ಭಾರತ ಎದುರು ಹೀನಾಯ ಸೋಲಿಗೆ ಅಚ್ಚರಿ ಕಾರಣ ಬಿಚ್ಚಿಟ್ಟ ದಕ್ಷಿಣ ಆಫ್ರಿಕಾ ಕ್ಯಾಪ್ಟನ್ ಮಾರ್ಕ್‌ರಮ್!

Published : Dec 15, 2025, 10:52 AM IST
Aiden Markram

ಸಾರಾಂಶ

ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಭಾರತ 7 ವಿಕೆಟ್‌ಗಳ ಜಯ ಸಾಧಿಸಿ, ಸರಣಿಯಲ್ಲಿ 2-1ರ ಮುನ್ನಡೆ ಕಾಯ್ದುಕೊಂಡಿದೆ. ಭಾರತದ ಬೌಲರ್‌ಗಳ ದಾಳಿಗೆ ತತ್ತರಿಸಿದ ಹರಿಣಗಳ ಪಡೆ 117 ರನ್‌ಗಳಿಗೆ ಆಲೌಟ್ ಆಯಿತು. ಸೋಲಿನ ಬಗ್ಗೆ ದಕ್ಷಿಣ ಆಫ್ರಿಕಾ ನಾಯಕ ಮಾರ್ಕ್‌ರಮ್ ಕಾರಣ ಬಿಚ್ಚಿಟ್ಟಿದ್ದಾರೆ.

ಧರ್ಮಶಾಲಾ: ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವೆ ಡಿಸೆಂಬರ್ 14ರಂದು ನಡೆದ ಮೂರನೇ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾ ಅದ್ಭುತ ಪ್ರದರ್ಶನ ನೀಡುವ ಮೂಲಕ 7 ವಿಕೆಟ್ ಅಂತರದ ಸುಲಭ ಗೆಲುವು ದಾಖಲಿಸಿದೆ. ಇದರೊಂದಿಗೆ 5 ಪಂದ್ಯಗಳ ಟಿ20 ಸರಣಿಯಲ್ಲಿ ಟೀಂ ಇಂಡಿಯಾ 2-1ರ ಮುನ್ನಡೆ ಸಾಧಿಸಿದೆ. ಈ ಪಂದ್ಯದಲ್ಲಿ ಭಾರತದ ಬೌಲರ್‌ಗಳು ಮಾರಕ ದಾಳಿ ಸಂಘಟಿಸುವ ಮೂಲಕ ಗಮನ ಸೆಳೆದರು. ಇದಾದ ಬಳಿಕ ಟೀಂ ಇಂಡಿಯಾ ಬ್ಯಾಟರ್‌ಗಳು ದಿಟ್ಟ ಪ್ರದರ್ಶನ ತೋರುವ ಮೂಲಕ ಭಾರತಕ್ಕೆ ಭರ್ಜರಿ ಗೆಲುವು ತಂದುಕೊಟ್ಟರು. ಇನ್ನು ಪಂದ್ಯ ಸೋಲಿನ ಬಗ್ಗೆ ದಕ್ಷಿಣ ಆಫ್ರಿಕಾ ನಾಯಕ ಏಯ್ಡನ್ ಮಾರ್ಕ್‌ರಮ್ ಅಚ್ಚರಿಯ ಹೇಳಿಕೆ ನೀಡಿ ಗಮನ ಸೆಳೆದಿದ್ದಾರೆ.

ಏಯ್ಡನ್ ಮಾರ್ಕ್‌ರಮ್ ಹೇಳಿದ್ದೇನು?

ಭಾರತ ಎದುರು ಏಳು ವಿಕೆಟ್ ಅಂತರದ ಹೀನಾಯ ಸೋಲು ಅನುಭವಿಸಿದ ಬಳಿಕ ಮಾತನಾಡಿದ ದಕ್ಷಿಣ ಆಫ್ರಿಕಾ ನಾಯಕ ಏಯ್ಡನ್ ಮಾರ್ಕ್‌ರಮ್, ನಮ್ಮ ತಂಡದ ಆರಂಭ ಅಷ್ಟೇನು ಉತ್ತಮವಾಗಿರಲಿಲ್ಲ. ನೋಡನೋಡುತ್ತಿದ್ದಂತೆಯೇ 4/5/6ನೇ ವಿಕೆಟ್‌ ಉರುಳಿದವು. ಇದು ನಮ್ಮ ಪಾಲಿಗೆ ಸವಾಲಾಗಿ ಪರಿಣಮಿಸಿತು. ಮುಂದೆ ಹೀಗಾಗದಂತೆ ತಡೆಯಲು ದಾರಿ ಕಂಡುಕೊಳ್ಳಬೇಕಿದೆ. ಒಂದು ವೇಳೆ ನಾವು 140-150 ರನ್ ಬಾರಿಸಿದ್ದರೇ ಭಾರತಕ್ಕೆ ಸವಾಲುವೊಡ್ಡಬಹುದಿತ್ತು. ನಾವು ಬ್ಯಾಟಿಂಗ್‌ನಲ್ಲಿ ಉತ್ತಮ ಆರಂಭವನ್ನು ಪಡೆಯಬಹುದಿತ್ತು. ಅದೇ ರೀತಿ ಬೌಲಿಂಗ್‌ನಲ್ಲಿ ಮೊದಲ ಮೂರ್ನಾಲ್ಕು ಓವರ್ ಚೆನ್ನಾಗಿ ಮಾಡಬೇಕಿತ್ತು. ಇದೆಲ್ಲಾ ನೋಡಿದರೆ, ಕೆಟ್ಟ ಬ್ಯಾಟಿಂಗ್ ಹಾಗೂ ಕಳಪೆ ಬೌಲಿಂಗ್‌ನಿಂದ ನಾವು ಈ ಪಂದ್ಯದಲ್ಲಿ ಸೋಲು ಕಾಣಬೇಕಾಯಿತು ಎಂದು ಏಯ್ಡನ್ ಮಾರ್ಕ್‌ರಮ್ ಹೇಳಿದ್ದಾರೆ.

ಹೀಗಿತ್ತು ಮೂರನೇ ಟಿ20 ಮ್ಯಾಚ್:

ಭಾನುವಾರ ನಡೆದ 3ನೇ ಪಂದ್ಯದಲ್ಲಿ ಟೀಂ ಇಂಡಿಯಾ 7 ವಿಕೆಟ್‌ಗಳ ಸುಲಭ ಗೆಲುವು ಸಾಧಿಸಿತು. ಭಾರತದ ಬೌಲಿಂಗ್‌ ದಾಳಿಗೆ ತತ್ತರಿಸಿದ ದಕ್ಷಿಣ ಆಫ್ರಿಕಾ 20 ಓವರಲ್ಲಿ ಕೇವಲ 117 ರನ್‌ಗೆ ಆಲೌಟ್‌ ಆಯಿತು. ಸಾಧಾರಣ ಗುರಿ ಬೆನ್ನತ್ತಿದ ಭಾರತ 15.5 ಓವರಲ್ಲಿ 3 ವಿಕೆಟ್‌ ಕಳೆದುಕೊಂಡು ಜಯಿಸಿತು.

ಭಾರತದ ವೇಗಿಗಳಾದ ಅರ್ಶದೀಪ್ ಸಿಂಗ್ ಹಾಗೂ ಹರ್ಷಿತ್ ರಾಣಾ ಅವರ ಮಾರಕ ದಾಳಿಗೆ ದಕ್ಷಿಣ ಆಫ್ರಿಕಾ ತಂಡವು ಆರಂಭದಲ್ಲೇ ಕಂಗಾಲಾಗಿ ಹೋಯಿತು. ದಕ್ಷಿಣ ಆಫ್ರಿಕಾ ತಂಡವು 44 ರನ್ ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ ಐವರು ಬ್ಯಾಟರ್‌ಗಳು ಪೆವಿಲಿಯನ್ ಸೇರಿದ್ದರು. ಒಂದು ಕಡೆ ನಿರಂತರವಾಗಿ ವಿಕೆಟ್ ಬೀಳುತ್ತಿದ್ದರೂ ಮತ್ತೊಂದು ತುದಿಯಲ್ಲಿ ದಿಟ್ಟ ಬ್ಯಾಟಿಂಗ್ ನಡೆಸಿದ ಏಯ್ಡನ್ ಮಾರ್ಕ್‌ರಮ್, 46 ಎಸೆತಗಳಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 61 ರನ್ ಸಿಡಿಸಿ ತಂಡಕ್ಕೆ ಆಸರೆಯಾದರು. ಇನ್ನು ಭಾರತ ಪರ ಅರ್ಶ್‌ದೀಪ್‌, ಹರ್ಷಿತ್‌, ಕುಲ್ದೀಪ್‌, ವರುಣ್‌ಗೆ ತಲಾ 2, ಹಾರ್ದಿಕ್‌, ದುಬೆಗೆ ತಲಾ 1 ವಿಕೆಟ್‌ ತಮ್ಮ ಬುಟ್ಟಿಗೆ ಹಾಕಿಕೊಂಡರು.

ಇನ್ನು ಸಾಧಾರಣ ಗುರಿ ಬೆನ್ನತ್ತಿದ ಭಾರತಕ್ಕೆ ಅಭಿಷೇಕ್‌ ಶರ್ಮಾ ಸ್ಫೋಟಕ ಆರಂಭ ಒದಗಿಸಿದರು. 18 ಎಸೆತದಲ್ಲಿ 35 ರನ್‌ ಸಿಡಿಸಿದರು. ಗಿಲ್‌ 28 ಎಸೆತದಲ್ಲಿ 28, ತಿಲಕ್‌ ಔಟಾಗದೆ 24, ಸೂರ್ಯ 12, ದುಬೆ ಔಟಾಗದೆ 10 ರನ್‌ ಗಳಿಸಿ ತಂಡವನ್ನು ಜಯದ ದಡ ಸೇರಿಸಿದರು. ಕೇವಲ 13 ರನ್ ನೀಡಿ ಎರಡು ಪ್ರಮುಖ ವಿಕೆಟ್ ಕಬಳಿಸಿದ ಎಡಗೈ ವೇಗಿ ಅರ್ಶದೀಪ್ ಸಿಂಗ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

IPL 2026: ಮಿನಿ ಹರಾಜಿಗೆ ಒಂದು ದಿನ ಬಾಕಿ ಇರುವಾಗ ಕೊನೆ ಕ್ಷಣದಲ್ಲಿ ಭಾರತದ ಸ್ಟಾರ್ ಕ್ರಿಕೆಟಿಗ 'ವೈಲ್ಡ್ ಕಾರ್ಡ್' ಎಂಟ್ರಿ!
ಮುಂಬೈನಲ್ಲಿ ಮೆಸ್ಸಿ ಮೇನಿಯಾ! ಫುಟ್ಬಾಲ್‌ ಲೆಜೆಂಡ್‌ಗೆ 2011ರ ವಿಶ್ವಕಪ್ ಜೆರ್ಸಿ ಕೊಟ್ಟ ಸಚಿನ್