ಸಂಜು ಸ್ಯಾಮ್ಸನ್‌ಗೆ ಗೇಟ್‌ಪಾಸ್? ವೈಭವ್ ಸೂರ್ಯವಂಶಿ ಪಾದಾರ್ಪಣೆ: ಇಂಗ್ಲೆಂಡ್ ಎದುರಿನ ಮೊದಲ ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ

Published : Jun 30, 2026, 04:44 PM IST
Shreyas Iyer-Vaibhav Sooryavanshi

ಸಾರಾಂಶ

ಐರ್ಲೆಂಡ್ ವಿರುದ್ಧದ ಸೋಲಿನ ನಂತರ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಸಜ್ಜಾಗಿದೆ. ತಂಡದಲ್ಲಿ ಹಲವು ಬದಲಾವಣೆಗಳಾಗುವ ನಿರೀಕ್ಷೆಯಿದ್ದು, 15 ವರ್ಷದ ವೈಭವ್ ಸೂರ್ಯವಂಶಿ ಪದಾರ್ಪಣೆ ಮಾಡುವ ಸಾಧ್ಯತೆಯಿದೆ. ನಾಯಕ ಶ್ರೇಯಸ್ ಅಯ್ಯರ್‌ಗೆ ಈ ಪಂದ್ಯ ಅತ್ಯಂತ ನಿರ್ಣಾಯಕವಾಗಿದೆ.

ಲಂಡನ್: ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಅನಿರೀಕ್ಷಿತವಾಗಿ ಸೋತು ಶಾಕ್‌ನಲ್ಲಿರುವ ಟೀಂ ಇಂಡಿಯಾ, ಈಗ ಮತ್ತೊಂದು ಅಗ್ನಿಪರೀಕ್ಷೆಗೆ ಸಜ್ಜಾಗಿದೆ. ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟಿ20 ಸರಣಿ ಆಡಲಿದ್ದು, ಮೊದಲ ಪಂದ್ಯ ನಾಳೆ ಅಂದರೆ ಜುಲೈ 01ರಂದು ಚೆಸ್ಟರ್-ಲೀ-ಸ್ಟ್ರೀಟ್‌ನ ರಿವರ್‌ಸೈಡ್ ಗ್ರೌಂಡ್‌ನಲ್ಲಿ ನಡೆಯಲಿದೆ. ಭಾರತೀಯ ಕಾಲಮಾನ ರಾತ್ರಿ 10 ಗಂಟೆಗೆ ಪಂದ್ಯ ಆರಂಭವಾಗಲಿದೆ. ಐರ್ಲೆಂಡ್ ವಿರುದ್ಧದ ಸೋಲಿನ ಹಿನ್ನೆಲೆಯಲ್ಲಿ, ಭಾರತ ತಂಡವು ಇಂಗ್ಲೆಂಡ್ ವಿರುದ್ಧ ಹಲವು ಬದಲಾವಣೆಗಳೊಂದಿಗೆ ಕಣಕ್ಕಿಳಿಯುವ ನಿರೀಕ್ಷೆಯಿದೆ. ವರದಿಗಳ ಪ್ರಕಾರ, 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಭಾರತ ತಂಡಕ್ಕೆ ಪದಾರ್ಪಣೆ ಮಾಡುವ ಸಾಧ್ಯತೆ ಇದೆ.

ಸಂಜು ಸ್ಯಾಮ್ಟನ್‌ಗೆ ಗೇಟ್‌ಪಾಸ್?

ಟಿ20 ವಿಶ್ವಕಪ್‌ನಲ್ಲಿ 'ಸರಣಿ ಶ್ರೇಷ್ಠ' ಪ್ರಶಸ್ತಿ ಗೆದ್ದಿದ್ದ ಸಂಜು ಸ್ಯಾಮ್ಸನ್‌ಗೆ ಐರ್ಲೆಂಡ್ ಸರಣಿಯಲ್ಲಿ ಓಪನರ್ ಆಗಿ ಮಿಂಚಲು ಸಾಧ್ಯವಾಗಿರಲಿಲ್ಲ. ಮೊದಲ ಪಂದ್ಯದಲ್ಲಿ ಕೇವಲ 5 ರನ್ ಗಳಿಸಿದ್ದ ಸಂಜು, ಭಾನುವಾರ ನಡೆದ ಎರಡನೇ ಪಂದ್ಯದಲ್ಲಿ ಗೋಲ್ಡನ್ ಡಕ್ ಆಗಿ ಪೆವಿಲಿಯನ್‌ಗೆ ಮರಳಿದ್ದರು. ಹೀಗಾಗಿ, ಐರ್ಲೆಂಡ್ ವಿರುದ್ಧದ ಎರಡೂ ಪಂದ್ಯಗಳಲ್ಲಿ ಬೆಂಚ್ ಕಾದಿದ್ದ ವೈಭವ್ ಸೂರ್ಯವಂಶಿ, ಸಂಜು ಬದಲಿಗೆ ಓಪನರ್ ಆಗಿ ಕಣಕ್ಕಿಳಿಯುವ ಸೂಚನೆ ಸಿಕ್ಕಿದೆ. ಒಂದು ವೇಳೆ ಮೊದಲ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ, ಭಾರತ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದರೆ, ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಅತಿ ಕಿರಿಯ ಭಾರತೀಯ ಕ್ರಿಕೆಟಿಗ ಎನ್ನುವ ಕೀರ್ತಿಗೆ ಪಾತ್ರರಾಗಲಿದ್ದಾರೆ.

ಒಂದು ವೇಳೆ ಟಾಪ್ ಆರ್ಡರ್‌ನಲ್ಲಿ ಸತತವಾಗಿ ಮೂವರು ಎಡಗೈ ಬ್ಯಾಟ್ಸ್‌ಮನ್‌ಗಳನ್ನು ಆಡಿಸುವುದು ಬೇಡ ಎಂದು ತಂಡ ನಿರ್ಧರಿಸಿದರೆ, ಸಂಜು ಬದಲು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್‌ರನ್ನು ತಂಡದಿಂದ ಕೈಬಿಡಬಹುದು. ಇಶಾನ್ ಕೂಡ ಐರ್ಲೆಂಡ್ ವಿರುದ್ಧ (1 ರನ್, 12 ರನ್) ಉತ್ತಮ ಫಾರ್ಮ್‌ನಲ್ಲಿ ಇರಲಿಲ್ಲ. ಸದ್ಯ ವಿಶ್ವದ ನಂಬರ್ 1 ಟಿ20 ಬ್ಯಾಟ್ಸ್‌ಮನ್ ಆಗಿರುವ ಅಭಿಷೇಕ್ ಶರ್ಮಾ ಇನ್ನೊಬ್ಬ ಓಪನರ್ ಆಗಿ ಆಡಲಿದ್ದಾರೆ. ಐರ್ಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ 20 ಎಸೆತಗಳಲ್ಲಿ 49 ರನ್ ಚಚ್ಚಿದ್ದ ಅಭಿಷೇಕ್ ಸ್ಥಾನ ತಂಡದಲ್ಲಿ ಭದ್ರವಾಗಿದೆ.

ಶ್ರೇಯಸ್ ಅಯ್ಯರ್‌ಗೆ ಇದು ನಿರ್ಣಾಯಕ ಪಂದ್ಯ; ಸುಂದರ್ ವಾಪಸ್?

ನಾಯಕನಾಗಿ ಆಡಿದ ಮೊದಲ ಎರಡು ಪಂದ್ಯಗಳಲ್ಲೂ ಸೋಲು ಕಂಡಿರುವ ಶ್ರೇಯಸ್ ಅಯ್ಯರ್‌ಗೆ ಈ ಪಂದ್ಯ ಬಹಳ ಮುಖ್ಯವಾಗಿದೆ. ತಮ್ಮ ನಾಯಕತ್ವದ ಮೊದಲ ಮೂರು ಟಿ20 ಪಂದ್ಯಗಳನ್ನು ಸೋತ ಮೊದಲ ಭಾರತೀಯ ನಾಯಕ ಎಂಬ ಕೆಟ್ಟ ದಾಖಲೆಯನ್ನು ತಪ್ಪಿಸಿಕೊಳ್ಳಲು ಅಯ್ಯರ್ ಪ್ರಯತ್ನಿಸಲಿದ್ದಾರೆ. ಕಳೆದ ಪಂದ್ಯದಲ್ಲಿ ಪಾದಾರ್ಪಣೆ ಮಾಡಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ವಿಫಲರಾಗಿದ್ದ ಮುಂಬೈ ಆಲ್‌ರೌಂಡರ್ ಸೂರ್ಯಾಂಶ್ ಶೆಡ್ಗೆ ಬದಲು ವಾಷಿಂಗ್ಟನ್ ಸುಂದರ್ ತಂಡಕ್ಕೆ ಮರಳುವ ಸಾಧ್ಯತೆಯಿದೆ. ಆಲ್‌ರೌಂಡರ್ ಅಕ್ಷರ್ ಪಟೇಲ್ ಹಾಗೂ ಹರ್ಷಿತ್ ರಾಣಾ, ಅರ್ಶ್‌ದೀಪ್ ಸಿಂಗ್ ಮತ್ತು ಪ್ರಿನ್ಸ್ ಯಾದವ್ ಅವರನ್ನೊಳಗೊಂಡ ವೇಗದ ಬೌಲಿಂಗ್ ಪಡೆ ತಂಡದಲ್ಲಿ ಮುಂದುವರಿಯಲಿದೆ.

ಇಂಗ್ಲೆಂಡ್ ವಿರುದ್ಧದ ಮೊದಲ ಟಿ20ಗೆ ಭಾರತದ ಸಂಭಾವ್ಯ XI: 

ಅಭಿಷೇಕ್ ಶರ್ಮಾ, ವೈಭವ್ ಸೂರ್ಯವಂಶಿ, ಇಶಾನ್ ಕಿಶನ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ, ಶಿವಂ ದುಬೆ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಹರ್ಷಿತ್ ರಾಣಾ, ಅರ್ಶ್‌ದೀಪ್ ಸಿಂಗ್, ಪ್ರಿನ್ಸ್ ಯಾದವ್.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕಣ್ಣಲ್ಲೆ ಕೊಲ್ಲೋ ಹುಡುಗ..ಜಗತ್ತಿನ ಟಾಪ್‌ 10 ಹ್ಯಾಂಡ್ಸಮ್‌ ಕ್ರಿಕೆಟಿಗರು
India vs England 1st T20 2026 ವೇಳಾಪಟ್ಟಿಯಲ್ಲಿ ಬದಲಾವಣೆ! ಈ ಸಮಯಕ್ಕೆ ಆರಂಭವಾಗಲಿದೆ ಹೈವೋಲ್ಟೇಜ್ ಮ್ಯಾಚ್