ಭಾರತ-ನ್ಯೂಜಿಲೆಂಡ್ 3ನೇ ಏಕದಿನ ಪಂದ್ಯಕ್ಕೆ ಮಳೆ ಕಾಟ: ಟಾಸ್ ವಿಳಂಬ, ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಟೀಂ ಇಂಡಿಯಾ!

Naveen Kodase   | Kannada Prabha
Published : Nov 10, 2026, 07:41 AM IST
IND vs NZ 3rd ODI

ಸಾರಾಂಶ

ಹ್ಯಾಮಿಲ್ಟನ್‌ನಲ್ಲಿ ನಡೆಯಲಿರುವ ಭಾರತ ಮತ್ತು ನ್ಯೂಜಿಲೆಂಡ್‌ ನಡುವಿನ 3ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಸರಣಿ ಗೆಲುವಿನ ವಿಶ್ವಾಸದಲ್ಲಿದೆ. ಆದರೆ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆಯಿದ್ದು, ಕಿವೀಸ್ ತಂಡ ತವರಿನಲ್ಲಿ ಸರಣಿ ಸೋಲಿನ ಭೀತಿಯಲ್ಲಿದೆ.

ಹ್ಯಾಮಿಲ್ಟನ್‌(ನ.10): ಭಾರತ ಹಾಗೂ ನ್ಯೂಜಿಲೆಂಡ್‌ ನಡುವಿನ 3ನೇ ಏಕದಿನ ಪಂದ್ಯ ಮಂಗಳವಾರ ನಡೆಯಲಿದೆ. ಆರಂಭಿಕ 2 ಪಂದ್ಯಗಳಲ್ಲಿ ಗೆದ್ದು, 5 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿರುವ ಟೀಂ ಇಂಡಿಯಾ ಸರಣಿ ಗೆಲುವಿನ ವಿಶ್ವಾಸದಲ್ಲಿದೆ. ಇದೀಗ ಈ ಪಂದ್ಯಕ್ಕೆ ಮಳೆ ಅಡ್ಡಿಯಾಗಿದ್ದು, ಪಂದ್ಯಾಟ ಕೊಂಚ ತಡವಾಗಿ ಆರಂಭವಾಗುವ ನಿರೀಕ್ಷೆಯಿದೆ.

ಬೌಲರ್‌ಗಳಿಗೆ ಹೆಚ್ಚಿನ ನೆರವು ನೀಡುತ್ತಿದ್ದ ಮೊದಲೆರಡು ಪಂದ್ಯಗಳಲ್ಲಿ ಕಡಿಮೆ ಮೊತ್ತ ದಾಖಲಾಗಿದ್ದವು. ಮಂಗಳವಾರದ ಪಂದ್ಯದಲ್ಲಿ ಬ್ಯಾಟರ್‌ಗಳು ಮಿಂಚುವ ನಿರೀಕ್ಷೆಯಲ್ಲಿದ್ದಾರೆ. ರೋಹಿತ್‌ ಶರ್ಮಾ, ನಾಯಕ ಶುಭ್‌ಮನ್‌ ಗಿಲ್‌ ಲಯಕ್ಕೆ ಮರಳುವ ಕಾತರದಲ್ಲಿದ್ದಾರೆ. ವಿಶ್ವಕಪ್‌ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಬೇಕಿದ್ದರೆ ರೋಹಿತ್‌ ತಮ್ಮಲ್ಲಿನ್ನೂ ಆಟ ಬಾಕಿಯಿದೆ ಎಂದು ಸಾಬೀತುಪಡಿಸಬೇಕಿದ್ದು, ಈ ಪಂದ್ಯದಲ್ಲಿ ಅವರಿಂದ ದೊಡ್ಡ ಇನ್ನಿಂಗ್ಸ್‌ ಮೂಡಿಬರಬೇಕಿದೆ. ಕೆ.ಎಲ್.ರಾಹುಲ್‌ ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದು, ದೊಡ್ಡ ಮೊತ್ತ ಗಳಿಸಲು ಎದುರು ನೋಡುತ್ತಿದ್ದಾರೆ.

ಇನ್ನು, ತಂಡದಲ್ಲಿ ಬದಲಾವಣೆ ಸಾಧ್ಯತೆ ಕಡಿಮೆ. ವೇಗದ ಬೌಲಿಂಗ್‌ ವಿಭಾಗದಲ್ಲಿ ಅರ್ಶ್‌ದೀಪ್‌ ಸಿಂಗ್‌, ಗುರ್ನೂರ್‌ ಬ್ರಾರ್‌, ಆಖಿಬ್‌ ನಬಿ, ಅನ್ಶುಲ್‌ ಕಂಬೋಜ್‌ ಇದ್ದಾರೆ. ಸ್ಪಿನ್‌ ವಿಭಾಗದಲ್ಲಿ ಅಕ್ಷರ್‌ ಪಟೇಲ್‌ ತಂಡದ ಕೈಹಿಡಿಯಬೇಕಿದೆ.

ಮತ್ತೊಂದೆಡೆ ಕಿವೀಸ್‌ ತಂಡ ಟಿ20 ಸರಣಿ ಸೋಲಿನ ಬಳಿಕ ಈಗ ಏಕದಿನ ಸರಣಿ ಕಳೆದುಕೊಳ್ಳುವ ಭೀತಿಯಲ್ಲಿದೆ. ಗಾಯದ ಸಮಸ್ಯೆಯಿಂದ ಬಳಲುತ್ತಿರುವ ತಂಡ, ಈ ಪಂದ್ಯದಲ್ಲಿ ಗೆದ್ದರಷ್ಟೇ ಸರಣಿಯನ್ನು ಉಳಿಸಿಕೊಳ್ಳಲಿದೆ.

ಪಂದ್ಯ ಆರಂಭ: ಬೆಳಗ್ಗೆ 7.30ಕ್ಕೆ

ಪ್ರಸಾರ: ಸೋನಿ ಸ್ಪೋರ್ಟ್ಸ್‌, ಸೋನಿಲೈವ್

ಪಂದ್ಯಕ್ಕೆ ಮಳೆ ಅಡ್ಡಿ

ಕಳೆದ ಪಂದ್ಯದಂತೆ ಈ ಪಂದ್ಯಕ್ಕೂ ಮಳೆ ಅಡ್ಡಿಯಾಗಿದೆ. ಹ್ಯಾಮಿಲ್ಟನ್‌ನಲ್ಲಿ ಮಂಗಳವಾರ ಮಳೆ ಮುನ್ಸೂಚನೆ ಇತ್ತು. ಹೀಗಾಗಿ ಇಂದು ಬೆಳಗ್ಗೆ ಏಳು ಗಂಟೆಗೆ ನಡೆಯಬೇಕಿದ್ದ ಟಾಸ್ ಇನ್ನೂ ತಡವಾಗಿ ನಡೆಯಲಿದೆ. ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಪಂದ್ಯ ರದ್ದಾದರೂ ಅಚ್ಚರಿಯಿಲ್ಲ.

ತವರಲ್ಲಿ 7 ವರ್ಷ ಬಳಿಕ ಸರಣಿ ಸೋಲಿನ ಭೀತಿ

ನ್ಯೂಜಿಲೆಂಡ್‌ ತಂಡ 2019ರಲ್ಲಿ ಭಾರತ ವಿರುದ್ಧ ತವರಿನಲ್ಲಿ ಏಕದಿನ ಸರಣಿ ಸೋತಿತ್ತು. ಆ ಬಳಿಕ ತಂಡ ಕಳೆದ 11 ಸರಣಿಗಳಲ್ಲೂ ಅಜೇಯವಾಗಿದೆ. ಮಂಗಳವಾರದ ಪಂದ್ಯದಲ್ಲಿ ಸೋತರೆ, ತಂಡ ತವರಿನಲ್ಲಿ 7 ವರ್ಷಗಳ ಬಳಿಕ ಸರಣಿ ಕಳೆದುಕೊಂಡಂತಾಗುತ್ತದೆ.

ಏಕದಿನ ಬಳಿಕ ಟೆಸ್ಟ್‌ ಸರಣಿಗೆ ಅರ್ಶ್‌ದೀಪ್‌, ನಬಿ, ಗುರ್ನೂರ್‌

ಹ್ಯಾಮಿಲ್ಟನ್‌: ನ್ಯೂಜಿಲೆಂಡ್‌ ವಿರುದ್ಧ ಸದ್ಯ ಏಕದಿನ ಸರಣಿ ಆಡುತ್ತಿರುವ ವೇಗಿಗಳಾದ ಅರ್ಶ್‌ದೀಪ್‌ ಸಿಂಗ್‌, ಆಖಿಬ್‌ ನಬಿ ಹಾಗೂ ಗುರ್ನೂರ್‌ ಬ್ರಾರ್‌, ಸರಣಿ ಮುಗಿದ ಬಳಿಕ ಭಾರತಕ್ಕೆ ಮರಳದೆ ನ್ಯೂಜಿಲೆಂಡ್‌ನಲ್ಲೇ ಉಳಿದುಕೊಳ್ಳಲಿದ್ದಾರೆ. ಈ ಮೂವರೂ ನ.19ರಿಂದ ಆರಂಭಗೊಳ್ಳಲಿರುವ 2 ಪಂದ್ಯಗಳ ಟೆಸ್ಟ್‌ ಸರಣಿಗಾಗಿ ಭಾರತ ತಂಡದ ಜೊತೆಗಿರಲಿದ್ದಾರೆ.

ಈ ಬಗ್ಗೆ ಸಹಾಯಕ ಕೋಚ್‌ ಸಿತಾಂಶು ಕೋಟಕ್‌ ಮಾಹಿತಿ ನೀಡಿದ್ದು, ಗುರ್ನೂರ್‌, ಬ್ರಾರ್, ಅರ್ಶ್‌ದೀಪ್‌ ಟೆಸ್ಟ್‌ ತಂಡದ ಜೊತೆಗಿದ್ದು, ಹಿರಿಯ ಆಟಗಾರರಿಗೆ ಶಿಬಿರದಲ್ಲಿ ನೆರವು ನೀಡಲಿದ್ದಾರೆ ಎಂದಿದ್ದಾರೆ. ಏಕದಿನ ಸರಣಿ ಆಡುತ್ತಿರುವ ಗಿಲ್‌, ಕೆ.ಎಲ್‌.ರಾಹುಲ್‌, ಕುಲ್ದೀಪ್, ಅನ್ಶುಲ್‌ ಕಂಬೋಜ್‌ 3ನೇ ಪಂದ್ಯದ ಬಳಿಕ ವೆಲ್ಲಿಂಗ್ಟನ್‌ಗೆ ತೆರಳಲಿದ್ದು, ಟೆಸ್ಟ್‌ ಸರಣಿಗೆ ಅಭ್ಯಾಸ ಆರಂಭಿಸಲಿದ್ದಾರೆ.

ಇನ್ನು, ಟೆಸ್ಟ್‌ ಸರಣಿಗಾಗಿ ಕೋಚಿಂಗ್‌ ಸಿಬ್ಬಂದಿಯನ್ನು 2 ತಂಡಗಳಾಗಿ ವಿಂಗಡಿಸಲಾಗುತ್ತದೆ. ಮುಖ್ಯ ಕೋಚ್‌ ಗಂಭೀರ್ ಏಕದಿನ ತಂಡದ ಜೊತೆಗಿರಲಿದ್ದು, ಬೌಲಿಂಗ್‌ ಕೋಚ್‌ ಮಾರ್ಕೆಲ್‌ ಸೇರಿ ಇತರರು ಟೆಸ್ಟ್‌ ತಂಡವನ್ನು ಕೂಡಿಕೊಳ್ಳಲಿದ್ದಾರೆ.

ಭಾರತ ‘ಎ’ ಟೆಸ್ಟ್‌ನ 3ನೇ ದಿನದಾಟ ಮಳೆಗೆ ಆಹುತಿ

ಲಿಂಕ್ಲನ್‌: ಭಾರತ ‘ಎ’ ಹಾಗೂ ನ್ಯೂಜಿಲೆಂಡ್ ‘ಎ’ ತಂಡಗಳ ನಡುವಿನ 3ನೇ ಅನಧಿಕೃತ ಟೆಸ್ಟ್‌ನ 3ನೇ ದಿನದಾಟ ಮಳೆಗೆ ಬಲಿಯಾಯಿತು. 2ನೇ ದಿನದಂತ್ಯಕ್ಕೆ ನ್ಯೂಜಿಲೆಂಡ್‌ 2 ವಿಕೆಟ್‌ಗೆ 36 ರನ್‌ ಗಳಿಸಿತ್ತು. 3ನೇ ದಿನ ಪಂದ್ಯ ಆರಂಭಿಸಲು ಮಳೆ ಅವಕಾಶ ನೀಡಿಲ್ಲ. ಪಂದ್ಯದ ಕೊನೆ ದಿನದಾಟ ಮಂಗಳವಾರ ನಡೆಯಲಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Kavya Maran Wedding: ಕಾವ್ಯಾ ಮಾರನ್ ಮದುವೆಯಾಗಲಿರುವ ಅನಿರುದ್ಧ್ ರವಿಚಂದರ್ ಯಾರು? ರಜನಿಕಾಂತ್‌ಗೂ ಇವರಿಗೂ ಏನು ಸಂಬಂಧ?
ಕಾವ್ಯ ಮಾರನ್ ಮದುವೆಗೆ ಹೊರಟ ರಜಿನಿಕಾಂತ್, ಶುಭ ಸಂದರ್ಭದಲ್ಲಿ IPL ಟ್ರೋಲ್‌ಗಳಿಗೆ SRH ಒಡತಿ ಸ್ಪಷ್ಟನೆ