
"
ವೆಲ್ಲಿಂಗ್ಟನ್(ಫೆ.22): ಅಲ್ಪ ಮೊತ್ತಕ್ಕೆ ಕುಸಿದು ತತ್ತರಿಸಿದ್ದ ಭಾರತ ಎರಡನೇ ದಿನದಾಟದಂತ್ಯದಲ್ಲಿ ಕಮ್‌ಬ್ಯಾಕ್ ಮಾಡುವಲ್ಲಿ ಯಶಸ್ವಿಯಾಗಿದೆ. ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಾಟದಂತ್ಯಕ್ಕೆ ನ್ಯೂಜಿಲೆಂಡ್ ತಂಡ 5 ವಿಕೆಟ್ ಕಳೆದುಕೊಂಡು 216 ರನ್ ಬಾರಿಸಿದ್ದು, ಒಟ್ಟಾರೆ 51 ರನ್‌ಗಳ ಮುನ್ನಡೆ ಸಾಧಿಸಿದೆ.
ಭಾರತ ತಂಡವನ್ನು ಕೇವಲ 165 ರನ್‌ಗಳಿಗೆ ಆಲೌಟ್ ಮಾಡಿದ ನ್ಯೂಜಿಲೆಂಡ್ ಬೃಹತ್ ಮೊತ್ತ ದಾಖಲಿಸುವ ಮುನ್ಸೂಚನೆ ನೀಡಿತು. ಆದರೆ ನಾಯಕ ಕೇನ್ ವಿಲಿಯಮ್ಸನ್ ಹಾಗೂ ರಾಸ್ ಟೇಲರ್ ವಿಕೆಟ್ ಕಬಳಿಸುವ ಮೂಲಕ ಕಿವೀಸ್ ಬೃಹತ್ ಮೊತ್ತದ ಕನಸಿಗೆ ಟೀಂ ಇಂಡಿಯಾ ವೇಗಿಗಳು ತಣ್ಣೀರೆರಚಿದ್ದಾರೆ. ಕೇನ್ ವಿಲಿಯಮ್ಸನ್(89) 11 ರನ್‌ಗಳಿಂದ ಶತಕ ವಂಚಿತರಾದರೆ, 100ನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ ರಾಸ್ ಟೇಲರ್(44) ಕೇವಲ 6 ರನ್‌ಗಳಿಂದ ಅರ್ಧಶತಕ ತಪ್ಪಿಸಿಕೊಂಡರು. ಭಾರತ ಪರ ಇಶಾಂತ್ ಶರ್ಮಾ 3 ವಿಕೆಟ್ ಪಡೆದರೆ, ಅಶ್ವಿನ್ ಹಾಗೂ ಶಮಿ ತಲಾ ಒಂದೊಂದು ವಿಕೆಟ್ ಪಡೆದರು.
ಟೀಂ ಇಂಡಿಯಾ 165ಕ್ಕೆ ಆಲೌಟ್, ಬೃಹತ್ ಮೊತ್ತದತ್ತ ಕಿವೀಸ್
ನ್ಯೂಜಿಲೆಂಡ್ ಆರಂಭಿಕ ಬ್ಯಾಟ್ಸ್‌ಮನ್ ಟಾಮ್ ಲಾಥಮ್ 11 ರನ್ ಗಳಿಸಿ ಇಶಾಂತ್‌ಗೆ ಮೊದಲ ಬಲಿಯಾದರು. ಇನ್ನು ನೆಲಕಚ್ಚಿ ಆಡುವ ಪ್ರಯತ್ನದಲ್ಲಿದ್ದ ಟಾಮ್ ಬ್ಲಂಡೆಲ್(80 ಎಸೆತ, 30 ರನ್) ಇಶಾಂತ್ ಶರ್ಮಾ ಎಸೆದ ಅತ್ಯದ್ಭುತ ಇನ್‌ಸ್ವಿಂಗ್ ದಾಳಿಗೆ ಪೆವಿಲಿಯನ್ ಸೇರಬೇಕಾಯಿತು. ಆಬಳಿಕ ಜತೆಯಾದ ನಾಯಕ ಕೇನ್ ವಿಲಿಯಮ್ಸನ್ ಹಾಗೂ ರಾಸ್ ಟೇಲರ್ ಮೂರನೇ ವಿಕೆಟ್‌ಗೆ 93 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಮೊದಲ ಇನಿಂಗ್ಸ್ ಮುನ್ನಡೆ ದಕ್ಕಿಸಿಕೊಟ್ಟರು.
ದಿನದಾಟದ ಕೊನೆಯಲ್ಲಿ ಕಮ್‌ಬ್ಯಾಕ್ ಮಾಡಿದ ಭಾರತ: ಒಂದು ಹಂತದಲ್ಲಿ 166 ರನ್‌ಗಳಿಗೆ ಕೇವಲ 2 ವಿಕೆಟ್ ಕಳೆದುಕೊಂಡಿದ್ದ ನ್ಯೂಜಿಲೆಂಡ್, ರಾಸ್ ಟೇಲರ್ ವಿಕೆಟ್ ಬೀಳುತ್ತಿದ್ದಂತೆ ನಿರಂತರ ವಿಕೆಟ್ ಕಳೆದುಕೊಂಡಿತು. ಟೇಲರ್ 46 ರನ್ ಬಾರಿಸಿ ಇಶಾಂತ್‌ಗೆ ಮೂರನೇ ಬಲಿಯಾದರೆ, ಶತಕದತ್ತ ಮುನ್ನುಗ್ಗುತ್ತಿದ್ದ ಕೇನ್ ವಿಲಿಯಮ್ಸನ್(89) ಶಮಿ ಬೌಲಿಂಗ್‌ನಲ್ಲಿ ಜಡೇಜಾ ಹಿಡಿದ ಮಿಂಚಿನ ಕ್ಯಾಚ್‌ಗೆ ಪೆವಿಲಿಯನ್ ಸೇರಬೇಕಾಯಿತು. ಇನ್ನು ಹೆನ್ರಿ ನಿಕೋಲ್ಸ್ ವಿಕೆಟ್ ಪಡೆಯುವ ಮೂಲಕ ಅಶ್ವಿನ್ ಭಾರತ ತಿರುಗೇಟು ನೀಡಲು ನೆರವಾದರು. ಮೂರನೇ ದಿನದಾಟ ಪಂದ್ಯದ ಫಲಿತಾಂಶ ನಿರ್ಧರಿಸುವ ಸಾಧ್ಯತೆಯಿದೆ.
ಇದಕ್ಕೂ ಮೊದಲು 122 ರನ್‌ಗಳಿಂದ ಬ್ಯಾಟಿಂಗ್ ಆರಂಭಿಸಿದ ಭಾರತ ಟಿಮ್ ಸೌಥಿ ದಾಳಿಗೆ ಕುಸಿಯಿತು. ತನ್ನ ಖಾತೆಗೆ 43 ರನ್ ಸೇರಿಸುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡಿತು. ಟಿಮ್ ಸೌಥಿ 3 ವಿಕೆಟ್ ಪಡೆದು ಮಿಂಚಿದರು. ಒಟ್ಟಾರೆ ಕಿವೀಸ್ ಪರ ಸೌಥಿ ಹಾಗೂ ಜಾಮಿಸನ್ ತಲಾ 4 ವಿಕೆಟ್ ಪಡೆದರು.
ಫೆಬ್ರವರಿ 22ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.