
ಧರ್ಮಶಾಲಾ: ಭಾರತ ಹಾಗೂ ಅಫ್ಘಾನಿಸ್ತಾನ ನಡುವಿನ ಚೊಚ್ಚಲ ದ್ವಿಪಕ್ಷೀಯ ಏಕದಿನ ಸರಣಿಗೆ ಶನಿವಾರ ಚಾಲನೆ ದೊರೆಯಲಿದ್ದು, ಇಲ್ಲಿನ ಎಚ್‌ಪಿಸಿಎ ಕ್ರೀಡಾಂಗಣದಲ್ಲಿ ಮೊದಲ ಪಂದ್ಯ ನಡೆಯಲಿದೆ. ನ್ಯೂಜಿಲೆಂಡ್ ವಿರುದ್ಧದ ಸರಣಿ ಸೋಲು ಸೇರಿ ಕಳೆದ 5 ಏಕದಿನ ಪಂದ್ಯಗಳಲ್ಲಿ 3ರಲ್ಲಿ ಸೋತಿರುವ ಭಾರತ, 2027ರ ಏಕದಿನ ವಿಶ್ವಕಪ್‌ಗೆ ಅಗತ್ಯವಿರುವ ಲಯ ಹಾಗೂ ಸೂಕ್ತ ತಂಡವನ್ನು ಸಿದ್ಧಪಡಿಸಿಕೊಳ್ಳಲು ಈ ಸರಣಿಯನ್ನು ಬಳಸಿಕೊಳ್ಳಲಿದೆ.
ಹಲವು ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ಕಣಕ್ಕಿಳಿಯಲಿರುವ ಭಾರತ, ತನ್ನ ಬೆಂಚ್ ಸ್ಟ್ರೆಂಥ್ ಪರೀಕ್ಷಿಸಿಕೊಳ್ಳಲು ಎದುರು ನೋಡುತ್ತಿದೆ. ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲೂ ಪೂರ್ಣ ಪ್ರಮಾಣದ ಬ್ಯಾಟಿಂಗ್ ಪಡೆಯನ್ನು ಹೊಂದಿರುವ ಭಾರತ, ವೇಗದ ಬೌಲಿಂಗ್ ವಿಭಾಗದಲ್ಲಿ ಹೊಸ ಆಯ್ಕೆಗಳಿಗೆ ಹುಡುಕಾಟ ನಡೆಸಲಿದೆ.
ಪ್ರಸಿದ್ಧ್ ಕೃಷ್ಣ ಹಾಗೂ ಅರ್ಶ್‌ದೀಪ್ ಸಿಂಗ್ ಸೇರಿ ಈ ವರೆಗೂ ಕೇವಲ 38 ಏಕದಿನ ಪಂದ್ಯಗಳನ್ನಷ್ಟೇ ಆಡಿದ್ದು, ಪ್ರಿನ್ಸ್ ಯಾದವ್ ಹಾಗೂ ಗುರ್ನೂರ್ ಬ್ರಾರ್ ಇನ್ನಷ್ಟೇ ಪಾದಾರ್ಪಣೆ ಮಾಡಬೇಕಿದೆ. ಮುಂದಿನ ವಿಶ್ವಕಪ್ ದ.ಆಫ್ರಿಕಾ, ಜಿಂಬಾಬ್ವೆ ಹಾಗೂ ನಮೀಬಿಯಾದಲ್ಲಿ ನಡೆಯಲಿರುವ ಕಾರಣ ಭಾರತ ವೇಗದ ಬೌಲಿಂಗ್ ಪಡೆಯನ್ನು ಇನ್ನಷ್ಟು ಬಲಿಷ್ಠಗೊಳಿಸಿಕೊಳ್ಳುವ ಯೋಜನೆಯಲ್ಲಿದೆ.
ರೋಹಿತ್ ಶರ್ಮಾ ಫಿಟ್ ಆಗಿದ್ದು, ನಾಯಕ ಗಿಲ್ ಜೊತೆ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಕೊಹ್ಲಿ ಇಲ್ಲದಿರುವ ಕಾರಣ, 3ನೇ ಕ್ರಮಾಂಕದಲ್ಲಿ ಇಶಾನ್ ಕಿಶನ್ ಆಡಬಹುದು. ಪ್ರಿನ್ಸ್ ಅಥವಾ ಬ್ರಾರ್‌ಗೆ ಏಕದಿನ ಕ್ಯಾಪ್ ಸಿಗಲಿದೆ.
ಇನ್ನು, ಅಫ್ಘಾನಿಸ್ತಾನ ಕಳೆದ 4 ಏಕದಿನ ಪಂದ್ಯಗಳಲ್ಲೂ ಗೆದ್ದಿದೆ. ಆದರೆ ತಂಡ ಕೊನೆ ಬಾರಿಗೆ 50 ಓವರ್ ಪಂದ್ಯವಾಡಿದ್ದು 2025ರ ಅಕ್ಟೋಬರ್‌ನಲ್ಲಿ. ಹೀಗಾಗಿ ಈ ಮಾದರಿಗೆ ಹೊಂದಿಕೊಳ್ಳಲು ಸ್ವಲ್ಪ ಸಮಯ ಬೇಕಾಗಬಹುದು. ಆದರೂ, ಭಾರತಕ್ಕೆ ಆಘಾತ ನೀಡಬಲ್ಲ ಸಾಮರ್ಥ್ಯ ಆಫ್ಘನ್‌ಗಿದೆ.
ರೋಹಿತ್ ಶರ್ಮಾ, ಶುಭ್‌ಮನ್ ಗಿಲ್(ನಾಯಕ), ಇಶಾನ್ ಕಿಶನ್, ಶ್ರೇಯಸ್ ಅಯ್ಯರ್(ಉಪನಾಯಕ), ಕೆ ಎಲ್ ರಾಹುಲ್(ವಿಕೆಟ್ ಕೀಪರ್), ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಅರ್ಶದೀಪ್ ಸಿಂಗ್, ಪ್ರಿನ್ಸ್ ಯಾದವ್, ಪ್ರಸಿದ್ದ್ ಕೃಷ್ಣ.
ಪಂದ್ಯ ಆರಂಭ: ಮಧ್ಯಾಹ್ನ 1.30ಕ್ಕೆ,
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್/ಜಿಯೋ ಹಾಟ್‌ಸ್ಟಾರ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.