ವೈಟ್‌ವಾಷ್‌ ತಪ್ಪಿಸಿಕೊಳ್ಳುವ ಒತ್ತಡದಲ್ಲಿ ಟೀಂ ಇಂಡಿಯಾ

Suvarna News   | Asianet News
Published : Feb 28, 2020, 02:24 PM IST
ವೈಟ್‌ವಾಷ್‌ ತಪ್ಪಿಸಿಕೊಳ್ಳುವ ಒತ್ತಡದಲ್ಲಿ ಟೀಂ ಇಂಡಿಯಾ

ಸಾರಾಂಶ

ಭಾರತ-ನ್ಯೂಜಿಲೆಂಡ್ ನಡುವಿನ ಎರಡನೇ ಹಾಗೂ ಕೊನೆಯ ಟೆಸ್ಟ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಏಕದಿನ ಸರಣಿಯಲ್ಲಿ ಕ್ಲೀನ್ ಸ್ವೀಪ್ ಮಾಡಿದ್ದ ಕಿವೀಸ್ ಇದೀಗ ಟೆಸ್ಟ್ ಸರಣಿಯಲ್ಲೂ ವೈಟ್‌ವಾಷ್ ಸಾಧಿಸಲು ಹವಣಿಸುತ್ತಿದೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ.

ಕ್ರೈಸ್ಟ್‌ಚರ್ಚ್(ಫೆ.28): ಟಿ20 ಸರಣಿಯನ್ನು ಕ್ಲೀನ್‌ ಸ್ವೀಪ್‌ ಮಾಡಿ ನ್ಯೂಜಿಲೆಂಡ್‌ ಪ್ರವಾಸವನ್ನು ಭರ್ಜರಿಯಾಗಿ ಆರಂಭಿಸಿದ್ದ ಭಾರತ ತಂಡ, ಏಕದಿನ ಸರಣಿಯಲ್ಲಿ ವೈಟ್‌ವಾಷ್‌ ಮುಖಭಂಗಕ್ಕೊಳಗಾಗಿತ್ತು. ಟೆಸ್ಟ್‌ ಸರಣಿಯ ಮೊದಲ ಪಂದ್ಯದಲ್ಲಿ ಹೀನಾಯ ಸೋಲಿಗೆ ಗುರಿಯಾಗಿರುವ ಮೂಲಕ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಮೊದಲ ಸೋಲು ಕಂಡಿದ್ದ ಟೀಂ ಇಂಡಿಯಾ, ಪುಟಿದೇಳಲು ಹಾತೊರೆಯುತ್ತಿದೆ. ಕಿವೀಸ್‌ ವಿರುದ್ಧ 2ನೇ ಹಾಗೂ ಅಂತಿಮ ಟೆಸ್ಟ್‌ ಶನಿವಾರದಿಂದ ಇಲ್ಲಿ ಆರಂಭಗೊಳ್ಳಲಿದ್ದು, ಭಾರತ ಮಾಡು ಇಲ್ಲವೇ ಮಡಿ ಎನ್ನುವ ಪರಿಸ್ಥಿತಿಯಲ್ಲಿದೆ.

ಬ್ಯಾಟಿಂಗ್‌ ವೈಫಲ್ಯದಿಂದ ಮೊದಲ ಟೆಸ್ಟ್‌ನಲ್ಲಿ ಪರಾಭವಗೊಂಡಿದ್ದ ಟೀಂ ಇಂಡಿಯಾಗೆ 2ನೇ ಪಂದ್ಯದಲ್ಲೂ ಕಠಿಣ ಸವಾಲು ಎದುರಾಗಲಿದೆ. ಇಲ್ಲಿನ ಹೇಗ್ಲಿ ಓವಲ್‌ನಲ್ಲಿ ಹಸಿರು ಪಿಚ್‌ ಸಿದ್ಧಗೊಳಿಸಿದ್ದು ಕಿವೀಸ್‌ ವೇಗಿಗಳು ಮತ್ತೊಮ್ಮೆ ಪ್ರಾಬಲ್ಯ ಮೆರೆದರೆ ಅಚ್ಚರಿಯಿಲ್ಲ.

2ನೇ ಟೆಸ್ಟ್ ಆರಂಭಕ್ಕೂ ಮುನ್ನ ಟೀಂ ಇಂಡಿಯಾ ಸ್ಟಾರ್ ವೇಗಿ ಔಟ್.!

ಪೃಥ್ವಿಗೆ ಗಾಯ: ಆರಂಭಿಕ ಬ್ಯಾಟ್ಸ್‌ಮನ್‌ ಪೃಥ್ವಿ ಶಾ ಕಾಲಿಗೆ ಗಾಯವಾಗಿದ್ದು, 2ನೇ ಟೆಸ್ಟ್‌ನಲ್ಲಿ ಆಡುವುದು ಅನುಮಾನವೆನಿಸಿದೆ. ಅವರನ್ನು ಕಣಕ್ಕಿಳಿಸುವ ಬಗ್ಗೆ ಶುಕ್ರವಾರ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಂಡದ ಮೂಲಗಳು ತಿಳಿಸಿವೆ. ಗುರುವಾರ ಶುಭ್‌ಮನ್‌ ಗಿಲ್‌ ಹೆಚ್ಚು ಕಾಲ ನೆಟ್ಸ್‌ನಲ್ಲಿ ಅಭ್ಯಾಸ ನಡೆಸಿದರು. ಕೋಚ್‌ ರವಿಶಾಸ್ತ್ರಿ, ಗಿಲ್‌ ಜತೆ ಕೆಲ ಕಾಲ ಮಾತುಕತೆ ಸಹ ನಡೆಸಿ ಕೆಲ ಸಲಹೆಗಳನ್ನು ನೀಡಿದರು. ಪೃಥ್ವಿ ಹೊರಬಿದ್ದರೆ ಮಯಾಂಕ್‌ ಅಗರ್‌ವಾಲ್‌ ಜತೆ ಗಿಲ್‌ ಇನ್ನಿಂಗ್ಸ್‌ ಆರಂಭಿಸಲಿದ್ದಾರೆ.

ಕೊಹ್ಲಿ ಮೇಲೆ ಒತ್ತಡ: ನ್ಯೂಜಿಲೆಂಡ್‌ ಪ್ರವಾಸದಲ್ಲಿ ನಾಯಕ ವಿರಾಟ್‌ ಕೊಹ್ಲಿ ತೀರಾ ಸಾಧಾರಣ ಎನಿಸುವ ಪ್ರದರ್ಶನ ತೋರಿದ್ದಾರೆ. ಪ್ರವಾಸದ ಅಂತಿಮ ಪಂದ್ಯದಲ್ಲಾದರೂ ಅವರಿಂದ ದೊಡ್ಡ ಇನ್ನಿಂಗ್ಸ್‌ ಮೂಡಿಬರಬೇಕಿದೆ. ತಂಡಕ್ಕೆ ಕೊಹ್ಲಿಯ ಕೊಡುಗೆ ಅತ್ಯಗತ್ಯ ಎನಿಸಿದ್ದು, ವೈಟ್‌ವಾಷ್‌ ಮುಖಭಂಗವನ್ನು ತಪ್ಪಿಸಬೇಕಿದ್ದರೆ ಕೊಹ್ಲಿ ದೊಡ್ಡ ಇನ್ನಿಂಗ್ಸ್‌ ಆಡಲೇಬೇಕಿದೆ. ಚೇತೇಶ್ವರ್‌ ಪೂಜಾರ, ಅಜಿಂಕ್ಯ ರಹಾನೆ, ಹನುಮ ವಿಹಾರಿ, ರಿಷಭ್‌ ಪಂತ್‌ರಿಂದಲೂ ತಂಡ ಹೆಚ್ಚಿನ ಕೊಡುಗೆಯನ್ನು ನಿರೀಕ್ಷೆ ಮಾಡುತ್ತಿದೆ.

ಬೌಲಿಂಗ್‌ ವಿಭಾಗದಲ್ಲಿ ಒಂದು ಬದಲಾವಣೆ ಆಗಲಿದ್ದು, ಗಾಯದ ಸಮಸ್ಯೆಯಿಂದ ಇಶಾಂತ್ ಶರ್ಮಾ ತಂಡದಿಂದ ಹೊರಬಿದ್ದಿದ್ದು ಉಮೇಶ್ ಯಾದವ್ ತಂಡ ಕೂಡಿಕೊಂಡಿದ್ದಾರೆ. 

ಕಿವೀಸ್‌ ಜಯದ ಲೆಕ್ಕಾಚಾರ: ಭಾರತ ವಿರುದ್ಧ ಕ್ಲೀನ್‌ ಸ್ವೀಪ್‌ ಸಾಧಿಸುವ ಲೆಕ್ಕಾಚಾರದಲ್ಲಿರುವ ನ್ಯೂಜಿಲೆಂಡ್‌, ಮೊದಲ ಟೆಸ್ಟ್‌ನಲ್ಲಿ ಆಡಿದ ತಂಡವನ್ನೇ ಉಳಿಸಿಕೊಳ್ಳುವ ಸಾಧ್ಯತೆ ಇದೆ. 6 ಅಡಿ 8 ಇಂಚು ಉದ್ದದ ಕೈಲ್‌ ಜ್ಯಾಮಿಸನ್‌ ಆಲ್ರೌಂಡ್‌ ಪ್ರದರ್ಶನ ತೋರುತ್ತಿರುವುದು ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ. ಮೊದಲ ಪಂದ್ಯದಲ್ಲಿ ತೋರಿದ ಸಾಂಘಿಕ ಪ್ರದರ್ಶನವನ್ನು ಕಿವೀಸ್‌ ಮುಂದುವರಿಸಿದರೆ, ಸರಣಿ ಗೆಲ್ಲುವಲ್ಲಿ ಅನುಮಾನವಿಲ್ಲ.

ಪಿಚ್‌ ರಿಪೋರ್ಟ್‌

ಹೇಗ್ಲಿ ಓವಲ್‌ ಪಿಚ್‌ ವೇಗದ ಬೌಲರ್‌ಗಳಿಗೆ ಹೆಚ್ಚಿನ ನೆರವು ನೀಡಲಿದೆ. ಹಸಿರು ಪಿಚ್‌ನಲ್ಲಿ ರನ್‌ ಗಳಿಸುವುದು ಸುಲಭವಲ್ಲ. ಟಾಸ್‌ ಗೆಲ್ಲುವ ತಂಡ ಮೊದಲು ಫೀಲ್ಡಿಂಗ್‌ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು. ಎರಡೂ ತಂಡಗಳು ಮೂವರು ವೇಗಿಗಳನ್ನು ಆಡಿಸಲಿವೆ.

ಸಂಭವನೀಯ ಆಟಗಾರರ ಪಟ್ಟಿ

ಭಾರತ: ಮಯಾಂಕ್‌ ಅಗರ್‌ವಾಲ್‌, ಪೃಥ್ವಿ/ಗಿಲ್‌, ಚೇತೇಶ್ವರ್‌ ಪೂಜಾರ, ವಿರಾಟ್‌ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ಹನುಮ ವಿಹಾರಿ, ರಿಷಭ್‌ ಪಂತ್‌, ಆರ್‌.ಅಶ್ವಿನ್‌, ಶಮಿ, ಉಮೇಶ್‌, ಜಸ್‌ಪ್ರೀತ್‌ ಬುಮ್ರಾ.

ನ್ಯೂಜಿಲೆಂಡ್‌: ಟಾಮ್‌ ಲೇಥಮ್‌, ಟಾಮ್‌ ಬ್ಲಂಡೆಲ್‌, ಕೇನ್‌ ವಿಲಿಯಮ್ಸನ್‌ (ನಾಯಕ), ರಾಸ್‌ ಟೇಲರ್‌, ಹೆನ್ರಿ ನಿಕೋಲ್ಸ್‌, ಬಿ.ಜೆ.ವ್ಯಾಟ್ಲಿಂಗ್‌, ಡಿ ಗ್ರಾಂಡ್‌ಹೋಮ್‌, ಕೈಲ್‌ ಜ್ಯಾಮಿಸನ್‌, ಟಿಮ್‌ ಸೌಥಿ, ಟ್ರೆಂಟ್‌ ಬೌಲ್ಟ್‌, ಅಜಾಜ್‌ ಪಟೇಲ್‌.

ಪಂದ್ಯ ಆರಂಭ: ಬೆಳಗ್ಗಿನ ಜಾವ 4ಕ್ಕೆ, 
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ 1
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕುಲ್ದೀಪ್-ಪ್ರಸಿದ್ದ್ ಮಾರಕ ದಾಳಿ; ಏಕದಿನ ಸರಣಿ ಗೆಲ್ಲಲು ಭಾರತಕ್ಕೆ ಸ್ಪರ್ಧಾತ್ಮಕ ಗುರಿ
Ind vs SA: ಶುಭ್‌ಮನ್ ಗಿಲ್ ಫುಲ್ ಫಿಟ್; ಈ ಡೇಟ್‌ಗೆ ಟೀಂ ಇಂಡಿಯಾಗೆ ಕಮ್‌ಬ್ಯಾಕ್ ಮಾಡೋದು ಫಿಕ್ಸ್!