
ಮೆಲ್ಬರ್ನ್(ಡಿ.25): ವಿರಾಟ್ ಕೊಹ್ಲಿ ಇಲ್ಲದ ಭಾರತ ತಂಡವನ್ನು ಊಹಿಸಿಕೊಳ್ಳಲು ಕಷ್ಟ. ಆದರೆ ಕೊಹ್ಲಿ ಇಲ್ಲದೆ ಟೀಂ ಇಂಡಿಯಾ ಶನಿವಾರದಿಂದ ಇಲ್ಲಿ ಆಸ್ಪ್ರೇಲಿಯಾ ವಿರುದ್ಧ ನಡೆಯಲಿರುವ 2ನೇ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಮೊದಲು ಪಂದ್ಯದ 2ನೇ ಇನ್ನಿಂಗ್ಸ್‌ನಲ್ಲಿ ಕೇವಲ 36 ರನ್‌ಗೆ ಆಲೌಟ್ ಆಗಿ ಮುಖಭಂಗಕ್ಕೊಳಗಾಗಿದ್ದ ಭಾರತ, ಈ ಪಂದ್ಯದಲ್ಲಿ ಜಯಿಸಿದರಷ್ಟೇ ಬಾರ್ಡರ್-ಗವಾಸ್ಕರ್ ಟ್ರೋಫಿ ಉಳಿಸಿಕೊಳ್ಳುವ ಆಸೆ ಜೀವಂತವಾಗಿ ಉಳಿಯಲಿದೆ.
ಕೊಹ್ಲಿ ಅನುಪಸ್ಥಿತಿಯಲ್ಲಿ ಭಾರತ ತಂಡವನ್ನು ಅಜಿಂಕ್ಯ ರಹಾನೆ ಮುನ್ನಡೆಸಲಿದ್ದಾರೆ. ಮೊದಲ ಪಂದ್ಯದಲ್ಲಿ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ತೋರದ ರಹಾನೆ ಮೇಲೆ ಡಬಲ್ ಒತ್ತಡವಿದೆ. ಬ್ಯಾಟಿಂಗ್ ಲಯ ಕಂಡುಕೊಳ್ಳುವ ಜೊತೆಗೆ ನಾಯಕತ್ವದ ಭಾರ ಅವರ ಹೆಗಲ ಮೇಲಿದೆ. ಉಳಿದಿರುವ 3 ಟೆಸ್ಟ್‌ಗಳಲ್ಲಿ ಮಹತ್ವದ ಜವಾಬ್ದಾರಿಯನ್ನು ರಹಾನೆ ಹೇಗೆ ನಿರ್ವಹಿಸಲಿದ್ದಾರೆ ಎನ್ನುವ ಆಧಾರದ ಮೇಲೆ ತಂಡದ ಉಪನಾಯಕನಾಗಿ ಅವರ ಭವಿಷ್ಯ ನಿರ್ಧಾರವಾಗಲಿದೆ.
ರಾಹುಲ್, ಜಡೇಜಾಗೆ ಸ್ಥಾನ?: ಭಾರತ ತಂಡ ಕನಿಷ್ಠ 4 ಬದಲಾವಣೆಗಳೊಂದಿಗೆ ಕಣಕ್ಕಿಳಿಯುವ ನಿರೀಕ್ಷೆ ಇದೆ. ಕೊಹ್ಲಿ ಬದಲು ಕೆ.ಎಲ್.ರಾಹುಲ್ ಇಲ್ಲವೇ ಶುಭ್‌ಮನ್ ಗಿಲ್‌ಗೆ ಸ್ಥಾನ ಸಿಗಲಿದೆ. ಆಲ್ರೌಂಡರ್ ರವೀಂದ್ರ ಜಡೇಜಾ ಆಡುವುದು ಸಹ ಬಹುತೇಕ ಖಚಿತ. ವೇಗಿ ಮೊಹಮದ್ ಶಮಿ ಗಾಯಗೊಂಡು ಸರಣಿಯಿಂದ ಹೊರಬಿದ್ದಿರುವ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ಮೊಹಮದ್ ಸಿರಾಜ್, ನವ್‌ದೀಪ್ ಸೈನಿ, ಶಾರ್ದೂಲ್ ಠಾಕೂರ್ ಇಲ್ಲವೇ ಟಿ.ನಟರಾಜನ್‌ಗೆ ಸ್ಥಾನ ಸಿಗಬಹುದು. ಆರಂಭಿಕ ಬ್ಯಾಟ್ಸ್‌ಮನ್ ಪೃಥ್ವಿ ಶಾ ಸಹ ಹೊರಬೀಳುವ ಸಾಧ್ಯತೆ ಇದೆ. ವಿಕೆಟ್ ಕೀಪರ್ ಜವಾಬ್ದಾರಿಯನ್ನು ವೃದ್ಧಿಮಾನ್ ಸಾಹ ಬದಲಿಗೆ ರಿಷಭ್ ಪಂತ್ ನಿರ್ವಹಿಸಲಿದ್ದಾರೆ.
ಆಸೀಸ್ ತಂಡದಲಿಲ್ಲ ಬದಲಾವಣೆ: ಉತ್ತಮ ಲಯದಲ್ಲಿರುವ ಆಸ್ಪ್ರೇಲಿಯಾ ಮೊದಲ ಪಂದ್ಯದಲ್ಲಿ ಆಡಿದ ತಂಡವನ್ನೇ ಉಳಿಸಿಕೊಳ್ಳಲಿದೆ ಎಂದು ತಂಡದ ಕೋಚ್ ಜಸ್ಟಿನ್ ಲ್ಯಾಂಗರ್ ಸ್ಪಷ್ಟಪಡಿಸಿದ್ದಾರೆ. ಕೊನೆ ಕ್ಷಣದಲ್ಲಿ ಯಾರಾದರು ಅಲಭ್ಯರಾದರೆ ಆಗಷ್ಟೇ ಬದಲಾವಣೆ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ. ಹೀಗಾಗಿ ಜೋ ಬರ್ನ್ಸ್ ಹಾಗೂ ಮ್ಯಾಥ್ಯೂ ವೇಡ್ ಆರಂಭಿಕರಾಗಿ ಮುಂದುವರಿಯಲಿದ್ದಾರೆ. ಟ್ರ್ಯಾವಿಸ್ ಹೆಡ್, ಕ್ಯಾಮರೂನ್ ಗ್ರೀನ್‌ಗೆ ಮತ್ತೊಂದು ಅವಕಾಶ ಸಿಗಲಿದೆ.
ಕೊಹ್ಲಿ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾ 150ರೊಳಗೆ ಆಲೌಟ್ ಆಗಬಹುದು; ಪನೇಸರ್
ಸ್ಟೀವ್ ಸ್ಮಿತ್ ಹಾಗೂ ಮಾರ್ನಸ್ ಲಬುಶೇನ್ ಮೇಲೆ ಹೆಚ್ಚಿನ ನಿರೀಕ್ಷೆ ಇದ್ದು, ತ್ರಿವಳಿ ವೇಗಿಗಳಾದ ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್ ಹಾಗೂ ಜೋಶ್ ಹೇಜಲ್‌ವುಡ್ ಮತ್ತೊಮ್ಮೆ ಭಾರತೀಯರನ್ನು ಕಾಡಲು ಸಜ್ಜಾಗಿದ್ದಾರೆ. ನೇಥನ್ ಲಯನ್ ಏಕೈಕ ಸ್ಪಿನ್ನರ್ ಆಗಿ ಆಡಲಿದ್ದಾರೆ.
ಮೇಲ್ನೋಟಕ್ಕೆ ಆಸ್ಪ್ರೇಲಿಯಾ ತಂಡವೇ ಈ ಪಂದ್ಯವನ್ನೂ ಗೆಲ್ಲುವ ನೆಚ್ಚಿನ ತಂಡ ಎನಿಸಿಕೊಂಡಿದೆ. ಪುಟಿದೇಳುವ ಉತ್ಸಾಹದಲ್ಲಿರುವ ಟೀಂ ಇಂಡಿಯಾದಿಂದ ಸುಧಾರಿತ ಪ್ರದರ್ಶನ ನಿರೀಕ್ಷಿಸಲಾಗಿದೆ.
ಭಾರತ vs ಆಸೀಸ್ 100ನೇ ಟೆಸ್ಟ್ ಪಂದ್ಯ!
ಮೆಲ್ಬರ್ನ್ ಟೆಸ್ಟ್ ಭಾರತ ಹಾಗೂ ಆಸ್ಪ್ರೇಲಿಯಾ ನಡುವೆ ನಡೆಯಲಿರುವ 100ನೇ ಟೆಸ್ಟ್ ಪಂದ್ಯ ಎನ್ನುವುದು ವಿಶೇಷ. ಈ ವರೆಗೆ ಆಡಿರುವ 99 ಪಂದ್ಯಗಳಲ್ಲಿ ಭಾರತ 28ರಲ್ಲಿ ಜಯಿಸಿದರೆ, 43 ಪಂದ್ಯಗಳಲ್ಲಿ ಆಸೀಸ್ ಜಯಭೇರಿ ಬಾರಿಸಿದೆ. 1 ಪಂದ್ಯ ಟೈ ಆಗಿದ್ದು, 27 ಪಂದ್ಯಗಳು ಡ್ರಾಗೊಂಡಿವೆ.
ಭಾರತ ಈವರೆಗೆ ಇಂಗ್ಲೆಂಡ್ ವಿರುದ್ಧ ಮಾತ್ರ 100ಕ್ಕಿಂತ ಹೆಚ್ಚು ಟೆಸ್ಟ್‌ಗಳನ್ನು ಆಡಿದೆ. ಉಭಯ ದೇಶಗಳ ನಡುವೆ 122 ಪಂದ್ಯಗಳು ನಡೆದಿವೆ. ಭಾರತ ಹಾಗೂ ವಿಂಡೀಸ್ 98 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.