India Tour Of England ಇಂಗ್ಲೆಂಡಲ್ಲಿ ಭಾರತ ವೇಗಿಗಳ ಮಿಂಚು!

By Kannadaprabha NewsFirst Published Jul 19, 2022, 10:20 AM IST
Highlights

- ಟಿ20, ಏಕದಿನ ಸರಣಿಯಲ್ಲಿ ಭರ್ಜರಿ ಪ್ರದರ್ಶನ: 6ರ ಪೈಕಿ 5 ಪಂದ್ಯಗಳಲ್ಲಿ ಇಂಗ್ಲೆಂಡ್‌ ಆಲೌಟ್‌

- ಬೂಮ್ರಾ ನೇತೃತ್ವದ ವೇಗಿಗಳ ಯಶೋಗಾಥೆ: ಭಾರತಕ್ಕೀಗ ಬ್ಯಾಟರುಗಳ ಅಸ್ಥಿರ ಆಟದ್ದೇ ಚಿಂತೆ

ಬೆಂಗಳೂರು (ಜುಲೈ 19): ಭಾರತದ ವೇಗದ ಬೌಲಿಂಗ್‌ ಪಡೆ ಮತ್ತೊಮ್ಮೆ ವಿದೇಶದಲ್ಲಿ ಸ್ಥಿರ ಪ್ರದರ್ಶನ ನೀಡಿದೆ. ಇತ್ತೀಚಿನ ವರ್ಷಗಳಲ್ಲಿ ವಿದೇಶಿ ನೆಲದಲ್ಲಿ ಉತ್ತಮ ಲಯ ಕಾಣುತ್ತಿರುವ ಭಾರತೀಯ ವೇಗಿಗಳು, ಇಂಗ್ಲೆಂಡ್‌ಗೆ ಅದರದ್ದೇ ನೆಲದಲ್ಲಿ ಉರಿಚೆಂಡಿನ ಶಾಖ ತಗುಲಿಸಿದ್ದಾರೆ. ಎಷ್ಟರ ಮಟ್ಟಿಗೆ ಅಂದರೆ, ತಲಾ 3 ಪಂದ್ಯಗಳ ಟಿ20 ಹಾಗೂ ಏಕದಿನ ಸರಣಿಯಲ್ಲಿ ಒಟ್ಟು 5 ಬಾರಿ ಆತಿಥೇಯರು ಆಲೌಟ್‌ ಆಗಿದ್ದಾರೆ. ಇದೇ ವೇಳೆ, ಪ್ರವಾಸಿ ಭಾರತೀಯರು 6 ಪಂದ್ಯಗಳಲ್ಲಿ ಆಲೌಟ್‌ ಆಗಿದ್ದು ಒಂದೇ ಬಾರಿ! ಜಸ್‌ಪ್ರೀತ್‌ ಬೂಮ್ರಾ, ಮೊಹಮದ್‌ ಶಮಿ, ಭುವನೇಶ್ವರ್‌ ಕುಮಾರ್‌, ಹಾರ್ದಿಕ್‌ ಪಾಂಡ್ಯ, ಪ್ರಸಿದ್‌್ಧ ಕೃಷ್ಣ, ಮೊಹಮದ್‌ ಸಿರಾಜ್‌ ಅವರನ್ನು ಒಳಗೊಂಡ ವೇಗಿಗಳ ಪಡೆ ಸದ್ಯಕ್ಕೆ ವಿಶ್ವದಲ್ಲೇ ಶ್ರೇಷ್ಠ ಎನ್ನಲಡ್ಡಿಯಿಲ್ಲ. ಈ ವೇಗಿಗಳು ಈ ಬಾರಿ ಇಂಗ್ಲೆಂಡ್‌ ತಂಡವನ್ನು ಸಿಂಹಸ್ವಪ್ನವಾಗಿ ಕಾಡಿದರು. ಸ್ವಿಂಗ್‌, ಪೇಸ್‌ ಮತ್ತು ಬೌನ್ಸ್‌ ತಜ್ಞರನ್ನು ಒಳಗೊಂಡಿರುತ್ತಿದ್ದ ಇಂಗ್ಲೆಂಡ್‌ ಪಾಳಯಕ್ಕೆ, ಅದೇ ಅಸ್ತ್ರದಿಂದ ತಿರುಗೇಟು ನೀಡಿದರು. ಎಷ್ಟರ ಮಟ್ಟಿಗೆ ಎಂದರೆ, 6 ಪಂದ್ಯಗಳಲ್ಲಿ ಭಾರತೀಯ ವೇಗಿಗಳು ಇಂಗ್ಲೆಂಡ್‌ನ ಮುಕ್ಕಾಲು ವಿಕೆಟ್‌ ಕಬಳಿಸಿದರು

.ಇಂಗ್ಲೆಂಡ್‌ಗೆ ಸಿಂಹಸ್ವಪ್ನರಾದ ಭಾರತದ ವೇಗಿಗಳು: ಈ ಪೈಕಿ ಹಾರ್ದಿಕ್‌ 11, ಬೂಮ್ರಾ 10, ಶಮಿ, ಹರ್ಷಲ್‌ ಪಟೇಲ್‌ ಹಾಗೂ ಭುವನೇಶ್ವರ್‌ ಕುಮಾರ್‌ ತಲಾ 4 ವಿಕೆಟ್‌ ಪಡೆದರು. ಅದರಲ್ಲೂ ಮೊದಲ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್‌ನ ಎಲ್ಲಾ 10 ವಿಕೆಟ್‌ಗಳು ವೇಗಿಗಳ ಪಾಲಾಗಿತ್ತು. ಆ ಪಂದ್ಯದಲ್ಲಿ ಬೂಮ್ರಾ ಕೇವಲ 19 ರನ್‌ಗೆ 6 ವಿಕೆಟ್‌ ಕಬಳಿಸಿದ್ದರು. ಶಮಿ ಹಾಗೂ ಹಾರ್ದಿಕ್‌ ಎದುರಾಳಿಗಳನ್ನು ಬೌನ್ಸರುಗಳಿಂದಲೇ ಕಾಡಿದರು.

ಬ್ಯಾಟರ್‌ಗಳದ್ದೇ ತಲೆಬಿಸಿ: ಭಾರತೀಯ ಬೌಲರ್‌ಗಳು ವಿದೇಶಿ ಪಿಚ್‌ಗಳಲ್ಲಿ ಮಿಂಚುತ್ತಿದ್ದರೂ ತಂಡದ ಬ್ಯಾಟರ್‌ಗಳು ಇನ್ನೂ ಸ್ಥಿರ ಲಯ ಕಂಡುಕೊಂಡಿಲ್ಲ. ರೋಹಿತ್‌ ಶರ್ಮಾ, ಸೂರ್ಯ ಕುಮಾರ್‌ ಯಾದವ್‌, ಶ್ರೇಯಸ್‌ ಅಯ್ಯರ್‌, ರಿಷಭ್‌ ಪಂತ್‌, ಹಾರ್ದಿಕ್‌ ಪಾಂಡ್ಯ, ಶಿಖರ್‌ ಧವನ್‌ ಸೇರಿದಂತೆ ಬಹುತೇಕ ಎಲ್ಲಾ ಬ್ಯಾಟರ್‌ಗಳು ಒಂದು ಪಂದ್ಯದಲ್ಲಿ ಅಬ್ಬರಿಸಿದರೆ ಮತ್ತೊಂದು ಪಂದ್ಯದಲ್ಲಿ ವಿಫಲರಾಗುತ್ತಿದ್ದಾರೆ. ಅಗ್ರ ಕ್ರಮಾಂಕ ಆಡಿದರೆ, ಮಧ್ಯಮ ಕ್ರಮಾಂಕ ವಿಫಲವಾಗುವುದು, ಮಧ್ಯಮ ಕ್ರಮಾಂಕ ಮಿಂಚಿದಾಗ ಅಗ್ರ ಕ್ರಮಾಂಕ ಮುಗ್ಗಿರಿಸುವುದು ಸಾಮಾನ್ಯವಾಗಿ ಬಿಟ್ಟಿದೆ. ಮುಂಬರುವ ಟಿ20 ವಿಶ್ವಕಪ್‌ನಂತಹ ಮಹತ್ವದ ಟೂರ್ನಿಗಳಿಗೂ ಮುನ್ನ ಭಾರತ ತನ್ನ ಬ್ಯಾಟಿಂಗ್‌ ಪಡೆಯ ಸ್ಥಿರತೆಯನ್ನು ಸುಧಾರಿಸುವ ಕಡೆಗೆ ಗಮನ ಹರಿಸಬೇಕಾದ ಅನಿವಾರ್ಯತೆ ಇದೆ.

ಇದನ್ನೂ ಓದಿ: Ben Stokes ಇಂಗ್ಲೆಂಡ್‌ಗೆ ವಿಶ್ವಕಪ್ ಗೆದ್ದುಕೊಟ್ಟ ಹೀರೋ ಏಕದಿನ ಕ್ರಿಕೆಟ್‌ಗೆ ವಿದಾಯ ಘೋಷಣೆ..!

3 ಪಂದ್ಯಶ್ರೇಷ್ಠ, 2 ಸರಣಿಶ್ರೇಷ್ಠ: ಟಿ20 ಹಾಗೂ ಏಕದಿನ ಸರಣಿಯ ಒಟ್ಟು 6 ಪಂದ್ಯಗಳಲ್ಲಿ ಮೂರು ಬಾರಿ ಭಾರತದ ವೇಗಿಗಳು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಟಿ20 ಸರಣಿಯಲ್ಲಿ ಭುವನೇಶ್ವರ್‌ ಕುಮಾರ್‌, ಏಕದಿನಲ್ಲಿ ಹಾರ್ದಿಕ್‌ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದು, ಭಾರತೀಯ ವೇಗಿಗಳ ಸಾಧನೆಗೆ ಹಿಡಿದ ಕನ್ನಡಿ.

ಇದನ್ನೂ ಓದಿ:  Team India ಗೆಲುವಿನ ದಡ ಸೇರಿಸಿದ ಪಂತ್, ರೋಹಿತ್ ರಿಯಾಕ್ಷನ್ ವಿಡಿಯೋ ವೈರಲ್‌..!

ಏಕದಿನ ಶ್ರೇಯಾಂಕ: 3ನೇ ಸ್ಥಾನದಲ್ಲಿ ಭಾರತ ಭದ್ರ: ಇಂಗ್ಲೆಂಡ್‌ ವಿರುದ್ಧ ಏಕದಿನ ಸರಣಿ ಗೆದ್ದ ಭಾರತ ತಂಡ ಐಸಿಸಿ ಏಕದಿನ ರಾರ‍ಯಂಕಿಂಗ್‌ನಲ್ಲಿ 3ನೇ ಸ್ಥಾನ ಭದ್ರಪಡಿಸಿಕೊಂಡಿದೆ. ನೂತನವಾಗಿ ಪ್ರಕಟವಾದ ರಾರ‍ಯಂಕಿಂಗ್‌ ಪಟ್ಟಿಯಲ್ಲಿ ಭಾರತ 109 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದ್ದು, 4ನೇ ಸ್ಥಾನದಲ್ಲಿರುವ ಪಾಕಿಸ್ತಾನ(106)ಕ್ಕಿಂತ 3 ಅಂಕಗಳ ಅಂತರ ಕಾಯ್ದುಕೊಂಡಿದೆ. ಮುಂಬರುವ ವೆಸ್ಟ್‌ವಿಂಡೀಸ್‌ ವಿರುದ್ಧದ ಏಕದಿನ ಸರಣಿಯನ್ನೂ ಗೆಲ್ಲುವ ಮೂಲಕ ಭಾರತ ಅಂತರದವನ್ನು ಮತ್ತಷ್ಟುಹೆಚ್ಚಿಸುವ ನಿರೀಕ್ಷೆಯಲ್ಲಿದೆ. ಇನ್ನು, ನ್ಯೂಜಿಲೆಂಡ್‌ 128 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿ ಮುಂದುವರಿದಿದ್ದು, ಇಂಗ್ಲೆಂಡ್‌(121) ನಂತರದ ಸ್ಥಾನದಲ್ಲಿದೆ.

click me!