
ಬೆಂಗಳೂರು: ಬಹುನಿರೀಕ್ಷಿತ 2026ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಆಟಗಾರರ ಹರಾಜಿಗೆ ಇದೀಗ ಕ್ಷಣಗಣನೆ ಶುರುವಾಗಿದೆ. ಡಿಸೆಂಬರ್ 16ರಂದು ಅಬುಧಾಬಿಯಲ್ಲಿ ಐಪಿಎಲ್ ಮಿನಿ ಹರಾಜು ನಡೆಯಲಿದೆ. ಈಗಾಗಲೇ ಬಹುತೇಕ ಎಲ್ಲಾ ಫ್ರಾಂಚೈಸಿಗಳು ಅಬುಧಾಬಿಗೆ ಬಂದಿಳಿದಿವೆ. ಮಿನಿ ಹರಾಜಿಗೆ ಎಲ್ಲಾ 350 ಆಟಗಾರರ ಶಾರ್ಟ್ ಲಿಸ್ಟ್ ಫೈನಲ್ ಆಗಿದೆ. ಇದೀಗ ಹರಾಜಿಗೆ ಇನ್ನೊಂದು ದಿನ ಬಾಕಿ ಇರುವಾಗ ಕೊನೆಯ ಕ್ಷಣದಲ್ಲಿ ಭಾರತದ ಪ್ರತಿಭಾನ್ವಿತ ಆಟಗಾರನ ಹೆಸರು ಮಿನಿ ಹರಾಜಿಗೆ ವೈಲ್ಡ್ ಕಾರ್ಡ್ ಎಂಟ್ರಿ ರೂಪದಲ್ಲಿ ಸೇರ್ಪಡೆಯಾಗಿದೆ.
ಬಿಸಿಸಿಐ ಈಗಾಗಲೇ ಈ ಬಾರಿಯ ಐಪಿಎಲ್ ಮಿನಿ ಹರಾಜಿಗೆ 350 ಆಟಗಾರರ ಹೆಸರನ್ನು ಶಾರ್ಟ್ ಲಿಸ್ಟ್ ಮಾಡಿತ್ತು. ಈ ಲಿಸ್ಟ್‌ನಲ್ಲಿ ಕೆಲವು ದೊಡ್ಡ ಸ್ಟಾರ್ ಆಟಗಾರರ ಹೆಸರುಗಳು ನಾಪತ್ತೆಯಾಗಿವೆ. ಹೀಗಿರುವಾಗಲೇ ಐಪಿಎಲ್ ಆಟಗಾರರ ಹರಾಜಿಗೆ ಕೇವಲ ಇನ್ನೊಂದು ದಿನ ಬಾಕಿ ಇರುವಾಗ, ಭಾರತದ ಪ್ರತಿಭಾನ್ವಿತ ಬ್ಯಾಟರ್ ಅಭಿಮನ್ಯು ಈಶ್ವರನ್ ಅವರ ಹೆಸರು ಕೊನೆಯ ಕ್ಷಣದಲ್ಲಿ ಸೇರ್ಪಡೆಯಾಗಿದೆ. ಐಪಿಎಲ್‌ನ ಯಾವುದೋ ಒಂದು ಫ್ರಾಂಚೈಸಿಯು ಅಭಿಮನ್ಯು ಈಶ್ವರನ್ ಅವರನ್ನು ಖರೀದಿಸಲು ಒಲವು ತೋರಿದ್ದು, ಫ್ರಾಂಚೈಸಿಯ ಮನವಿಯ ಮೇರೆಗೆ ಕೊನೆಯ ಕ್ಷಣದಲ್ಲಿ ಅಭಿಮನ್ಯು ಈಶ್ವರನ್ ಅವರ ಹೆಸರು ಐಪಿಎಲ್ ಹರಾಜಿನಲ್ಲಿ ಸೇರ್ಪಡೆಗೊಂಡಿದೆ. ಹೀಗಾಗಿ ಅಭಿಮನ್ಯು ಈಶ್ವರನ್ ಅವರಿಗೆ ಈ ಬಾರಿ ಯಾವ ತಂಡ ಕೂಡಿಕೊಳ್ಳಲಿದ್ದಾರೆ ಎನ್ನುವ ಕುತೂಹಲ ಜೋರಾಗಿದೆ.
ಅಂದಹಾಗೆ 30 ವರ್ಷದ ಅಭಿಮನ್ಯು ಈಶ್ವರನ್ ಇದುವರೆಗೂ ಒಂದೇ ಒಂದು ಐಪಿಎಲ್ ಪಂದ್ಯವನ್ನು ಆಡಿಲ್ಲ ಎನ್ನುವುದು ಅಚ್ಚರಿ ಎನಿಸಿದ್ರೂ ಸತ್ಯ. ಈ ಮೊದಲು ಅಭಿಮನ್ಯು ಈಶ್ವರನ್, ಐಪಿಎಲ್ ಹರಾಜಿಗೆ ಹೆಸರು ನೋಂದಾಯಿಸಿದ್ದರು. ಆದರೆ ಯಾವೊಂದು ಫ್ರಾಂಚೈಸಿಯು ಈ ಬಂಗಾಳ ಮೂಲದ ಆಟಗಾರನನ್ನು ಖರೀದಿಸಲು ಒಲವು ತೋರಿರಲಿಲ್ಲ. ಇದೀಗ ಕೊನೆಗೂ ಅಭಿಮನ್ಯು ಈಶ್ವರನ್, ಐಪಿಎಲ್ ತಂಡ ಕೂಡಿಕೊಳ್ಳುವ ಸುವರ್ಣಾವಕಾಶ ಬಂದೊದಗಿದೆ ಎಂದು ಅನಿಸಲಾರಂಭಿಸಿದೆ.
ಇನ್ನು 2025ನೇ ಸಾಲಿನ ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಬಂಗಾಳ ಪರ ಅಭಿಮನ್ಯು ಈಶ್ವರನ್, ವಿಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ಐಪಿಎಲ್ ಫ್ರಾಂಚೈಸಿಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಬಂಗಾಳ ಪರ ಅಭಿಮನ್ಯು, 7 ಪಂದ್ಯಗಳನ್ನಾಡಿ 44.33ರ ಬ್ಯಾಟಿಂಗ್ ಸರಾಸರಿಯಲ್ಲಿ 266 ರನ್ ಸಿಡಿಸಿದ್ದರು. ಇದರಲ್ಲಿ ಒಂದು ಶತಕ ಹಾಗೂ ಒಂದು ಅರ್ಧಶತಕವೂ ಸೇರಿದೆ. ಇದೆಲ್ಲಕ್ಕಿಂತ ಮುಖ್ಯವಾಗಿ ಈ ಟೂರ್ನಿಯಲ್ಲಿ ಅಭಿಮನ್ಯು ಈಶ್ವರನ್ ಬರೋಬ್ಬರಿ 152.00 ಸ್ಟ್ರೈಕ್‌ರೇಟ್‌ನಲ್ಲಿ ರನ್ ಗಳಿಸಿದ್ದರು. ಇದೇ ಕಾರಣಕ್ಕಾಗಿ ಕೊನೆಯ ಕ್ಷಣದಲ್ಲಿ ಐಪಿಎಲ್ ಮಿನಿ ಹರಾಜಿಗೆ ಅಭಿಮನ್ಯು ಈಶ್ವರನ್ ಅವರ ಹೆಸರು ಸೇರ್ಪಡೆಯಾಗಿದೆ ಎನ್ನಲಾಗುತ್ತಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.