
ಬರ್ಮಿಂಗ್‌ಹ್ಯಾಮ್: ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ ಕ್ರಿಕೆಟ್ ಟೂರ್ನಿಯಲ್ಲಿ ಗುರುವಾರ ನಡೆಯಬೇಕಿದ್ದ ಭಾರತ ಹಾಗೂ ಪಾಕಿಸ್ತಾನ ದಿಗ್ಗಜರ ನಡುವಿನ ಸೆಮಿಫೈನಲ್ ಪಂದ್ಯ ರದ್ದುಗೊಂಡಿದೆ. ಪಹಲ್ಗಾಂ ನಡೆದ ಭೀಕರ ಉಗ್ರ ದಾಳಿ ಖಂಡಿಸಿ ಭಾರತ ತಂಡ ಪಾಕ್ ವಿರುದ್ಧ ಆಡಲ ನಿರಾಕರಿಸಿತು. ಹೀಗಾಗಿ ಪಂದ್ಯ ರದ್ದುಗೊಂಡಿತು. ವಾಕ್ ಓವರ್ ಪಡೆದ ಪಾಕಿಸ್ತಾನ ನೇರವಾಗಿ ಫೈನಲ್‌ಗೇರಿದರೆ, ಭಾರತ ತಂಡ ಟೂರ್ನಿಯಿಂದಲೇ ಹೊರಬಿತ್ತು.
ಇತ್ತೀಚೆಗೆ ಲೀಗ್ ಹಂತದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಬೇಕಿತ್ತು. ಆದರೆ ಭಾರತ ತಂಡ ಆಡಲು ನಿರಾಕರಿಸಿದ್ದರಿಂದ ಪಂದ್ಯ ರದ್ದುಗೊಂಡಿತ್ತು. ಲೀಗ್ ಹಂತದಲ್ಲಿ ಒಟ್ಟು 5 ಪಂದ್ಯಗಳ ಪೈಕಿ 4ರಲ್ಲಿ ಗೆದ್ದ ಪಾಕಿಸ್ತಾನ ಅಂಕಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿ ಸೆಮಿಫೈನಲ್‌ಗೇರಿದೆ. ಭಾರತ ಮಂಗಳವಾರ ವಿಂಡೀಸ್ ವಿರುದ್ಧ ಗೆದ್ದು 4ನೇ ಸ್ಥಾನಿಯಾಗಿ ಸೆಮೀಸ್ ತಲುಪಿದೆ. ಹೀಗಾಗಿ ಈ 2 ತಂಡಗಳು ಸೆಮೀಸ್‌ನಲ್ಲಿ ಆಡಬೇಕಿದ್ದವು.
ಗುರುವಾರ ಮತ್ತೊಂದು ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ಮುಖಾಮುಖಿಯಾಗಲಿವೆ. ಗೆದ್ದ ತಂಡ ಪಾಕಿಸ್ತಾನ ವಿರುದ್ಧ ಆ.2ರಂದು ಫೈನಲ್‌ನಲ್ಲಿ ಸೆಣಸಾಡಲಿದೆ.
ಯುವರಾಜ್ ಸಿಂಗ್ ನಾಯಕತ್ವದ ಭಾರತ ತಂಡದಲ್ಲಿ ಸುರೇಶ್ ರೈನಾ, ಶಿಖರ್ ಧವನ್, ಇರ್ಫಾನ್ ಪಠಾಣ್, ಯೂಸುಫ್ ಪಠಾಣ್, ಹರ್ಭಜನ್ ಸಿಂಗ್ ಸೇರಿ ಹಲವರಿದ್ದಾರೆ. ಕಳೆದ ಬಾರಿ ನಡೆದಿದ್ದ ಟೂರ್ನಿಯಲ್ಲಿ ಭಾರತ ತಂಡ ಪಾಕಿಸ್ತಾನ ವಿರುದ್ಧವೇ ಗೆದ್ದು ಚಾಂಪಿಯನ್ ಆಗಿತ್ತು.
ಭಯೋತ್ಪಾದಕರನ್ನು ಬೆಳೆಸುವ ಪಾಕಿಸ್ತಾನ
ಜಮ್ಮು ಕಾಶ್ಮೀರದಲ್ಲಿ ಪಾಕಿಸ್ತಾನಿ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ನಾಗರಿಕರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಭಾರತ ಪಾಕಿಸ್ತಾನದೊಂದಿಗಿನ ಸಂಬಂಧವನ್ನು ಸಂಪೂರ್ಣವಾಗಿ ಕಡಿದುಕೊಂಡಿದೆ. ಈಗಾಗಲೇ ದ್ವಿಪಕ್ಷೀಯ ಸರಣಿಗಳಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಆಡುತ್ತಿರಲಿಲ್ಲ. ಈ ದಾಳಿಯ ನಂತರ ಕ್ರಿಕೆಟ್ ಸಂಬಂಧಗಳು ಇನ್ನಷ್ಟು ಹದಗೆಟ್ಟಿವೆ.
ಬಿಸಿಸಿಐನ ದಿಟ್ಟ ನಿರ್ಧಾರ
ಭಯೋತ್ಪಾದನೆ ಮತ್ತು ಕ್ರಿಕೆಟ್ ಒಟ್ಟಿಗೆ ಸಾಗಲು ಸಾಧ್ಯವಿಲ್ಲ ಎಂಬ ನಿಲುವಿನಲ್ಲಿ ಭಾರತೀಯ ಆಟಗಾರರಿದ್ದಾರೆ. ಈಗಾಗಲೇ ಭಯೋತ್ಪಾದಕ ದಾಳಿಯ ನಂತರ, ಬಿಸಿಸಿಐ ಮುಂದಿನ ಟೂರ್ನಿಗಳಲ್ಲಿ ಭಾರತ ಮತ್ತು ಪಾಕಿಸ್ತಾನವನ್ನು ಒಂದೇ ಗುಂಪಿನಲ್ಲಿ ಸೇರಿಸಬಾರದು ಎಂದು ಐಸಿಸಿಗೆ ಪತ್ರ ಬರೆದಿತ್ತು. 2029ರ ಪುಲ್ವಾಮಾ ದಾಳಿಯ ನಂತರ ಭಾರತ ಪಾಕಿಸ್ತಾನದ ವಿರುದ್ಧ ನೇರವಾಗಿ ಕ್ರಿಕೆಟ್ ಆಡುತ್ತಿಲ್ಲ.
ತಟಸ್ಥ ಸ್ಥಳದಲ್ಲಿ ಏಷ್ಯಾಕಪ್
ಪಾಕಿಸ್ತಾನದಲ್ಲಿ ಏಷ್ಯಾಕಪ್ ನಡೆದಾಗ ಭಾರತ ಅಲ್ಲಿಗೆ ಹೋಗಲು ನಿರಾಕರಿಸಿತ್ತು. ಭಾರತ ತನ್ನ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಿತ್ತು. ಇದಾದ ಬಳಿಕ ಪಾಕಿಸ್ತಾನದಲ್ಲಿ ಚಾಂಪಿಯನ್ಸ್ ಟ್ರೋಫಿ ನಡೆದಾಗಲೂ ಭಾರತ ಪಾಕಿಸ್ತಾನಕ್ಕೆ ಹೋಗದೆ ದುಬೈನಲ್ಲಿ ತನ್ನ ಪಂದ್ಯಗಳನ್ನು ಆಡಿ ಟ್ರೋಫಿ ಗೆದ್ದುಕೊಂಡಿತು. ಅದೇ ರೀತಿ ಪಾಕಿಸ್ತಾನ ಕೂಡ ಭಾರತದಲ್ಲಿ ಆಡುವುದಿಲ್ಲ ಎಂದು ನಿರ್ಧರಿಸಿದೆ. ಹೀಗಾಗಿ ಭಾರತದಲ್ಲಿ ನಡೆಯಬೇಕಿದ್ದ ಏಷ್ಯಾಕಪ್ ದುಬೈನಲ್ಲಿ ನಡೆಯಲಿದೆ.
ದಿ ಹಂಡ್ರೆಡ್‌ನಲ್ಲೂ 4 ಐಪಿಎಲ್ ಫ್ರಾಂಚೈಸಿಗಳ ಮಾಲಿಕತ್ವ!
ಲಂಡನ್: ಐಪಿಎಲ್‌ನ ನಾಲ್ಕು ಫ್ರಾಂಚೈಸಿಗಳು ಇಂಗ್ಲೆಂಡ್‌ನ ‘ದಿ ಹಂಡ್ರೆಡ್’ ಕ್ರಿಕೆಟ್ ಲೀಗ್‌ನಲ್ಲಿ ತಂಡಗಳ ಪಾಲುದಾರಿಕೆ ಪಡೆದಿವೆ. ಇದನ್ನು ದಿ ಹಂಡ್ರೆಡ್ ಆಯೋಜಕರಾದ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಬುಧವಾರ ದೃಢಪಡಿಸಿದೆ.
ಭಾರತದ ಜಿಎಂಆರ್ ಗ್ರೂಪ್(ಡೆಲ್ಲಿ ಕ್ಯಾಪಿಟಲ್ಸ್) ಸೌಥರ್ನ್ ಬ್ರೇವ್ ತಂಡದ ಶೇ.49ರಷ್ಟು ಶೇರು ಖರೀದಿಸಿದ್ದು, ಸನ್ ಟಿವಿ ನೆಟ್‌ವರ್ಕ್ (ಹೈದರಾಬಾದ್) ಸಂಸ್ಥೆಯು ನಾರ್ಥರ್ನ್ ಸೂಪರ್‌ಚಾರ್ಜರ್ಸ್ ತಂಡದ ಶೇ.100 ಮಾಲಿಕತ್ವ ಪಡೆದಿದೆ. ಆರ್‌ಪಿಎಸ್‌ಜಿ ಗ್ರೂಪ್(ಲಖನೌ) ಮ್ಯಾಂಚೆಸ್ಟರ್ ಒರಿಜಿನಲ್ಸ್‌ನ ಶೇ.70 ಪಾಲುದಾರಿಕೆ ಪಡೆದಿದೆ. ಇನ್ನು, ರಿಲಯನ್ಸ್ ಗ್ರೂಪ್(ಮುಂಬೈ) ಓವಲ್ ತಂಡದ ಶೇ.49ರಷ್ಟು ಪಾಲು ಪಡೆದಿದ್ದು, ಇದರ ಒಪ್ಪಂದ ಮಾತುಕತೆ ಇನ್ನಷ್ಟೇ ಪೂರ್ಣಗೊಳ್ಳಬೇಕಿದೆ.
ದಿ ಹಂಡ್ರೆಡ್ ಎಂಬುದು 100 ಎಸೆತಗಳ ಇನ್ನಿಂಗ್ಸ್ ಇರುವ ಕ್ರಿಕೆಟ್ ಲೀಗ್ ಆಗಿದ್ದು, 2020ರಲ್ಲಿ ಶುರುವಾಗಿತ್ತು. ಒಟ್ಟು 8 ತಂಡಗಳು ಟೂರ್ನಿಯಲ್ಲಿ ಆಡುತ್ತಿವೆ. ಈ ಬಾರಿ ಟೂರ್ನಿ ಆ.5ಕ್ಕೆ ಆರಂಭಗೊಳ್ಳಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.