
ದುಬೈ (ಡಿ. 31): ಪಂದ್ಯದ ಎಲ್ಲಾ ವಿಭಾಗಗಳಲ್ಲೂ ಆಕರ್ಷಕ ನಿರ್ವಹಣೆ ತೋರಿದ ಭಾರತ (India) ತಂಡ ಅಂಡರ್ 19 ಏಷ್ಯಾಕಪ್ ಕ್ರಿಕೆಟ್ (ACC U19 Asia Cup) ಟೂರ್ನಿಯಲ್ಲಿ 8ನೇ ಬಾರಿಗೆ ಚಾಂಪಿಯನ್ ಆಗಿದೆ. ಶುಕ್ರವಾರ ದುಬೈ (Dubai) ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಮಳೆಬಾಧಿತ ಫೈನಲ್ (Rain-Interrupted ) ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಡಕ್ ವರ್ತ್ ಲೂಯಿಸ್ ನಿಯಮದನ್ವಯ ( DLS method ) 9 ವಿಕೆಟ್ ಗಳಿಂದ ಸೋಲಿಸಿದ ಯಶ್ ಧುಲ್ (Yash Dhull) ನೇತೃತ್ವದ ಭಾರತ ತಂಡ 2021ರ ಅಂಡರ್ 19 ಏಷ್ಯಾಕಪ್ ನಲ್ಲಿ ಚಾಂಪಿಯನ್ ಎನಿಸಿಕೊಂಡಿತು. ಆ ಮೂಲಕ ಜನವರಿಯಲ್ಲಿ ವೆಸ್ಟ್ ಇಂಡೀಸ್ ನಲ್ಲಿ ನಡೆಯಲಿರುವ ಅಂಡರ್ 19 ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ತಂಡ ಭರ್ಜರಿಯಾಗಿ ಅಭ್ಯಾಸ ನಡೆಸಿದೆ.
ಪಂದ್ಯಕ್ಕೆ ಹಲವು ಬಾರಿ ಮಳೆ ಅಡ್ಡಿಪಡಿಸಿದ್ದರಿಂದ ತಲಾ 38 ಓವರ್ ಗಳಿಗೆ ಪಂದ್ಯವನ್ನು ನಿಗದಿ ಮಾಡಲಾಗಿತ್ತು. ನಿಧಾನಗತಿಯಲ್ಲಿ ಬ್ಯಾಟಿಂಗ್ ಮಾಡಿದ ದ್ವೀಪರಾಷ್ಟ್ರ ಶ್ರೀಲಂಕಾ (Sri Lanka) ತಂಡ 38 ಓವರ್ ಗಳಲ್ಲಿ 9 ವಿಕೆಟ್ ಗೆ 106 ರನ್ ಗಳಿಸಿದ್ದ ವೇಳೆ ಅವರ ಇನ್ನಿಂಗ್ಸ್ ಅನ್ನು ಕೊನೆ ಮಾಡಲಾಗಿತ್ತು. ಇದರಿಂದಾಗಿ ಡಿಎಲ್ ನಿಯಮದನ್ವಯ 38 ಓವರ್ ಗಳಲ್ಲಿ 102 ರನ್ ಗಳನ್ನು ಬಾರಿಸುವ ಪರಿಷ್ಕೃತ ಸವಾಲು ಪಡೆದಿದ್ದ ಭಾರತ ತಂಡ 21.3 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 104 ರನ್ ಬಾರಿಸಿ ಗೆಲುವು ಕಂಡಿತು.
ತಂಡದ ಗೆಲುವಿನಲ್ಲಿ ಮಿಂಚಿದ ಅಂಗ್ ಕ್ರಿಷ್ ರಘುವಂಶಿ (Angkrish Raghuvansh) ಅದ್ಭುತ ಅರ್ಧಶತಕ ಬಾರಿಸುವ ಮೂಲಕ ಸುಲಭ ಗೆಲುವಿಗೆ ಕಾರಣರಾದರು. ಆರಂಭಿಕ ಹರ್ನೂರ್ ಸಿಂಗ್ (5) ವಿಕೆಟ್ ಅನ್ನು 5ನೇ ಓವರ್ ನಲ್ಲಿಯೇ ಕಳೆದುಕೊಂಡಿದ್ದ ಭಾರತ ತಂಡಕ್ಕೆ 2ನೇ ವಿಕೆಟ್ ಗೆ ರಘುವಂಶಿ ಹಾಗೂ ಸೆಮಿಫೈನಲ್ ಪಂದ್ಯದ ಗೆಲುವಿನ ಹೀರೋ ಶೇಖ್ ರಶೀದ್ ಮುರಯದ 96 ರನ್ ಗಳ ಜೊತೆಯಾಟವಾಡಿ ತಂಡವನ್ನು ಚಾಂಪಿಯನ್ ಪಟ್ಟವೇರಿದರು. 67 ಎಸೆತಗಳನ್ನು ಎದುರಿಸಿದ ಅಂಗ್ ಕ್ರಿಷ್ ರಘುವಂಶಿ 7 ಬೌಂಡರಿಯೊಂದಿಗೆ 56 ರನ್ ಬಾರಿಸಿದರೆ, ಶೇಖ್ ರಶೀದ್ 49 ಎಸೆತಗಳಲ್ಲಿ 2 ಬೌಂಡರಿಯೊಂದಿಗೆ 31 ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡ 57 ರನ್ ಗಳಿಸುವ ವೇಳೆಗಾಗಲೇ 7 ವಿಕೆಟ್ ಗಳನ್ನು ಕಳೆದುಕೊಂಡಿತ್ತು. ಪ್ರಮುಖ ಬ್ಯಾಟ್ಸ್ ಮನ್ ಗಳಾದ ಆರಂಭಿಕ ಚಾಮಿಂದು ವಿಕ್ರಮಸಿಂಘೆ, ಶೇವೋನ್ ಡೇನಿಯಲ್, ವಿಕೆಟ್ ಕೀಪರ್ ಅಂಜಲಾ ಭಂಡಾರಾ, ಪವನ್ ಪಥಿರಾಜಾ, ರಾನುಡಾ ಸೋಮರತ್ನೆ ಹಾಗೂ ನಾಯಕ ಡಿ. ವಲ್ಲಘೆ ಒಂದಂಕಿ ಮೊತ್ತಕ್ಕೆ ಔಟಾದರು. ಅಗ್ರ ಕ್ರಮಾಂಕದ ಬ್ಯಾಟ್ಸ್ ಮನ್ ಗಳ ಪೈಕಿ ಸಾಧಿಶಾ ರಾಜಪಕ್ಷ (14) ಮಾತ್ರ ಎರಡಂಕಿಯನ್ನು ದಾಖಲಿಸಿದರು. ತಂಡ 100ಕ್ಕಿಂತ ಕಡಿಮೆ ಮೊತ್ತಕ್ಕ ಆಲೌಟ್ ಆಗುತ್ತಿದ್ದ ಹಂತದಲ್ಲಿ ಬಾಲಂಗೋಚಿಗಳಾದ ರವೀನ್ ಡಿ ಸಿಲ್ವಾ (15), ಯಾಸಿರು ರೋಡ್ರಿಗೋ (19) ಹಾಗೂ ಮಥೀಶಾ ಪಥಿರಣ (14) ಕೆಲ ರನ್ ಗಳನ್ನು ಗಳಿಸಿ ತಂಡದ ಮೊತ್ತವನ್ನು 100ರ ಗಡಿ ದಾಟಿಸಲು ಯಶ ಕಂಡಿದ್ದರು.
ACC U19 Asia Cup 2021 : ಬಾಂಗ್ಲಾದೇಶವನ್ನು ಮಣಿಸಿ ಫೈನಲ್ ಗೇರಿದ ಭಾರತ
ಭಾರತದ ಬೌಲಿಂಗ್ ನಲ್ಲಿ ಮಿಂಚಿದ ವಿಕ್ಕಿ ಓತ್ಸ್ವಾಲ್ (Vicky Ostwal) ತಮ್ಮ 8 ಓವರ್ ಗಳ ದಾಳಿಯಲ್ಲಿ 3 ಮೇಡನ್ ಗಳೊಂದಿಗೆ 11 ರನ್ ನೀಡಿ ಪ್ರಮುಖ 3 ವಿಕೆಟ್ ಉರುಳಿಸಿದರು. ಅವರೊಂದಿಗೆ ರಾಜ್ಯವರ್ಧನ್ (26ಕ್ಕೆ 1), ರವಿಕುಮಾರ್ (17ಕ್ಕೆ 1), ರಾಜ್ ಬಾವಾ (23ಕ್ಕೆ 1) ಹಾಗೂ ಕೌಶಾಲ್ ತಂಬೆ (23ಕ್ಕೆ 2) ವಿಕೆಟ್ ಉರುಳಿಸಿ ಶ್ರೀಲಂಕಾ ತಂಡಕ್ಕೆ ಕಡಿವಾಣ ಹೇರಿದರು.
8ನೇ ಬಾರಿ ಭಾರತ ಚಾಂಪಿಯನ್: ಭಾರತ ತಂಡ ಇದಕ್ಕೂ ಮುನ್ನ1989, 2003, 2012 (ಜಂಟಿ ಚಾಂಪಿಯನ್), 2014, 2016, 2017, 2018 ಹಾಗೂ 2019ರಲ್ಲಿ ಭಾರತ ತಂಡ ಪ್ರಶಸ್ತಿ ಜಯಿಸಿತ್ತು.
ಶ್ರೀಲಂಕಾ: 38 ಓವರ್ ಗಳಲ್ಲಿ 9 ವಿಕೆಟ್ ಗೆ 106 (ಸಾಧಿಶಾ ರಾಜಪಕ್ಷ 14, ರವೀನ್ ಡಿ ಸಿಲ್ವಾ 15, ಯಾಸಿರು ರೋಡ್ರಿಗೋ 19, ಮಥೀಶಾ ಪಥಿರಣ 14, ವಿಕ್ಕಿ ಓತ್ಸ್ವಾಲ್ 11ಕ್ಕೆ 3, ಕೌಶಾಲ್ ತಂಬೆ 23ಕ್ಕೆ 2), ಭಾರತ: 21.3 ಓವರ್ ಗಳಲ್ಲಿ 1 ವಿಕೆಟ್ ಗೆ 104 ( ಅಂಗ್ ಕ್ರಿಷ್ 56*, ಶೇಕ್ ರಶೀದ್ 31*, ಯಾಸಿರು 12ಕ್ಕೆ 1) ಭಾರತಕ್ಕೆ ಡಿಎಲ್ ನಿಯಮದನ್ವಯ 9 ವಿಕೆಟ್ ಗೆಲುವು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.