
ಅಹಮದಾಬಾದ್: ಟಿ20 ಕ್ರಿಕೆಟ್‌ನಲ್ಲಿ ಭಾರತದ ಪರಾಕ್ರಮ ಮುಂದುವರಿದಿದೆ. 2026ರ ಐಸಿಸಿ ಟಿ20 ವಿಶ್ವಕಪ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿರುವ ಟೀಂ ಇಂಡಿಯಾ, ಕೋಟ್ಯಂತರ ಅಭಿಮಾನಿಗಳ ಆಸೆ ಈಡೇರಿಸಿದೆ. ನ್ಯೂಜಿಲೆಂಡ್ ವಿರುದ್ಧ ಭಾನುವಾರ ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ನಲ್ಲಿ ಭಾರತ 96 ರನ್‌ಗಳ ಅಮೋಘ ಗೆಲುವು ಸಾಧಿಸಿತು.
ಟಾಸ್ ಸೋತು ಮೊದಲು ಬ್ಯಾಟ್ ಮಾಡಲು ಇಳಿದ ಭಾರತ, ಪವರ್-ಪ್ಲೇನಲ್ಲೇ ಪಂದ್ಯದ ಮೇಲೆ ಹಿಡಿತ ಸಾಧಿಸಿತು. 2ರಿಂದ 6ನೇ ಓವರ್ ನಡುವೆ 80 ರನ್ ದಾಖಲಿಸಿದ ಭಾರತ, 6 ಓವರಲ್ಲಿ 92 ರನ್ ಚಚ್ಚಿ ಕಿವೀಸ್ ಮೇಲೆ ಒತ್ತಡ ಹೇರಿತು. ಸಂಜು ಸ್ಯಾಮ್ಸನ್, ಅಭಿಷೇಕ್ ಶರ್ಮಾ, ಇಶಾನ್ ಕಿಶನ್ ತಲಾ ಅರ್ಧಶತಕ ದಾಖಲಿಸಿ, ತಂಡ ಬೃಹತ್ ಮೊತ್ತ ದಾಖಲಿಸಲು ವೇದಿಕೆ ಕಲ್ಪಿಸಿದರು. ಸತತ ವೈಫಲ್ಯ ಕಾಣುತ್ತಿದ್ದ ಅಭಿಷೇಕ್ ಫೈನಲ್‌ನಲ್ಲಿ ಅಬ್ಬರಿಸಿದರು. 18 ಎಸೆತದಲ್ಲಿ ಫಿಫ್ಟಿ ದಾಖಲಿಸಿದ ಅಭಿ, 21 ಎಸೆತದಲ್ಲಿ 52 ರನ್ ಚಚ್ಚಿ ಔಟಾದರು. ಆ ಬಳಿಕ ಸ್ಯಾಮ್ಸನ್-ಕಿಶನ್ 45 ಎಸೆತದಲ್ಲಿ ಶತಕದ ಜೊತೆಯಾಟ ಪೂರೈಸಿದರು.
16ರಿಂದ 19ನೇ ಓವರ್ ನಡುವೆ ಭಾರತ ಸ್ವಲ್ಪ ಮಂಕಾಯಿತು. ಅದರಲ್ಲೂ 16ನೇ ಓವರಲ್ಲಿ ನೀಶಮ್ 3 ವಿಕೆಟ್ ಕಬಳಿಸಿದರು. ಸ್ಯಾಮ್ಸನ್ 46 ಎಸೆತದಲ್ಲಿ 5 ಬೌಂಡರಿ, 8 ಸಿಕ್ಸರ್‌ನೊಂದಿಗೆ 89 ರನ್, ಕಿಶನ್ 25 ಎಸೆತದಲ್ಲಿ ತಲಾ 4 ಬೌಂಡರಿ, ಸಿಕ್ಸರ್‌ನೊಂದಿಗೆ 54 ರನ್ ಸಿಡಿಸಿ ಔಟದರು. ಕೊನೆ ಓವರಲ್ಲಿ ದುಬೆ ಅವರ ಸ್ಫೋಟಕ ಆಟ ತಂಡದ ಮೊತ್ತವನ್ನು 20 ಓವರಲ್ಲಿ 5 ವಿಕೆಟ್‌ಗೆ 255 ರನ್ ತಲುಪಿಸಿತು.
ಬೃಹತ್ ಗುರಿ ನೋಡಿಯೇ ಸುಸ್ತಾಗಿದ್ದ ಕಿವೀಸ್, ಪವರ್-ಪ್ಲೇನಲ್ಲೇ ಪಂದ್ಯ ಕೈಚೆಲ್ಲಿತು. ಭಾರತದ ಮಾರಕ ದಾಳಿ ಎದುರು ನ್ಯೂಜಿಲೆಂಡ್ ಯಾವ ಹಂತದಲ್ಲೂ ಪಂದ್ಯ ಗೆಲ್ಲುವ ಸಾಹಸಕ್ಕೆ ಕೈಹಾಕಲು ಸಾಧ್ಯವಾಗಲಿಲ್ಲ. ಬೂಮ್ರಾ 4 ಓವರಲ್ಲಿ 15ಕ್ಕೆ 4 ವಿಕೆಟ್ ಕಿತ್ತರೆ, ಅಕ್ಷರ್ 3 ವಿಕೆಟ್ ಕಬಳಿಸಿದರು. ನ್ಯೂಜಿಲೆಂಡ್ 19 ಓವರಲ್ಲಿ 159ಕ್ಕೆ ಆಲೌಟ್ ಆಯಿತು.
ಸ್ಕೋರ್: ಭಾರತ 20 ಓವರಲ್ಲಿ 255/5 (ಸ್ಯಾಮ್ಸನ್ 89, ಕಿಶನ್ 54, ಅಭಿ 52, ನೀಶಮ್ 3-46), ನ್ಯೂಜಿಲೆಂಡ್ 19 ಓವರಲ್ಲಿ 159/10 (ಸೈಫರ್ಟ್ 52, ಸ್ಯಾಂಟ್ನರ್ 43, ಬೂಮ್ರಾ 4-15, ಅಕ್ಷರ್ 3-27)
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.