T20 World Cup 2026: ಇಂಗ್ಲೆಂಡ್‌ನ ಬಗ್ಗುಬಡಿದು ಫೈನಲ್‌ಗೇರುತ್ತಾ ಟೀಂ ಇಂಡಿಯಾ?

Kannadaprabha News   | Kannada Prabha
Published : Mar 05, 2026, 10:05 AM IST
Team India

ಸಾರಾಂಶ

ಟಿ20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಭಾರತ ಮತ್ತು ಇಂಗ್ಲೆಂಡ್‌ ತಂಡಗಳು ಸತತ ಮೂರನೇ ಬಾರಿಗೆ ಮುಖಾಮುಖಿಯಾಗುತ್ತಿವೆ. 2022ರ ಸೋಲಿಗೆ ಸೇಡು ತೀರಿಸಿಕೊಳ್ಳಲು ಭಾರತ ಸಜ್ಜಾಗಿದ್ದರೆ, ಇಂಗ್ಲೆಂಡ್ ಕೂಡ ಬಲಿಷ್ಠ ತಂಡದೊಂದಿಗೆ ಕಣಕ್ಕಿಳಿಯುತ್ತಿದೆ. 

ಮುಂಬೈ: ಸತತ 3ನೇ ಬಾರಿಯೂ ಭಾರತ ಹಾಗೂ ಇಂಗ್ಲೆಂಡ್‌ ತಂಡಗಳು ಟಿ20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಸೆಣಸಾಟಕ್ಕೆ ಸಜ್ಜಾಗಿವೆ. 2022, 2024ರ ಬಳಿಕ ಈ ವರ್ಷದ ವಿಶ್ವಕಪ್‌ನಲ್ಲಿ ಉಭಯ ತಂಡಗಳು ಗುರುವಾರ 2ನೇ ಸೆಮಿಫೈನಲ್‌ ಪಂದ್ಯದಲ್ಲಿ ಕಾದಾಡಲಿವೆ. ಪಂದ್ಯಕ್ಕೆ ಮುಂಬೈನ ವಾಂಖೇಡೆ ಕ್ರೀಡಾಂಗಣ ಆತಿಥ್ಯ ವಹಿಸಲಿದ್ದು, ರೋಚಕ ಪೈಪೋಟಿ ನಿರೀಕ್ಷಿಸಲಾಗಿದೆ.

ಗುಂಪು ಹಂತದಲ್ಲಿ ಅಜೇಯವಾಗಿದ್ದ ಭಾರತ, ಸೂಪರ್‌-8 ಹಂತದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೋತಿತ್ತು. ಅತ್ತ ಇಂಗ್ಲೆಂಡ್‌ ತಂಡ ಗುಂಪು ಹಂತದಲ್ಲಿ ವಿಂಡೀಸ್ ವಿರುದ್ಧ ಸೋಲು ಕಂಡಿದ್ದರೂ ಸೂಪರ್‌-8ನಲ್ಲಿ ಅಜೇಯವಾಗಿ ಉಳಿದಿತ್ತು. ಟೂರ್ನಿಯಲ್ಲಿ ಪ್ರದರ್ಶನದ ಆಧಾರದಲ್ಲಿ ಉಭಯ ತಂಡಗಳೂ ಬಲಿಷ್ಠವಾಗಿದ್ದು, ಒಂದಿಬ್ಬರ ಆಟಕ್ಕೆ ಜೋತು ಬೀಳದೆ ಸಂಘಟಿತ ಆಟವಾಡುವ ತಂಡಕ್ಕೆ ಗೆಲುವು ಒಲಿಯಲಿದೆ.

ಬ್ಯಾಟರ್ಸ್‌ ಮೇಲೆ ಒತ್ತಡ:

ಸಂಜು ಸ್ಯಾಮ್ಸನ್‌ ತಂಡದಲ್ಲಿ ಸ್ಥಾನ ಪಡೆದು, ವಿಂಡೀಸ್‌ ವಿರುದ್ಧ ನಿರ್ಣಾಯಕ ಪಂದ್ಯದಲ್ಲಿ ಅತ್ಯಾಕರ್ಷಕ 97 ರನ್‌ ಸಿಡಿಸಿದ್ದರು. ದೀರ್ಘ ಕಾಲದಿಂದ ಭಾರತ ತಂಡದ ಭಾಗವಾಗಿದ್ದರೂ ಅವರ ಶ್ರೇಷ್ಠ ಪ್ರದರ್ಶನ ‘ವರ್ಚುವಲ್‌ ಕ್ವಾರ್ಟರ್ ಫೈನಲ್‌’ ಪಂದ್ಯದಲ್ಲಿ ಬಂದಿತ್ತು. ಆದರೆ ಇತರ ಬ್ಯಾಟರ್‌ಗಳು ಮಹತ್ವದ ಸನ್ನಿವೇಶಗಳಲ್ಲಿ ತಂಡಕ್ಕೆ ಕೈಕೊಡುತ್ತಿದ್ದಾರೆ. ಟೂರ್ನಿಯ ಆರಂಭದಲ್ಲಿ ಅಬ್ಬರಿಸಿದ್ದ ಇಶಾನ್‌ ಕಿಶನ್‌ ಈಗ ವಿಫಲರಾಗುತ್ತಿದ್ದಾರೆ. ಅಭಿಷೇಕ್‌ ಶರ್ಮಾ ಬ್ಯಾಟ್‌ನಿಂದ ರನ್‌ ಹರಿದುಬರುತ್ತಿಲ್ಲ. ತಿಲಕ್‌ ವರ್ಮಾ, ನಾಯಕ ಸೂರ್ಯಕುಮಾರ್‌ ಸ್ಥಿರ ಆಟವಾಡುತ್ತಿಲ್ಲ. ಹಾರ್ದಿಕ್‌ ಪಾಂಡ್ಯ, ಅಕ್ಷರ್‌ ಪಟೇಲ್‌ ಆಲ್ರೌಂಡ್‌ ಆಟ ನಿರ್ಣಾಯಕ ಎನಿಸಿಕೊಂಡಿದೆ.

ಇನ್ನು, ಟಿ20 ವಿಶ್ವ ನಂ.1 ಬೌಲರ್‌ ವರುಣ್‌ ಚಕ್ರವರ್ತಿ ದುಬಾರಿಯಾಗುತ್ತಿದ್ದರೂ, ಈ ಪಂದ್ಯದಲ್ಲಿ ಅವರನ್ನು ಹೊರಗಿಡುವ ಸಾಹಸವನ್ನು ಭಾರತ ಮಾಡುವ ಸಾಧ್ಯತೆ ಕಡಿಮೆ. ಜಸ್‌ಪ್ರೀತ್‌ ಬೂಮ್ರಾ ಅಮೋಘ ದಾಳಿ ಸಂಘಟಿಸುತ್ತಿದ್ದರೂ ಕೊನೆ 5 ಓವರ್‌ಗಳಲ್ಲಿ ಭಾರತ ಎದುರಾಳಿಯ ರನ್‌ ವೇಗಕ್ಕೆ ಬ್ರೇಕ್‌ ಹಾಕಬೇಕಾದ ಅನಿವಾರ್ಯತೆ ಇದೆ.

ಸೇಡಿನ ತವಕ: 2022ರ ವಿಶ್ವಕಪ್‌ ಸೆಮೀಸ್‌ನಲ್ಲಿ ಭಾರತವನ್ನು 10 ವಿಕೆಟ್‌ಗಳಿಂದ ಸೋಲಿಸಿದ್ದ ಇಂಗ್ಲೆಂಡ್‌ ಚಾಂಪಿಯನ್‌ ಆಗಿತ್ತು. 2024ರಲ್ಲಿ ಇಂಗ್ಲೆಂಡ್‌ ವಿರುದ್ಧ ಗೆದ್ದಿದ್ದ ಭಾರತ ಬಳಿಕ ಪ್ರಶಸ್ತಿ ತನ್ನದಾಗಿಸಿಕೊಂಡಿತ್ತು. ಈ ಬಾರಿ ಭಾರತದ ವಿರುದ್ಧ ಸೇಡು ತೀರಿಸಿಕೊಳ್ಳಲು ಇಂಗ್ಲೆಂಡ್‌ ಕಾಯುತ್ತಿದೆ. ನಾಯಕ ಹ್ಯಾರಿ ಬ್ರೂಕ್‌ ಸ್ಫೋಟಕ ಆಟವಾಡುತ್ತಿದ್ದು, ವಿಲ್‌ ಜ್ಯಾಕ್ಸ್‌, ಸ್ಯಾಮ್‌ ಕರ್ರನ್‌ ಏಕಾಂಗಿಯಾಗಿ ಪಂದ್ಯ ಗೆಲ್ಲಿಸಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಸ್ಫೋಟಕ ಬ್ಯಾಟರ್‌ಗಳಾದ ಫಿಲ್‌ ಸಾಲ್ಟ್‌, ಬೆಥೆಲ್‌ರನ್ನು ಭಾರತ ಕಟ್ಟಿಹಾಕಬೇಕಿದ್ದು, ಪ್ರಮುಖ ಸ್ಪಿನ್ನರ್‌ ಆದಿಲ್‌ ರಶೀದ್‌ರನ್ನು ಎದುರಿಸಲು ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದೆ ಎಂದು ಕಾದು ನೋಡಬೇಕಿದೆ.

ಸಂಭವನೀಯ ತಂಡ:

ಭಾರತ: ಅಭಿಷೇಕ್‌, ಸ್ಯಾಮ್ಸನ್‌, ಇಶಾನ್‌, ತಿಲಕ್‌, ಸೂರ್ಯಕುಮಾರ್(ನಾಯಕ), ಹಾರ್ದಿಕ್‌, ದುಬೆ, ಅಕ್ಷರ್‌, ಅರ್ಶ್‌ದೀಪ್‌, ಬೂಮ್ರಾ, ವರುಣ್‌.

ಇಂಗ್ಲೆಂಡ್‌: ಸಾಲ್ಟ್‌, ಬಟ್ಲರ್‌, ಬ್ರೂಕ್‌(ನಾಯಕ), ಬೆಥೆಲ್‌, ಟಾಮ್‌ ಬ್ಯಾಂಟನ್‌, ಕರ್ರನ್‌, ವಿಲ್‌ ಜ್ಯಾಕ್ಸ್‌, ಓವರ್ಟನ್‌, ಡಾವ್ಸನ್‌, ಆರ್ಚರ್‌, ಆದಿಲ್‌ ರಶೀದ್‌.

ಮುಖಾಮುಖಿ: 29

ಭಾರತ: 17

ಇಂಗ್ಲೆಂಡ್‌: 12

ಪಂದ್ಯ: ಸಂಜೆ 7 ಗಂಟೆಗೆ

ಪಿಚ್‌ ರಿಪೋರ್ಟ್‌

ಈ ಸೆಮಿಫೈನಲ್‌ ಪಂದ್ಯ ನಡೆಯಲಿರುವ ಪಿಚ್‌ ಫೆ.12ರ ಬಳಿಕ ಬಳಕೆಯಾಗಿಲ್ಲ. ಪಿಚ್‌ನಲ್ಲಿ ಸ್ವಲ್ಪ ಹುಲ್ಲು ಬೆಳೆದಿದೆ. ಇಲ್ಲಿ ದೊಡ್ಡ ಮೊತ್ತ ನಿರೀಕ್ಷೆಯಿದ್ದು, ಹೆಚ್ಚಿನ ಬೌನ್ಸರ್‌ಗಳೂ ಕಂಡುಬರಬಹುದು. ಸ್ಪಿನ್ನರ್‌ಗಳು ಹೆಚ್ಚಿನ ತಿರುವು ಪಡೆದುಕೊಳ್ಳುವ ಸಾಧ್ಯತೆ ಕಡಿಮೆ.

ಸೆಮಿಫೈನಲ್‌ ಹಾದಿ

ಭಾರತ

1. ಗುಂಪು ಹಂತದಲ್ಲಿ ಎಲ್ಲಾ 4 ಪಂದ್ಯಗಳಲ್ಲೂ ಗೆಲುವು. ಅಗ್ರಸ್ಥಾನಿಯಾಗಿ ಸೂಪರ್‌-8 ಪ್ರವೇಶ.

2. ಸೂಪರ್‌-8 ಹಂತದಲ್ಲಿ ದ.ಆಫ್ರಿಕಾ ವಿರುದ್ಧ ಸೋಲು.

3. 2 ಮಹತ್ವದ ಪಂದ್ಯದಲ್ಲಿ ಗೆದ್ದು ಸೆಮೀಸ್‌ಗೆ ಅರ್ಹತೆ.

ಇಂಗ್ಲೆಂಡ್‌

1. ಗುಂಪು ಹಂತದಲ್ಲಿ ಇಟಲಿ, ನೇಪಾಳ ವಿರುದ್ಧ ಸೋಲಿನ ಆಘಾತದಿಂದ ಪಾರು.

2. ವಿಂಡೀಸ್‌ ವಿರುದ್ಧ ಸೋತರೂ ಸೂಪರ್‌-8ಗೆ ಪ್ರವೇಶ.

2. ಸೂಪರ್‌-8ನಲ್ಲಿ ಪಾಕ್‌, ಲಂಕಾ, ಕಿವೀಸ್‌ ವಿರುದ್ಧ ಗೆಲುವು

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸೆಮಿಫೈನಲ್‌ನಲ್ಲಿ ಟೀಂ ಇಂಡಿಯಾಗೆ ಕಂಟಕವಾಗಬಲ್ಲ ಇಂಗ್ಲೆಂಡ್‌ನ ಈ ನಾಲ್ವರು ಆಟಗಾರರಿವರು!
ಟಿ20 ವಿಶ್ವಕಪ್‌ ಸೆಮಿಫೈನಲ್: ನಿನ್ನೆಯ ನ್ಯೂಜಿಲೆಂಡ್ - ದಕ್ಷಿಣ ಆಫ್ರಿಕಾ ನಡುವಿನ ಮ್ಯಾಚ್ ಗೆದ್ದಿದ್ದು ಯಾರು?