಾಟಿಂಗ್‌ಗೆ ಕಷ್ಟಕರವಾಗಿದ್ದ ಪಿಚ್‌ನಲ್ಲಿ ಶ್ರೇಯಸ್ ಮತ್ತು ಇಶಾನ್ ಕಿಶನ್ (18 ಎಸೆತಗಳಲ್ಲಿ 20) ಮಹತ್ವದ ಕಾಣಿಕೆ ನೀಡಿದರು. ಇವರಿಬ್ಬರು ಔಟಾದ ಬಳಿಕ ತಿಲಕ್ ಹಾಗೂ ಶಿವಂ ದುಬೆ (15 ಎಸೆತಗಳಲ್ಲಿ 27) ಸ್ಕೋರ್ ಅನ್ನು 200ರ ಗಡಿ ದಾಟಿಸಿದರು. ಈ ಜೋಡಿ 62 ರನ್ ಕಲೆಹಾಕಿತು. ಪಾಕ್ ಬೌಲರ್‌ಗಳನ್ನು ಮೈಚಳಿ ಬಿಟ್ಟು ಬ್ಯಾಟ್ ಬೀಸಿದ ತಿಲಕ್ ವರ್ಮಾ ಕೇವಲ 22 ಎಸೆತಗಳನ್ನು ಎದುರಿಸಿ 3 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ ಅಜೇಯ 51 ರನ್ ಸಿಡಿಸಿದರು. ಕೊನೆಯಲ್ಲಿ ಬಂದ ಅಕ್ಷರ್ ಪಟೇಲ್ (1) ತಿಲಕ್ ಜೊತೆ ಅಜೇಯರಾಗಿ ಉಳಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.