
ಹ್ಯಾಮಿಲ್ಟನ್(ನ.01): ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ 5ನೇ ಹಾಗೂ ಕೊನೆ ಟಿ20 ಪಂದ್ಯ ಭಾನುವಾರ ನಡೆಯಲಿದೆ. ಆರಂಭಿಕ 3 ಪಂದ್ಯಗಳಲ್ಲಿ ಅಬ್ಬರದ ಆಟವಾಡಿ ಸರಣಿ ಗೆದ್ದಿದ್ದ ಟೀಂ ಇಂಡಿಯಾ, 4ನೇ ಪಂದ್ಯದಲ್ಲಿ ತೀವ್ರ ಬ್ಯಾಟಿಂಗ್ ವೈಫಲ್ಯ ಅನುಭವಿಸಿ ಸೋತಿತ್ತು. ಈಗ ಕಮ್‌ಬ್ಯಾಕ್ ಮಾಡಿ ಗೆಲುವಿನೊಂದಿಗೆ ಸರಣಿಗೆ ಗುಡ್‌ಬೈ ಹೇಳಲು ಕಾಯುತ್ತಿದೆ.
ಭಾರತ ಈ ಪಂದ್ಯದಲ್ಲಿ ಕೆಲ ಬದಲಾವಣೆಗಳನ್ನು ಮಾಡುವ ಸಾಧ್ಯತೆಯಿದೆ. ಸಂಜು ಸ್ಯಾಮ್ಸನ್ 4 ಪಂದ್ಯಗಳ ಪೈಕಿ ಒಂದರಲ್ಲಿ ಮಾತ್ರ ಮಿಂಚಿದ್ದು, ಅವರ ಸ್ಥಾನಕ್ಕೆ ವೈಭವ್ ಸೂರ್ಯವಂಶಿಯನ್ನು ಆಯ್ಕೆ ಮಾಡುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಮತ್ತೊಂದೆಡೆ ಬೌಲಿಂಗ್ ವಿಭಾಗದಲ್ಲಿ ಸ್ಪಿನ್ನರ್ ಕುಲ್ದೀಪ್ ಯಾದವ್ ಅವಕಾಶಕ್ಕಾಗಿ ಕಾಯುತ್ತಿದ್ದಾರೆ.
ನಾಯಕ ಶ್ರೇಯಸ್ ಅಯ್ಯರ್ ಕಳಪೆ ಆಟವಾಡುತ್ತಿದ್ದು, ಇತ್ತೀಚೆಗೆ ಚೊಚ್ಚಲ ಅಂ.ರಾ. ಟಿ20 ಶತಕ ಸಿಡಿಸಿದ ಬಳಿಕ 8 ಇನ್ನಿಂಗ್ಸ್‌ಗಳ ಪೈಕಿ ಒಂದರಲ್ಲೂ ಅರ್ಧಶತಕ ದಾಖಲಿಸಿಲ್ಲ. ಹೀಗಾಗಿ ಕಿವೀಸ್ ಎದುರು ಟಿ20 ಸರಣಿ ಗೆದ್ದರೂ ಒತ್ತಡದಲ್ಲಿದ್ದಾರೆ. ಇದೀಗ ಅವರು ತಮ್ಮ ನಾಯಕತ್ವದ ಜೊತೆಗೆ ಬ್ಯಾಟಿಂಗ್‌ನಲ್ಲೂ ಸುಧಾರಿತ ಪ್ರದರ್ಶನ ನೀಡಬೇಕಿದೆ.
ಭಾರತ: ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್/ವೈಭವ್ ಸೂರ್ಯವಂಶಿ, ಇಶಾನ್ ಕಿಶನ್(ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್(ನಾಯಕ), ತಿಲಕ್ ವರ್ಮಾ, ಅಕ್ಷರ್ ಪಟೇಲ್/ಕುಲ್ದೀಪ್ ಯಾದವ್, ನಿತೀಶ್ ಕುಮಾರ್ ರೆಡ್ಡಿ, ನಮನ್ ಧೀರ್, ಅರ್ಶದೀಪ್ ಸಿಂಗ್, ಭುವನೇಶ್ವರ್ ಕುಮಾರ್, ಮಯಾಂಕ್ ಯಾದವ್.
ನ್ಯೂಜಿಲೆಂಡ್: ಟಿಮ್ ಸೀಫರ್ಟ್(ವಿಕೆಟ್ ಕೀಪರ್), ಫಿನ್ ಅಲೆನ್, ಡೇರಲ್ ಮಿಚೆಲ್, ಗ್ಲೆನ್ ಫಿಲಿಫ್ಸ್, ಬೆವೊನ್ ಜೇಕೊಬ್ಸ್, ಮಿಚೆಲ್ ಬ್ರೇಸ್‌ವೆಲ್, ಮಿಚೆಲ್ ಸ್ಯಾಂಟ್ನರ್(ನಾಯಕ), ನೇಥನ್ ಸ್ಮಿತ್, ಆಡಂ ಮಿಲ್ನೆ, ಜೇಕೊಬ್ ಡಫಿ, ಮ್ಯಾಥ್ಯೂ ಫಿಶರ್.
ಪಂದ್ಯ ಆರಂಭ: ಮಧ್ಯಾಹ್ನ 12.30ಕ್ಕೆ, ನೇರ ಪ್ರಸಾರ: ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್
ನವದೆಹಲಿ: ನ.4ರಿಂದ ಆರಂಭಗೊಳ್ಳಲಿರುವ ನ್ಯೂಜಿಲೆಂಡ್ ವಿರುದ್ಧದ 5 ಪಂದ್ಯಗಳ ಏಕದಿನ ಸರಣಿಗೆ ಗಾಯಾಳು ಪ್ರಸಿದ್ಧ್ ಕೃಷ್ಣ ಬದಲು ಜಮ್ಮು-ಕಾಶ್ಮೀರದ ವೇಗದ ಬೌಲರ್ ಆಖಿಬ್ ನಬಿ ಆಯ್ಕೆಯಾಗಿದ್ದಾರೆ. ನಬಿ ಸದ್ಯ ನ್ಯೂಜಿಲೆಂಡ್‌ನಲ್ಲೇ ಇದ್ದು, ಭಾರತ ‘ಎ’ ತಂಡದ ಪರ ಆಡುತ್ತಿದ್ದಾರೆ. ಅಲ್ಲದೆ, ಅವರು ಕೊನೆ 2 ಏಕದಿನ ಪಂದ್ಯಗಳಿಗೆ ತಂಡಕ್ಕೆ ಆಯ್ಕೆಯಾಗಿದ್ದರು. ಈಗ ಪ್ರಸಿದ್ಧ್ ಹೊರಬಿದ್ದ ಕಾರಣ, ನಬಿ ಸಂಪೂರ್ಣ ಏಕದಿನ ಸರಣಿಗೆ ಲಭ್ಯವಿದ್ದಾರೆ.
ಪ್ರಸಿದ್ಧ್ ಇತ್ತೀಚೆಗೆ ವೆಸ್ಟ್‌ಇಂಡೀಸ್ ವಿರುದ್ಧ ತವರಿನ ಏಕದಿನ ಸರಣಿಯ 2ನೇ ಪಂದ್ಯದಲ್ಲಿ ಸ್ನಾಯುಸೆಳೆತಕ್ಕೆ ಒಳಗಾಗಿದ್ದರು. ಪಂದ್ಯದಲ್ಲಿ ಅವರು 5 ಓವರ್ ಬೌಲ್ ಮಾಡಿದ್ದು, ಬಳಿಕ ಮೈದಾನ ತೊರೆದಿದ್ದರು. ಪ್ರಸಿದ್ಧ್ ಸದ್ಯ ಏಕದಿನ ಸರಣಿಯಿಂದ ಹೊರಬಿದ್ದರೂ ಟೆಸ್ಟ್ ಸರಣಿಯಲ್ಲಿ ಆಡುವ ನಿರೀಕ್ಷೆಯಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.