ಭಾರತ-ಆಸ್ಟ್ರೇಲಿಯಾ 5ನೇ ಟಿ20 ಪಂದ್ಯ ರದ್ದು; ಕಾಂಗರೂ ನಾಡಲ್ಲಿ ಸರಣಿ ಗೆದ್ದ ಟೀಂ ಇಂಡಿಯಾ!

Published : Nov 08, 2025, 05:25 PM IST
Team India

ಸಾರಾಂಶ

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಐದನೇ ಹಾಗೂ ಅಂತಿಮ ಟಿ20 ಪಂದ್ಯವು ಮಳೆಯಿಂದಾಗಿ ರದ್ದಾಯಿತು. ಇದರ ಪರಿಣಾಮವಾಗಿ, ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾ 2-1 ಅಂತರದಲ್ಲಿ ಸರಣಿಯನ್ನು ಗೆದ್ದುಕೊಂಡಿತು. ಯುವ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಬ್ರಿಸ್ಬೇನ್: ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಐದನೇ ಹಾಗೂ ಕೊನೆಯ ಟಿ20 ಪಂದ್ಯವು ಮಳೆಯಿಂದ ರದ್ದಾಗಿದೆ. ಇದರೊಂದಿಗೆ 5 ಪಂದ್ಯಗಳ ಟಿ20 ಸರಣಿಯನ್ನು ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾ 2-1 ಅಂತರದಲ್ಲಿ ಜಯಿಸುವಲ್ಲಿ ಯಶಸ್ವಿಯಾಗಿದೆ. ಮೊದಲ ಟಿ20 ಪಂದ್ಯವು ಮಳೆಯಿಂದ ರದ್ದಾಗಿತ್ತು.

ಇಲ್ಲಿನ ಗಾಬಾ ಮೈದಾನದಲ್ಲಿ ನಡೆದ ಐದನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಮಿಚೆಲ್ ಮಾರ್ಷ್ ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಇನ್ನು ಮೊದಲು ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾಗೆ ಆರಂಭಿಕರಾದ ಶುಭ್‌ಮನ್ ಗಿಲ್ ಹಾಗೂ ಅಭಿಷೇಕ್ ಶರ್ಮಾ ಸ್ಪೋಟಕ ಆರಂಭ ಒದಗಿಸಿದರು. ಮೊದಲ ವಿಕೆಟ್‌ಗೆ ಈ ಜೋಡಿ ಕೇವಲ 4.5 ಓವರ್‌ಗಳಲ್ಲಿ 52 ರನ್‌ಗಳ ಸ್ಪೋಟಕ ಜತೆಯಾಟವಾಡಿದರು. ಅಭಿಷೇಕ್ ಶರ್ಮಾ 13 ಎಸೆತಗಳನ್ನು ಎದುರಿಸಿ ಒಂದು ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ ಅಜೇಯ 23 ರನ್ ಸಿಡಿಸಿದರೆ, ಶುಭ್‌ಮನ್ ಗಿಲ್ ಕೇವಲ 16 ಎಸೆತಗಳನ್ನು ಎದುರಿಸಿ 6 ಬೌಂಡರಿ ಸಹಿತ ಆಕರ್ಷಕ 29 ಚಚ್ಚಿದರು. ಈ ವೇಳೆ ಗುಡುಗು-ಸಿಡಿಲು ಸಹಿತ ಮಳೆ ಆರಂಭವಾಯಿತು. ಇದಾದ ನಂತರ ನಿರಂತರವಾಗಿ ಮಳೆ ಸುರಿದಿದ್ದರಿಂದ ಆಯೋಜಕರು ಪಂದ್ಯ ರದ್ದುಗೊಳಿಸುವ ತೀರ್ಮಾನಕ್ಕೆ ಬಂದರು.

ಆಸ್ಟ್ರೇಲಿಯಾ ಪ್ರವಾಸ ಮುಕ್ತಾಯ:

ಭಾರತ ತಂಡವು 3 ಪಂದ್ಯಗಳ ಏಕದಿನ ಸರಣಿ ಹಾಗೂ 5 ಪಂದ್ಯಗಳ ಟಿ20 ಸರಣಿಯನ್ನಾಡಲು ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿತ್ತು. ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಮೊದಲೆರಡು ಪಂದ್ಯ ಗೆದ್ದು ಕೊನೆಯ ಪಂದ್ಯ ಸೋತ ಆಸ್ಟ್ರೇಲಿಯಾ 2-1 ಅಂತರದಲ್ಲಿ ಸರಣಿ ಕೈವಶ ಮಾಡಿಕೊಂಡಿತ್ತು. ಇನ್ನು 5 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಮಳೆಯಿಂದ ರದ್ದಾಗಿತ್ತು. ಇನ್ನು ಎರಡನೇ ಪಂದ್ಯದಲ್ಲಿ ಆಸ್ಟ್ರೇಲಿಯಾ 4 ವಿಕೆಟ್ ಅಂತರದ ಭರ್ಜರಿ ಗೆಲುವು ಸಾಧಿಸಿತ್ತು. ಆದರೆ ಇದಾದ ಬಳಿಕ ಎಚ್ಚೆತ್ತುಕೊಂಡ ಸೂರ್ಯಕುಮಾರ್ ಯಾದವ್ ಪಡೆ ಕ್ರಮವಾಗಿ ಮೂರು ಹಾಗೂ ನಾಲ್ಕನೇ ಪಂದ್ಯ ಗೆಲ್ಲುವ ಮೂಲಕ ಸರಣಿಯಲ್ಲಿ 2-1ರ ಮುನ್ನಡೆ ಕಾಯ್ದುಕೊಂಡಿತ್ತು. ಇದೀಗ ಕೊನೆಯ ಟಿ20 ಪಂದ್ಯ ರದ್ದಾಗಿದ್ದರಿಂದಾಗಿ ಸರಣಿ ಭಾರತದ ಪಾಲಾಗಿದೆ. ಇದರೊಂದಿಗೆ ಭಾರತ ಯಶಸ್ವಿಯಾಗಿ ಆಸ್ಟ್ರೇಲಿಯಾ ಪ್ರವಾಸ ಮುಗಿಸಿದೆ.

ಅಭಿಷೇಕ್ ಶರ್ಮಾಗೆ ಒಲಿದ ಸರಣಿಶ್ರೇಷ್ಠ ಪ್ರಶಸ್ತಿ:

ಭಾರತ-ಆಸ್ಟ್ರೇಲಿಯಾ ನಡುವಿನ ಚುಟುಕು ಕ್ರಿಕೆಟ್ ಸರಣಿಯಲ್ಲಿ ಸ್ಪೋಟಕ ಆರಂಭ ಒದಗಿಸಿಕೊಡುತ್ತಿದ್ದ ಟೀಂ ಇಂಡಿಯಾ ಎಡಗೈ ಓಪನ್ನರ್ ಅಭಿಷೇಕ್ ಶರ್ಮಾ ಸರಣಿಶ್ರೇಷ್ಠ ಪ್ರಶಸ್ತಿ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸರಣಿಯಲ್ಲಿ ಅಭಿಷೇಕ್ ಶರ್ಮಾ 5 ಪಂದ್ಯಗಳನ್ನಾಡಿ 40.75ರ ಬ್ಯಾಟಿಂಗ್ ಸರಾಸರಿಯಲ್ಲಿ 163 ರನ್ ಸಿಡಿಸುವ ಮೂಲಕ ಗರಿಷ್ಠ ರನ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದ್ದರು. ಹೀಗಾಗಿ ಅಭಿಷೇಕ್ ಶರ್ಮಾ ಸರಣಿ ಶ್ರೇಷ್ಠ ಪ್ರಶಸ್ತಿ ಗೆದ್ದರು.

 

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ
ಕಾಂಗರೂ ನಾಡಲ್ಲಿ ಶತಕದ ಬರ ನೀಗಿಸಿಕೊಂಡ ಜೋ ರೂಟ್! ಕೊನೆಗೂ ತಪ್ಪಿದ ಹೇಡನ್ 'ಬೆತ್ತಲೆ ಸೇವೆ'!