
ಅಹಮದಾಬಾದ್(ಫೆ.24): ವಿಶ್ವದ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ ಎನಿಸಿಕೊಂಡಿರುವ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂಗ್ಲೆಂಡ್ ವಿರುದ್ದ ಭಾರತೀಯ ಬೌಲರ್‌ಗಳು ಕಮಾಲ್ ಮಾಡಿದ್ದು, ಮೊದಲ ದಿನದಾಟದ ಚಹಾ ವಿರಾಮದ ವೇಳೆಗೆ ಇಂಗ್ಲೆಂಡ್ 4 ವಿಕೆಟ್ ಕಳೆದುಕೊಂಡು 81 ರನ್ ಬಾರಿಸಿ ಸಂಕಷ್ಟಕ್ಕೆ ಸಿಲುಕಿದೆ.
ಹೌದು, ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್ ತಂಡಕ್ಕೆ 100ನೇ ಟೆಸ್ಟ್ ಪಂದ್ಯವಾಡುತ್ತಿರುವ ಇಶಾಂತ್ ಶರ್ಮಾ ತಾವೆಸೆದ ಎರಡನೇ ಓವರ್‌ನಲ್ಲೇ ಮೊದಲ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು. ಡೋಮಿನಿಕ್ ಸಿಬ್ಲಿ ಶೂನ್ಯ ಸುತ್ತಿ ಪೆವಿಲಿಯನ್ ಸೇರಿದರು. ಇದರ ಬೆನ್ನಲ್ಲೇ ಜಾನಿ ಬೇರ್‌ಸ್ಟೋವ್ ಕೂಡಾ ಶೂನ್ಯ ಸುತ್ತಿ ಅಕ್ಷರ್ ಪಟೇಲ್‌ಗೆ ವಿಕೆಟ್ ಒಪ್ಪಿಸಿದರು.
ಪಿಂಕ್ ಬಾಲ್ ಟೆಸ್ಟ್: ವಿಶ್ವದ ಅತೀದೊಡ್ಡ ಕ್ರೀಡಾಂಗಣದಲ್ಲಿ ಮೊದಲ ಟಾಸ್ ಗೆದ್ದ ಇಂಗ್ಲೆಂಡ್!
ಇನ್ನು ನಾಯಕ ಜೋ ರೂಟ್ 37 ಎಸೆತಗಳಲ್ಲಿ 2 ಬೌಂಡರಿ ಸಹಿತ 17 ರನ್ ಬಾರಿಸಿದ್ದಾಗ ಅಶ್ವಿನ್ ಚಾಣಾಕ್ಷ ಬೌಲಿಂಗ್ ಲೈನ್ ಗ್ರಹಿಸದೇ ಎಲ್‌ಬಿ ಬಲೆಗೆ ಬಿದ್ದರು. ಒಂದು ಕಡೆ ನಿರಂತರ ವಿಕೆಟ್ ಬೀಳುತ್ತಿದ್ದರೂ ಮತ್ತೊಂದೆಡೆ ಸಾಕಷ್ಟು ಎಚ್ಚರಿಕೆಯಿಂದ ಬ್ಯಾಟಿಂಗ್ ನಡೆಸಿದ ಮತ್ತೋರ್ವ ಆರಂಭಿಕ ಬ್ಯಾಟ್ಸ್‌ಮನ್ ಜಾಕ್ ಕ್ರಾವ್ಲಿ ತಮ್ಮ ವೃತ್ತಿಜೀವನದ 4ನೇ ಅರ್ಧಶತಕ ಪೂರೈಸಿದರು. ಅಂತಿಮವಾಗಿ ಕ್ರಾವ್ಲಿ 84 ಎಸೆತಗಳನ್ನು ಎದುರಿಸಿ 10 ಬೌಂಡರಿ ಸಹಿತ 53 ರನ್ ಬಾರಿಸಿ ಅಕ್ಷರ್ ಪಟೇಲ್‌ಗೆ ಎರಡನೇ ಬಲಿಯಾದರು.
ಸದ್ಯ ಇಂಗ್ಲೆಂಡ್ ಆಲ್ರೌಂಡರ್ ಬೆನ್ ಸ್ಟೋಕ್ಸ್(6) ಹಾಗೂ ಓಲಿ ಪೋಪ್ ಒಂದು ರನ್ ಬಾರಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ. ಈ ಇಬ್ಬರು ಆಟಗಾರರ ಜತೆಯಾಟದ ಮೇಲೆ ಪಂದ್ಯದ ಫಲಿತಾಂಶ ದಿಕ್ಕು ನಿರ್ಧಾರವಾಗುವ ಸಾಧ್ಯತೆಯಿದೆ.
ಸಂಕ್ಷಿಪ್ತ ಸ್ಕೋರ್
ಇಂಗ್ಲೆಂಡ್: 81/4
ಜಾಕ್ ಕ್ರಾವ್ಲಿ: 53
ಅಕ್ಷರ್ ಪಟೇಲ್: 30/2
(ಮೊದಲ ದಿನದಾಟದ ಚಹಾ ವಿರಾಮದ ವೇಳೆಗೆ)
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.